ಕಾಯ್ದೆ ಜಾರಿಗೊಳಿಸದಿರಲು ಕ್ರೈಸ್ತ ಸಮುದಾಯದವರಿಂದ ಪ್ರತಿಭಟನೆ : ಮನವಿ
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿರುವಂತೆ ಹಾಗು ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಬೇಕೆಂಬ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮುಂಭಾಗ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್ ವತಿಯಿಂದ ವಿವಿಧ ಚರ್ಚ್‌ಗಳ ಧರ್ಮಗುರುಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೧೯: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿರುವಂತೆ ಹಾಗು ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಬೇಕೆಂಬ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್ ವತಿಯಿಂದ ನಗರದ ವಿವಿಧ ಚರ್ಚ್‌ಗಳ ಧರ್ಮಗುರುಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಸರ್ಕಾರ ಯಾವುದೋ ಒಂದೆರೆಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗುತ್ತಿರುವುದನ್ನು ರಾಜ್ಯದ ಸಮಸ್ತ ಕ್ರೈಸ್ತ ಸಮುದಾಯದವರು ವಿರೋಧಿಸುತ್ತೇವೆ. ಸಂವಿಧಾನದಲ್ಲಿ ಯಾವುದೇ ಧರ್ಮ ಆಚರಿಸಲು, ಪ್ರತಿಪಾದಿಸಲು ಹಾಗು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಲಾಗಿದೆ. ಈಗಿರುವಾಗ ಮತಾಂತರ ನಿಷೇಧ ಕಾಯ್ಕೆ ಜಾರಿಗೆ ತರುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆಲವು ಮತಾಂಧ ಕಿಡಿಗೇಡಿಗಳಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ನಡುವೆ ವಿನಾಕಾರಣ ರಾಜ್ಯದಲ್ಲಿರುವ ಇಡೀ ಕ್ರೈಸ್ತ ಸಮುದಾಯದವರ ಮೇಲೆ ಮತಾಂತರ ಆರೋಪ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಲ್ಲಿ ಇದರಿಂದ ಯಾವುದೇ ರೀತಿ ಪ್ರಯೋಜನವಾಗುತ್ತಿಲ್ಲ. ಬದಲಿಗೆ ಈ ಕಾಯ್ದೆಯನ್ನು ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಕಾಯ್ದೆಯನ್ನು ಜಾರಿಗೊಳಿಸದಿರುವಂತೆ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಈಗಾಗಲೇ ಕ್ರೈಸ್ತ ಸಮುದಾಯಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇವೆ. ಜನಸಂಖ್ಯೆ ಗಣತಿ ನಡೆಸಲು ಯಾವುದೇ ವಿರೋಧವಿಲ್ಲ. ಆದರೆ ಪ್ರತ್ಯೇಕವಾಗಿ ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಬೇಕೆಂಬ ಉದ್ದೇಶ ಸರಿಯಲ್ಲ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಇರುವ ಜನಗಣತಿ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶ ಹಾಗು ರಾಜ್ಯದಲ್ಲಿ ಕ್ರೈಸ್ತ ಸಮುದಾಯದವರು ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿಯವರೆಗೂ ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬರುತ್ತಿಲ್ಲ. ಒಂದು ವೇಳೆ ಮತಾಂತರ ನಡೆದಿದ್ದಲ್ಲಿ ಕ್ರೈಸ್ತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಇದನ್ನು ಗಮನಿಸಿದಾಗ ವಾಸ್ತವಾಂಶ ತಿಳಿದು ಬರುತ್ತದೆ. ಅಲ್ಲದೆ ದೇಶದಲ್ಲಿ, ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಲಕ್ಷಾಂತರ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಮತಾಂತರದ ಬಗ್ಗೆ ಇದುವರೆಗೂ ಇವುಗಳಿಂದ ಸೇವೆ ಪಡೆಯುತ್ತಿರುವ ಯಾರೊಬ್ಬರ ಆರೋಪಗಳು ಸಹ ಇರುವುದಿಲ್ಲ. ಈಗಿರುವಾಗ ಪ್ರತ್ಯೇಕವಾಗಿ ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಬೇಕೆಂಬ ಉದ್ದೇಶ ಸರಿಯಲ್ಲ. ಈ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಧರ್ಮಗುರು ಫಾ. ಲಾನ್ಸಿ ಡಿಸೋಜ, ಹಳೇನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಫಾ. ಸ್ಟೀವನ್ ಡೇಸಾ, ಹಿರಿಯೂರು ಧರ್ಮ ಕೇಂದ್ರದ ಫಾ. ಸಂತೋಷ್ ಪಿರೇರಾ, ಮಾವಿನಕೆರೆ ಧರ್ಮ ಕೇಂದ್ರದ ಫಾ. ವೀನಸ್, ರೆವರೆಂಡ್ ಎಸ್. ದೇವನೇಸನ್, ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಗಾಂಧಿನಗರ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಅಂತೋಣಿ, ಯುನೈಟೆಡ್ ಕ್ರಿಶ್ವಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ನಗರಸಭಾ ಸದಸ್ಯ ಜಾಜ್, ಮಾಜಿ ಸದಸ್ಯ ಪ್ರಾನ್ಸಿಸ್, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸೇರಿದಂತೆ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು, ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಮನವಿಯನ್ನು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಯಿತು.
No comments:
Post a Comment