ನ.೨೨ರಂದು ಭದ್ರಾವತಿಯಲ್ಲಿ, ನ.೨೭ರಂದು ಶಿವಮೊಗ್ಗದಲ್ಲಿ ಶ್ರೀ ಕನಕದಾಸರ ಜಯಂತಿ ಆಚರಣೆ : ಕೆ.ಎನ್ ಶ್ರೀಹರ್ಷ
ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಜಾತಿ, ಸಮುದಾಯಗಳ ಪ್ರಮುಖರು ಪಾಲ್ಗೊಂಡಿರುವುದು.
ಭದ್ರಾವತಿ, ನ. ೨೧: ಪುಣ್ಯ ಭೂಮಿಯಾದ ನಮ್ಮ ಭಾರತ ದೇಶದಲ್ಲಿ ಅನೇಕ ದಾರ್ಶನಿಕರು, ಮಹಾತ್ಮರು, ಸಂತರು ಮಾನವ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ಇವರೆಲ್ಲರನ್ನು ಒಂದೇ ವೇದಿಕೆಯಡಿ ತರುವ ಮೂಲಕ ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ ಅಸ್ತಿತ್ವಕ್ಕೆ ಬಂದಿದೆ. ಇದರ ಮೊದಲ ಉದ್ದೇಶ ನಗರದಲ್ಲಿ ನ.೨೨ರಂದು ಶ್ರೀ ಕನಕದಾಸರ ಜಯಂತಿ ಆಚರಣೆಯೊಂದಿಗೆ ಆರಂಭಗೊಳ್ಳಲಿದೆ ಎಂದು ಪರಿಷತ್ ತಾಲೂಕು ಸಂಚಲನಾ ಸಮಿತಿ ಸದಸ್ಯ ಕೆ.ಎನ್ ಶ್ರೀಹರ್ಷ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾರ್ಶನಿಕರು, ಮಹಾತ್ಮರು, ಸಂತರನ್ನು ಆಯಾ ಸಮುದಾಯ, ಜಾತಿಗೆ ಸೀಮಿತವಾಗಿರಿಸುತ್ತಿರುವುದು ಸರಿಯಾದ ಸಂಗತಿಯಲ್ಲ. ಇವರು ಇಡೀ ಭಾರತೀಯ ಸಂಸ್ಕೃತಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದು, ಇವರ ಸಂದೇಶಗಳನ್ನು ಸರ್ವವ್ಯಾಪಿಗೊಳಿಸುವ ಮೂಲಕ ಭವಿಷ್ಯದ ಸಮಾಜಕ್ಕೆ ತಿಳಿಸಿಕೊಡಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಪರಿಷತ್ ಎಲ್ಲಾ ಜಾತಿ, ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಸಮುದಾಯದವರು ಒಗ್ಗೂಡಿ ದಾರ್ಶನಿಕರು, ಮಹಾತ್ಮರು, ಸಂತರ ಜಯಂತಿಗಳನ್ನು ಕಡ್ಡಾಯವಾಗಿ ಆಚರಿಸುವಂತಾಗಬೇಕು. ಈ ಹಿನ್ನಲೆಯಲ್ಲಿ ನ.೨೭ರಂದು ಬೆಳಿಗ್ಗೆ ೧೦.೩೦ಕ್ಕೆ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶ್ರೀ ಕನಕದಾಸ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಪೂಜ್ಯ ಭಾರತ ಎಂಬ ಹೆಸರಿನಡಿ ಆಚರಿಸಲಾಗುತ್ತಿದೆ. ಶಿವಮೊಗ್ಗ ನಗರ ಭಜನಾ ಮಂಡಳಿಗಳ ಒಕ್ಕೂಟದ ಮಾತೆಯರಿಂದ ಕನಕದಾಸರ ಕೃತಿಗಳ ಸಮೂಹ ಗಾಯನ ನಡೆಯಲಿದೆ. ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಲಿದ್ದು, ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿರುವರು ಎಂದರು.
ಇದೆ ರೀತಿ ನ.೨೨ರಂದು ಸಂಜೆ ೪ ಗಂಟೆಗೆ ನಗರದ ರಂಗಪ್ಪ ವೃತ್ತದಲ್ಲಿ ಕನಕದಾಸರ ಜಯಂತಿ ಆಚರಿಸಲಾಗುವುದು. ಎಲ್ಲಾ ಜಾತಿ, ಸಮುದಾಯವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಜಿಲ್ಲಾ ಸಂಚಾಲಕ ಡಾ. ಎಸ್. ದಿಲೀಪ್‌ಕುಮಾರ್ ಪಾಂಡೆ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸತೋಷ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಸೇರಿದಂತೆ ಇನ್ನಿತರರು ಮಾತನಾಡಿದರು.
ವಿವಿಧ ಜಾತಿ, ಸಮುದಾಯಗಳ ಪ್ರಮುಖರಾದ ತೀರ್ಥಯ್ಯ, ಜಿ. ಸುರೇಶ್‌ಕುಮಾರ್, ಬಸವರಾಜ ಬಿ. ಆನೇಕೊಪ್ಪ, ಜಿ. ಆನಂದಕುಮಾರ್, ಸುಬ್ರಮಣ್ಯ, ಬಾಲಾಜಿ, ರಾಘವೇಂದ್ರ ಸರಾಟೆ, ಬಿ.ಎಸ್ ಮಂಜುನಾಥ್, ಲಕ್ಷ್ಮೀಕಾಂತ್, ಶಿವಾಜಿರಾವ್, ಸುಭಾಷ್, ಶ್ರೀನಿವಾಸ್, ಬದರಿನಾರಾಯಣ ಶ್ರೇಷ್ಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.