Tuesday, November 30, 2021

ಛಲವಾದಿ ಮಹಾಸಭಾ ವತಿಯಿಂದ ಸಂವಿಧಾನ ದಿನ ಆಚರಣೆ


ಭದ್ರಾವತಿ ನಗರಸಭೆ ೨೫ನೇ ವಾರ್ಡ್ ವ್ಯಾಪ್ತಿಯ ಹುಡ್ಕೋ ಕಾಲೋನಿ ಮಾರುಕಟ್ಟೆ ಸಂಕೀರ್ಣದಲ್ಲಿರುವ ತಾಲೂಕು ಛಲವಾದಿ ಮಹಾಸಭಾ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾಗೂ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಭದ್ರಾವತಿ, ನ. ೩೦: ತಾಲೂಕು ಛಲವಾದಿ ಮಹಾಸಭಾ ವತಿಯಿಂದ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು.
    ನಗರಸಭೆ ೨೫ನೇ ವಾರ್ಡ್ ವ್ಯಾಪ್ತಿಯ ಹುಡ್ಕೋ ಕಾಲೋನಿ ಮಾರುಕಟ್ಟೆ ಸಂಕೀರ್ಣದಲ್ಲಿರುವ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾಗೂ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ನ್ಯಾಯವಾದಿ ಟಿ. ಚಂದ್ರೇಗೌಡ ಸಂವಿಧಾನದ ಆಶಯ ಹಾಗು ಮಹತ್ವ ವಿವರಿಸಿದರು. ಸಮಾಜದ ಪ್ರಮುಖರಾದ ಜಯರಾಜ್ ಅಧ್ಯಕ್ಷತೆ ವಹಿಸಿದ್ದು, ಮಹಾಸಭಾ ಅಧ್ಯಕ್ಷ ಸುರೇಶ್, ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್, ವಕೀಲೆ ವರಲಕ್ಷ್ಮೀ, ಉದ್ಯಮಿ ಎನ್. ಶ್ರೀನಿವಾಸ್, ಇಂಜಿನಿಯರ್ ಶಿವನಂಜಯ್ಯ, ಮಹೇಶ್, ಈ.ಪಿ ಬಸವರಾಜ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು:
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ ಹಾಗು ಚುನಾವಣಾ ಸಾಕ್ಷರತಾ ಕ್ಲಬ್, ಶಿವಮೊಗ್ಗ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ೭೧ನೇ ಸಂವಿಧಾನ ದಿನ ಆಚರಿಸಲಾಯಿತು.
    ನೆಹರು ಯುವ ಕೇಂದ್ರದ ಉಲ್ಲಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಕಲಾ ಕಾಲೇಜಿನ ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾ ಡಾ.ಎಂ.ಜಿ ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು.
    ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್‌ಖಾನ್, ಶಿವರುದ್ರಪ್ಪ, ಡಾ. ಆರ್. ಸೀಮಾ ಮತ್ತು ಬಿ. ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ ಹಾಗು ಚುನಾವಣಾ ಸಾಕ್ಷರತಾ ಕ್ಲಬ್, ಶಿವಮೊಗ್ಗ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ೭೧ನೇ ಸಂವಿಧಾನ ದಿನ ಆಚರಿಸಲಾಯಿತು.

ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆಗೆ ಖಂಡನೆ

ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಮಿಸಿ ಮನವಿ


ಸಂಗೀತ ನಿರ್ದೇಶಕ ಹಂಸಲೇಖರವರು ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ನೇತೃತ್ವದಲ್ಲಿ  ಮಂಗಳವಾರ ಭದ್ರಾವತಿಯಲ್ಲಿ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದವು.
     ಭದ್ರಾವತಿ, ನ. ೩೦: ಸಂಗೀತ ನಿರ್ದೇಶಕ ಹಂಸಲೇಖರವರು ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ನೇತೃತ್ವದಲ್ಲಿ  ಮಂಗಳವಾರ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದವು.
     ಪ್ರಮುಖರು ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಗೆ ಬಂದು ಸನಾತನ ಹಿಂದೂ ಧರ್ಮದ ಏಳಿಗೆಯ ಕಾರ್ಯವನ್ನು ಕೈಗೊಂಡಿರುತ್ತಾರೆ. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ದಲಿತ ಕೇರಿಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಉಂಟು ಮಾಡುವ ಜೊತೆಗೆ ಅಸ್ಪೃಶ್ಯರು ಸಹ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದ ಸಂತ ಶ್ರೇಷ್ಠರಾಗಿದ್ದಾರೆ ಎಂದರು.
    ಇಂತಹ ಮಹಾನ್ ಚೇತನ ಕುರಿತು ಹಂಸಲೇಖರವರು ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ. ಇದರಿಂದಾಗಿ ಮಾಧ್ವ ಸಮಾಜ, ಬ್ರಾಹ್ಮಣ ಸಮಾಜ ಹಾಗು ಸಮಸ್ತ ಬಾಂಧವರ ಭಾವನೆಗಳಿಗೆ ನೋವುಂಟು ಮಾಡಿದೆ. ಇಷ್ಟೆ ಅಲ್ಲದೆ ಇತ್ತೀಚೆಗೆ ಕಿಡಿಗೇಡಿಯೋರ್ವ ಶ್ರೀಪಾದಂಗಳವರ ಭಾವಚಿತ್ರವನ್ನು ಪಾದರಕ್ಷೆಯಿಂದ ತುಳಿದು ಅಸಂಖ್ಯಾತ ಭಕ್ತರ ಭಾವನೆಗಳಿಗೆ ದುಃಖವನ್ನುಂಟು ಮಾಡಿರುತ್ತಾನೆ. ಈ ಕಿಡಿಗೇಡಿ ವಿರುದ್ಧ ವಿರುದ್ಧ ಹಾಗು ಅವಹೇಳನಕಾರಿಯಾಗಿ ಮಾತನಾಡಿರುವ ಹಂಸಲೇಖರವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
    ಮಾಧ್ವ ಮಹಾ ಮಂಡಳಿ, ಶ್ರೀ ಸಂಕರ್ಷಣ ಧರ್ಮ ಸಂಸ್ಥೆ, ಶ್ರೀ ಸತ್ಯಪ್ರಮೋದ ಸೇವಾ ಸಮಿತಿ, ಶ್ರೀ ಶ್ರೀನಿವಾಸ ಕಲ್ಯಾಣ ಸಮಿತಿ, ಶ್ರೀ ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ, ಶ್ರೀ ಗುರುರಾಜ ಸೇವಾ ಸಮಿತಿ, ಜ್ಞಾನವಾಹಿನಿ ಭಜನಾ ಮಂಡಳಿ, ಹರಿಪ್ರಿಯ ಭಜನಾ ಮಂಡಳಿ ಮತ್ತು ವಿಜಯೀಂದ್ರ ಭಕ್ತ ಮಂಡಳಿ ಪ್ರಮುಖರಾದ ವಿ. ಜಯತೀರ್ಥ, ನರಸಿಂಹಚಾರ್, ಗೋಪಾಲಚಾರ್, ಸಿ. ರಾಘವೇಂದ್ರ, ಜಿ. ರಮಾಕಾಂತ್, ಕೆ.ಆರ್ ವೆಂಕಟೇಶ್ ರಾವ್, ಎನ್. ವಂದನಾ, ಪವನ್‌ಕುಮಾರ್ ಉಡುಪ, ನಿರಂಜನಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು

ಬಿಳಿಕಿ ಮಠಕ್ಕೆ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ಭೇಟಿ : ಶ್ರೀಗಳಿಂದ ಆಶೀರ್ವಾದ

   
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಯುವ ಮುಖಂಡ ಡಿ.ಎಸ್ ಅರುಣ್ ಮಂಗಳವಾರ ಭದ್ರಾವತಿ ತಾಲೂಕಿನ ಬಿಳಿಕಿ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
    ಭದ್ರಾವತಿ, ನ. ೩೦: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಯುವ ಮುಖಂಡ ಡಿ.ಎಸ್ ಅರುಣ್ ಮಂಗಳವಾರ ತಾಲೂಕಿನ ಬಿಳಿಕಿ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೃಷಿಕೇಷ್ ಪೈ, ಮಹಿಳಾ ಪ್ರಮುಖರಾದ ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ  ಶೋಭಾ ಪಾಟೀಲ್, ಆರ್.ಎಸ್. ಶೋಭಾ, ಮಾಲಾ ನಾಯ್ಕ್, ದೇವರಾಜ್ ಪಟೇಲ್, ಆನಂದ್, ಅವಿನಾಶ್, ಪ್ರಭಾಕರ್, ಚನ್ನೇಶ್, ಮಂಗೋಟೆ ರುದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Monday, November 29, 2021

ಶ್ರೀರಾಮ ಭಜನಾ ಮಂದಿರ ಲೋಕಾರ್ಪಣೆ ಅಂಗವಾಗಿ ನ.೩೦, ಡಿ.೧ರಂದು ಧಾರ್ಮಿಕ ಆಚರಣೆಗಳು

    ಭದ್ರಾವತಿ, ನ. ೨೯: ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಸಮೀಪ ೧೦೦ ವರ್ಷಗಳ ಇತಿಹಾಸವಿರುವ ಪುನರ್ ನಿರ್ಮಾಣ ಗೊಂಡಿರುವ ಶ್ರೀರಾಮ ಭಜನಾ ಮಂದಿರದ ಲೋಕಾರ್ಪಣೆ ಪೂರ್ವಭಾವಿಯಾಗಿ ಹೋಮ, ಹವನ ಹಾಗು ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
    ೧೯೨೧ರಲ್ಲಿ ಸ್ಥಾಪಿತಗೊಂಡ ಮಂದಿರ ಶಿಥಿಲಗೊಂಡ ಪರಿಣಾಮ ಯಾವುದೇ ಚಟುವಟಿಕೆಗಳು ನಡೆಯದೆ ಸುಮಾರು ೧ ದಶಕದಿಂದ ಪಾಳು ಬಿದ್ದಿದ್ದು, ಸ್ಥಳೀಯ ಸಮಾನ ಮನಸ್ಕರೆಲ್ಲಾ ಸೇರಿ ಮಂದಿರ ಪುನರ್ ನಿರ್ಮಾಣ ಮಾಡಬೇಕೆಂಬ ಧ್ಯೇಯೋದ್ದೇಶದೊಂದಿಗೆ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸರ್ಕಾರದಿಂದ ಅನುದಾನ ಪಡೆದುಕೊಂಡು ಮಂದಿರನ್ನು ಪುನರ್ ನಿರ್ಮಾಣಗೊಳಿಸಿದ್ದಾರೆ.
    ಮಂದಿರ ಲೋಕಾರ್ಪಣೆ ಅಂಗವಾಗಿ ನ.೩೦ರಂದು ರಾತ್ರಿ ೮ ಗಂಟೆಯಿಂದ ಹೋಮ ಹಾಗು ಡಿ.೧ರ ಬೆಳಿಗ್ಗೆ ೯.೩೦ಕ್ಕೆ ಸತ್ಯ ನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಾರ್ವಜನಿಕ ಶ್ರೀರಾಮ ಮಂಡಳಿ ಗೌರವಾಧ್ಯಕ್ಷ ಎಚ್.ಎಸ್ ನಂಜುಂಡಯ್ಯ ಕೋರಿದ್ದಾರೆ.

ಅಶ್ಲೀಲ ನೃತ್ಯ ಪ್ರದರ್ಶನ ನಡೆಸುವ ವಾದ್ಯಗೋಷ್ಠಿ ಕಲಾತಂಡಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ : ಮನವಿ

ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸುವ ವಾದ್ಯಗೋಷ್ಠಿ ಕಲಾತಂಡ(ಆರ್ಕೆಸ್ಟ್ರಾ)ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭದ್ರಾವತಿಯಲ್ಲಿ ವಾದ್ಯಗೋಷ್ಠಿ ಕಲಾವಿದರು ಹಾಗು ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ನ. ೨೯: ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸುವ ವಾದ್ಯಗೋಷ್ಠಿ ಕಲಾತಂಡ(ಆರ್ಕೆಸ್ಟ್ರಾ)ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ವಾದ್ಯಗೋಷ್ಠಿ ಕಲಾವಿದರು ಹಾಗು ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ದಲಿತ ಸಂಘರ್ಷ ಸಮಿತಿ ಪ್ರಮುಖರು, ಪ್ರಗತಿಪರರು ಹಾಗು ಕಲಾವಿದರು ಮಾತನಾಡಿ, ನಗರದ ನಿವಾಸಿ ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆ ತಾಲೂಕಿನ ಗ್ರಾಮವೊಂದರಲ್ಲಿ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದ್ದು, ಕಲಾವಿದರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ರೀತಿಯ ಘಟನೆ ಈ ಹಿಂದೆ ಸಹ ನಡೆದಿದ್ದು, ಈ ಸಂದರ್ಭದಲ್ಲಿ ಪುನಃ ಮರುಕಳುಹಿಸದಂತೆ ಎಚ್ಚರ ವಹಿಸುವುದಾಗಿ ಕ್ಷಮೆಯಾಚಿಸಲಾಗಿತ್ತು. ಆದರೆ ಇದೀಗ ಪುನಃ ಘಟನೆ ನಡೆದಿರುವುದು ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಅಶ್ಲೀಲ ನೃತ್ಯ ಮಾಡಿಸುವ ವಾದ್ಯಗೋಷ್ಠಿ ಕಲಾ ತಂಡಗಳನ್ನು ತಕ್ಷಣ ರದ್ದುಗೊಳಿಸಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸುವ ಜೊತೆಗೆ ರಾಜ್ಯದಲ್ಲಿರುವ ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಪ್ರತಿವರ್ಷ ಸಾಲಸೌಲಭ್ಯ ಕಲ್ಪಿಸಿಕೊಡಬೇಕು. ಹಿರಿಯ ಕಲಾವಿದರಿಗೆ ಸಮರ್ಪಕವಾಗಿ ಮಾಸಾಶನ ವಿತರಿಸಬೇಕು ಮತ್ತು ನಿರ್ಗತಿಕ ಕಲಾವಿದರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ವಾದ್ಯಗೋಷ್ಠಿ ಕಲಾವಿದರಾದ ಶಾಲಿನಿ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಕಣ್ಣಪ್ಪ ಮತ್ತು ದಾಮೋಜಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೆ. ರಂಗನಾಥ್, ಸಂಘಟನಾ ಸಂಚಾಲಕ ಸುರೇಶ್, ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಮುಖಂಡರಾದ ಕುಪೇಂದ್ರಪ್ಪ, ಪಳನಿರಾಜ್,  ಹಾಗು ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ರಂಗನಾಥ್, ಈಶ್ವರಪ್ಪ, ಎನ್. ಕುಬೇಂದ್ರಪ್ಪ, ನ್ಯಾಷನಲ್ ಹ್ಯೂಮನ್ ರೈಟ್ಸ್ ಪ್ಯಾನಲ್ ಅಧ್ಯಕ್ಷ ಡಿ.ಜೆ ಪ್ರಭು, ಮೋಸಸ್, ದೀಪು, ನೂರುಲ್ಲಾ ಖಾನ್, ಶ್ರಮಿಕ್, ಮಾರ್ಟಿಸ್, ಶೃತಿ ಮೇರಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, November 28, 2021

ಈ ಬಾರಿ ಪರಿಷತ್ ಅಭ್ಯರ್ಥಿ ಡಿ.ಎಸ್ ಅರುಣ್ ಗೆಲುವು ಖಚಿತ : ಬಿ.ವೈ ರಾಘವೇಂದ್ರ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಶ್ರೀ ವರದರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ನ. ೨೮: ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದ್ದು, ಭದ್ರಾವತಿ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಶಾಸಕರುಗಳಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುಬಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ವರದರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಿಜೆಪಿ ಪಕ್ಷಕ್ಕೆ ಎಲ್ಲೆಡೆ ಜನಬೆಂಬಲವಿದ್ದು, ಕಳೆದ ವಿಧಾನಪರಿಷತ್ ಚುನಾವಣೆ ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ವಿಧಾನಸಭೆವರೆಗೂ ಪಕ್ಷ ಬಲಿಷ್ಠವಾಗಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಯಾಗಿರುವ ಡಿ.ಎಸ್ ಅರುಣ್‌ರವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
    ಅಭ್ಯರ್ಥಿ ಡಿ.ಎಸ್ ಅರುಣ್ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಎದುರಾಗಿರುವ ವಿಧಾನಪರಿಷತ್ ಚುನಾವಣೆಯಲ್ಲಿ ೨೫ ಸ್ಥಾನಗಳ ಪೈಕಿ ಈಗಾಗಲೇ ೧೫ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಘೋಷಿಸಿದ್ದಾರೆ. ಅಲ್ಲದೆ ನನ್ನ ಪರವಾಗಿ ನಾನೇ ಅಭ್ಯರ್ಥಿ ಎಂದು ಮತಯಾಚನೆ ನಡೆಸುತ್ತಿದ್ದಾರೆ. ಇದರಿಂದಾಗಿ ಈ ಚುನಾವಣೆ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದು ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಂದು ಕೇವಲ ಬಿಜೆಪಿ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಎಂಬ ಒಂದೇ ಆಲೋಚನೆಯೊಂದಿಗೆ ನನಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಪ್ರಮುಖರಾದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್,  ಪ್ರಮುಖರಾದ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪರಿಸರ ಶಿವರಾಮ್ ಆತ್ಮಕಥೆ ‘ಮುಖ ಮುಖಗಳು ಮುಖವಾಡಗಳಂತಿವೆ’ ಪುಸ್ತಕ ಬಿಡುಗಡೆ


ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ. ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿದರು.  
    ಭದ್ರಾವತಿ, ನ. ೨೮: ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ.
    ಪರಿಸರ ರಾಜ್ಯ ಪ್ರಶಸ್ತಿ ಮತ್ತು ಬಯಲಾಟ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪರಿಸರ ಶಿವರಾಮ್ ಉಕ್ಕಿನ ನಗರದ ಜನತೆಗೆ ಬಹುತೇಕ ಚಿರಪರಿಚಿತರಾಗಿದ್ದಾರೆ. ಇವರ ಆತ್ಮಕಥೆಯನ್ನು ಭದ್ರಾವತಿ ರಾಮಾಚಾರಿಯವರು ಅದ್ಭುತವಾಗಿ ಹೊರತಂದಿದ್ದು, ಪರಿಸರ ಶಿವರಾಮ್ ಅವರ ಜೀವನದ ನೈಜತೆಯನ್ನು ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
    ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಪುಸ್ತುಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿಗೆ ಮೊ: ೮೮೬೧೪೯೫೬೧೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.