ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿರುವುದು.
ಭದ್ರಾವತಿ, ಡಿ. ೪: ತಾಲೂಕಿನ ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ.
ಶಾಂತಿಸಾಗರ ವಲಯದಲ್ಲಿ ಸರಿಯಾದ ರೀತಿಯಲ್ಲಿ ನೆಡುತೋಪುಗಳನ್ನು ಮಾಡದೆ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸದೆ ಸಸಿಗಳನ್ನು ನೆಡುವ ಮೂಲಕ ಅರಣ್ಯ ನಾಶ ಮಾಡಲಾಗಿದ್ದು, ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜೊತೆಗೆ ಅರಣ್ಯ ಒತ್ತುವರಿ ನಡೆಸಲಾಗಿದ್ದು, ಅಲ್ಲದೆ ಅರಣ್ಯ ಕಾವಲು ಪಡೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗೆ ಒಟ್ಟು ೧೨ ಅಂಶಗಳನ್ನು ಒಳಗೊಂಡ ದೂರನ್ನು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅರಣ್ಯ ಪಡೆ ಮುಖ್ಯಸ್ಥರಿಗೆ ಜ.೯, ೨೦೨೦ರಂದು ಅಂಚೆ ಮೂಲಕ ಸಲ್ಲಿಸಿದ್ದರು.
ಸಾಮಾಜಿಕ ಹೋರಾಟಗಾರ ಶಿವಕುಮಾರ್
ಶಿವಕುಮಾರ್‌ರವರು ೨೦೧೯ರಿಂದ ನಿರಂತರವಾಗಿ ಈ ಸಂಬಂಧ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಅರಣ್ಯ ನಾಶ ಒತ್ತುವರಿ ಹಾಗು ಮರುಳುದಂಧೆ ಕುರಿತು ಮೇ.೨೫, ೨೦೧೯ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ, ಶಾಂತಿ ಸಾಗರ(ಮಾವಿನಕಟ್ಟೆ) ವಲಯದಲ್ಲಿ ಅರಣ್ಯೀಕರಣದ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಡಿ.೪, ೨೦೧೯ರಂದು ಸಿ.ಸಿ.ಎಫ್ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ ಇವರಿಗೆ ದೂರು ಸಲ್ಲಿಸಿದ್ದರು.
ಸೂಕ್ತ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರೂ ಸಹ ಪ್ರಕರಣದ ತನಿಖೆ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶಿವಕುಮಾರ್‌ರವರು ಸೆ.೨೩ರಂದು ಅರಣ್ಯ ಸಚಿವರಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿರುವ ಸಚಿವರು ನ.೨೯ರಂದು ಪ್ರಕರಣಗಳ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಇಲಾಖೆಯ ಆಪ್ತ ಕಾರ್ಯದರ್ಶಿ ಸುರೇಶ ಕ. ಅಳಗುಂಡಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಪತ್ರಿಕೆ ಜೊತೆ ಮಾತನಾಡಿ, ತಕ್ಷಣ ತಪ್ಪಿತಸ್ಥ ಅಧಿಕಾರಿಗಳು ಹಾಗು ನೌಕರರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಬೇಕು. ಅಲ್ಲದೆ ಸರ್ಕಾರ ತಪ್ಪಿತಸ್ಥರನ್ನು ಕರ್ತವ್ಯದಿಂದ ವಜಾಗೊಳಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಭ್ರಷ್ಟ ಅಧಿಕಾರಿಗಳು ಹಾಗು ನೌಕರರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.