ಶನಿವಾರ, ಡಿಸೆಂಬರ್ 11, 2021

ಹುಟ್ಟುಹಬ್ಬದ ಮೂಲಕ ಸಂಘಟನೆಗೆ ಮುಂದಾದ ಕರಾವೇ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್

ಪ್ರತಿವರ್ಷ ವಿಕಲಚೇತನರು, ವಯೋವೃದ್ಧರು, ಅನಾಥರು, ಅಶಕ್ತರೊಂದಿಗೆ ಹುಟ್ಟುಹಬ್ಬ ಆಚರಣೆ


ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ತಮ್ಮ ಹುಟ್ಟುಹಬ್ಬವನ್ನು ಭದ್ರಾವತಿಯಲ್ಲಿ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡರು.
    ಭದ್ರಾವತಿ, ಡಿ. ೧೧: ಹುಟ್ಟುಹಬ್ಬದ ಆಚರಣೆ ಮೂಲಕ ಸಂಘಟನೆ ಬಲಪಡಿಸುವ ವಿನೂತನ ಪ್ರಯತ್ನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
    ಪ್ರತಿ ವರ್ಷ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ಹಾಗು ಅನಾಥರು, ವಯೋವೃದ್ಧರು ಮತ್ತು ಅಶಕ್ತರೊಂದಿಗೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
    ಈ ಬಾರಿ ಸಹ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಅಲ್ಲದೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್‌ರವರ ಹುಟ್ಟುಹಬ್ಬದ ಜೊತೆ ಹಂಚಿಕೊಂಡರು. ಇದು ವೇದಿಕೆಯ ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಮತ್ತಷ್ಟು ಸಂಘಟಿಸಲು ಕಾರಣವಾಗಿದೆ. ಎಲ್ಲರ ಹುಟ್ಟುಹಬ್ಬ ಸಹ ಈ ನಿಟ್ಟಿನಲ್ಲಿಯೇ ಸಾಗಬೇಕೆಂಬ ಆಶಯ ವೇದಿಕೆ ಹೊಂದಿದೆ ಎಂಬ ಸಂದೇಶ ಜ್ಯೋತಿ ಸೋಮಶೇಖರ್ ತೋರಿಸಿ ಕೊಟ್ಟಿದ್ದಾರೆ.
    ವೇದಿಕೆ ಗೌರವಾಧ್ಯಕ್ಷ ನಾಗೇಂದ್ರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ಶಿವಾಮೋಗ್ಗ ಯುವಘಟಕ ಅದ್ಯಕ್ಷ ಶಾಜಿದ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಶಶಾಂಕ್,  ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಜಯಂತಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ, ಪ್ರೀತಿ ಪ್ರಶಾಂತ್, ಐಶ್ವರ್ಯ, ಪ್ರಶಾಂತ್, ಶಿವಮೊಗ್ಗ ತಾಲೂಕು ಮಹಿಳಾ ಅಧ್ಯಕ್ಷೆ ಗಂಗಾವತಿ, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ. ನಾಗರತ್ನ, ಕಾಂತಾ, ಮಂಜುಳಾ, ಸುಮಿತ್ರಾ, ಗೀತಾ, ವಾಣಿ, ಯಾಸ್ಮಿನ್, ಪ್ರೇಮ ಮತ್ತು  ಶ್ರಾವ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೧೭ರಿಂದ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

    ಭದ್ರಾವತಿ, ಡಿ. ೧೧: ಶಾಸಕ ಬಿ.ಕೆ ಸಂಗಮೇಶ್ವರ್ ಸಹಕಾರದೊಂದಿಗೆ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಡಿ.೧೭ ರಿಂದ ೧೯ರವರೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
    ಪಂದ್ಯಾವಳಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆಯಲಿದ್ದು, ಪ್ರವೇಶ ಶುಲ್ಕ ೧೫,೦೦೦ ರು. ನಿಗದಿಪಡಿಸಲಾಗಿದೆ. ವಿಜೇತ ತಂಡಗಳಿಗೆ ಮೊದಲ ಬಹುಮಾನ ೧,೫೦,೦೦೦ ರು. ನಗದು ಹಾಗು ಪಾರಿತೋಷಕ, ದ್ವಿತೀಯ ಬಹುಮಾನ ೭೫,೦೦೦ ರು. ನಗದು ಹಾಗು ಪಾರಿತೋಷಕ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೯೮೮೦೧೦೦೯೬೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ : ಡಿ.೧೨ರಂದು ಮತದಾನ

    ಭದ್ರಾವತಿ, ಡಿ. ೧೧: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನಕ್ಕೆ ಈ ಬಾರಿ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಡಿ.೧೨ರಂದು ಮತದಾನ ನಡೆಯಲಿದೆ.
    ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ಈ ಚುನಾವಣೆ ಸಹ ನಡೆಯುತ್ತಿದ್ದು, ಸಮಾಜದ ಮುಖ್ಯ ವಾಹಿನಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಮುಖರು ತೀವ್ರ ಪೈಪೋಟಿಗೆ ಮುಂದಾಗಿರುವುದು ಹೆಚ್ಚಿನ ಗಮನ ಸೆಳೆಯುತ್ತಿದೆ. ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಂತೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಹಲವು ರೀತಿಯ ಕಸರತ್ತುಗಳನ್ನು ನಡೆಸಲಾಗಿದ್ದು, ಅಭ್ಯರ್ಥಿಗಳ ಪರವಾಗಿ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ.
    ಈ ಬಾರಿ ನಿರ್ದೇಶಕ ಸ್ಥಾನ ತನ್ನದಾಗಿಸಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ಇಲ್ಲಿನ ತಾಲೂಕು ಒಕ್ಕಲಿಗರ ಸಂಘ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ನಡುವೆ ಕೆಲವರು ಸಂಘಕ್ಕೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದು, ಈ ನಡುವೆಯೂ ಬೇರೆ ತಾಲೂಕಿನ ಅಭ್ಯರ್ಥಿಯನ್ನು ಬೆಂಬಲಿಸಲು ಕೆಲವರು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಪ್ರತಿಷ್ಠೆ ಎತ್ತಿ ಹಿಡಿಯುವ ಅನಿವಾರ್ಯತೆ ಎದುರಾಗಿದೆ.
    ಮತದಾನ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಪ್ರಪಂಚಕ್ಕೆ ಮಾನವ ಹಕ್ಕುಗಳ ಪರಿಕಲ್ಪನೆ ತಿಳಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ : ಡಾ. ಧನಂಜಯ


ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಮತ್ತು ಹಳೇ ಸೀಗೆಬಾಗಿ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಶಿವಮೊಗ್ಗ ನೆಹರು ಯುವ ಕೇಂದ್ರ ಇವರ ಸಹಯೋಗದೊಂದಿಗೆ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಡಾ. ಧನಂಜಯ, ಎಂ. ಶಿವಕುಮಾರ್, ಉಲ್ಲಾಸ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಡಿ. ೧೧: ಪ್ರಪಂಚಕ್ಕೆ ಮಾನವ ಹಕ್ಕುಗಳ ಪರಿಕಲ್ಪನೆ ಪರಿಚಯಿಸಿ ಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂಬುದನ್ನು ಯಾರು ಸಹ ಮರೆಯಬಾರದು. ಮಾನವ ಹಕ್ಕುಗಳು ವಿಶಿಷ್ಟತೆಯಿಂದ ಕೂಡಿದ್ದು, ಪ್ರಸ್ತುತ ಇವುಗಳ ಕುರಿತು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಧನಂಜಯ ಹೇಳಿದರು.
    ಅವರು ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಮತ್ತು ಹಳೇ ಸೀಗೆಬಾಗಿ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಶಿವಮೊಗ್ಗ ನೆಹರು ಯುವ ಕೇಂದ್ರ ಇವರ ಸಹಯೋಗದೊಂದಿಗೆ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಂದು ದಿನಾಚರಣೆಗೂ ಒಂದೊಂದು ವಿಶಿಷ್ಟತೆ ಇದೆ. ಇವುಗಳಲ್ಲಿ ಮಾನವ ಹಕ್ಕುಗಳ ದಿನಾಚರಣೆ ಪ್ರಮುಖವಾಗಿದೆ. ಸಮಾನತೆಯೊಂದಿಗೆ ಪ್ರತಿಯೊಬ್ಬರು ತಮ್ಮದೇ ಆದ ಹಕ್ಕು ಹೊಂದಿದ್ದಾರೆ ಎಂಬುದನ್ನು ಅಂಬೇಡ್ಕರ್‌ರವರು ಪ್ರತಿಪಾದಿಸುವ ಮೂಲಕ ಈ ನಿಟ್ಟಿನಲ್ಲಿ ಈ ಹಿಂದೆ ಬಹಳಷ್ಟು ರಾಷ್ಟ್ರಗಳು ಹೊಂದಿದ್ದ ಪರಿಕಲ್ಪನೆಗಳು ಬದಲಾವಣೆಗೊಂಡವು. ಮಾನವ ಹಕ್ಕುಗಳ ಕುರಿತು ತಿಳಿದುಕೊಳ್ಳುವುದು ಬಹಳಷ್ಟಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿವೆ ಎಂದರು.
    ನ್ಯಾಯವಾದಿ ಎಂ. ಶಿವಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಉಲ್ಲಾಸ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ್ ಉಪಸ್ಥಿತರಿದ್ದರು. ಎಂಪಿಎಂ ನಿವೃತ್ತ ಕಾರ್ಮಿಕ ಎ.ಕೆ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದ ತಮಟೆ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗು ವೀರಮರಣ ಹೊಂದಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಎಂಪಿಎಂ ವಿಭಾಗದ ಮಹಿಳಾ ಸಿಬ್ಬಂದಿ ಶಿವಮ್ಮ ನಿಧನ


ಶಿವಮ್ಮ
    ಭದ್ರಾವತಿ, ಡಿ. ೧೧; ನಗರದ ಮೈಸೂರು ಕಾಗದ ಕಾರ್ಖಾನೆಯ ಭದ್ರತಾ ವಿಭಾಗದ ಮಹಿಳಾ ಸಿಬ್ಬಂದಿ ಶಿವಮ್ಮ(೪೫) ಶನಿವಾರ ಬೆಳಿಗ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
    ಕಾಗದನಗರದ ೧ನೇ ವಾರ್ಡ್ ಎಂಪಿಎಂ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಶಿವಮ್ಮರವರು ಪತಿ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಹೊಸಬುಳ್ಳಾಪುರದಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರ ಭೂಮಿಯಲ್ಲಿ ಭಾನುವಾರ ಬೆಳಿಗ್ಗೆ ನೆರವೇರಲಿದೆ.

ಶುಕ್ರವಾರ, ಡಿಸೆಂಬರ್ 10, 2021

ಹೆಲಿಕಾಪ್ಟರ್ ದುರುಂತದಲ್ಲಿ ವೀರ ಮರಣ ಹೊಂದಿದವರಿಗೆ ಮಾಜಿ ಸೈನಿಕರಿಂದ ಶ್ರದ್ದಾಂಜಲಿ

ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗು ಅವರ ಪತ್ನಿ ಮಧುಲಿಕಾ ರಾವತ್ ಮತ್ತು ೧೧ ಯೋಧರಿಗೆ ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೦:  ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಸೇನಾಪಡೆಗಳ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ ಹಾಗು ಅವರ ಪತ್ನಿ ಮಧುಲಿಕಾ ರಾವತ್ ಮತ್ತು ೧೧ ಯೋಧರಿಗೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಜನರಲ್ ಬಿಪಿನ್ ರಾವತ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೇಣದ ಬತ್ತಿ ಹಚ್ಚಿ ಮೌನಾಚರಣೆ ನಡೆಸುವ ಮೂಲಕ ಸಂತಾಪ ಸೂಚಿಸಿ ಮಾತನಾಡಿದ ಪ್ರಮುಖರು, ಭಾರತೀಯ ಸೇನೆಯಲ್ಲಿ ಸುಮಾರು ೪೩ ವರ್ಷಗಳ ನಿರಂತರ ವೃತ್ತಿ ಸೇವೆಯಲ್ಲಿ ಜನರಲ್ ಬಿಪಿನ್ ರಾವತ್‌ರವರು ದೇಶಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ. ದೇಶದ ರಕ್ಷಣಾ ಸಾಮರ್ಥ್ಯವನ್ನು ಎತ್ತಿ ಹಿಡಿಯುವ ಜೊತೆಗೆ ಶತ್ರು ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದರು. ಇಂತಹ ದಕ್ಷ ಅಧಿಕಾರಿ ಕಳೆದುಕೊಂಡಿರುವುದು ವಿಷಾದನೀಯ ಬೆಳವಣಿಯಾಗಿದೆ ಎಂದರು.
    ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಉಪಾಧ್ಯಕ್ಷ ಬಿ.ಆರ್ ದಿನೇಶ್‌ಕುಮಾರ್, ಮಾಜಿ ಸೈನಿಕರಾದ ದಿವಾಕರ್, ಹರೀಶ್, ವೆಂಕಟೇಶ್, ಅಭಿಲಾಶ್, ಗುಳ್‌ಗುಳೆ, ಮುದುಗಲ ರಾಮರೆಡ್ಡಿ, ದೇವರಾಜ್, ಶ್ರೀಧರ್, ಬಸ್ ಹಾಗು ಆಟೋ ಚಾಲಕರು, ವಿದ್ಯಾರ್ಥಿಗಳು, ಪೊಲೀಸ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ನಾಗರೀಕರು ಪಾಲ್ಗೊಂಡಿದ್ದರು.  


ಕೋವಿಡ್ ಸೋಂಕು ಹರಡುವ ಆತಂಕ : ಸುಮಾರು ೨೫೦ ಮಂದಿ ನಿರ್ಮಲ ಆಸ್ಪತ್ರೆಯಲ್ಲಿ ಬಂಧಿ

ಹೊರಬಿಡುವಂತೆ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ, ಆಕ್ರೋಶ


ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು ಶುಕ್ರವಾರ ಮುಖ್ಯ ದ್ವಾರದ ಬಳಿ ಜಮಾಯಿಸಿ ಹೊರಬಿಡುವಂತೆ ಭದ್ರತಾ ಸಿಬ್ಬಂಧಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.
    ಭದ್ರಾವತಿ, ಡಿ. ೧೦: ಹಳೇನಗರದ ನಿರ್ಮಲ ಆಸ್ಪತ್ರೆಯ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಅಲ್ಲದೆ ಪ್ರಸ್ತುತ ಅಸ್ಪತ್ರೆ ಒಳ ಭಾಗದಲ್ಲಿರುವ ಸುಮಾರು ೨೫೦ ಮಂದಿಯನ್ನು ನಿಗಾದಲ್ಲಿರಿಸಲಾಗಿದೆ. ಈ ನಡುವೆ ಶುಕ್ರವಾರ ಆಸ್ಪತ್ರೆಯಲ್ಲಿರುವವರು ಹೊರಬರಲು ಮುಖ್ಯ ದ್ವಾರದ ಬಳಿ ಜಮಾಯಿಸಿ ಕೆಲ ಸಮಯ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಈ ಸಂಬಂಧ ಸೆರೆ ಹಿಡಿಯಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
    ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ಆರ್. ಪ್ರದೀಪ್, ಆಸ್ಪತ್ರೆಯಲ್ಲಿರುವ ೨೫೦ ಮಂದಿಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಎಲ್ಲರನ್ನು ನಿಗಾದಲ್ಲಿರಿಸಲಾಗಿದ್ದು, ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಸ್ಪತ್ರೆ ಆಡಳಿತ ಮಂಡಳಿಯವರಿಗೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಒಂದು ವೇಳೆ ನಿಗಾದಲ್ಲಿರುವವರು ಹೊರಗೆ ಬಂದಲ್ಲಿ ಅವರಲ್ಲಿ ಸೋಂಕು ಇದ್ದಲ್ಲಿ ಇಡೀ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಯಾರನ್ನು ಹೊರಗೆ ಬಿಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
    ಮತ್ತೊಂದೆಡೆ ಆಸ್ಪತ್ರೆಯಲ್ಲಿರುವವರು ನಮಗೆ ಊಟ, ನೀರು ಏನನ್ನು ಕೊಡದೆ ಕೂಡಿ ಹಾಕಲಾಗಿದೆ ಎಂದು ಆರೋಪಿಸಿ ತಕ್ಷಣ ನಮ್ಮನ್ನು ಹೊರ ಬಿಡುವಂತೆ ಆಗ್ರಹಿಸಿ ಮುಖ್ಯದ್ವಾರದ ಬಳಿ ತಳ್ಳಾಟ ನಡೆಸಿ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿರುವುದು. ಅಲ್ಲದೆ ಹೊರಭಾಗದಲ್ಲಿ ಕುಟುಂಬ ಸಂಬಂಧಿಕರು ಸಹ ಭದ್ರತಾ ಸಿಬ್ಬಂಧಿಗಳ ವಿರುದ್ಧ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಿದಾಡುತ್ತಿದೆ.