Friday, December 17, 2021

ಬಜರಂಗದಳ ಕಾರ್ಯಕರ್ತರಿಂದ ಯಶಸ್ವಿಯಾಗಿ ಜರುಗಿದ ಸಂಕೀರ್ತನೆ ಶೋಭಾ ಯಾತ್ರೆ

ದತ್ತ ಮಾಲೆ ಅಭಿಯಾನದ ಅಂಗವಾಗಿ ಭದ್ರಾವತಿ ನಗರದಲ್ಲಿ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂಕೀರ್ತನೆ ಶೋಭಾ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಭದ್ರಾವತಿ, ಡಿ. ೧೭: ಈ ಬಾರಿ ದತ್ತ ಮಾಲೆ ಅಭಿಯಾನದ ಅಂಗವಾಗಿ ನಗರದಲ್ಲಿ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂಕೀರ್ತನೆ ಶೋಭಾ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಸಂಜೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಂಡ ಶೋಭಾ ಯಾತ್ರೆ ಹೊಸಮನೆ ಮುಖ್ಯ ರಸ್ತೆ ಮೂಲಕ ಹಾಲಪ್ಪ ವೃತ್ತ, ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ, ನಂತರ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಮೂಲಕ ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೂ ಸಾಗಿ ರಾತ್ರಿ ಸುಮಾರು ೯.೩೦ಕ್ಕೆ ಅಂತ್ಯಗೊಂಡಿತು.
    ಈ ಬಾರಿ ಸುಮಾರು ೧೫೦ಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದು, ಶೋಭಾ ಯಾತ್ರೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ ಕಾಂತೇಶ್, ವಿಶ್ವ ಹಿಂದೂ ಪರಿಷತ್ ಜಿಲಾಧ್ಯಕ್ಷ ವಾಸುದೇವನ್, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ನಗರಸಭಾ ಸದಸ್ಯರಾದ ಅನುಪಮ ಚನ್ನೇಶ್, ಅನಿತಾ ಮಲ್ಲೇಶ್ ಹಾಗು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇನ್ನಿತರರು ಪಾಲ್ಗೊಂಡಿದ್ದರು.  

ಇಬ್ಬರು ಮೊಬೈಲ್ ಕಳ್ಳರ ಬಂಧನ : ಒಟ್ಟು ೧೧ ಲಕ್ಷ ರು. ಮೌಲ್ಯದ ೧೨೦ ಮೊಬೈಲ್ ವಶ

ಹಳೇನಗರ ಠಾಣೆ ಪೊಲೀಸರ ಕಾರ್ಯಾಚರಣೆ


ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ ಸುಮಾರು ಒಟ್ಟು ೧೧ ಲಕ್ಷ ರು. ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಡಿ. ೧೭: ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ ಸುಮಾರು ಒಟ್ಟು ೧೧ ಲಕ್ಷ ರು. ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭೋವಿ ಕಾಲೋನಿ ನಿವಾಸಿ ಶ್ರೀನಿವಾಸ್(೨೬) ಮತ್ತು ದುರ್ಗಿನಗರದ ನಿವಾಸಿ ಅಜಾಮ್ ಅಲಿಯಾಸ್ ಬಾಬು(೩೮) ಬಂಧಿತ ಮೊಬೈಲ್ ಕಳ್ಳರಾಗಿದ್ದು, ಈ ಇಬ್ಬರು ಕದ್ದ ಮೊಬೈಲ್‌ಗಳನ್ನು ನಗರದಲ್ಲಿ ಮಾರಾಟ ಮಾಡಲು ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಹಳೇನಗರ ಠಾಣೆ ಪೊಲೀಸರು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಸೀಗೆಬಾಗಿ ಸಮೀಪ ಬಂಧಿಸಿದ್ದಾರೆ.
    ಬಂಧಿತರಿಂದ ಒಟ್ಟು ೧೧ ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ ೧೨೦ ಮೊಬೈಲ್‌ಗಳನ್ನು ಹಾಗು ಡೆಲ್ ಕಂಪನಿಯ ಒಂದು ಲ್ಯಾಪ್‌ಟಾಪ್ ಹಾಗು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕ್ರೀಡೆಗೆ ಯಾವುದೇ ಧರ್ಮ, ಜಾತಿ ಇಲ್ಲ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ : ಬಿ.ಕೆ ಸಂಗಮೇಶ್ವರ್

ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಟಾಸ್ ತೂರಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೧೭: ಪ್ರತಿಯೊಬ್ಬರಲ್ಲೂ ಉತ್ಸಾಹ, ಆರೋಗ್ಯ ತಂದುಕೊಡುವ ಕ್ರೀಡೆ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
    ಪ್ರಸ್ತುತ ಕ್ರೀಡೆಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಬೇಕು. ಕ್ರೀಡಾಪಟುಗಳು ಇರುವ ಕಡೆ ಉತ್ತಮ ಪರಿಸರ ರೂಪುಗೊಳ್ಳುತ್ತದೆ. ಜೊತೆಗೆ ಯುವ ಸಮೂಹ ದುಶ್ಚಟಗಳಿಂದ ದೂರು ಉಳಿಯುತ್ತಾರೆ ಎಂದರು.
ಪ್ರಸ್ತುತ ಕ್ರೀಡಾ ಮನೋಭಾವ ಅಗತ್ಯವಿದ್ದು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನು ಸಮಾನವಾಗಿ ಸ್ವೀಕರಿಸಿ ಗೆದ್ದವರು, ಸೋತವರು ಸಂಭ್ರಮಿಸಬೇಕು. ಕ್ರೀಡೆಯಲ್ಲಿ ಯಾವುದೇ ಧರ್ಮ, ಜಾತಿ ಇಲ್ಲ. ಕ್ರೀಡೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ  ಹೊಂದಿದೆ ಎಂದರು.
    ನಗರಸಭಾ ಸದಸ್ಯ, ಸಮಾಜ ಸೇವಕ ಮಣಿ ಎಎನ್‌ಎಸ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಯುವ ಮುಖಂಡರಾದ ಗಣೇಶ್, ಮಹೇಶ್, ಓಂ ಕ್ರಿಕೇಟರ್‍ಸ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೇಸರಿಪಡೆಯ ಕೆ.ಪಿ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆಟ ಆಡುವ ಮೂಲಕ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ಮೂಡಿಸಿದರು.

ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಉಮಾದೇವಿ ತಿಪ್ಪೇಶ್ ಅವಿರೋಧ ಆಯ್ಕೆ

ಭದ್ರಾವತಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಉಮಾದೇವಿ ತಿಪ್ಪೇಶ್
    ಭದ್ರಾವತಿ, ಡಿ. ೧೭:  ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಉಮಾದೇವಿ ತಿಪ್ಪೇಶ್ ಶುಕ್ರವಾರ ನಡೆದ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾದರು.
    ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಆಯ್ಕೆಯಾಗಿದ್ದ ಮಲಕ್ ಬಿ ವೀರಪ್ಪನ್ ಒಪ್ಪಂದದಂತೆ ೧೦ ತಿಂಗಳು ಆಡಳಿತ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನಡೆದ ಚುನಾವಣೆಯಲ್ಲಿ ಉಮಾದೇವಿ ತಿಪ್ಪೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


    ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ರಮೇಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಶೋಕ್ ಮತ್ತು ಕಾರ್ಯದರ್ಶಿ ಸತೀಶ್ ಗೌಡ ಉಪಸ್ಥಿತರಿದ್ದರು.  ಪಂಚಾಯಿತಿ ಉಪಾಧ್ಯಕ್ಷ ಕುಬೇರನಾಯ್ಕ್, ಸದಸ್ಯರಾದ ಜಯಣ್ಣ, ರುದ್ರೇಶ್, ಸ್ವಾಮೀನಾಥ್, ವಿಶ್ವನಾಥ್, ನಾಗರಾಜ್, ಭಾಗ್ಯ, ಸಿದ್ದಮ್ಮ, ನೀಲಾಬಾಯಿ, ಪಾರ್ವತಿ ಬಾಯಿ ಮತ್ತು ಗೌರಮ್ಮ ಚುನಾವಣೆಯಲ್ಲಿ ಭಾಗವಹಿಸಿದ್ದರು.



Thursday, December 16, 2021

ಡಿ.೧೭ರಂದು ಸಂಕೀರ್ತನೆ ಶೋಭಾ ಯಾತ್ರೆ

    ಭದ್ರಾವತಿ, ಡಿ. ೧೬: ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗದಳ ಕಾರ್ಯಕರ್ತರು ಈ ಬಾರಿ  ಕೈಗೊಂಡಿರುವ ದತ್ತ ಮಾಲೆ ಅಭಿಯಾನ ಭಾನುವಾರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಡಿ.೧೭ರ ಶುಕ್ರವಾರ ಸಂಕೀರ್ತನೆ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
    ಡಿ.೮ರಿಂದ ಆರಂಭಗೊಂಡಿರುವ ಅಭಿಯಾನದಲ್ಲಿ ಈ ಬಾರಿ ಸುಮಾರು ೧೫೦ ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದು, ಪ್ರತಿವರ್ಷ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
    ಸಂಕೀರ್ತನೆ ಶೋಭಾ ಯಾತ್ರೆ ಸಂಜೆ ೪ ಗಂಟೆಗೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳಲಿದ್ದು, ನೂತನ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ ಕಾಂತೇಶ್ ಸೇರಿದಂತೆ ಇನ್ನಿತರರು ಚಾಲನೆ ನೀಡಲಿದ್ದಾರೆ. ಶೋಭಾ ಯಾತ್ರೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಮಾಲಾಧಾರಿಗಳು ಭಾನುವಾರ ಬೆಳಿಗ್ಗೆ ದತ್ತಪೀಠಕ್ಕೆ ತೆರಳಲಿದ್ದಾರೆ.
    ವಿಶ್ವ ಹಿಂದೂ ಪರಿಷತ್ ಜಿಲಾಧ್ಯಕ್ಷ ವಾಸುದೇವನ್, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಶೋಭಾ ಯಾತ್ರೆ ಯಶಸ್ವಿಗೊಳಿಸುವಂತೆ ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು ಕೋರಿದ್ದಾರೆ.

ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ


ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾರಾಮಪುರ(ಮುಳ್ಕೆರೆ) ಗ್ರಾಮದ  ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಹನುಮ ಜಯಂತಿ ಉತ್ಸವ ಮತ್ತು ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ಡಿ. ೧೬: ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾರಾಮಪುರ(ಮುಳ್ಕೆರೆ) ಗ್ರಾಮದ  ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಹನುಮ ಜಯಂತಿ ಉತ್ಸವ ಮತ್ತು ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ  ವಿಜೃಂಭಣೆಯಿಂದ ನೆರವೇರಿತು.
    ಪಂಚಾಮೃತ ಅಭಿಷೇಕ, ಬ್ರಹ್ಮ ಕೂರ್ಚಾ ಹೋಮ, ನವಗ್ರಹ ಹೋಮ, ಮಾರುತಿ ಮೂಲ ಮಂತ್ರ ಹೋಮ, ರಕ್ಷಾ ಸುದರ್ಶನ ಹೋಮ ಮತ್ತು ದುರ್ಗಾ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಇದಕ್ಕೂ ಮೊದಲು ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ ಸಮಾಜ ಸೇವಕ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
        ಕಣಿವೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ :
    ಅರಣ್ಯ ಇಲಾಖೆ ವ್ಯಾಪ್ತಿಯ ಅತ್ತಿಗುಂದ ಗ್ರಾಮದ ಕಾಡಂಚಿನಲ್ಲಿರುವ ಕಣಿವೆ ಶ್ರೀ ಆಂಜನೇಯ  ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಡೆಯಿತು.
    ಪ್ರತಿ ವರ್ಷ ಹನುಮ ಜಯಂತಿಯಂದು ಹೋಮ-ಹವನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.



ಅರಣ್ಯ ಇಲಾಖೆ ವ್ಯಾಪ್ತಿಯ ಭದ್ರಾವತಿ ಅತ್ತಿಗುಂದ ಗ್ರಾಮದ ಕಾಡಂಚಿನಲ್ಲಿರುವ ಕಣಿವೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಡೆಯಿತು

ಅದ್ದೂರಿಯಾಗಿ ಜರುಗಿದ ಹುತ್ತಾಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೧೬:  ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
    ರಥೋತ್ಸವ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ, ಅಷ್ಟಾವಧಾನ ಸೇವಾ, ಮಹಾಪೂಜೆ ಮತ್ತು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನ ಮುಂಭಾಗ ಆರಂಭಗೊಂಡ ರಥೋತ್ಸವ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೂ ಸಾಗಿತು. ಆರಂಭದಲ್ಲಿ ಭಕ್ತಾಧಿಗಳು ಪಟಾಕಿ ಸಿಡಿಸಿ ಶ್ರೀ ಆಂಜನೇಯಸ್ವಾಮಿಗೆ ಜಯಘೋಷ ಹಾಕಿದರು. ಶ್ರೀ ಸತ್ಯಸಾಯಿ ಸೇವಾಕರ್ತರಿಂದ ಭಜನೆ ನಡೆಯಿತು. ನಾದಸ್ವರ ಮತ್ತು ಡೊಳ್ಳು ಕುಣಿತ ಮತ್ತಷ್ಟು ಮೆರಗು ನೀಡಿದವು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನಡೆದವು.
    ರಥೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಈ ಭಾಗದ ವಾರ್ಡ್ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಮಹಿಳಾ ಸಂಘಟನೆಗಳ ಪ್ರಮುಖರು ಸೇರಿದಂತೆ ಜನ್ನಾಪುರ, ಹುತ್ತಾಕಾಲೋನಿ, ಜಿಂಕ್‌ಲೈನ್, ವೇಲೂರು ಶೆಡ್, ಬಂಢಾರಹಳ್ಳಿ, ವಿದ್ಯಾಮಂದಿರ, ನ್ಯೂಟೌನ್, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.
    ಕಾಂಗ್ರೆಸ್ ಮುಖಂಡ, ದಾನಿ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಲ್ಲದೆ ಭಕ್ತರಿಂದ ಅಲ್ಲಲ್ಲಿ  ಮಜ್ಜಿಗೆ, ಪಾನಕ ವಿತರಣೆ ಸೇವೆ ನಡೆಯಿತು.


ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಈ ಭಾಗದ ವಾರ್ಡ್ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು.