Sunday, December 19, 2021

ಭದ್ರಾವತಿಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

 ಖಾಸಗಿ ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯಲ್ಲಿ ಸೋಂಕು


ಭದ್ರಾವತಿ: ನಗರದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.     

    ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯ ಒಟ್ಟು  27 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 20 ವರ್ಷದ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ಪಡಿಸಲಾಗಿತ್ತು. ಈ ಸಂದರ್ಭದಲ್ಲಿ 27 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.    

     ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೀಲ್ ಡೌನ್  ಮಾಡಿ ಆಸ್ಪತ್ರೆಯಲ್ಲಿ ಇರುವವರ ಮೇಲೆ ನಿಗಾ ವಹಿಸಲಾಗಿತ್ತು. ಈ ನಡುವೆ ಸೋಂಕಿತರ  ಮಾದರಿಯನ್ನು ಹೆಚ್ಚಿನ ತಪಾಸಣೆಗೆ  ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿತ್ತು.  ಇದರ ಫಲಿತಾಂಶ ಭಾನುವಾರ  ಹೊರಬಿದ್ದಿದ್ದು   ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.   ಈ   ವಿದ್ಯಾರ್ಥಿನಿಗೆ  ಹೆಚ್ಚಿನ ಚಿಕಿತ್ಸೆ  ಮುಂದುವರಿಸಲು ಸೂಚಿಸಲಾಗಿದೆ.

ಈ ಬಾರಿ ಅಧಿವೇಶನದಲ್ಲಿ ತಡವಾಗಿ ಪಾಲ್ಗೊಳ್ಳುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಡಿ. ೧೯: ಕಳೆದ ೨-೩ ವಿಧಾನಸಭೆ ಅಧಿವೇಶನದಲ್ಲಿ ಒಂದಿಲ್ಲೊಂದು ಕಾರಣದಿಂದ ರಾಜ್ಯದ  ಗಮನ ಸೆಳೆದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ತಡವಾಗಿ ಪಾಲ್ಗೊಳ್ಳುತ್ತಿದ್ದಾರೆ.
    ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಶಾಸಕರು ಈ ಬಾರಿ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುವ ಲಕ್ಷಣಗಳು ಕಂಡು ಬರುತ್ತಿದ್ದವು. ಈ ನಡುವೆ ಶಾಸಕರು ಪತ್ರಿಕೆಗೆ ಮಾಹಿತಿ ನೀಡಿ ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
    ಈ ನಡುವೆ ವಿಧಾನಪರಿಷತ್ ಚುನಾವಣೆ ಎದುರಾದ ಹಿನ್ನಲೆಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಬೆಳಗಾವಿ ಅಧಿವೇಶನದಲ್ಲಿ ಇವುಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. 

ಆರೋಗ್ಯ ರಕ್ಷಾ ಸಮಿತಿಗೆ ೬ ಮಂದಿ ನೂತನ ಸದಸ್ಯರು ನಾಮನಿರ್ದೇಶನ

    ಭದ್ರಾವತಿ, ಡಿ. ೧೯: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ೬ ಮಂದಿಯನ್ನು ನೂತನ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ. 
      ಪರಿಶಿಷ್ಟ ಜಾತಿಯಿಂದ ಹೊಸಮನೆ ಭೋವಿ ಕಾಲೋನಿ ನಿವಾಸಿ ಪಿ. ಗಣೇಶ್‌ರಾವ್, ಮಹಿಳಾ ಸ್ಥಾನದಿಂದ ಹೊಸಮನೆ ಶಿವಾಜಿ ಸರ್ಕಲ್ ನಿವಾಸಿ ಅನುಷಾ, ಸಾಮಾನ್ಯ ವಿಭಾಗದಿಂದ ಹೊಸಮನೆ ಎನ್‌ಎಂಸಿ ನಿವಾಸಿಗಳಾದ ವಿ. ರಾಮನಾಥ್, ಬಿ.ಎಸ್ ಶ್ರೀನಾಥ್, ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಚ್. ರಘುರಾವ್ ಮತ್ತು ಅಣ್ಣಾನಗರದ ನಿವಾಸಿ ಪಿ. ಕೃಷ್ಣಮೂರ್ತಿ ಅವರನ್ನು ರಾಜ್ಯಪಾಲರ ನಿರ್ದೇಶನ ಮೇರೆಗೆ ನಾಮನಿರ್ದೇಶನಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವಿ. ಪದ್ಮ ಆದೇಶ ಹೊರಡಿಸಿದ್ದಾರೆ.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳು ಸಮಾಜದ ಮುಖ್ಯ ವಾಹಿನಿಗೆ ಬರಲಿ : ಚಿನ್ನಯ್ಯ

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಮಾತನಾಡಿದರು.
    ಭದ್ರಾವತಿ, ಡಿ. ೧೯: ರಾಜ್ಯದಲ್ಲಿ ೨೦೧೩ರಲ್ಲಿಯೇ ಮಲಹೊರುವ ಪದ್ದತಿ ನಿಷೇಧಿಸಲಾಗಿದ್ದು, ಆದರೂ ಸಹ ಇಂದಿಗೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಕಂಡು ಬರುತ್ತಿದ್ದಾರೆ. ಇವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಎಲ್ಲರದ್ದಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಹೇಳಿದರು.
    ಅವರು ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಲಹೊರುವ ಪದ್ದತಿ ಸಮಾಜದಲ್ಲಿ ಒಂದು ಅನಿಷ್ಟ ಪದ್ದತಿಯಾಗಿದ್ದು, ಈ ಪದ್ದತಿ ಸಂಪೂರ್ಣವಾಗಿ ನಿಷೇಧವಾಗಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ತಕ್ಷಣ ಈ ವೃತ್ತಿಯನ್ನು ತೊರೆದು ಹೊರಬರಬೇಕು. ಈ ಕುರಿತು ಘೋಷಿಸಿಕೊಂಡ ಕುಟುಂಬಗಳಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಈಗಲೂ ಸಹ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಕೆಲವರನ್ನು ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಾರಿಗೆ ತರಲಾಗಿರುವ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಪರಿಣಾಮಕಾರಿ ನಡೆಯಬೇಕೆಂದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಕೆಲವರು ನಾಗರೀಕ ಸಮಾಜದಲ್ಲಿ ಸತಿಸಹಗಮನ ಪದ್ದತಿ, ಬಾಲ್ಯವಿವಾಹ ಸೇರಿದಂತೆ ಕೆಲವು ಅನಿಷ್ಠ ಪದ್ದತಿಗಳನ್ನು ಜಾರಿಗೆ ತಂದಿದ್ದರು. ಇಂತಹ ಪದ್ದತಿಗಳಲ್ಲಿ ಮಲ ಹೊರುವ ಪದ್ದತಿ ಸಹ ಒಂದಾಗಿದೆ. ಕೆಲಸ ಮಾಡುವುದು ತಪ್ಪಲ್ಲ. ಯಾವ ಕೆಲಸ ಮಾಡಬೇಕು, ಹೇಗೆ ಮಾಡಬೇಕೆಂಬ ಪರಿಕಲ್ಪನೆ ನಮ್ಮಲ್ಲಿರಬೇಕು. ಆಗ ಮಾತ್ರ ಈ ರೀತಿಯ ಅನಿಷ್ಟ ಪದ್ದತಿಗಳು ನಿರ್ಮೂಲನೆಯಾಗಲಿವೆ ಎಂದರು.
    ಪೌರಾಯುಕ್ತ ಕೆ. ಪರಮೇಶ್, ನಗರಸಭೆ ಸದಸ್ಯೆ ಸವಿತಾ ಉಮೇಶ್, ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಜಾನಪದ ಕಲಾವಿದ ತಮಟೆ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹ


ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಭಾನುವಾರ ೬೬ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೧೯: ತಾಲೂಕಿನ ಶಂಕರಘಟ್ಟದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಭಾನುವಾರ ೬೬ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಜರುಗಿತು.
    ಶಂಕರಘಟ್ಟ ಘಟಕದ ಅಧ್ಯಕ್ಷ ಟಿ.ಡಿ ಶಶಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ. ರಮೇಶ್ ಹಾಗು ನಂದೀಶ್ ಧ್ವಜಾರೋಹಣ ನೆರವೇರಿಸಿದರು.
    ಪ್ರಮುಖರು ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗಾಗಿ ನಿರಂತರ ಹೋರಾಟ ಅಗತ್ಯವಿದ್ದು, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಪುಂಡಾಟಿಕೆಯನ್ನು ಖಂಡಿಸುವ ಜೊತೆಗೆ ತಕ್ಷಣ ಈ ಸಂಘಟನೆಯನ್ನು ರಾಜ್ಯದಿಂದ ಕಿತ್ತೊಗೆಯಬೇಕೆಂದು ಆಗ್ರಹಿಸಿದರು. ಅಲ್ಲದೆ ಈ ವಿಚಾರವನ್ನು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸುವಂತೆ ಮನವಿ ಮಾಡಲಾಯಿತು.
    ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ರೆಹಮಾನ್, ಭದ್ರಾವತಿ ತಾಲೂಕು ಕಾರ್ಯಾಧ್ಯಕ್ಷ ಚೇತನ್ ಮತ್ತು ಜಿಲ್ಲಾ ಉಪಾಧ್ಯಕ್ಷ ತ್ಯಾಗರಾಜ ಹಾಗು ಪ್ರಮುಖರಾದ ದಿವ್ಯರಾಜ್, ಶ್ರೀಕಾಂತ್, ಮಂಜುನಾಥ್, ಈರಣ್ಣ, ಮುರುಗೇಶ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Saturday, December 18, 2021

ದಯಾಸಾಗರ್ ಟ್ರಸ್ಟ್‌ನಿಂದ ರೋಸಯ್ಯ, ಪುನೀತ್ ಪುಣ್ಯಸ್ಮರಣೆ

ಭದ್ರಾವತಿ ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಶನಿವಾರ ಟ್ರಸ್ಟ್ ಸಂಸ್ಥಾಪಕ ಎ. ರೋಸಯ್ಯ ಮತ್ತು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೧೮: ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಶನಿವಾರ ಟ್ರಸ್ಟ್ ಸಂಸ್ಥಾಪಕ ಎ. ರೋಸಯ್ಯ ಮತ್ತು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಸಭೆಯಲ್ಲಿ ರೆವರೆಂಡ್ ಸ್ಟ್ಯಾನ್ಲಿ ಕ್ರಿಸ್‌ಮಸ್ ಸಂದೇಶ ವಾಚಿಸಿದರು. ಕಾರ್ಯದರ್ಶಿ ಬಿ. ಪ್ರಸಾದ್ ಟ್ರಸ್ಟ್ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಸೇವಾಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಿದ್ದಾರ್ಥ ಅಂಧರ ಕೇಂದ್ರ ವಿಕಲಚೇತನ ಹಾಗು ಅಬಲ ಆಶ್ರಮದ ಮಹಿಳೆಯರಿಗೆ ಸೀರೆ ಮತ್ತು ಟ್ರಸ್ಟ್ ಫಲಾನುಭವಿಗಳಿಗೆ ಟವಲ್ ವಿತರಿಸಲಾಯಿತು.
    ಹಲವಾರು ವರ್ಷಗಳಿಂದ ದಯಾಸಾಗರ್ ಟ್ರಸ್ಟ್ ವತಿಯಿಂದ ದೀನ ದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯದ ಜೊತೆಗೆ ಇನ್ನಿತರ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ.
    ಟ್ರಸ್ ಅಧ್ಯಕ್ಷ ಆರ್. ಮೋಸಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಕಾಂತರಾಜ್, ರೆವರೆಂಡ್ ಬಾಬಿರಾಜ್, ಫಾಸ್ಟರ್ ರೈಮಂಡ್, ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ಸವಿತಾ ಸಮಾಜದ ಉಪಾಧ್ಯಕ್ಷ ಕೆ. ಗೋಪಾಲ ಕೃಷ್ಣ, ಟ್ರಸ್ಟ್ ಖಜಾಂಚಿ ಆರ್. ಪುಷ್ಪಲತಾ, ಸದಸ್ಯರಾದ ಮರಿಯಮ್ಮ, ಎಸ್.ಆರ್ ರೇಮಂಡ್, ವಿ. ವಿನೂತ, ಸಂತೋಷ್, ಎಸ್. ಜಾನಿ, ಡಿ. ಪ್ರೇಮ್‌ಕುಮಾರ್, ವಿಜಯ್‌ದಯಾಕರ್, ಕೆವಿನ್ ಸೋಲೋಮನ್, ಅನುಜೀವನ್ ಮತ್ತು ಕಾಂತಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ

ನಗರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ


ಇತ್ತೀಚೆಗೆ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದ ವತಿಯಿಂದ ಶಾಸಕ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಡಿ. ೧೮: ಇತ್ತೀಚೆಗೆ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದ ವತಿಯಿಂದ ಶಾಸಕ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
    ಸರ್ಕಾರಿ ಜಾಗ ಮತ್ತು ಕೆರೆಗಳನ್ನು ಒತ್ತುವರಿ ಮಾಡಿ ಅನಧಿಕೃತ ಬಡಾವಣೆಗಳನ್ನು ರೂಪಿಸಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆಗೆ ವಿವಿಧ ಸಂಘಟನೆಗು ದೂರು ನೀಡಿವೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತರು, ಕಂದಾಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಗೆ ಸ್ಪಂದಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸುರೇಶ್, ಶ್ಯಾಮ್, ಮುರಳಿ ಕೃಷ್ಣ, ಎಂ. ರವಿಕುಮಾರ್, ಅಜಂತ್‌ಕುಮಾರ್, ಗೋವಿಂದ, ಸಂಪತ್‌ಕುಮಾರ್, ರವೀಂದ್ರಪ್ಪ, ಜ್ಯೋತಿ ಪ್ರಕಾಶ್,  ಕೆ.ಸಿ ಯುವರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.