ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸುಮಾರು ೯ ಗಂಟೆ ಕಾರ್ಯಾಚರಣೆ
ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಜ್ವಾಲೆಗೆ ವ್ಯಾಪಿಸಿರುವುದು.
ಭದ್ರಾವತಿ, ಜ. ೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸಾಮಿಲ್‌ನಲ್ಲಿ ಬುಧವಾರ ರಾತ್ರಿ ಸುಮಾರು ೧೧ ಗಂಟೆ ಸಮಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಂತರ ರೂ ನಷ್ಟ ಸಂಭವಿಸಿದೆ.
ರಾತ್ರಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕಪಕ್ಕದವರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ನಿರಂತರವಾಗಿ ಸುಮಾರು ೯ ಗಂಟೆ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕೋಟ್ಯಾಂತರ ರೂ ಬೆಲೆಬಾಳುವ ಮರಮುಟ್ಟುಗಳು, ಅಕ್ಕಪಕ್ಕದಲ್ಲಿರುವ ೩-೪ ಅಂಗಡಿಗಳ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಅಲ್ಲದೆ ಸಮೀಪದಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಸುಮಾರು ೫೦ಕ್ಕೂ ಮಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಒಟ್ಟು ೯ ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.
ಸುರಕ್ಷಿತ ಕಾರ್ಯಾಚರಣೆ:
ಘಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಗ್ನಿಶಾಮಕ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಅಧಿಕಾರಿ ಲಕ್ಕಪ್ಪ, ಇಲಾಖೆಗೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ನಡೆಸಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ಮನೆಗಳಿಗೆ ಮನೆಗಳಿಗೆ ಹಾಗು ಅಂಗಡಿ ಮುಂಗಟ್ಟುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸದಂತೆ ಎಚ್ಚರವಹಿಸಲಾಯಿತು. ಬೆಂಕಿ ಕೆನ್ನಾಲಿ ಕ್ಷಣ ಕ್ಷಣಕ್ಕೂ ಹೆಚ್ಚಾದ ಹಿನ್ನಲೆಯಲ್ಲಿ ಶಿವಮೊಗ್ಗ-೨, ತರೀಕೆರೆ-೧, ಶಿಕಾರಿಪುರ-೧, ಕಡೂರು-೧ ಹಾಗು ಎಂಪಿಎಂ ಹಾಗು ವಿಐಎಸ್‌ಎಲ್ ತಲಾ ೧ ಒಟ್ಟು ೭ ಹಾಗು ಭದ್ರಾವತಿ ಆಗ್ನಿಶಾಮಕ ಠಾಣೆಯ ೨ ಅಗ್ನಿಶಾಮಕ ವಾಹನಗಳು ಸೇರಿದಂತೆ ಒಟ್ಟು ೯ ವಾಹನಗಳನ್ನು ಕಾರ್ಯಾಚರಣೆ ಬಳಸಿಕೊಳ್ಳಲಾಯಿತು.
ಯಾವುದೇ ಪ್ರಾಣ ಹಾನಿಯಾಗದಂತೆ, ಬೆಂಕಿ ಜ್ವಾಲೆ ಹೆಚ್ಚು ವ್ಯಾಪಿಸದಂತೆ ಸುರಕ್ಷಿತವಾಗಿ ರಾತ್ರಿ ಸುಮಾರು ೧೧ ಗಂಟೆಯಿಂದ ಅವಿರತ ಪರಿಶ್ರಮದಿಂದ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯಕ್ಕೆ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ ಎಂದರು.
ಪರಿಹಾರ ನೀಡಿ :
ಬೆಂಕಿ ಆವರಿಸಿಕೊಂಡಿರುವ ಬಗ್ಗೆ ರಾತ್ರಿ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಆಗಮಿಸಲಾಯಿತು. ಆದರೆ ಬರುವಷ್ಟರಲ್ಲಿ ಅಂಗಡಿಗೆ ಬೆಂಕಿ ವ್ಯಾಪಿಸಿಕೊಂಡು ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಪಕ್ಕದಲ್ಲಿರುವ ಆಟೋ ಮೊಬೈಲ್ಸ್, ಬ್ಯಾಟರಿ ಅಂಗಡಿ ಮತ್ತು ಡಿಜಿಟಲ್ ಫ್ಲೆಕ್ಸ್ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿಕೊಂಡು ಸಾಮಗ್ರಿ, ಪರಿಕರಗಳು ಸುಟ್ಟು ಹೋಗಿವೆ. ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಸ್ಕಂದ ಸ್ಯಾನಿಟರಿ ಅಂಗಡಿ ಮಾಲೀಕ ಮನೋಹರ್ ಗೌಡ ಪತ್ರಿಕೆಯೊಂದಿಗೆ ನೋವು ತೋರ್ಪಡಿಸಿಕೊಂಡು ಸರ್ಕಾರ ತಕ್ಷಣ ನಮ್ಮ ನೋವಿಗೆ ಸ್ಪಂದಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಇಡೀ ರಾತ್ರಿ ಮನೆಯಿಂದ ಹೊರಗಡೆ ಉಳಿಯುವಂತಾಯಿತು :
ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ಮನೆಯ ಹಿಂದೆ ಬೆಂಕಿ ವ್ಯಾಪಿಸಿಕೊಂಡ ಪರಿಣಾಮ ಮನೆಯರೆಲ್ಲ ಹೆದರಿಕೆಯಿಂದ ಇಡೀ ರಾತ್ರಿ ಮನೆಯಿಂದ ಹೊರಗೆ ಉಳಿಯುವಂತಾಯಿತು. ಬೆಂಕಿ ಕೆನ್ನಾಲಿಗೆಯಿಂದಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೆಚ್ಚಿನ ಅನಾಹುತವಾಗುವ ಆತಂಕ ಕಂಡು ಬಂದಿತು. ಆಗ್ನಿಶಾಮಕ ದಳದವರು ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ ಒಂದು ಹಂತದಲ್ಲಿ ನಿಯಂತ್ರಕ್ಕೆ ಬಂದಿತು. ಆಗ ಸ್ವಲ್ಪಮಟ್ಟಿಗೆ ಆತಂಕ ದೂರವಾಯಿತು ಎಂದರು.