Wednesday, February 2, 2022

ಸರ್‌ಎಂವಿ ಕಾಲೇಜಿಗೆ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಭೇಟಿ : ಪರಿಶೀಲನೆ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಗೊಂದಲದ ವಾತಾವರಣದ ಹಿನ್ನಲೆಯಲ್ಲಿ ಬುಧವಾರ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲೇಜು ಆಡಳಿತ ಮಂಡಳಿ ಜೊತೆಗೆ ಚರ್ಚಿಸಿದರು.
    ಭದ್ರಾವತಿ, ಫೆ. ೨: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಗೊಂದಲದ ವಾತಾವರಣದ ಹಿನ್ನಲೆಯಲ್ಲಿ ಬುಧವಾರ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುವ ಸಂಬಂಧ ಕಾಲೇಜಿನಲ್ಲಿ ಮಂಗಳವಾರ ಉಂಟಾಗಿದ್ದ ಗೊಂದಲದ ವಾತಾವರಣದ ಹಿನ್ನಲೆಯಲ್ಲಿ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಗುಪ್ತ ದಳ ಸಿಬ್ಬಂದಿಗಳು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುವಂತೆ ಸೂಚಿಸಿದರು. ಈ ನಡುವೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಧನಂಜಯ ಕಾಲೇಜಿನಲ್ಲಿ ಇದೀಗ ಸಮಸ್ಯೆ ಅಂತ್ಯಕ್ಕೆ ಬಂದಿದ್ದು, ವಿದ್ಯಾರ್ಥಿಗಳು ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಹಿಜಾಬ್ ಸಂಬಂಧ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಕುರಿತು ಮುಸ್ಲಿಂ ವಿದ್ಯಾರ್ಥಿನಿಯರಿಗೂ ತಿಳಿವಳಿಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
    ಕಾಲೇಜಿನ ಉಪನ್ಯಾಸಕರಾದ ಡಾ. ಮಂಜುನಾಥ್, ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೇಸರಿ ವಸ್ತ್ರದೊಂದಿಗೆ ತರಗತಿಗೆ ಹಾಜರು:
    ಕಾಲೇಜಿನಲ್ಲಿ ಬುಧವಾರ ಮತ್ತು ಶನಿವಾರ ಸಮವಸ್ತ್ರ ಕಡ್ಡಾಯಗೊಳಿಸದಿರುವ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಆದರೆ ಈ ನಡುವೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ವಸ್ತ್ರದೊಂದಿಗೆ ತರಗತಿಗಳಿಗೆ ಹಾಜರಾದರು. ಆದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.  

ತಾಲೂಕಿನಲ್ಲಿ ೪.೬೨ ಲಕ್ಷ ಮಾನವ ದಿನ ಉದ್ಯೋಗ

ಬಹುತೇಕ ಪಂಚಾಯಿತಿಗಳಲ್ಲಿ ನರೇಗಾ ದಿನಾಚರಣೆ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನರೇಗಾ ದಿನಾಚರಣೆ ಆಚರಿಸಲಾಯಿತು.
    ಭದ್ರಾವತಿ, ಫೆ. ೨: ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿದ್ದು, ಈ ನಡುವೆ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಮಹಾಮಾರಿ ಕೋವಿಡ್-೧೯ರ ಪರಿಣಾಮ ಉಂಟಾದ ಸಂಕಷ್ಟದಿಂದ ಹೊರಬರಲು ಉದ್ಯೋಗ ಖಾತರಿ ಯೋಜನೆ ಹೆಚ್ಚಿನ ಸಹಕಾರಿಯಾಗಿದೆ.
    ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಖಾತರಿ ಯೋಜನೆಯಡಿ ೪.೬೨ ಲಕ್ಷ ಮಾನವ ದಿನ ಉದ್ಯೋಗ ಕಲ್ಪಿಸಿಕೊಡಲಾಗಿದೆ. ವಿಶೇಷವಾಗಿ ಈ ಬಾರಿ ಖಾತರಿ ಯೋಜನೆಯಡಿ ೨೫ ಗ್ರಾಮ ಪಂಚಾಯಿತಿಗಳ ಸ್ವಚ್ಛ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಕೆರೆಗಳ ಜೊತೆಗೆ ಸುಮಾರು ೧೭೦ಕ್ಕೂ ಹೆಚ್ಚು ನಾಲೆಗಳಲ್ಲಿ ಹೂಳು ತೆಗೆಯುವಿಕೆ, ಅಡಕೆ ತೋಟ, ಕುರಿ-ಧನದ ಶೆಡ್‌ಗಳ ನಿರ್ಮಾಣ, ಜಾನುವಾರುಗಳ ತೊಟ್ಟಿ, ನೀರು ಹಿಂಗು ಗುಂಡಿಗಳ ನಿರ್ಮಾಣ, ಶಾಲಾ ಕಾಂಪೌಂಡ್ ಮತ್ತು ಅಂಗನವಾಡಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲಾಗಿದೆ.
    ಒಟ್ಟಾರೆ ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಗ್ರಾಮೀಣ ಜನರ ಬದುಕಿಗೆ ಆಧಾರವಾಗಿರುವ ಖಾತರಿ ಯೋಜನೆಯನ್ನು ಬಹುತೇಕ ಗ್ರಾಮ ಪಂಚಾಯಿತಿಗಳು ಸದ್ಬಳಕೆ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಬುಧವಾರ ನರೇಗಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿವೆ.
    ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು, ನರೇಗಾ ಕೂಲಿ ಕಾರ್ಮಿಕರು ಒಟ್ಟಾಗಿ ದಿನಾಚರಣೆ ಆಚರಿಸಿದರು. ಪಂಚಾಯಿತಿ ಮುಂಭಾಗ ಕೂಲಿ ಕಾರ್ಮಿಕರು ಉದ್ಯೋಗ ಚೀಟಿ ಪ್ರದರ್ಶಿಸಿದರು.



ಅಪ್ಪಾಜಿ ಬೆಂಬಲಿಗ, ನಗರಸಭೆ ಮಾಜಿ ಸದಸ್ಯ ಶಿವರಾಜ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ


ಭದ್ರಾವತಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಪ್ಪಾಜಿ ಬೆಂಬಲಿಗ, ನಗರಸಭೆ ಮಾಜಿ ಸದಸ್ಯ ಶಿವರಾಜ್ ಪತ್ನಿ ರೇಣುಕಾ ಜೊತೆಗೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಫೆ. ೨: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಪ್ಪಾಜಿ ಬೆಂಬಲಿಗ, ನಗರಸಭೆ ಮಾಜಿ ಸದಸ್ಯ ಶಿವರಾಜ್ ಪತ್ನಿ ರೇಣುಕಾ ಜೊತೆಗೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಹಲವಾರು ವರ್ಷಗಳಿಂದ ಎಂ.ಜೆ ಅಪ್ಪಾಜಿ ಅವರೊಂದಿಗೆ ಜೆಡಿಎಸ್  ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶಿವರಾಜ್ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್  ಪಕ್ಷದಿಂದ ಸ್ಪರ್ಧಿಸಲು ಪತ್ನಿ ರೇಣುಕಾ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಬೇರೆಯವರಿಗೆ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಿ ಪುನಃ ಹಿಂಪಡೆದುಕೊಂಡಿದ್ದರು. ಆ ನಂತರ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಮುಖಂಡರಾದ ಲೋಕೇಶ್, ಶರವಣನ್, ಕೆ. ಮಂಜುನಾಥ್, ರಾಮಚಂದ್ರಪ್ಪ, ದಶರಥಗಿರಿ ಮತ್ತು ನರಸಿಂಹಮೂರ್ತಿ ಹಾಗು ಗ್ರಾಮ ಪಂಚಾಯಿತಿ ಸದಸ್ಯ ಗೌರಪುರ ಶಿವರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉದ್ದೇಶ ಪೂರ್ವಕವಾಗಿ ಎಪಿಎಂಸಿ ಕಾಂಪೌಂಡ್ ಗೋಡೆ ಧ್ವಂಸ : ಪ್ರಕರಣ ದಾಖಲು

ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾರುಕಟ್ಟೆ ಸಮಿತಿ   
 ಭದ್ರಾವತಿ, ಫೆ. ೨: ಉದ್ದೇಶ ಪೂರ್ವಕವಾಗಿ ಮರ ಕಡಿತಲೆ ಮಾಡಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಂಪೌಂಡ್ ಗೋಡೆ ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮುಜಿಬುಲ್ಲಾ ಎಂಬುವರು ಜ.೨೭ರಂದು ಸಂಜೆ ೫ ಗಂಟೆ ಸಮಯದಲ್ಲಿ ಎಪಿಎಂಸಿ ಆವರಣದಲ್ಲಿರುವ 'ಎ' ಬ್ಲಾಕ್ ಮ್ಯಾಮ್ಕೋಸ್ ಹಿಂಬದಿಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ್ದು, ಇದನ್ನು ಗಸ್ತಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ. ಈ ವಿಚಾರವನ್ನು ಸಮಿತಿ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಹಾಗು ಈ ಭಾಗದ ವಾರ್ಡ್ ಸದಸ್ಯ ಬಷೀರ್ ಅವರೊಂದಿಗೆ ಮಾತುಕತೆ ನಡೆದು ಧ್ವಂಸಗೊಳಿಸಿರುವ ಕಾಂಪೌಂಡ್ ಗೋಡೆ ಪುನರ್ ನಿರ್ಮಿಸಿಕೊಡಲು ತೀರ್ಮಾನಿಸಲಾಗಿತ್ತು. ಅದರಂತೆ ಮುಜಿಬುಲ್ಲಾ ಕಾಂಪೌಂಡ್ ಗೋಡೆ ಕಾಮಗಾರಿ ಆರಂಭಿಸಿದ್ದು, ಆದರೆ ಸ್ವಲ್ಪ ಭಾಗ ಮಾತ್ರ ಕಟ್ಟಿಸಿ ಏಕಾಏಕಿ ಸ್ಥಗಿತಗೊಳಿಸಿದ್ದಾನೆ. ಈ ಹಿನ್ನಲೆಯಲ್ಲಿ ಇದೀಗ ಸಮಿತಿ ಅಧ್ಯಕ್ಷ ಸತೀಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾಂಪೌಂಡ ಗೋಡೆ ಧ್ವಂಸಗೊಳಿಸಿ ಸುಮಾರು ೨.೫೦ ಲಕ್ಷ ರು. ನಷ್ಟ ಉಂಟು ಮಾಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ರಸ್ತೆ ಮಧ್ಯೆ ಅಸ್ವಸ್ಥಗೊಂಡ ವಯೋವೃದ್ಧ ದಂಪತಿಗೆ ಚಿಕಿತ್ಸೆ ಕೊಡಿಸಿದ ಶಾಸಕ ಬಿ.ಕೆ ಸಂಗಮೇಶ್ವರ್


ಶಾಸಕ ಬಿ.ಕೆ ಸಂಗಮೇಶ್ವರ್ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ನಗರಕ್ಕೆ ಹಿಂದಿರುಗಿ ಬರುವಾಗ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಯೋವೃದ್ಧ ದಂಪತಿ ರಸ್ತೆ ಮಧ್ಯದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಇದನ್ನು ಗಮನಿಸಿ ಶಾಸಕರು ತಮ್ಮ ಕಾರಿನಲ್ಲಿ ದಂಪತಿಯನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆ ತರುವ ಮೂಲಕ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
    ಭದ್ರಾವತಿ, ಫೆ. ೨: ಶಾಸಕ ಬಿ.ಕೆ ಸಂಗಮೇಶ್ವರ್ ರಸ್ತೆ ಮಧ್ಯದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ವಯೋವೃದ್ಧ ದಂಪತಿಯನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಕಾಳಜಿ ಮೆರೆದಿರುವ ಘಟನೆ ಬುಧವಾರ ನಡೆದಿದೆ.
    ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ನಗರಕ್ಕೆ ಹಿಂದಿರುಗಿ ಬರುವಾಗ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಯೋವೃದ್ಧ ದಂಪತಿ ರಸ್ತೆ ಮಧ್ಯದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಇದನ್ನು ಗಮನಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಕಾರಿನಲ್ಲಿ ದಂಪತಿಯನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆ ತರುವ ಮೂಲಕ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
    ವಯೋವೃದ್ಧ ದಂಪತಿಯನ್ನು ತಾಲೂಕಿನ ರೆಡ್ಡಿ ಕ್ಯಾಂಪ್ ನಿವಾಸಿಗಳಾದ ಯತಿರಾಜ್ ನಾಯ್ಡು ಮತ್ತು ವಿಜಯಮ್ಮ ಎಂದು ತಿಳಿದುಬಂದಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಶಾಸಕರ ಮಾನವೀಯತೆ ಕಾರ್ಯಕ್ಕೆ ಸ್ಪಂದಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
    ಕೆಲವು ದಿನಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂಕಷ್ಟದಲ್ಲಿ ಬಳಲುತ್ತಿರುವ ಮಗುವೊಂದರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಹಾಯ ಹಸ್ತ ನೀಡುವ ಭರವಸೆ ನೀಡಿ ಗಮನ ಸೆಳೆದಿದ್ದರು.



ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿರಿಗೆ ಸನ್ಮಾನ, ಗೌರವ

ಶ್ರೇಷ್ಠ ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿಯವರನ್ನು ಭದ್ರಾವತಿ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಫೆ. ೨: ಶ್ರೇಷ್ಠ ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿಯವರನ್ನು ನಗರದ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಪ್ರಮುಖರಾದ ಡಾ. ಮಹಾಬಲೇಶ್ವರ, ಮಧುಕರ್ ಕಾನಿಟ್ಕರ್, ಎಸ್.ಎನ್ ಸುಭಾಷ್ ನೇತೃತ್ವದಲ್ಲಿ ಹೊಸಳ್ಳಿ ಕೇಶವಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್, ಮುಖ್ಯ ಶಿಕ್ಷಕಿ ಶಕುಂತಲಾ, ಶಿಕ್ಷಕಿಯರಾದ ಸವಿತಾ, ಸುಜಾತ, ಅಖಿಲ ಭಾರತ ವೀರಶೈವ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, February 1, 2022

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಮಾಹಿತಿ, ಸಲಹೆ ನೀಡಿ : ಬಿ.ಕೆ ಸಂಗಮೇಶ್ವರ್

 ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಭದ್ರಾವತಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.  
    ಭದ್ರಾವತಿ, ಫೆ. ೧: ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಮಾಹಿತಿ, ಸಲಹೆ ನೀಡುವ ಮೂಲಕ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಮಂಗಳವಾರ ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರದ ಯೋಜನೆಗಳ ಬಗ್ಗೆ ಅಸಂಘಟಿತ ಕಾರ್ಮಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸಂಘಟನೆಯ ನೇತೃತ್ವವಹಿಸಿರುವ ಮುಖಂಡರು, ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಈ ದೇಶದಲ್ಲಿ ರೈತ ಮತ್ತು ಕಾರ್ಮಿಕ ಇಬ್ಬರು ಒಂದೇ ನಾಣ್ಯದ ಮುಖಗಳಿದ್ದಂತೆ. ಇವರ ಸಮಸ್ಯೆಗಳಿಗೆ ಎಲ್ಲರೂ ಪೂರಕವಾಗಿ ಸ್ಪಂದಿಸಬೇಕು. ಯಾವುದೇ ಅಧಿಕಾರವಿರಲಿ ಪ್ರಾಮಾಣಿಕತೆ ಬಹಳ ಮುಖ್ಯ. ನಾವು ಸರಿ ಇದ್ದರೇ ಎಲ್ಲರೂ ಸರಿ ಇರುತ್ತಾರೆ. ಇದನ್ನು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವವರು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಘಟನೆ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.
    ಸಂಘದ ರಾಜ್ಯಾಧ್ಯಕ್ಷ ಕುಬೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಪ್ರಸ್ತುತ ರಾಜ್ಯದ ೧೫ ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿದೆ. ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾಗಿರುವ ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈ ಕಾರ್ಮಿಕರಿಗೂ ಸಮಾಜದಲ್ಲಿ ಗೌರವ ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಹೋರಾಟಗಾರರು, ರಾಜಕೀಯ ಧುರೀಣರಾಗಿರುವ ಆಯನೂರು ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗುವ ಮೂಲಕ ಅಂಘಟಿತ ಕಾರ್ಮಿಕರ ಧ್ವನಿಯಾಗಲಿದೆ ಎಂದರು.
    ಸಂಘದ ಅಧ್ಯಕ್ಷ ಬಾರಂದೂರು ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ಮಂಜುನಾಥ್, ಸಂಘದ ಜಿಲ್ಲಾ ಪ್ರಮುಖರಾದ ಸುರೇಖ ಪಾಲಾಕ್ಷಪ್ಪ, ರತ್ನ ರಾಜು ಮತ್ತು ನಿರ್ಮಲ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಲೋಲಾಕ್ಷಿ ಪ್ರಾರ್ಥಿಸಿ, ಧನಲಕ್ಷ್ಮಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೂಪನಾಗರಾಜ್ ನಿರೂಪಿಸಿದರು.  ಪದಾಧಿಕಾರಿಗಳಿಗೆ ಹಾಗು ಅಸಂಘಟಿತ ಕಾರ್ಮಿಕರಿಗೆ ಸಂಘದ ಗುರುತಿನ ಚೀಟಿ ಹಾಗು ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು.
    ಸಂಘದ ಉಪಾಧ್ಯಕ್ಷರಾದ ಪ್ರಸನ್ನ, ಮಂಜುನಾಥ್, ಕಲಾವತಿ ರುದ್ರೇಶ್, ಪೂರ್ಣಿಮಾದೇವಿ, ಶಿವು, ಕಾರ್ಯದರ್ಶಿಗಳಾದ ಎಂ.ಎಸ್ ರವಿ, ಪ್ರದೀಪ್, ಧನಲಕ್ಷ್ಮೀ, ರೂಪ ಮಲ್ಲಿಕಾರ್ಜುನ್ ಮತ್ತು ಸಂಘಟನಾ ಕಾರ್ಯದರ್ಶಿ ಸುನೀತ ಮೋಹನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.