Wednesday, February 2, 2022

ಉದ್ದೇಶ ಪೂರ್ವಕವಾಗಿ ಎಪಿಎಂಸಿ ಕಾಂಪೌಂಡ್ ಗೋಡೆ ಧ್ವಂಸ : ಪ್ರಕರಣ ದಾಖಲು

ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾರುಕಟ್ಟೆ ಸಮಿತಿ   
 ಭದ್ರಾವತಿ, ಫೆ. ೨: ಉದ್ದೇಶ ಪೂರ್ವಕವಾಗಿ ಮರ ಕಡಿತಲೆ ಮಾಡಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಂಪೌಂಡ್ ಗೋಡೆ ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮುಜಿಬುಲ್ಲಾ ಎಂಬುವರು ಜ.೨೭ರಂದು ಸಂಜೆ ೫ ಗಂಟೆ ಸಮಯದಲ್ಲಿ ಎಪಿಎಂಸಿ ಆವರಣದಲ್ಲಿರುವ 'ಎ' ಬ್ಲಾಕ್ ಮ್ಯಾಮ್ಕೋಸ್ ಹಿಂಬದಿಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ್ದು, ಇದನ್ನು ಗಸ್ತಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ. ಈ ವಿಚಾರವನ್ನು ಸಮಿತಿ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಹಾಗು ಈ ಭಾಗದ ವಾರ್ಡ್ ಸದಸ್ಯ ಬಷೀರ್ ಅವರೊಂದಿಗೆ ಮಾತುಕತೆ ನಡೆದು ಧ್ವಂಸಗೊಳಿಸಿರುವ ಕಾಂಪೌಂಡ್ ಗೋಡೆ ಪುನರ್ ನಿರ್ಮಿಸಿಕೊಡಲು ತೀರ್ಮಾನಿಸಲಾಗಿತ್ತು. ಅದರಂತೆ ಮುಜಿಬುಲ್ಲಾ ಕಾಂಪೌಂಡ್ ಗೋಡೆ ಕಾಮಗಾರಿ ಆರಂಭಿಸಿದ್ದು, ಆದರೆ ಸ್ವಲ್ಪ ಭಾಗ ಮಾತ್ರ ಕಟ್ಟಿಸಿ ಏಕಾಏಕಿ ಸ್ಥಗಿತಗೊಳಿಸಿದ್ದಾನೆ. ಈ ಹಿನ್ನಲೆಯಲ್ಲಿ ಇದೀಗ ಸಮಿತಿ ಅಧ್ಯಕ್ಷ ಸತೀಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾಂಪೌಂಡ ಗೋಡೆ ಧ್ವಂಸಗೊಳಿಸಿ ಸುಮಾರು ೨.೫೦ ಲಕ್ಷ ರು. ನಷ್ಟ ಉಂಟು ಮಾಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

No comments:

Post a Comment