![](https://blogger.googleusercontent.com/img/a/AVvXsEhMTHyKiCi94W71OFYGdjroq6pb4CUwOCGGI042KixiVBbjawnKySICf3seWbyKN57HlECZh3fjsIRBDxmBXHlg0MpPUXj8ndk1zm34aPh5XXlRP_7-ev0i0AxqlDpafB7fc4e7kBrltboigsc46_g2roVclpbM_tVZV6-m5Y7Ee69piuZD3jphWyp8UQ=w400-h278-rw)
ಭದ್ರಾವತಿ ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಮಾ. ೨: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಾಮಾರಿ ಕೋವಿಡ್ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಹಾಗು ಮಧ್ಯಮ ವರ್ಗದ ಶ್ರೀಸಾಮಾನ್ಯರು ಸಹ ಹಬ್ಬದ ಆಚರಣೆಯಲ್ಲಿ ತೊಡಗುವ ಮೂಲಕ ಸಂಭ್ರಮಿಸಿದರು.
ಬಹುತೇಕ ದೇವಾಲಯಗಳಲ್ಲಿ ಭಕ್ತ ಸಮೂಹವೇ ಕಂಡು ಬಂದಿತು. ದೇವಾಲಯಗಳು ಹಸಿರು ತೋರುಣಗಳಿಂದ, ವಿದ್ಯುತ್ ಹಾಗು ಪುಷ್ಪಾಂಲಕಾರಗಳಿಂದ ಆಕರ್ಷಕವಾಗಿ ಕಂಗೊಳಿಸಿದವು. ಹಗಲು-ರಾತ್ರಿ ಬಿಡುವಿಲ್ಲದೆ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೆ ಪೂರಕವೆಂಬಂತೆ ಭಕ್ತರು ಸಹ ಪಾಲ್ಗೊಂಡು ಭಕ್ತಿ ಮೆರೆದರು.
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ :
ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕೇಶವಪುರ ಬಡಾವಣೆಯ ಶ್ರೀ ಕೃಷ್ಣ ಸತ್ಸಂಗ ತಂದದಿಮದ ಭಜನೆ, ಹರಿಪ್ರಿಯ ಭಜನ ಮಂಡಳಿಯಿಂದ ಭಜನೆ, ಮನೋಜ್ ಕಿಶನ್ ನೃತ್ಯ ತಂಡದಿಂದ ನೃತ್ಯ ಹಾಗು ಧರ್ಮಶಾಸ್ರ್ತ ಭಜನ ಮಂಡಳಿಯ ಸುಬ್ಬಣ್ಣ ಮತ್ತು ತಂಡದಿಂದ ಭಜನೆ ಹಾಗು ತೀರ್ಥಹಳ್ಳಿ ಶ್ರೀ ಕ್ಷೇತ್ರ ಅಲಸೆಯ ಶ್ರೀ ಚಂಡಿಕೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಕಾರ್ಯಕ್ರಮಗಳು ಜರುಗಿದವು. ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಭದ್ರಾವತಿ ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನ :
ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನ ದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ದೇವಸ್ಥಾನದ ಮುಖ್ಯ ಅರ್ಚಕ ತಿಪ್ಪೇಸ್ವಾಮಿ, ಟಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ವಾಗೀಶ್, ಶಿವಣ್ಣ, ಪ್ರಕಾಶ್, ಧರ್ಮರಾಜ್, ಮೇಘರಾಜ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ಜೇಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಕುಟುಂಬ ಸದಸ್ಯರೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಶಿವರಾತ್ರಿ ಆಚರಣೆ :
ಮೇಕೆದಾಟು ಪಾದಯಾತ್ರೆ ಹಿನ್ನಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗಿದರು.
ನಗರದ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನ, ಲೋಯರ್ ಹುತ್ತಾ ಬಿ.ಎಚ್ ರಸ್ತೆಯಲ್ಲಿರುವ ಭದ್ರೇಶ್ವರ ದೇವಸ್ಥಾನ, ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ, ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ಈಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇವರೊಂದಿಗೆ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ಪಾಲ್ಗೊಂಡಿದ್ದರು.
ನಗರದ ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ, ಕಾಗದನಗರದ ಈಶ್ವರ ದೇವಸ್ಥಾನ, ಜನ್ನಾಪುರ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕೆ.ಸಿ ಬಡಾವಣೆ ಹಾಲಪ್ಪ ಶೆಡ್‌ನಲ್ಲಿರುವ ನಾಗ ಬಣ, ವೀರಾಪುರ ಹುಲಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.
ಮೇಕೆದಾಟು ಪಾದಯಾತ್ರೆ ಹಿನ್ನಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗಿದರು.