Sunday, March 13, 2022

ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವ : ಮಾ.೧೪ರಂದು ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆ


 ಶ್ರೀ ಬಸವಣ್ಣ ಸ್ವಾಮಿ
    ಭದ್ರಾವತಿ, ಮಾ. ೧೩: ತಾಲೂಕಿನ ನವಲೆ ಬಸವಾಪುರ ಗ್ರಾಮದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರದ ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೧೪ರಂದು ಸಂಜೆ ೫ ಗಂಟೆಗೆ ಶ್ರೀ ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
    ಶ್ರೀಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಚರಣೆಗಳು ನಡೆಯಲಿದ್ದು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ.
    ಮಾ.೧೬ರಂದು ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಳಾರತಿ:
    ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಶಿವಮೊಗ್ಗ ಬಿದರೆ ಗ್ರಾಮದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮಾ.೧೬ರ ಬೆಳಿಗ್ಗೆ ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ ಅಷ್ಟೋತ್ತರ, ಮಹಾಮಂಗಳಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

೩ನೇ ಮಾಸ್ಟರ್ ಗೇಮ್ಸ್‌ನಲ್ಲಿ ಅಶೋಕ್‌ಕುಮಾರ್‌ಗೆ ಚಿನ್ನದ ಪದಕ

ಕರ್ನಾಟಕ ರಾಜ್ಯ ೩ನೇ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಭದ್ರಾವತಿ ಸಿದ್ದರೂಢನಗರದ ಶಂಕರಮಠ ಸಮೀಪದ ನಿವಾಸಿ ಎನ್ . ಅಶೋಕ್‌ಕುಮಾರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮಾ. ೧೩: ಮಾಸ್ಟರ್ ಗೇಮ್ಸ್ ಫೆಡರೇಷನ್(ಇಂಡಿಯಾ) ಮತ್ತು ಕರ್ನಾಟಕ ಮಾಸ್ಟರ್‍ಸ್ ಗೇಮ್ಸ್ ಅಸೋಸಿಯೇಷನ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿ ಅಜರ್ಕಾಡ್ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ೩ನೇ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಸಿದ್ದರೂಢನಗರದ ಶಂಕರಮಠ ಸಮೀಪದ ನಿವಾಸಿ ಎನ್ . ಅಶೋಕ್‌ಕುಮಾರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ೫೫ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ೫ ಕಿ.ಮೀ ನಡಿಗೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.  ೫೭ರ ವಯೋಮಾನದ ಅಶೋಕ್‌ಕುಮಾರ್‌ರವರು ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖಾ ವಿಭಾಗದ ವ್ಯವಸ್ಥಾಪಕ ಅಧಿಕಾರಿಯಾಗಿದ್ದು, ಇವರು ೨ನೇ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಒಟ್ಟು ೨ ಪದಕಗಳನ್ನು ಪಡೆದುಕೊಂಡಿದ್ದು, ಇವರ ಸಾಧನೆಗೆ ನಗರದ ಗಣ್ಯರು, ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

೩ನೇ ಮಾಸ್ಟರ್ ಗೇಮ್ಸ್‌ನಲ್ಲಿ ಹಿರಿಯ ಕ್ರೀಡಾಪಟು ಬಿ. ನಂಜೇಗೌಡಗೆ ೨ ಚಿನ್ನ, ೧ ಬೆಳ್ಳಿ ಪದಕ

ಬಿ. ನಂಜೇಗೌಡ
    ಭದ್ರಾವತಿ, ಮಾ. ೧೩: ಮಾಸ್ಟರ್ ಗೇಮ್ಸ್ ಫೆಡರೇಷನ್(ಇಂಡಿಯಾ) ಮತ್ತು ಕರ್ನಾಟಕ ಮಾಸ್ಟರ್‍ಸ್ ಗೇಮ್ಸ್ ಅಸೋಸಿಯೇಷನ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿ ಅಜರ್ಕಾಡ್ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ೩ನೇ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ನಗರದ ಹಿರಿಯ ಕ್ರೀಡಾಪಟು, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ಬಿ. ನಂಜೇಗೌಡ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ೮೦೦ ಮೀಟರ್ ಹಾಗು ೪೦೦ ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ೭೫ರ ವಯೋಮಾನದ ನಂಜೇಗೌಡರವರು ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ 30ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರು, ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

Saturday, March 12, 2022

ಗುರುವಂದನೆ ಮೂಲಕ ಸಂಭ್ರಮ ಹಂಚಿಕೊಂಡ ಹಳೇಯ ವಿದ್ಯಾರ್ಥಿಗಳು


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಶ್ರೀ ಹರಿಹರೇಶ್ವರ ಪ್ರೌಢಶಾಲೆಯ ೧೯೯೨-೯೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳು ಶನಿವಾರ ಒಂದೆಡೆ ಸೇರಿ ಸಂಭ್ರಮಿಸುವ ಜೊತೆಗೆ ತಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ಸಾರ್ಥಕತೆ ಕಂಡುಕೊಂಡರು.
    ಭದ್ರಾವತಿ, ಮಾ. ೧೨: ತಾಲೂಕಿನ ಕೂಡ್ಲಿಗೆರೆ ಶ್ರೀ ಹರಿಹರೇಶ್ವರ ಪ್ರೌಢಶಾಲೆಯ ೧೯೯೨-೯೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳು ಶನಿವಾರ ಒಂದೆಡೆ ಸೇರಿ ಸಂಭ್ರಮಿಸುವ ಜೊತೆಗೆ ತಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ಸಾರ್ಥಕತೆ ಕಂಡುಕೊಂಡರು.
    ಸ್ನೇಹ ಸಮ್ಮಿಲನ ಪ್ರೇರಣ ಹೆಸರಿನಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಳೇಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನದ ನೆನಪುಗಳೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು. ಅಲ್ಲದೆ ಮುಂದಿನ ದಿನಗಳಲ್ಲಿ ತಾವು ವಿದ್ಯೆ ಕಲಿತಿರುವ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಯನ್ನು ದತ್ತು ಪಡೆಯುವ ನಿರ್ಧಾರ ಕೈಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
    ಗುರುಗಳಾದ ಹರಿಬಾಬು, ದೇವೇಂದ್ರಪ್ಪ, ಶ್ರೀಧರಸ್ವಾಮಿ, ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ. ಧರ್ಮೇಂದ್ರ, ಹಾಲಪ್ಪ, ಕೃಷ್ಣಮೂರ್ತಿ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು ೪೦ಕ್ಕೂ ಹೆಚ್ಚು ಹಳೇಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಮಾ.೧೮ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಶನಿವಾರ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಮಾ. ೧೨: ಇಲ್ಲಿಗೆ  ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಮಾ.೧೮ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಶನಿವಾರ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು. ದ್ವಜಾರೋಹಣದ ನಂತರ ಸಿಹಿ ಹಂಚಲಾಯಿತು.
    ಪ್ರಮುಖರಾದ ಎ. ಚಂದ್ರಘೋಷನ್, ಸಂಜಯ್‌ಕುಮಾರ್, ಜೆ. ಮಂಜುನಾಥ್, ಸತ್ಯನಾರಾಯಣ, ಆರ್. ಕರುಣಾಮೂರ್ತಿ, ಕೆ. ಮಂಜುನಾಥ್, ಕುಮಾರ್(ಬಂಕ್), ಅನ್ಬು, ಎ. ವೀರಾಭದ್ರನ್, ಸುಂದರ್‌ಬಾಬು, ಎಂ. ವೇಲು, ಡಾ. ವಿಕ್ರಮ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ದಾಖಲಾತಿಗಳು ಸಮರ್ಪಕವಾಗಿದ್ದಲ್ಲಿ ಮನೆ ಬಾಗಿಲಿಗೆ ದಾಖಲೆ ಪತ್ರಗಳು : ಟಿ.ವಿ ಪ್ರಕಾಶ್

ಭದ್ರಾವತಿ ತಾಲೂಕಿನ ಹಡ್ಲಘಟ್ಟ ಗ್ರಾಮದ ದುರ್ಗಾಂಬ ಸಮುದಾಯ ಭವನದ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 'ನಿಮ್ಮ ದಾಖಲೆ ನಿಮ್ಮ ಹಕ್ಕು ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ಥಳದಲ್ಲಿಯೇ ವಿವಿಧ ದಾಖಲೆ ಪತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ಮಾ. ೧೨: ವಿವಿಧ ದಾಖಲೆ ಪತ್ರಗಳಿಗಾಗಿ ಕಂದಾಯ ಇಲಾಖೆಗೆ ಸಲ್ಲಿಸುವ ದಾಖಲಾತಿಗಳು ಸಮರ್ಪಕವಾಗಿದ್ದಲ್ಲಿ ಯಾರು ಸಹ ಯಾವ ಕಛೇರಿಗೂ ಅಲೆದಾಡುವ ಅಗತ್ಯವಿಲ್ಲ. ಇದೀಗ ಮನೆ ಬಾಗಿಲಿಗೆ ದಾಖಲೆ ಪತ್ರಗಳನ್ನು ತಲುಪಿಸಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಹೇಳಿದರು.
    ಅವರು ಶನಿವಾರ ತಾಲೂಕಿನ ಹಡ್ಲಘಟ್ಟ ಗ್ರಾಮದ ದುರ್ಗಾಂಬ ಸಮುದಾಯ ಭವನದ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ನಿಮ್ಮ ದಾಖಲೆ ನಿಮ್ಮ ಹಕ್ಕು ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಸರ್ಕಾರ ಜಾರಿಗೆ ತಂದಿರುವ ಈ ಕಾರ್ಯಕ್ರಮವನ್ನು ಗ್ರಾಮದಲ್ಲಿ ಯಶಸ್ವಿಗೊಳಿಸಲು ಕಂದಾಯ ಇಲಾಖೆ ಹೆಚ್ಚಿನ ಗಮನ ಹರಿಸಿದೆ. ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಂತೆ ಗ್ರಾಮ ಮಟ್ಟದಲ್ಲೂ ತ್ವರಿತವಾಗಿ ಕಾರ್ಯಾಚರಣೆ ನಡೆಸಲು ಆಧುನಿಕ ಸೌಲಭ್ಯಗಳನ್ನು ಹೆಚ್ಚಾಗಿ ಸದ್ಭಳಕೆ ಮಾಡಿಕೊಳ್ಳಲಾಗುವುದು. ಕಂದಾಯ ಇಲಾಖೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ಕಂದಾಯ ಇಲಾಖೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಎಲ್ಲಾ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಲು ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದೆ. ಅಲ್ಲದೆ ಸಾಮಾಜಿಕ ಬದ್ಧತೆಯೊಂದಿಗೆ ಅಸಹಾಯಕರು, ಬಡವರು ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ಅರ್ಹರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುತ್ತಿದೆ. ಒಟ್ಟಾರೆ ತಾಲೂಕಿನಲ್ಲಿ ಕಂದಾಯ ಇಲಾಖೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
    ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಶೆಟ್ಟರು, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ನಿರ್ಮಲ, ಆನಂದಕುಮಾರಿ, ಸುರೇಶ್, ಲೋಕೇಶ್, ಅನಂತ, ಮಾಜಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ಸದಸ್ಯ ಉಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರಾಣಿ ಷಣ್ಮುಖಂ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್‌ಗಳಾದ ನಾರಾಯಣಗೌಡ, ಅರಸು, ಮಂಜನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್, ಶಿರಸ್ತೇದಾರ್ ರಾಧಕೃಷ್ಣ ಭಟ್, ಜಗನ್ನಾಥ್ ಸೇರಿದಂತೆ  ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗ್ರಾಮಸ್ಥರಿಗೆ ಸ್ಥಳದಲ್ಲಿಯೇ ವಿವಿಧ ದಾಖಲೆ ಪತ್ರಗಳನ್ನು ನೀಡಲಾಯಿತು.

ವಿಐಎಸ್‌ಎಲ್ ಆಸ್ಪತ್ರೆಯಿಂದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ದೊಡ್ಡೇರಿ, ಬದನೆಹಾಳ್ ಗ್ರಾಮಗಳಲ್ಲಿ ಆರೋಗ್ಯ ಶಿಬಿರ

ಭದ್ರಾವತಿ ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ತಾಲೂಕಿನ ದೊಡ್ಡೇರಿ ಮತ್ತು ಬದನೆಹಾಳ್ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೨: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ತಾಲೂಕಿನ ದೊಡ್ಡೇರಿ ಮತ್ತು ಬದನೆಹಾಳ್ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
    ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ, ಮುಖ್ಯ ಮಹಾ ವ್ಯವಸ್ಥಾಪಕ(ಯೋಜನೆಗಳು) ಎ.ಬಿ. ಪವಾಡೆ, ಮುಖ್ಯ ಮಹಾ ವ್ಯವಸ್ಥಾಪಕ (ಕಾರ್ಯಾಚರಣೆ) ಕೆ.ಎಸ್. ಸುರೇಶ್, ಮುಖ್ಯ ವ್ಯವಸ್ಥಾಪಕ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರಬರ್ತಿ, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಎಮ್.ವೈ. ಸುರೇಶ್, ಸಹಾಯಕ ವ್ಯವಸ್ಥಾಪಕಿ (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಕೆ.ಎಸ್. ಶೋಭ, ದೊಡ್ಡೇರಿ ಗ್ರಾಮಪಂಚಾಯತ್ ಅಧ್ಯಕ್ಷ ಆಗಾ ಶರೀಫ್, ಉಪಾಧ್ಯಕ್ಷೆ ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಿಬಿರದಲ್ಲಿ  ವಿಐಎಸ್‌ಎಲ್ ಆಸ್ಪತ್ರೆಯ ಡಾ. ಸುಜೀತ್ ಕುಮಾರ್(ತಜ್ಞವೈಧ್ಯರು), ಡಾ. ಟಿ.ಎನ್. ಸುಷ್ಮಾ (ಸ್ತ್ರೀ ರೋಗ ತಜ್ಞೆ), ಡಾ. ಸುರೇಶ್. ಎಸ್.ಎನ್. (ದಂತ ವೈದ್ಯ) ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನೊಳಗೊಂಡ ತಂಡ ತಪಾಸಣೆ ನಡೆಸುವ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸಿತು.   
    ಪಂಚಾಯತ್ ಆಭಿವೃದ್ಧಿ ಅಧಿಕಾರಿ ಶಿವಶಂಕರ್ ಸ್ವಾಗತಿಸಿದರು. ದೊಡ್ಡೇರಿ ಗ್ರಾಮದಲ್ಲಿ  ೧೦೬ ಮತ್ತು ಬದನೆಹಾಳ್ ಗ್ರಾಮದಲ್ಲಿ ೧೦೦ ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.