Monday, March 14, 2022

ಜಾತ್ರಾ ಮಹೋತ್ಸವ : ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆ

ಭದ್ರಾವತಿ ತಾಲೂಕಿನ ನವಲೆ ಬಸವಾಪುರ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಶ್ರೀ ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆಗಳು ಅದ್ದೂರಿಯಾಗಿ ನೆರವೇರಿದವು.  
    ಭದ್ರಾವತಿ, ಮಾ. ೧೫: ತಾಲೂಕಿನ ನವಲೆ ಬಸವಾಪುರ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಶ್ರೀ ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆಗಳು ಅದ್ದೂರಿಯಾಗಿ ನೆರವೇರಿದವು.  
    ಶ್ರೀಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ, ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಆಚರಣೆಗಳು ಜರುಗಿದವು.
    ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಂಡಿದ್ದರು.


ಕುಡಿದ ಅಮಲಿನಲ್ಲಿ ಮಿಲ್ಟ್ರಿ ಹೋಟೆಲ್‌ನಲ್ಲಿ ಪುಂಡಾಟ : ಅಡುಗೆ ಸಿಬ್ಬಂದಿ ಮುಖಕ್ಕೆ ಕುದಿಯುವ ಎಣ್ಣೆ ಎರಚಿದ ಪುಂಡರು


    ಭದ್ರಾವತಿ, ಮಾ. ೧೪:  ಮಿಲ್ಟ್ರಿ ಹೋಟಲ್‌ನಲ್ಲಿ ಕುಡಿದ ಅಮಲಿನಲ್ಲಿದ್ದ ಗುಂಪೊಂದು ಪುಂಡಾಟಿಕೆ ನಡೆಸಿ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿಯೋರ್ವನ ಮುಖದ ಮೇಲೆ ಕುದಿಯುವ ಎಣ್ಣೆ ಎರಚಿರುವ ಘಟನೆ ನಗರದ ಜನ್ನಾಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
    ಜನ್ನಾಪುರದ ವಾಣಿಜ್ಯ ರಸ್ತೆಯಲ್ಲಿರುವ ಗರುಡ ಮಿಲ್ಟ್ರಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಮನೋಜ್ ಕುಮಾರ್ ಮುಖ ಸುಟ್ಟು ತೀವ್ರ ಗಾಯಗೊಂಡಿದೆ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಹುತ್ತಾ ಕಾಲೋನಿ ಹಾಗು ಜಿಂಕ್‌ಲೈನ್ ನಿವಾಸಿಗಳಾದ ಅಜಯ್, ಯೋಗೇಶ್, ಜಗದೀಶ್ ಮತ್ತು ದೀಪು ಹಾಗು ಇನ್ನಿತರರನ್ನೊಳಗೊಂಡ ಗುಂಪು ಹೋಟೆಲ್ ಮುಂಭಾಗದಲ್ಲಿರುವ ಮದ್ಯದಂಗಡಿಯಲ್ಲಿ ಮದ್ಯಸೇವಿಸಿ ಹೋಟೆಲ್‌ಗೆ ಬಂದು ತಿಂದುಂಡು ನಂತರ ಹೋಟೆಲ್ ಮಾಲೀಕ ಲೋಹಿತ್‌ಕುಮಾರ್ ಬಿಲ್ ಕೇಳಿದಾಗ ಕೊಡದೆ ಪುಂಡಾಟ ನಡೆಸಿದ್ದು, ಅಲ್ಲದೆ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಸುರೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಮಾಲೀಕನ ಬೆಂಬಲಕ್ಕೆ ನಿಂತ ಅಡುಗೆ ಸಿಬ್ಬಂದಿ ಮನೋಜ್‌ಕುಮಾರ್ ಮುಖಕ್ಕೆ ಕುದಿಯುವ ಎಣ್ಣೆ ಎರಚಲಾಗಿದೆ. ಜೊತೆಗೆ ಹೋಟಲ್‌ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಕೂಡ್ಲಿಗೆರೆ ಗ್ರಾಮದಲ್ಲಿ ಹಲವು ವಿಶೇಷತೆಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಈ ಬಾರಿ ಹಲವು ವಿಶೇಷತೆಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. 
    ಭದ್ರಾವತಿ, ಮಾ. ೧೪: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಈ ಬಾರಿ ಹಲವು ವಿಶೇಷತೆಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. 
ಮಹಾಮಾರಿ ಕೋವಿಡ್-೧೯ ಸಂಘಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರನ್ನು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 
  ಕೂಡ್ಲಿಗೆರೆ ಗ್ರಾಮ ಪಂಚಾಯಿತಿ, ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟ ಹಾಗು ಸ್ವಸಹಾಯ ಮಹಿಳಾ ಸಂಘಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಉದ್ಯಮಿ ಬಿ.ಕೆ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಯುವ ಮುಖಂಡ ಬಿ.ಎಸ್ ಗಣೇಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಹೇಮಾವತಿ ವಿಶ್ವನಾಥ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ನಗರಸಭಾ ಸದಸ್ಯೆ ಅನಿತಾ ಮಲ್ಲೇಶ್, ಗ್ರಾಮದ ಮುಖಂಡರಾದ ಎನ್.ಎಚ್ ಮಹೇಶ್, ದಲಿತ ಮುಖಂಡ ಕೃಷ್ಣಮೂರ್ತಿ, ಮಹೇಶ್‌ಗೌಡ್ರು, ದಾನವಾಡಿ ಗುರುಮೂರ್ತಿ, ತಾಲೂಕು ಸುಗ್ರಾಮ ಚುನಾಯಿತಿ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ತಿಪ್ಪೇಶ್, ಉಪಾಧ್ಯಕ್ಷ ಕುಬೇರ್‌ನಾಯ್ಕ್, ಮಾಜಿ ಅಧ್ಯಕ್ಷೆ ಮಲ್ಲಕ್ ವೀರಪ್ಪನ್, ಸದಸ್ಯರಾದ ವಿಶ್ವನಾಥ್, ಜಯಣ್ಣ, ಆರ್.ಎನ್ ರುದ್ರೇಶ್, ನಾಗರಾಜ ಗೌಡ್ರು, ಸ್ವಾಮಿನಾಥನ್, ಭಾಗ್ಯಮ್ಮ, ನೀಲಾಬಾಯಿ, ಪಾರ್ವತಿ ಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಕೂಡ್ಲಿಗೆರೆ, ದಾನವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಗ್ರಾಮದ ಮುಖಂಡ ಎಸ್. ಮಹಾದೇವ  ಹಾಗು ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್‌ರನ್ನು  ಸನ್ಮಾನಿಸಿ ಗೌರವಿಸಲಾಯಿತು. 

ಮಾ.೧೫ರಂದು ಹೋರಾಟ ರೂಪಿಸಲು ಪೂರ್ವಭಾವಿ ಸಭೆ

    ಭದ್ರಾವತಿ, ಮಾ. ೧೪: ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ೧ನೇ ತಿರುವಿನಿಂದ ಶ್ರೀ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವ ಸಂಬಂಧ ಹೋರಾಟ ರೂಪಿಸಲು ಮಾ.೧೫ರಂದು ಬೆಳಿಗ್ಗೆ ೧೦.೩೦ಕ್ಕೆ ಪದ್ಮ ನಿಲಯ ಹೋಟೆಲ್ ಸುನಂದ ಸಭಾಂಗಣದಲ್ಲಿ ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿದೆ.
    ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ದಲಿತರು ಹೆಚ್ಚಾಗಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗುತ್ತಿದ್ದು, ಇದನ್ನು ಮನಗಂಡು ಈ ಹಿಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮ ಕರ್ನಾಟಕ ನೀರಾವರಿ ನಿಗಮಕ್ಕೆ ಕಾಮಗಾರಿ ಕೈಗೆತ್ತಿಗೊಳ್ಳಲು ೯.೫ ಕೋ. ರು. ಹಣ ಬಿಡುಗಡೆಯಾಗಿರುತ್ತದೆ. ೧ನೇ ತಿರುವಿನಿಂದ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ತಡೆಗೋಡೆ ನಿರ್ಮಿಸಬೇಕಾಗಿತ್ತು. ಆದರೆ ಇದೀಗ ಈ ಕಾಮಗಾರಿಯನ್ನು ದುರುದ್ದೇಶ ಪೂರ್ವಕವಾಗಿ ಬದಲಿಸಲಾಗಿದ್ದು, ದಲಿತರಿಗೆ ಅನ್ಯಾಯವೆಸಗಲಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ಹೋರಾಟ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಸ್ಥಳೀಯ ನಿವಾಸಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಸಭೆಗೆ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಸಂಘದ ರಾಜ್ಯಾಧ್ಯಕ್ಷ ಬಿ. ರಮೇಶ್ ಕೋರಿದ್ದಾರೆ.

ಮಾ.೧೫ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಮಾ. ೧೩: ಮೆಸ್ಕಾಂ ಜೆಪಿಎಸ್ ಕಾಲೋನಿಯಲ್ಲಿರುವ ೧೧೦/೩೩/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.೧೫ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.  
    ನ್ಯೂಟೌನ್, ನ್ಯೂಕಾಲೋನಿ, ಬಿ.ಎಚ್ ರಸ್ತೆ, ಐಟಿಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನಿಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹಳೇಸಿದ್ದಾಪುರ, ಹೊಸೂರು ತಾಂಡ, ಹುತ್ತಾ ಕಾಲೋನಿ, ಜನ್ನಾಪುರ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಶಿವನಿ ವೃತ್ತ, ಹಿರಿಯೂರು, ಹೊಳೆ ಗಂಗೂರು, ಕಾರೇಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ತಡಸ, ಬಿಳಿಕಿ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ್ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಬಸವನಗುಡಿ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ ಮತ್ತು ಅರಳಿಕೊಪ್ಪ ಸೇರಿದಂತೆ ಇನ್ನಿತರರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.  


Sunday, March 13, 2022

ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವ : ಮಾ.೧೪ರಂದು ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆ


 ಶ್ರೀ ಬಸವಣ್ಣ ಸ್ವಾಮಿ
    ಭದ್ರಾವತಿ, ಮಾ. ೧೩: ತಾಲೂಕಿನ ನವಲೆ ಬಸವಾಪುರ ಗ್ರಾಮದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರದ ಶ್ರೀ ಬಸವಣ್ಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೧೪ರಂದು ಸಂಜೆ ೫ ಗಂಟೆಗೆ ಶ್ರೀ ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
    ಶ್ರೀಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಚರಣೆಗಳು ನಡೆಯಲಿದ್ದು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ.
    ಮಾ.೧೬ರಂದು ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಳಾರತಿ:
    ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಶಿವಮೊಗ್ಗ ಬಿದರೆ ಗ್ರಾಮದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮಾ.೧೬ರ ಬೆಳಿಗ್ಗೆ ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ ಅಷ್ಟೋತ್ತರ, ಮಹಾಮಂಗಳಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

೩ನೇ ಮಾಸ್ಟರ್ ಗೇಮ್ಸ್‌ನಲ್ಲಿ ಅಶೋಕ್‌ಕುಮಾರ್‌ಗೆ ಚಿನ್ನದ ಪದಕ

ಕರ್ನಾಟಕ ರಾಜ್ಯ ೩ನೇ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಭದ್ರಾವತಿ ಸಿದ್ದರೂಢನಗರದ ಶಂಕರಮಠ ಸಮೀಪದ ನಿವಾಸಿ ಎನ್ . ಅಶೋಕ್‌ಕುಮಾರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮಾ. ೧೩: ಮಾಸ್ಟರ್ ಗೇಮ್ಸ್ ಫೆಡರೇಷನ್(ಇಂಡಿಯಾ) ಮತ್ತು ಕರ್ನಾಟಕ ಮಾಸ್ಟರ್‍ಸ್ ಗೇಮ್ಸ್ ಅಸೋಸಿಯೇಷನ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿ ಅಜರ್ಕಾಡ್ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ೩ನೇ ಮಾಸ್ಟರ್ ಗೇಮ್ಸ್ ಪಂದ್ಯಾವಳಿಯಲ್ಲಿ ಸಿದ್ದರೂಢನಗರದ ಶಂಕರಮಠ ಸಮೀಪದ ನಿವಾಸಿ ಎನ್ . ಅಶೋಕ್‌ಕುಮಾರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ೫೫ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ೫ ಕಿ.ಮೀ ನಡಿಗೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.  ೫೭ರ ವಯೋಮಾನದ ಅಶೋಕ್‌ಕುಮಾರ್‌ರವರು ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖಾ ವಿಭಾಗದ ವ್ಯವಸ್ಥಾಪಕ ಅಧಿಕಾರಿಯಾಗಿದ್ದು, ಇವರು ೨ನೇ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಒಟ್ಟು ೨ ಪದಕಗಳನ್ನು ಪಡೆದುಕೊಂಡಿದ್ದು, ಇವರ ಸಾಧನೆಗೆ ನಗರದ ಗಣ್ಯರು, ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.