ಕೆರೆ ಸಂರಕ್ಷಣಾ ಸಮಿತಿ ಹೋರಾಟಕ್ಕೆ ತಾಲೂಕು ಆಡಳಿತ ಪೂರಕ ಸ್ಪಂದನೆ
![](https://blogger.googleusercontent.com/img/a/AVvXsEgXgDNGthSmem-WOz5ocpoMx80uNfIaLLeHRKYN_9EcnmNr8PH2vaHTr2Xx8vFRpxijftJUVB8q6KWfA0Gl5BWRXHuNwmqF58KN6SQrgF-P2pqsTroike7AdITjJ76phdnt7l8KW5_Sfvb36HsQS6xLNGYeSgdow6GykbNpPCgBT0hGsWXehdJe6pJ2rw=w400-h234-rw)
ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ಏ. ೪: ತಾಲೂಕು ಆಡಳಿತದಿಂದ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಸಂಪೂರ್ಣವಾಗಿ ಸರ್ವೆ ನಡೆಸುವುದಾಗಿ ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
ಕೆರೆ ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ತಾಲೂಕು ಕಛೇರಿ ಮುಂಭಾಗ ಸೋಮವಾರ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಆಡಳಿತ ಸರ್ವೆ ಕಾರ್ಯದಲ್ಲಿ ಯಾವುದೇ ರೀತಿ ಲೋಪದೋಷವೆಸಗಿಲ್ಲ. ಕೆರೆಯ ಒಟ್ಟು ವಿಸ್ತೀರ್ಣ ೫೨ ಎಕರೆಯಾಗಿದ್ದು, ಬಹಳ ವರ್ಷಗಳ ಹಿಂದೆಯೇ ೧೯೬೨-೬೩ರಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿಕೊಂಡು ಕೆರೆ ಜಾಗವನ್ನು ಮಂಜೂರಾತಿ ಮಾಡಿದ್ದಾರೆ. ೫ ಎಕರೆ ಜಾಗದಲ್ಲಿ ಮೊದಲು ೬೮-೬೯ರಲ್ಲಿ ೦೪ ಗುಂಟೆ ಖರಾಬು ಜಾಗ ಎಂಬುದಾಗಿ ನಮೂದಿಸಲಾಗಿದ್ದು, ಉಳಿದ ೪ ಎಕರೆ ೩೬ ಗುಂಟೆ ಜಾಗವನ್ನು ೭೨-೭೩ರಲ್ಲಿ ಜೆ.ಪಿ ಹಾಲಸಿದ್ದಪ್ಪ ಎಂಬುವರಿಗೆ ಮಂಜೂರಾತಿ ಮಾಡಲಾಗಿದೆ. ಈ ಪ್ರಕ್ರಿಯೆಗಳ ನಂತರ ಮೂಲ ದಾಖಲಾತಿಗಳಲ್ಲಿ ಬದಲಾವಣೆಯಾಗಿದ್ದು, ಈ ದಾಖಲೆಗಳ ಆಧಾರದ ಮೇಲೆ ೪೫ ಎಕರೆ ೨೦ ಗುಂಟೆ ಜಾಗದ ಸರ್ವೆ ನಡೆಸಲಾಗಿದೆ. ೫ ಎಕರೆ ಕೆರೆ ಒತ್ತುವರಿ ತೆರವುಗೊಳಿಸಲು ಕಾನೂನಾತ್ಮಕ ಸಮಸ್ಯೆ ಎದುರಾಗಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶ ಆನ್ವಯದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೂ ಮೊದಲು ಬೇಡಿಕೆಯಂತೆ ಕೆರೆಯ ಸಂಪೂರ್ಣ ಸರ್ವೆ ನಡೆಸುವ ಮೂಲಕ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಜನ್ನಾಪುರ-ಸಿದ್ದಾಪುರ ಕೆರೆ ಒಟ್ಟು ೫೨ ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಕೆರೆ ಜಾಗವನ್ನು ೪೫ ಎಕರೆ ೨೦ ಗುಂಟೆ ಎಂದು ಗುರುತಿಸಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ಭೂ ಕಬಳಿಕೆದಾರರನ್ನು ರಕ್ಷಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸರ್ವೆ ಕಾರ್ಯ ನಡೆಸಿ ಗುರುತಿಸಲಾಗಿರುವ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ೩೦ ಎಕರೆ ಜಾಗವನ್ನು ಮಾತ್ರ ಸೀಮಿತಗೊಳಿಸಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಮೊದಲನೇ ಕಂತಿನ ಹಣ ಅಂದಾಜು ೪,೪೮,೦೦,೦೦೦ ರು. ಬಿಡುಗಡೆಗೊಳಿಸಿದೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಮೊದಲು ೫೨ ಎಕರೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದ ಈ ಕೆರೆ ಮಲ-ಮೂತ್ರಗಳಿಂದ ತುಂಬಿಕೊಂಡಿದ್ದು, ಕಲುಷಿತಗೊಂಡಿರುವ ಕೆರೆಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮೊದಲು ಕೈಗೊಳ್ಳಬೇಕಾಗಿದೆ. ಆ ನಂತರ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ರಿಯಾಜ್ ಅಹಮದ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ವೆಂಟಕೇಶ್, ಪ್ರಮುಖರಾದ ಜಿ. ರಾಜು, ಚನ್ನಪ್ಪ, ವಿಶ್ವೇಶ್ವರ ಗಾಯಕ್ವಾಡ್, ಎನ್. ರಾಮಕೃಷ್ಣ, ಎಸ್. ಮಂಜುನಾಥ್, ರಾಮಚಂದ್ರ, ವೆಂಕಟೇಶ್, ವಿಲ್ಸನ್ ಬಾಬು, ಪಾಪಣ್ಣ, ಹಾವು ಮಂಜ ಸೇರಿದಂತೆ ಕೆರೆ ಸಮೀಪದ ರೈತರು, ಶ್ರೀ ಚೌಡೇಶ್ವರಿ ದೇವಿ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಿದರು.