Monday, April 25, 2022

ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಡಿ.ಎಸ್ ಶಿವಪ್ರಕಾಶ್ ಕರ್ತವ್ಯಕ್ಕೆ ಶಾಸಕರ ಮೆಚ್ಚುಗೆ

ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಅಭಿನಂದನೆ

ಭದ್ರಾವತಿ, ಏ. ೨೫:  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಭದ್ರಾವತಿ, ಏ. ೨೫:  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಮೂಲತಃ ಸೊರಬ ತಾಲೂಕಿನವರಾದ ಶಿವಪ್ರಕಾಶ್‌ರವರು ೧೯೯೭ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದು, ಶಿಕಾರಿಪುರದ ಕಪ್ಪನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ೮ ವರ್ಷ,  ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸುಮಾರು ೧೦ ವರ್ಷ ಹಾಗು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸುಮಾರು ೨ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಇದುವರೆಗೂ ಸುಮಾರು ೧೦ ಸಾವಿರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ, ೫೦೦೦ಕ್ಕೂ ಹೆಚ್ಚು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಹಾಗು ೨೦೦ಕ್ಕೂ ಹೆಚ್ಚು ಎನ್‌ವಿಎಸ್ ಶಸ್ತ್ರ ಚಿಕಿತ್ಸೆ ನೆರವೇರಿಸಿರುವುದು ಇವರ ವೈದ್ಯ ವೃತ್ತಿಯ ಸಾಧನೆಯಾಗಿದ್ದು, ವೈದ್ಯ ವೃತ್ತಿಯ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರಿಗೆ ೨೦೧೭-೧೮ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಸಹ ಲಭಿಸಿದೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
    ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಶಿವಪ್ರಕಾಶ್‌ರವರ ವೃತ್ತಿ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಇ.ಓ ರಮೇಶ್, ನಗರಸಭೆ ಹಾಗು ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಹಿರಿಯ ವೈದ್ಯರಾದ ಡಾ. ಗುಡದಪ್ಪ ಕಸಬಿ, ಡಾ. ಶಂಕರಪ್ಪ, ಡಾ. ಓ. ಮಲ್ಲಪ್ಪ ಹಾಗು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಶ್ವ ಪುಸ್ತಕ ದಿನ : ಓದುವ ಉನ್ನತ ಸಂಸ್ಕೃತಿ ಉಳಿಯಲಿ

ವಿಶ್ವ ಪುಸ್ತಕ ದಿನದ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸಾರ್ವಜನಿಕ ವಾಚನಾಲಯ ಮತ್ತು ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸ ಸಲ್ಲಸುತ್ತಿರುವ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೫: ಪುಸ್ತಕ ಓದುವ, ಓದಿದ್ದನ್ನು ಅರ್ಥೈಸಿಕೊಳ್ಳುವ, ನಾಲ್ಕಾರು ಜನರಿಗೆ ತಿಳುವಳಿಕೆ ನೀಡುವ ಉನ್ನತ ಸಂಸ್ಕೃತಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ವಿಶ್ವ ಪುಸ್ತಕ ದಿನದ ಅಂಗವಾಗಿ ಪರಿಷತ್ ವತಿಯಿಂದ ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸಾರ್ವಜನಿಕ ವಾಚನಾಲಯ ಮತ್ತು ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ಎಲ್ಲರೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವ ಜೊತೆಗೆ ಪುಸ್ತಕ ಉಡುಗೊರೆ ನೀಡುವ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕೆಂದರು.
    ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪುಸ್ತಕ ಪ್ರಕಾಶಕರಾಗಿ, ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ರಾಜ್‌ಕುಮಾರ್ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಪರಿಷತ್ ಪದಾಧಿಕಾರಿಗಳಾದ ತಿಮ್ಮಪ್ಪ, ಜಗದೀಶ್, ಅನಿಲ್‌ಕುಮಾರ್, ನಗರಸಭಾ ಸದಸ್ಯ ಬಸವರಾಜ ಬಿ ಆನೇಕೊಪ್ಪ, ಸಾಹಿತ್ಯ ಪ್ರೇಮಿಗಳಾದ ಭಾಸ್ಕರ್, ಚಂದ್ರಶೇಖರಪ್ಪ, ರಂಗನಾಥ್, ರಾಜು, ರಾಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಂಗನಾಥ್  ಸ್ವಾಗತಿಸಿ,  ಗುರು ವಂದಿಸಿದರು.

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ಪ್ರಶಸ್ತಿ ಪ್ರದಾನ

ಭದ್ರಾವತಿ ಹಳೆನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ  ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ಹಮ್ಮಿಕೊಳ್ಳಲಾಗಿತ್ತು. ಸಂಗೀತ ಹಾಗು ಭರತನಾಟ್ಯದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೫: ಹಳೆನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ  ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
     ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಸಂಗೀತ ಜ್ಯೂನಿಯರ್ ವಿಭಾಗದಲ್ಲಿ ಉಲ್ಲಾಸ್, ವೀಣೆ ಜ್ಯೂನಿಯರ್ ವಿಭಾಗದಲ್ಲಿ ಆರ್. ಆದರ್ಶ್ ಮತ್ತು ಭರತನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಅಶ್ವಿನಿ ಹಾಗು ಸೀನಿಯರ್ ವಿಭಾಗದಲ್ಲಿ ವೈಷ್ಣವಿ ಸಿ ವಿದ್ವತ್ಪೂರ್ವ ಸ್ನೇಹಾ ಎಸ್  ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದೂಷಿ ಪುಷ್ಪ ಕೃಷ್ಣಮೂರ್ತಿ, ಸೋಮು, ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಗಂಗರಾಜ್ ಸ್ವಾಗಸಿದರು. ಶಾರದ ಶ್ರೀನಿವಾಸ್ ನಿರೂಪಿಸಿದರು. ಖಜಾಂಚಿ ಶಾಂತಿ ಶೇಟ್ ವಂದಿಸಿದರು.


Sunday, April 24, 2022

ವಿಶೇಷ ಗ್ರಾಮ ಸಭೆ ಮೂಲಕ ಪಂಚಾಯತ್ ರಾಜ್ ದಿವಸ್ ಆಚರಣೆ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಿರಿಯ ನಾಗರೀಕರಿಗೆ ಸಿಹಿ ತಿನ್ನಿಸುವ ಮೂಲಕ ವಿಶೇಷ ಗ್ರಾಮ ಸಭೆ ನಡೆಸಿ ಪಂಚಾಯತ್ ರಾಜ್ ದಿವಸ್ ಆಚರಿಸಲಾಯಿತು.
    ಭದ್ರಾವತಿ, ಏ. ೨೪: ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಿರಿಯ ನಾಗರೀಕರಿಗೆ ಸಿಹಿ ತಿನ್ನಿಸುವ ಮೂಲಕ ವಿಶೇಷ ಗ್ರಾಮ ಸಭೆ ನಡೆಸಿ ಪಂಚಾಯತ್ ರಾಜ್ ದಿವಸ್ ಆಚರಿಸಲಾಯಿತು.
    ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಡಿ ಶೇಖರಪ್ಪ ವಿಶೇಷ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಾಗು ಪಿ.ಎಂ ಕಿಸಾನ್ ಯೋಜನಾ ಕ್ರಿಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
    ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಶಂಕರಪ್ಪ, ಅಭಿವೃದ್ಧಿ ಅಧಿಕಾರಿ ಸುರೇಶ್ ಹಾಗು ಸದಸ್ಯರು, ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಭಾಸ್ಕರ್ ಸ್ವಾಗತಿಸಿದರು. ಅರಕೆರೆ ಭೈರೇಶ್‌ಕುಮಾರ್ ವಂದಿಸಿದರು.  

ಸಾತ್ವಿಕ ಬ್ರಾಹ್ಮಣ ಸಮುದಾಯ ಗುರುಗಳ ಕೃಪೆಪಡೆದು ದೇಶದ ನಾಯಕನಿಗೆ ಶಕ್ತಿ ತುಂಬಲಿ : ಶ್ರೀ ವಿಶ್ವಪ್ರಿಯತೀರ್ಥರು

ಭದ್ರಾವತಿ ಸಿದ್ಧಾರೂಢನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಸುಮಾರು ವಾರದಿಂದ ನಡೆಯುತ್ತಿರುವ ಮಠದ ರಜತಮಹೋತ್ಸವದ ಕೊನೆಯ ದಿನವಾದ ಭಾನುವಾರ ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ಪಂಚಾಮೃತಭಿಷೇಕ ಹಾಗೂ ವಿಶೇಷ ಅಲಂಕಾರ ಕೈಗೊಳ್ಳಲಾಯಿತು.
    ಭದ್ರಾವತಿ, ಏ. ೨೪: ಸಾತ್ವಿಕ ಬ್ರಾಹ್ಮಣ ಸಮುದಾಯ ಮಂತ್ರ, ಜಪ, ತಪಗಳ ಮೂಲಕ ಹರಿವಾಯು ಗುರುಗಳ ಕೃಪೆಪಡೆದು ಅದನ್ನು ಹಿಂದೂ ಸಮಾಜವನ್ನೊಳಗೊಂಡ ಈ ದೇಶದ ಒಳಿತಿಗಾಗಿ ಶ್ರಮಿಸುತ್ತಿರುವ ದೇಶದ ನಾಯಕನಿಗೆ ಶಕ್ತಿ ತುಂಬಲು ಬಳಸಬೇಕು ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರು ಹೇಳಿದರು.
    ಅವರು ಸಿದ್ಧಾರೂಢನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಸುಮಾರು ವಾರದಿಂದ ನಡೆಯುತ್ತಿರುವ ಮಠದ ರಜತಮಹೋತ್ಸವದ ಕೊನೆಯ ದಿನವಾದ ಭಾನುವಾರ ಅನುಗ್ರಹ ಸಂದೇಶನೀಡಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಅಗತ್ಯಬಿದ್ದರೆ ಕುಟುಂಬ ಸದಸ್ಯರ ಬಾಂಧವ್ಯ ತೊರೆದು ಸಮಾಜಮುಖಿಯಾಗಿ ಕೆಲಸಮಾಡಲು ಮುಂದಾಗಬೇಕು ಎಂಬುದನ್ನು ಸ್ವತಃ ಗುರು ಶ್ರೀರಾಘವೇಂದ್ರಸ್ವಾಮಿಗಳ ಜೀವನವೇ ನಮಗೆ ಮಾರ್ಗದರ್ಶಕವಾಗಿದೆ ಎಂದರು.
    ಸಮಾಜದ ಒಳಿತಿಗಾಗಿ ಅವರು ಸನ್ಯಾಸ ಸ್ವೀಕಾರಕ್ಕೆ ಮುಂದಾದಾಗ ಅವರ ಪತ್ನಿ ಅದಕ್ಕೆ ಅಡ್ಡಿಪಡಿಸಿದರೂ ಸಹ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಸನ್ಯಾಸ ಸ್ವೀಕರಿಸಿ ತಪಃ ಪ್ರಭಾವದಿಂದ ಧರ್ಮ, ಜಾತಿ, ಪಂಗಡ ತಾರತಮ್ಯವಿಲ್ಲದೆ ಹಿಂದೂ, ಮುಸ್ಲಿಂ ಎಲ್ಲಾ ಜನರ ಕಷ್ಟಗಳನ್ನು ನಿವಾರಣೆ ಮಾಡಿ ಅವರ ಕೈಹಿಡಿದು ದಾರಿತೋರಿದ್ದಾರೆ ಎಂಬುದು ಎಷ್ಟು ಸತ್ಯವೋ ಅದೇ ರೀತಿ ಹಿಂದೂ ಸಮಾಜದ ಧಾರ್ಮಿಕ ಆಚಾರ-ವಿಚಾರಧಾರೆಗಳಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಯಾರೇ ಕೈಹಾಕಿದರೂ ಅಂತಹ ಜನರ ಕೈಗಳನ್ನು ಆ ರೀತಿ ಮಾಡದ ರೀತಿ ತಡೆಯುವ ಶಕ್ತಿ ಸಹ ಆ ಗುರು ಶ್ರೀ ರಾಘವೇಂದ್ರಸ್ವಾಮಿಗಳು ಕರುಣಿಸುತ್ತಾರೆ ಎಂಬುದೂ ಸಹ ಅಷ್ಠೇ ಸತ್ಯ ಎಂದರು.
    ಸಾತ್ವಿಕತೆಗೆ ಹೆಸರಾದ ಬ್ರಾಹಣ ಸಮುದಾಯ ದೈಹಿಕವಾಗಿ ದೇಶದ ರಕ್ಷಣೆ ಮಾಡಲು ಸಶಕ್ತ ವಾಗಿರದಿದ್ದರೂ ಸಹ, ಹೆಚ್ಚು ಹೆಚ್ಚು ಮಠ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವ ಜೊತೆಗೆ ವೇದ, ಶಾಸ್ತ್ರ, ಪುರಾಣ, ಮಂತ್ರಗಳ ಅಧ್ಯಯನದ ಮೂಲಕ ಶಕ್ತಿ ಸಂಪಾದಿಸಿ  ಅದನ್ನು ದೇಶ ರಕ್ಷಣೆಗೆ ಕಟಿಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ನಾಯಕನಿಗೆ ಶಕ್ತಿ ತುಂಬಲು ಬಳಸುವ ಸಂಕಲ್ಪ ಮಾಡಬೇಕು ಎಂದರು.
    ಡಾ. ದಯಾವತಿ, ನಾಗರಾಜ್, ರಮಾಕಾಂತ್, ವೆಂಕಟೇಶ್ ಮುಂತಾದವರು ಶ್ರೀಮಠ ಬೆಳೆದುಬಂದ ಹಾದಿಯ ಕುರಿತಂತೆ ಹಾಗೂ ಅದಕ್ಕೆ ಶ್ರಮಸಿದ ವ್ಯಕ್ತಿಗಳ ಕಾರ್ಯವನ್ನು ಸ್ಮರಿಸಿ ಮಾತನಾಡಿದರು. ಶ್ರೀಮಠದ ಮುಖ್ಯಸ್ಥರಾದ ಶೇಷಗಿರಿಆಚಾರ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾ ದವರಿಗೆ ಕೃತಜ್ಞತೆ ಸಲ್ಲಿಸಿದರು.
    ಬೆಳಿಗ್ಗೆ ರಾಯರ ವೃಂದಾವನಕ್ಕೆ ಪಂಚಾಮೃತಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು. ಶ್ರೀಗಳು ಅದಮಾರು ಮಠದ ಸಂಸ್ಥಾನದ ಶ್ರೀಕಾಳಿಂಗಮರ್ಧನ ಕೃಷ್ಣನ ಪೂಜೆಯನ್ನು ನೆರೆವೇರಿಸಿದರು.
    ಜಗನ್ನಾಥದಾಸರ ಹರಿಕಥಾಮೃತಸಾರದ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು.
    ಮಠದ ವ್ಯವಸ್ಥಾಪಕರಾದ ಪಂಡಿತ್ ಗೋಪಾಲಾಚಾರ್, ಶ್ರೀನಿವಾಸಾಚಾರ್, ಶೇಷಗಿರಿ ಆಚಾರ್, ಜಗನ್ನಾಥ್, ವಾಸು, ರಾಘವೇಂದ್ರ, ಜಯತೀರ್ಥ, ವೆಂಕಟೇಶ್, ಮಧುಸೂದನ್, ಮಾಧವ ಮೂರ್ತಿ, ಸುಮಾ ಶೇಷಗಿರಿ, ಗುರುರಾಜಚಾರ್ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು ಕೃಪೆಗೆ ಪಾತ್ರರಾದರು.
 

ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಗುರು ರಕ್ಷೆ ಪಡೆದರು.


ವಿಜೃಂಭಣೆಯಿಂದ ಜರುಗಿದ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ

ಭದ್ರಾವತಿ ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ದೇವಿಗೆ ಕಲಾ ತತ್ತ್ವಾಧಿವಾಸ ಹೋಮ, ನವ ಕಲಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ಏ. ೨೪: ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಬೆಳಿಗ್ಗೆ ಶ್ರೀ ದೇವಿಗೆ ಕಲಾ ತತ್ತ್ವಾಧಿವಾಸ ಹೋಮ, ನವ ಕಲಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ದಾನಿಗಳಾದ ಸುನಿಲ್, ವಿ.ಎನ್ ವೆಂಕಟೇಶ್, ಎನ್. ರಾಜು, ಆನಂದ್(ಮೆಡಿಕಲ್), ಜಿ. ಧರ್ಮಪ್ರಸಾದ್, ಜಿ. ಆನಂದಕುಮಾರ್, ಗೋಕುಲ್, ರಮೇಶ್, ಸುಹಾಸ್‌ಗೌಡ ಮತ್ತು ಮುಳ್ಕೆರೆ ಲೋಕೇಶ್, ಸೇವಾಕರ್ತರಾದ ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಸದಸ್ಯರಾದ ಮಣಿ, ಬಿ.ಎಂ ಮಂಜುನಾಥ್, ಅನುಪಮ ಚನ್ನೇಶ್, ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್, ಸುರೇಶ್, ಬಿ.ಕೆ ಆನಂದ್, ಎನ್. ಕೃಷ್ಣಪ್ಪ, ಗಣೇಶ್‌ರಾವ್, ನರಸಿಂಹಪ್ಪ, ಸತ್ಯ, ಚಿನ್ನಯ್ಯ ಸೇರಿದಂತೆ ಜೈಭೀಮ್ ನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎನ್. ಶಿವ, ವಿ.ಎನ್ ವೆಂಕಟೇಶ್, ಅಧ್ಯಕ್ಷ ಕೆ. ಮಂಜುನಾಥ್, ಕಾರ್ಯಾಧ್ಯಕ್ಷ ಎಂ. ನಾಗರಾಜ್, ಉಪಾಧ್ಯಕ್ಷರಾದ ಎನ್. ಕುಮಾರ್, ಎನ್. ವಸಂತ, ಕರಿಗೌಡ, ಪ್ರಧಾನ ಕಾರ್ಯದರ್ಶಿ ಓ. ನರಸಿಂಹ, ಸಹ ಕಾರ್ಯದರ್ಶಿಗಳಾದ ಏಳುಮಲೈ, ಎಸ್. ರಾಜ, ಖಜಾಂಚಿ ಎನ್. ಹರೀಶ್, ಟಿ.ಎನ್ ಗುರುರಾಜ್ ಮತ್ತು ಸದಸ್ಯರು ಉಪಸ್ಥಿತರಿದ್ದರು.


ಭದ್ರಾವತಿ ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಅಂಬೇಡ್ಕರ್‌ರವರ ಪುಸ್ತಕ ಜ್ಞಾನದಿಂದ ಜಗತ್ತಿನ ಶ್ರೇಷ್ಠ ಸಂವಿಧಾನ ರಚನೆ

ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ

ಛಲವಾದಿಗಳ ಸಮಾಜದ ವತಿಯಿಂದ ಡಾ. ಬಿ. ಅಂಬೇಡ್ಕರ್‌ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ನೂತನ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್, ಹಿಂದಿ ಶಿಕ್ಷಕಿ ತ್ರಿವೇಣಿ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ರಾಜು, ಕ್ರೀಡಾಪಟು ಎಂ. ನಾಗರಾಜ್ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೪: ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂಪಾದಿಸಿದ ಪುಸ್ತಕ ಜ್ಞಾನ ಜಗತ್ತಿನ ಶ್ರೇಷ್ಠ ಸಂವಿಧಾನ ರಚನೆಗೆ ನೆರವಾಯಿತು ಎಂದು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ ಹೇಳಿದರು.
    ಅವರು ನ್ಯೂಟೌನ್ ಜಯಶ್ರೀ ವೃತ್ತದ ಸಮೀಪ ತಾಲೂಕು ಛಲವಾದಿಗಳ ಸಮಾಜದ ವತಿಯಿಂದ ಡಾ. ಬಿ. ಅಂಬೇಡ್ಕರ್‌ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ನೂತನ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಬಿ.ಆರ್ ಅಂಬೇಡ್ಕರ್‌ರವರು ವಿದೇಶದಲ್ಲಿ ಸುಮಾರು ೫೦ ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ನಿರ್ಮಾಣ ಮಾಡುವ ಜೊತೆಗೆ ಅವುಗಳ ಅಧ್ಯಯನ ನಡೆಸಿದರು. ಜೊತೆಗೆ ಸುಮಾರು ೧೫ ಸಾವಿರ ಪುಸ್ತಕಗಳನ್ನು ರಚಿಸಿದರು. ಅವರ ಪುಸ್ತಕ ಜ್ಞಾನ ದೇಶದ ಸಂವಿಧಾನ ರಚನೆಗೆ ನೆರವಾಯಿತು. ಅಂಬೇಡ್ಕರ್‌ರವರು ಹೊಂದಿದ್ದ ಅಪಾರ ಜ್ಞಾನದಿಂದಾಗಿ ಅವರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅಂಬೇಡ್ಕರ್‌ರವರ ಆಶಯದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಇಂದು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಮುನ್ನಡೆಯಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಛಲವಾದಿ ಸಮಾಜದವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕು. ಎಲ್ಲಿಯವರೆಗೆ ಸಂಘಟಿತರಾಗುವುದಿಲ್ಲವೋ ಅಲ್ಲಿಯವರೆಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸಮಾಜ ಬಲಗೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಕ್ಷೇತ್ರದಲ್ಲಿ ಛಲವಾದಿ ಸಮಾಜದವರು ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಹಲವಾರು ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಈ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
    ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಗೌತಮ ಬುದ್ಧ ಹಾಗು ಡಾ. ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಬದುಕನ್ನು ಸಮಾ ಸಮಾಜ ನಿರ್ಮಾಣಕ್ಕಾಗಿ ಮೀಸಲಿಡುವ ಮೂಲಕ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಜಗತ್ತಿಗೆ ನೀಡಿರುವ ಕೊಡುಗೆಗಳನ್ನು ನಾವುಗಳು ಸ್ಮರಿಸಿಕೊಳ್ಳುವ ಜೊತೆಗೆ ಅವರ ಆಶಯದಂತೆ ಮುನ್ನಡೆಯಬೇಕಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಸಮಾಜದ ನೂತನ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಇಂಜಿನಿಯರ್ ರಂಗರಾಜಪುರ ಬೌದ್ಧಧರ್ಮದ ಸಂದೇಶಗಳನ್ನು ವಾಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರತಿಭಾ ಪುರಸ್ಕಾರ ನೆರವೇರಿಸಿಕೊಟ್ಟರು.
     ನಗರಸಭಾ ಸದಸ್ಯರಾದ ಉದಯಕುಮಾರ್, ಪ್ರೇಮ, ಅನ್ನಪೂರ್ಣ, ಸರ್ವಮಂಗಳ, ಕಾಂತರಾಜ್, ದೊಡ್ಡೇರಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಾವತಿ, ಸಿಂಗನಮನೆ ಗ್ರಾ.ಪಂ. ಸದಸ್ಯೆ ಚಂದನಮಧು, ಹಿರಿಯೂರು ಗ್ರಾ.ಪಂ. ಸದಸ್ಯ ಕಿರಣ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ. ರಂಗನಾಥ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬದರಿ ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ ಎಸ್ ಬೈರಪ್ಪ ಸ್ವಾಗತಿಸಿದರು. ಎ. ತಿಪ್ಪೇಸ್ವಾಮಿ ನಿರೂಪಿಸಿದರು. ಡಿ. ನರಸಿಂಹಮೂರ್ತಿ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್, ಹಿಂದಿ ಶಿಕ್ಷಕಿ ತ್ರಿವೇಣಿ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ರಾಜು, ಕ್ರೀಡಾಪಟು ಎಂ. ನಾಗರಾಜ್ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.