ಭದ್ರಾವತಿ ಸಿದ್ಧಾರೂಢನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಸುಮಾರು ವಾರದಿಂದ ನಡೆಯುತ್ತಿರುವ ಮಠದ ರಜತಮಹೋತ್ಸವದ ಕೊನೆಯ ದಿನವಾದ ಭಾನುವಾರ ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ಪಂಚಾಮೃತಭಿಷೇಕ ಹಾಗೂ ವಿಶೇಷ ಅಲಂಕಾರ ಕೈಗೊಳ್ಳಲಾಯಿತು.
ಭದ್ರಾವತಿ, ಏ. ೨೪: ಸಾತ್ವಿಕ ಬ್ರಾಹ್ಮಣ ಸಮುದಾಯ ಮಂತ್ರ, ಜಪ, ತಪಗಳ ಮೂಲಕ ಹರಿವಾಯು ಗುರುಗಳ ಕೃಪೆಪಡೆದು ಅದನ್ನು ಹಿಂದೂ ಸಮಾಜವನ್ನೊಳಗೊಂಡ ಈ ದೇಶದ ಒಳಿತಿಗಾಗಿ ಶ್ರಮಿಸುತ್ತಿರುವ ದೇಶದ ನಾಯಕನಿಗೆ ಶಕ್ತಿ ತುಂಬಲು ಬಳಸಬೇಕು ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರು ಹೇಳಿದರು.
ಅವರು ಸಿದ್ಧಾರೂಢನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಸುಮಾರು ವಾರದಿಂದ ನಡೆಯುತ್ತಿರುವ ಮಠದ ರಜತಮಹೋತ್ಸವದ ಕೊನೆಯ ದಿನವಾದ ಭಾನುವಾರ ಅನುಗ್ರಹ ಸಂದೇಶನೀಡಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಅಗತ್ಯಬಿದ್ದರೆ ಕುಟುಂಬ ಸದಸ್ಯರ ಬಾಂಧವ್ಯ ತೊರೆದು ಸಮಾಜಮುಖಿಯಾಗಿ ಕೆಲಸಮಾಡಲು ಮುಂದಾಗಬೇಕು ಎಂಬುದನ್ನು ಸ್ವತಃ ಗುರು ಶ್ರೀರಾಘವೇಂದ್ರಸ್ವಾಮಿಗಳ ಜೀವನವೇ ನಮಗೆ ಮಾರ್ಗದರ್ಶಕವಾಗಿದೆ ಎಂದರು.
ಸಮಾಜದ ಒಳಿತಿಗಾಗಿ ಅವರು ಸನ್ಯಾಸ ಸ್ವೀಕಾರಕ್ಕೆ ಮುಂದಾದಾಗ ಅವರ ಪತ್ನಿ ಅದಕ್ಕೆ ಅಡ್ಡಿಪಡಿಸಿದರೂ ಸಹ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಸನ್ಯಾಸ ಸ್ವೀಕರಿಸಿ ತಪಃ ಪ್ರಭಾವದಿಂದ ಧರ್ಮ, ಜಾತಿ, ಪಂಗಡ ತಾರತಮ್ಯವಿಲ್ಲದೆ ಹಿಂದೂ, ಮುಸ್ಲಿಂ ಎಲ್ಲಾ ಜನರ ಕಷ್ಟಗಳನ್ನು ನಿವಾರಣೆ ಮಾಡಿ ಅವರ ಕೈಹಿಡಿದು ದಾರಿತೋರಿದ್ದಾರೆ ಎಂಬುದು ಎಷ್ಟು ಸತ್ಯವೋ ಅದೇ ರೀತಿ ಹಿಂದೂ ಸಮಾಜದ ಧಾರ್ಮಿಕ ಆಚಾರ-ವಿಚಾರಧಾರೆಗಳಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಯಾರೇ ಕೈಹಾಕಿದರೂ ಅಂತಹ ಜನರ ಕೈಗಳನ್ನು ಆ ರೀತಿ ಮಾಡದ ರೀತಿ ತಡೆಯುವ ಶಕ್ತಿ ಸಹ ಆ ಗುರು ಶ್ರೀ ರಾಘವೇಂದ್ರಸ್ವಾಮಿಗಳು ಕರುಣಿಸುತ್ತಾರೆ ಎಂಬುದೂ ಸಹ ಅಷ್ಠೇ ಸತ್ಯ ಎಂದರು.
ಸಾತ್ವಿಕತೆಗೆ ಹೆಸರಾದ ಬ್ರಾಹಣ ಸಮುದಾಯ ದೈಹಿಕವಾಗಿ ದೇಶದ ರಕ್ಷಣೆ ಮಾಡಲು ಸಶಕ್ತ ವಾಗಿರದಿದ್ದರೂ ಸಹ, ಹೆಚ್ಚು ಹೆಚ್ಚು ಮಠ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವ ಜೊತೆಗೆ ವೇದ, ಶಾಸ್ತ್ರ, ಪುರಾಣ, ಮಂತ್ರಗಳ ಅಧ್ಯಯನದ ಮೂಲಕ ಶಕ್ತಿ ಸಂಪಾದಿಸಿ ಅದನ್ನು ದೇಶ ರಕ್ಷಣೆಗೆ ಕಟಿಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ನಾಯಕನಿಗೆ ಶಕ್ತಿ ತುಂಬಲು ಬಳಸುವ ಸಂಕಲ್ಪ ಮಾಡಬೇಕು ಎಂದರು.
ಡಾ. ದಯಾವತಿ, ನಾಗರಾಜ್, ರಮಾಕಾಂತ್, ವೆಂಕಟೇಶ್ ಮುಂತಾದವರು ಶ್ರೀಮಠ ಬೆಳೆದುಬಂದ ಹಾದಿಯ ಕುರಿತಂತೆ ಹಾಗೂ ಅದಕ್ಕೆ ಶ್ರಮಸಿದ ವ್ಯಕ್ತಿಗಳ ಕಾರ್ಯವನ್ನು ಸ್ಮರಿಸಿ ಮಾತನಾಡಿದರು. ಶ್ರೀಮಠದ ಮುಖ್ಯಸ್ಥರಾದ ಶೇಷಗಿರಿಆಚಾರ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾ ದವರಿಗೆ ಕೃತಜ್ಞತೆ ಸಲ್ಲಿಸಿದರು.
ಬೆಳಿಗ್ಗೆ ರಾಯರ ವೃಂದಾವನಕ್ಕೆ ಪಂಚಾಮೃತಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು. ಶ್ರೀಗಳು ಅದಮಾರು ಮಠದ ಸಂಸ್ಥಾನದ ಶ್ರೀಕಾಳಿಂಗಮರ್ಧನ ಕೃಷ್ಣನ ಪೂಜೆಯನ್ನು ನೆರೆವೇರಿಸಿದರು.
ಜಗನ್ನಾಥದಾಸರ ಹರಿಕಥಾಮೃತಸಾರದ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು.
ಮಠದ ವ್ಯವಸ್ಥಾಪಕರಾದ ಪಂಡಿತ್ ಗೋಪಾಲಾಚಾರ್, ಶ್ರೀನಿವಾಸಾಚಾರ್, ಶೇಷಗಿರಿ ಆಚಾರ್, ಜಗನ್ನಾಥ್, ವಾಸು, ರಾಘವೇಂದ್ರ, ಜಯತೀರ್ಥ, ವೆಂಕಟೇಶ್, ಮಧುಸೂದನ್, ಮಾಧವ ಮೂರ್ತಿ, ಸುಮಾ ಶೇಷಗಿರಿ, ಗುರುರಾಜಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು ಕೃಪೆಗೆ ಪಾತ್ರರಾದರು.
ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಗುರು ರಕ್ಷೆ ಪಡೆದರು.
No comments:
Post a Comment