ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟ್‌ಗಳಿಂದ ಆಕರ್ಷಣೆ ಕಳೆದು ಕೊಳ್ಳುತ್ತಿವೆ ಸರ್ಕಾರಿ ಕಟ್ಟಡಗಳು
![](https://blogger.googleusercontent.com/img/a/AVvXsEi6Z3_mLbw7UbdfoUhaY9EyMVxgSW77rA5r6G14W7lGAuwhj5on7YfWhXCKLZXH5wxuNisPnwi8zvSfSd9CHmn7hj56RUb9r8leT4e3r-jP3aHnj1qJjKFdE37ZQjUAZZRSlCtpNcRKxURwujdfjQIR-_I3jbHrPJrGzVdOHRw6XrUYEKTxMTjJfCKXcw=w400-h208-rw)
ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸಿರುವುದು.
* ಅನಂತಕುಮಾರ್
ಭದ್ರಾವತಿ, ಏ. ೨೮: ಸರ್ಕಾರಿ ಕಟ್ಟಡಗಳಲ್ಲಿ ಸ್ವಚ್ಛತೆಯೊಂದಿಗೆ ಸೌಂದರ್ಯ ಕಾಪಾಡುವ ನಿಟ್ಟಿನಲ್ಲೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಸ್ವಚ್ಛ ಭಾರತ್ ಅಭಿಯಾನದ ಪರಿಕಲ್ಪನೆ ಯಶಸ್ವಿಗೊಳಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ತಾಲೂಕಿನ ಶಕ್ತಿ ಕೇಂದ್ರ ಮಿನಿವಿಧಾನಸೌಧ ಇದೀಗ ಉಚಿತ ಪ್ರಚಾರ ಕೇಂದ್ರವಾಗಿ ಕಂಡು ಬರುತ್ತಿದೆ. ಸಭೆ, ಸಮಾರಂಭ, ಹೋರಾಟದ ಕರಪತ್ರಗಳು, ಜಾತ್ರೆ, ಹಬ್ಬ, ಹರಿದಿನಗಳ ಪೋಸ್ಟರ್‌ಗಳು ಕಟ್ಟಡದಲ್ಲಿ ರಾರಾಜಿಸುತ್ತಿವೆ. ಇದರಿಂದಾಗಿ ಕಟ್ಟಡದ ಸೌಂದರ್ಯ ಹಾಳಾಗಿದ್ದು, ಕಟ್ಟಡದ ಮೇಲೆ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದರಿಂದ ಬಣ್ಣ ಸಹ ಮಾಸುವ ಸ್ಥಿತಿಗೆ ಬಂದು ತಲುಪಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಸಾರ್ವಜನಿಕರು ಸರ್ಕಾರಿ ಕಛೇರಿಗಳನ್ನು ತಮ್ಮ ಮನೆಗಳಂತೆ, ಸ್ವತ್ತುಗಳಂತೆ ಭಾವಿಸಬೇಕು. ಸ್ವಯಂ ಜಾಗೃತರಾಗಿ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲು ಸಹಕರಿಸಬೇಕು. ಮಿನಿವಿಧಾನಸೌಧದ ಕಟ್ಟಡದ ಮುಂಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
- ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.
ಆಕರ್ಷಕವಾಗಿ ಕಂಗೊಳಿಸುತ್ತಿರುವ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ.
ಆಕರ್ಷಿಸುತ್ತಿವೆ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ:
ತಾಲೂಕು ಕಛೇರಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಗಳು ಸಹ ಕೆಲವು ವರ್ಷಗಳ ಹಿಂದೆ ಉಚಿತ ಪ್ರಚಾರ ಕೇಂದ್ರಗಳಂತೆ ಕಂಡು ಬರುತ್ತಿದ್ದವು. ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರಗಳು, ಪೋಸ್ಟರ್‌ಗಳು ರಾರಾಜುಸುತ್ತಿದ್ದವು. ನಂತರ ಇಲಾಖೆ ಎಚ್ಚೆತ್ತುಕೊಂಡು ಕಟ್ಟಡದ ಸೌಂದರ್ಯಕ್ಕೆ ಹೆಚ್ಚಿನ ಗಮನ ಹರಿಸಿದೆ. ಈ ನಡುವೆ ಕಳೆದ ಸುಮಾರು ೧ ವರ್ಷದ ಹಿಂದೆ ಹೊಸ ಶಿಕ್ಷಣ ನೀತಿ ಪಠ್ಯಕ್ರಮ ಹಿನ್ನಲೆಯಲ್ಲಿ ಕಟ್ಟಡಕ್ಕೆ ಮತ್ತುಷ್ಟು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕುಂಚ ಕಲಾವಿದರ ಸಹಕಾರದೊಂದಿಗೆ ಆಕರ್ಷಕ ಕೇಂದ್ರವನ್ನಾಗಿಸಿದೆ. ಹೊಸ ಶಿಕ್ಷಣ ನೀತಿಯ ಧ್ಯೇಯ, ಬದಲಾದ ಪಠ್ಯಕ್ರಮ ಹಾಗು ಸ್ವರೂಪಗಳೊಂದಿಗೆ, ಆದರ್ಶ ಮಹಾನ್ ವ್ಯಕ್ತಿಗಳು, ಸ್ಥಳೀಯ ಐತಿಹಾಸಿಕ ಪಾರಂಪರಿಕ ಕಟ್ಟಡಗಳು, ಸ್ಥಳಗಳು ಕುಂಚ ಕಲೆಯಲ್ಲಿ ಅರಳುವ ಮೂಲಕ ಕಟ್ಟಡದಲ್ಲಿ ರಾರಾಜುಸುತ್ತಿವೆ.
ಪರಿಸರ, ಸ್ವಚ್ಛತೆ ಕುರಿತು ಜಾಗೃತಿ:
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
ಎಲ್ಲೆಬೇಕೆಂದರಲ್ಲಿ ಕಸ ಎಸೆಯದಿರುವುದು, ತ್ಯಾಜ್ಯ ಬೇರ್ಪಡಿಸುವಿಕೆ, ವಿಲೇವಾರಿಗೆ ಅನುಸರಿಸಬೇಕಾದ ಕ್ರಮ, ಪ್ಲಾಸಿಕ್ ನಿಷೇಧ, ಗಿಡ, ಮರಗಳ ಸಂರಕ್ಷಣೆ, ಜಲ ಸಂರಕ್ಷಣೆ ಸೇರಿದಂತೆ ಒಟ್ಟಾರೆ ಪರಿಸರ, ಸ್ವಚ್ಛತೆ ಕುರಿತು ನಗರಸಭೆ ವತಿಯಿಂದ ಆಕರ್ಷಕ ಚಿತ್ತಾರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ.
ನಗರಸಭೆ ವತಿಯಿಂದ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ಜೊತೆಗೆ ಪರಿಸರ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ಅನುದಾನ ಲಭ್ಯತೆಯನ್ನು ಗಮನಿಸಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲಾಗುವುದು. ಸರ್ಕಾರಿ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ದಂಡ ವಿಧಿಸಲಾಗುವುದು.
- ಕೆ. ಪರಮೇಶ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
ಎಲ್ಲಾ ಸರ್ಕಾರಿ ಕಟ್ಟಡಗಳು ಸಹ ಸ್ವಚ್ಛತೆಯೊಂದಿಗೆ ಆಕರ್ಷಕವಾಗಿ ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಹೆಚ್ಚಿನದ್ದಾಗಿದೆ. ಜೊತೆಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಸಹ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಲಾಖೆಗಳು ಸಹ ಸಾರ್ವಜನಿಕ ಪ್ರಕಟಣೆ, ಸುತ್ತೋಲೆ, ಸೂಚನೆಗಳಿಗೆ ನಿಗದಿಪಡಿಸಲಾದ ಫಲಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಬೇಕೆಂದರಲ್ಲಿ ಅಂಟಿಸುವ ಪರಿಪಾಠ ಕೈಬಿಡಬೇಕು. ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಜೊತೆಗೆ ಸ್ವಚ್ಛತೆ ಕುರಿತು ನಿರ್ಲಕ್ಷ್ಯ ವಹಿಸುವವರ ಹಾಗು ಕರಪತ್ರ, ಪೋಸ್ಟರ್‌ಗಳನ್ನು ಎಲ್ಲಿಬೇಕೆಂದರಲ್ಲಿ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
ಆಕರ್ಷಣೆಯೊಂದಿಗೆ, ಸ್ವಚ್ಛತೆ, ಸುಂದರ ಪರಿಸರ ಹೊಂದಿರುವ ಸರ್ಕಾರಿ ಕಛೇರಿ, ಕಟ್ಟಡಗಳನ್ನು ಸಹ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸರ್ಕಾರ ಹೊಂದಿರುವ ಕಾಳಜಿಯನ್ನು ನಾವುಗಳು ಅರಿತುಕೊಳ್ಳಬೇಕು. ತಕ್ಷಣಕ್ಕೆ ಸರ್ಕಾರದ ಕಾಳಜಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.