ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ೧೫೦೦ ನೋಟ್ ಬುಕ್‌ಗಳ ವಿತರಣೆಗೆ ಸಿದ್ದತೆ
ಎ. ಧರ್ಮೇಂದ್ರ
ಭದ್ರಾವತಿ, ಮೇ. ೨೭: ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟ್ರಾವೆಲ್ಸ್ ಮಾಲೀಕ ಮತ್ತು ಸಿವಿಲ್ ಗುತ್ತಿಗೆದಾರ ಎ. ಧರ್ಮೇಂದ್ರ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್ ವಿತರಣೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ವರ್ಷ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಅರಳಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಟ್ಟು ಸುಮಾರು ೧೦೦೦ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದರು. ಈ ಬಾರಿ ಸಹ ಒಟ್ಟು ೧೫೦೦ ನೋಟ್ ಬುಕ್‌ಗಳನ್ನು ವಿತರಿಸಲು ಮುಂದಾಗಿದ್ದಾರೆ.
'ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ತುಂಬಾ ಬಡತನವಿದ್ದು, ನೋಟ್ ಬುಕ್, ಪಠ್ಯ ಪುಸ್ತಕಗಳನ್ನು ಕೊಂಡುಕೊಳ್ಳುವುದು ಅಸಾಧ್ಯವಾಗಿತ್ತು. ಅಲ್ಲದೆ ಹಲವಾರು ಕಾರಣಗಳಿಂದ ನಾವು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ನಾವು ಅನುಭವಿಸಿದ ಕಷ್ಟ ಈಗಿನ ವಿದ್ಯಾರ್ಥಿಗಳು ಅನುಭವಿಸಬಾರದು. ಪ್ರಸ್ತುತ ಎಲ್ಲಾ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸ್ವಲ್ಪಮಟ್ಟಿಗಾದರೂ ಸ್ಪಂದಿಸಬೇಕೆಂಬ ಮನೋಭಾವನೆಯೊಂದಿಗೆ ಉಚಿತವಾಗಿ ನೋಟ್ ಬುಕ್‌ಗಳನ್ನು ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರುತ್ತೇನೆ.
- ಎ. ಧರ್ಮೇಂದ್ರ, ಅಧ್ಯಕ್ಷರು, ಶ್ರೀವಿನಾಯಕ ಚಾರಿಟೆಬಲ್ ಟ್ರಸ್ಟ್ .
ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಮೇ.೨೯ರ ಭಾನುವಾರ ಬೆಳಿಗ್ಗೆ ೯.೩೦ಕ್ಕೆ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಬಾಬಳ್ಳಿ, ಕಾಗೇಕೋಡಮಗ್ಗಿ, ಜಯನಗರ, ವೀರಾಪುರ, ರಾಮನಗರ, ಕುಮರಿನಾರಾಯಣಪುರ ಮತ್ತು ತಳ್ಳಿಕಟ್ಟೆ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿ ಉಚಿತ ನೋಟ್ ಬುಕ್ ವಿತರಣೆ ನಡೆಯಲಿದೆ.
ಜಾನಪದ ಆಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಬಿ. ಮಂಜಮ್ಮ ಜೋಗತಿ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಎನ್.ಕೆ ಗುರುರಾಜ್, ಶಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದ ರಮೇಶ್, ಯು. ಹರೀಶ್‌ರಾವ್, ಸಿ. ಹರಿಬಾಬು, ಸಿ.ಎಸ್ ನಾಗರಾಜ್, ಮಮತ, ರೂಪವತಿ, ಮಂಗಳ ಗೌರಮ್ಮ, ಶಶಿಕುಮಾರ, ಪರಮೇಶ್ವರಪ್ಪ, ಸತ್ಯನಾರಾಯಣ, ಸುರೇಶ್, ಗಂಗಣ್ಣ, ಕಾವೇರಮ್ಮ ಮತ್ತು ಗಣೇಶ್ ಕಲ್ಲೇರಿ, ಆಶಾರಾಣಿ ಧರ್ಮೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿರುವವರು.
ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಧರ್ಮೇಂದ್ರ ಅವರು ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು.