Wednesday, June 1, 2022

ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಪರವಾದ ಸರ್ಕಾರ

ಸೇವೆ ಸುಶಾಸನ, ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ


ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ೮  ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮತ್ತು ತಾಲೂಕು ಬಿಜೆಪಿ ಮಂಡಲ ವತಿಯಿಂದ (ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ) ರೈತ ಫಲಾನುಭವಿಗಳ ಸಭೆ ಬುಧವಾರ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆಯಿತು.
     ಭದ್ರಾವತಿ, ಜೂ. ೧:  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ೮  ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮತ್ತು ತಾಲೂಕು ಬಿಜೆಪಿ ಮಂಡಲ ವತಿಯಿಂದ (ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ) ರೈತ ಫಲಾನುಭವಿಗಳ ಸಭೆ ಬುಧವಾರ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆಯಿತು.
    ವಿಭಾಗ ಪ್ರಭಾರಿಗಳಾದ ಗಿರೀಶ್ ಪಟೇಲ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಮಾತನಾಡಿ,  ಕೇಂದ್ರ ಸರ್ಕಾರ ರೈತರ ಪರವಾದ ಸರ್ಕಾರವಾಗಿದೆ. ರೈತರಿಗಾಗಿ ಕಿಸಾನ್ ಸಮ್ಮಾನ್, ಕೃಷಿ ವಿಕಾಸ್, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್, ಫಸಲು ಭೀಮಾ, ಸಾಯಿಲ್ ಹೆಲ್ತ್‌ಕಾರ್ಡ್ ಸೇರಿದಂತೆ  ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕೆಂದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಬಿ. ಕೆ ಶ್ರೀನಾಥ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಮಚಂದ್ರ ಸಾಲೆಕೊಪ್ಪ, ತಾಲೂಕು ಮಂಡಲ ಅಧ್ಯಕ್ಷ  ಎಂ. ಪ್ರಭಾಕರ್, ಜಿಲ್ಲಾ ಕಾರ್ಯದರ್ಶಿ ಎನ್.ಡಿ  ಸತೀಶ್, ಪ್ರಮುಖರಾದ ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ನಗರಸಭಾ ಸದಸ್ಯರಾದ ಶಶಿಕಲಾ, ಅನ್ನಪೂರ್ಣ, ತೀರ್ಥಯ್ಯ, ಚಂದ್ರಪ್ಪ, ರಾಮನಾಥ್ ಬರ್ಗೆ, ರೈತ ಮೋರ್ಚಾ ತಾಲೂಕು ಕಾರ್ಯದರ್ಶಿಗಳಾದ ಬಿ.ವಿ ಸಂತೋಷ್, ಕೆ.ಆರ್ ಆನಂದ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರೈತ ಮೋರ್ಚಾ ತಾಲೂಕು ಅಧ್ಯಕ್ಷ ನಾಗರಾಜ್ ಅಂಬೋರೆ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಕಾರ್ಯಕರ್ತರು, ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಗೌರ್ನರ್ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ : ವಿವಿಧ ಸೇವಾ ಚಟುವಟಿಕೆಗಳಿಗೆ ಚಾಲನೆ

 ಜಿಲ್ಲಾ ಗೌರ್ನರ್ ಎಂ.ಜಿ ರಾಮಚಂದ್ರ ಮೂರ್ತಿರವರು ನಗರದ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಸಂದರ್ಭದಲ್ಲಿ ಪೌರ ಕಾರ್ಮಿಕ ಹನುಮಂತು, ಅತಿಹೆಚ್ಚಿನ ಶವ ಪರೀಕ್ಷೆ ನಡೆಸಿರುವ ಗೋವಿಂದಪ್ಪ, ಲ್ಯಾಬ್ ಟೆಕ್ನಿಷಿಯನ್ ವಿವನ್ ವಿಲ್ಸನ್ ಹಾಗೂ ಸರ್ಕಾರಿ ಆಸ್ಪತ್ರೆ ಅಡುಗೆ ಕಾರ್ಮಿಕ ಮರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜೂ. ೧ : ಜಿಲ್ಲಾ ಗೌರ್ನರ್ ಎಂ.ಜಿ ರಾಮಚಂದ್ರ ಮೂರ್ತಿರವರು ನಗರದ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡುವ ಮೂಲಕ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡರು.
    ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಸುಮಾರು ೧೦೬ ಕಂಪ್ಯುಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿರುವ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಫ್ಲೆಕ್ಸ್ ಅನಾವರಣಗೊಳಿಸಲಾಯಿತು.
    ಜಿಲ್ಲಾ ಗೌರ್ನರ್ ರವರು ಸಂಜೆ ರೋಟರಿ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು  ಕ್ಲಬ್ ನ ಕಾರ್ಯ ಚಟುವಟಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೌರ ಕಾರ್ಮಿಕ ಹನುಮಂತು, ಅತಿಹೆಚ್ಚಿನ ಶವ ಪರೀಕ್ಷೆ ನಡೆಸಿರುವ ಗೋವಿಂದಪ್ಪ, ಲ್ಯಾಬ್ ಟೆಕ್ನಿಷಿಯನ್ ವಿವನ್ ವಿಲ್ಸನ್ ಹಾಗೂ ಸರ್ಕಾರಿ ಆಸ್ಪತ್ರೆ ಅಡುಗೆ ಕಾರ್ಮಿಕ ಮರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ರೋಟರಿ ಅಧ್ಯಕ್ಷ ಆದರ್ಶ್ ಹಾಗೂ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ವ ಧರ್ಮ, ಜನಾಂಗವನ್ನು ಪ್ರೀತಿಸಿ ಅವರೊಂದಿಗೆ ಮುನ್ನಡೆಯುವವನು ನಿಜವಾದ ವೀರಶೈವ

ಶ್ರೀ ಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಶಂಕರಮಠದ ಶ್ರೀ ಭಾರತೀ ತೀರ್ಥ ಸಮುದಾಯ ಭವನದಲ್ಲಿ ಬುಧವಾರ ಶ್ರೀ ಶ್ರೀಶೈಲ ಜಗದ್ಗುರುಗಳವರ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠರೋಹಣದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನಶತೋತ್ಸವ ಆಚರಣೆ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಮತ್ತು ನಾಗರತ್ನ ಸಿದ್ದಲಿಂಗಯ್ಯನವರ ೬೦ನೇ ವರ್ಷದ ಷಷ್ಠಿ ಪೂರ್ತಿ ಕಾರ್ಯಕ್ರಮ ನಡೆಯಿತು.

    ಭದ್ರಾವತಿ, ಜೂ. ೧: ಸರ್ವ ಧರ್ಮ, ಜನಾಂಗವನ್ನು ಪ್ರೀತಿಸಿ ಅವರೊಂದಿಗೆ ಮುನ್ನಡೆಯುವವನು ನಿಜವಾದ ವೀರಶೈವನಾಗಿದ್ದು, ಈ ದಾರಿಯಲ್ಲಿ ಸಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಶ್ರೀ ಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಶ್ರೀಗಳು ಬುಧವಾರ ಸಿದ್ದಾರೂಢನಗರದ ಶ್ರೀ ಶಂಕರಮಠದ ಶ್ರೀ ಭಾರತೀ ತೀರ್ಥ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶ್ರೀಶೈಲ ಜಗದ್ಗುರುಗಳವರ ಜನ್ಮ ಸುವರ್ಣ ಮಹೋತ್ಸವ ಮತ್ತು ದ್ವಾದಶ ಪೀಠರೋಹಣದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನಶತೋತ್ಸವ ಆಚರಣೆ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಮತ್ತು ನಾಗರತ್ನ ಸಿದ್ದಲಿಂಗಯ್ಯನವರ ೬೦ನೇ ವರ್ಷದ ಷಷ್ಠಿ ಪೂರ್ತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಸಮಾಜದಿಂದ ಎಲ್ಲವನ್ನು ಪಡೆಯುವ ನಾವು ಸಮಾಜಕ್ಕೆ ನಮ್ಮ ಕೊಡಗೆ ಏನು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಪ್ರತಿಯೊಬ್ಬರಲ್ಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವ ಬೆಳೆಯಬೇಕು. ಇಂತಹ ಮನೋಭಾವ ಹೊಂದಿರುವ ವ್ಯಕ್ತಿಗಳಲ್ಲಿ ಸಿದ್ದಲಿಂಗಯ್ಯನವರು ಸಹ ಒಬ್ಬರಾಗಿದ್ದಾರೆ. ಅವರ ಬದುಕು ಇತರರಿಗೆ ಮಾರ್ಗದರ್ಶನವಾಗಿದೆ ಎಂದರು.
    ಧರ್ಮಗ್ರಂಥಗಳ ಪ್ರಕಾರ ಒಬ್ಬ ಮನುಷ್ಯನಿಗೆ ೧೨೦ ವರ್ಷಗಳ ಆಯಸ್ಸು ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ೬೦ ವರ್ಷ ಬದುಕುವುದೇ ಹೆಚ್ಚು. ಮನಸ್ಸು ಮತ್ತು ದೇಹ ಎರಡರ ಆರೋಗ್ಯ ಕಾಪಾಡಿಕೊಂಡು ಬಂದಲ್ಲಿ ೧೨೦ ವರ್ಷ ಬದುಕಬಹುದಾಗಿದೆ. ಇದಕ್ಕೆ ಉದಾಹರಣೆ ತುಮಕೂರು ಸಿದ್ದಗಂಗ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರಾಗಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ. ಒಂದೊಂದು ವರ್ಷವೂ ಒಂದೊಂದು ಸಂವತ್ಸರವಾಗಿದೆ. ೬೦ ಸಂವತ್ಸರಗಳನ್ನು ದಾಟಿ ಅರ್ಧ ಆಯಸ್ಸು ಕಳೆದಿರುವವರ ಬದುಕನ್ನು ಅವಲೋಕನ ಮಾಡಿಕೊಳ್ಳುವ ಜೊತೆಗೆ ಮುಂದಿನ ಉಳಿದ ಅರ್ಧ ಆಯಸ್ಸು ಪೂರೈಸಲು ಅಭಿನಂದಿಸುವ ಉದ್ದೇಶದಿಂದ ಷಷ್ಠಿ ಪೂರ್ತಿಯಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕೆಂದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಿ, ಶರಣರ ಬದುಕು ಒಂದು ರೀತಿ ಆದರ್ಶಪ್ರಾಯವಾಗಿದೆ. ಪ್ರತಿಯೊಂದು ವಿಷಯದಲ್ಲೂ ಶರಣರು ಹೊಂದಿದ್ದ ವಿಚಾರಧಾರೆಗಳು ಸಮಾಜಕ್ಕೆ ಪೂರಕವಾಗಿವೆ. ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರಿದವರು, ಕಾಯಕದ ಮಹತ್ವ, ದಾಸೋಹದ ಮಹತ್ವ ಹಾಗು ಶಿಕ್ಷಣದ ಮಹತ್ವ ಸಾರಿದವರು ಶರಣರು ಎಂಬುದನ್ನು ಯಾರು ಮರೆಯುವಂತಿಲ್ಲ. ಶರಣರು ಒಂದಲ್ಲ ಒಂದು ರೀತಿಯಲ್ಲಿ ಮಾದರಿಯಾಗಿದ್ದಾರೆ. ಇಂತಹ ಆದರ್ಶತನಗಳನ್ನು ಸಿದ್ದಲಿಂಗಯ್ಯ ಹಾಗು ಕುಟುಂಬ ವರ್ಗದವರು ರೂಢಿಸಿಕೊಂಡು ಬಂದಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಪ್ರಶಂಸೆ ವ್ಯಕ್ತಪಡಿಸಿದರು.
    ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗಯ್ಯನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಸಮಾಜದ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮ್ಮ ೬೦ ವರ್ಷದ ಸಂಭ್ರಮಾಚರಣೆಯನ್ನು ವೈಯಕ್ತಿಕಗೊಳಿಸದೆ ಹಲವು ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜ ಮುಖಿಯಾಗಿ ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
     ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ ಕಾರ್ಯಕ್ರಮ ಉದ್ಘಾಟಿಸಿದರು.
    ರಟ್ಟೆಹಳ್ಳಿ ಕಬ್ಬಿನಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,  ಹಾಗೂ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವೇದಿಕೆಯಲ್ಲಿದ್ದರು.
    ನಗರಸಭಾಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಅ.ಭಾ.ವೀ.ಮ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಶಿವಮೊಗ್ಗ ತಾಲೂಕು ಅಧ್ಯಕ್ಷೆ ರೇಣುಕಾ ನಾಗರಾಜ್, ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸಂತೋಷ್, ವಿ.ಹಿ.ಪ ಕಾರ್ಯಾಧ್ಯಕ್ಷ ಶಿವಮೂರ್ತಿ, ಶಿವಮೊಗ್ಗ ಜಗದ್ಗುರು ಪಂಚಾಚಾರ್ಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ವಿ ಈಶ್ವರಯ್ಯ, ಅ.ಭಾ.ವೀ.ಮ ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವ ಘಟಕದ ಅಧ್ಯಕ್ಷ ಹೆಚ್. ಮಂಜುನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಮಾಜಿ ನಗರಸಭಾ ಸದಸ್ಯ ಜಿ. ಸುರೇಶಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಪೂರ್ಣಿಮಾ ಸ್ವಾಗತಿಸಿದರು. ಎಸ್. ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.

Tuesday, May 31, 2022

ವಿಜೃಂಭಣೆಯಿಂದ ಜರುಗಿದ ಶ್ರೀ ಮಾತಂಗಮ್ಮ, ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯರ ರಾಜಬೀದಿ ಉತ್ಸವ ಮೆರವಣಿಗೆ

ಭದ್ರಾವತಿ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಮೇ. ೩೧: ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ಪ್ಲೇಗ್ ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
    ಜಾನಪದ ಕಲಾತಂಡಗಳೊಂದಿಗೆ ಕೆ.ಸಿ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ಮತ್ತು ಎನ್‌ಟಿಬಿ ರಸ್ತೆ, ಲಿಂಗಾಯಿತರ ಬೀದಿ, ಕುರುಬರ ಬೀದಿ, ರಾಜಪ್ಪ ಲೇಔಟ್ ಸೇರಿದಂತೆ ವಿವಿಧೆಡೆ ಉತ್ಸವ ಮೆರವಣಿಗೆ ನಡೆಯಿತು. ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಜೂ.೧ರಂದು ಮಧ್ಯಾಹ್ನ ೧೨ ಗಂಟೆಗೆ ತಂಬಿಟ್ಟಿನ ಆರತಿ ತರುವುದು ಹಾಗು ಪಾನಕ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
    ರಾಜಬೀದಿ ಉತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಯುವ ಮುಖಂಡರಾದ ಎಂ.ಎ ಅಜಿತ್, ಬಿ.ಎಸ್ ಗಣೇಶ್, ಗುಣಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು, ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಅವಿರೋಧ ಆಯ್ಕೆ

ಭದ್ರಾವತಿ ಜನ್ನಾಪುರದ ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಮೇ. ೩೧: ಜನ್ನಾಪುರದ ಗಾಯತ್ರಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ್ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಜೆ.ಎಂ ಆನಂದ್‌ರಾವ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಕೆ. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಶ್ರೀಧರ್ ಎಂಬುವರು ಸೊಸೈಟಿ ಕಾರ್ಯ ನಿರ್ವಹಿಸಲು ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪದಲ್ಲಿ ಕಟ್ಟಡ ದಾನ ಮಾಡಿದ್ದು, ನೂತನ ಕಟ್ಟಡದಲ್ಲಿ ಸೊಸೈಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
    ಎಲ್ಲಾ ನಿರ್ದೇಶಕರು ಒಮ್ಮತದಿಂದ ಕೆ. ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡವಲ್ಲಿ ಯಶಸ್ವಿಯಾಗಿದ್ದಾರೆ. ಉಪಾಧ್ಯಕ್ಷ ಕೇಶವಮೂರ್ತಿ, ಸಿ.ಕೆ ರಾಮಣ್ಣ,  ಶ್ವೇತಾ, ತಾರಾಮಣಿ, ನೀಲಕಂಠ ಜೊಯ್ಸ್, ಸುಬ್ರಮಣ್ಯ, ರಮಾಕಾಂತ್, ಕಾರ್ಯದರ್ಶಿ ಶಶಿಧರ್, ವಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರಿ : ಡಾ. ಎಂ.ವಿ ಅಶೋಕ್


ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೩೧: ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರುವ ಮೂಲಕ ಎಚ್ಚರವಹಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಮಂಗಳವಾರ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ತಂಬಾಕು ಪದಾರ್ಥಗಳ ವ್ಯಸನ್ಯಕ್ಕೆ ಬಲಿಯಾಗುತ್ತಿರುವವರ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ  ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಡಿಜಿಓ ಡಾ. ವರ್ಷ ಋತು ಚಕ್ರ ನೈರ್ಮಲ್ಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. 
    ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಕೆ. ಸುಶೀಲಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ ತ್ಯಾಗರಾಜ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಪ್ರಾಂಶುಪಾಲ ಟಿ.ಎಲ್ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
    ಡಾ. ತಮ್ಮಣ್ಣ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ವಸಂತ ಹಾಗು ಪಾಲಿಟೆಕ್ನಿಕ್ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.



ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಪಾಲ್ಗೊಂಡು ಮಾತನಾಡಿದರು.

Monday, May 30, 2022

ಸಾವರ್ಕರ್ ಹೆಸರನ್ನು ಬಿಟ್ಟರೇ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಅಪೂರ್ಣ : ಪ್ರವೀಣ್


ಭದ್ರಾವತಿಯಲ್ಲಿ ಸೋಮವಾರ ಸಂಜೆ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ಸಾವರ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಮೇ. ೩೦: ದೇಶದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ವೀರ ಸಾವರ್ಕರ್ ಹೆಸರನ್ನು ಬಿಟ್ಟರೇ ಆ ಪಟ್ಟಿ ಪೂರ್ಣಗೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್ ಹೇಳಿದರು.
    ಅವರು ಸೋಮವಾರ ಸಂಜೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ಸಾವರ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಪ್ಲೇಗ್ ಮಾಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ಬ್ರಿಟಿಷರ ವರ್ತನೆ ವಿರುದ್ದ ಸಿಡಿದೆದ್ದವರನ್ನು ದೇಶ ದ್ರೋಹದ ಆರೋಪದ ಮೇಲೆ ಗಲ್ಲಿಗೇರಿಸಿದ ಘಟನೆ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಕಾರಣವಾಯಿತು. ಕ್ರಾಂತಿಕಾರಕ ಹೋರಾಟದ ಮೂಲಕ ಯುವಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ದೇಶದ ಹೊರಗು ಸಂಘಟನೆಯನ್ನು ರೂಪಿಸಿ ಆ ಮೂಲಕ ದೇಶದಿಂದ ಬ್ರಿಟಿಷರನ್ನು ತೊಲಗಿಸಲು ನಡೆಸಿದ ಹೋರಾಟ ಮಹತ್ವದ್ದಾಗಿದೆ.  ಸಾವರ್ಕರ್ ಅವರ ದೇಶ ಭಕ್ತಿ, ಹೋರಾಟದ ಗುಣಗಳು ಇಂದಿನ ಪೀಳಿಗೆಯವರಿಗೆ ಅವಶ್ಯಕವಾಗಿವೆ ಎಂದರು.
    ಇದಕ್ಕೂ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಹಿಂದೂ ಜಾಗರಣ ವೇದಿಕೆ ಹಾಗು ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.