Wednesday, June 22, 2022

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಾಸವಿದ್ದ ಚಿರತೆ..?

ಭದ್ರಾವತಿ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ. 

    ಭದ್ರಾವತಿ, ಜೂ. ೨೨ : ನಗರದ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
    ಈ ಹಿಂದೆ ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆಯಲ್ಲಿ ಚಿರತೆ ವಾಸವಿರುವ ಬಗ್ಗೆ ಸುಳಿವುಗಳು ಲಭ್ಯವಾಗಿದ್ದವು. ಅಲ್ಲದೆ ಚಿರತೆಗೆ ನಾಯಿಗಳು ಬಲಿಯಾಗಿರುವ ಮಾಹಿತಿ ಸಹ ಲಭ್ಯವಾಗಿದ್ದವು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರು ಸಹ ಚಿರತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಖಾನೆಯಲ್ಲಿ ಬೀಡುಬಿಟ್ಟು ಜಾಲಾಡಿದ್ದರು. ಅಲ್ಲದೆ ಬೋನ್ ಸಹ ಇಡಲಾಗಿತ್ತು. ಆದರೆ ಚಿರತೆ ಮಾತ್ರ ಪ್ರತ್ಯಕ್ಷವಾಗಿರಲಿಲ್ಲ.
    ಇದೀಗ ಈ ಕುರಿತು ಅರಣ್ಯ ಇಲಾಖೆ ಸಹ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಅನುಮಾನ ವ್ಯಕ್ತಪಡಿಸುತ್ತಿದೆ. ಅದರಲ್ಲೂ ಜನವಸತಿ ಪ್ರದೇಶಕ್ಕೆ ಚಿರತೆ ದೂರದಿಂದ ಬಂದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಾಸ್ತವ್ಯವಾಗಿ ಚಿರತೆ ಮೂಲ ನೆಲೆ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಉಪ ಅರಣ್ಯ ಸಂಕರ್‍ಷಣಾಧಿಕಾರಿಯಾಗಿ ಶಿವಶರಣಯ್ಯ ಅಧಿಕಾರ ಸ್ವೀಕಾರ

ಶಿವಶರಣಯ್ಯ
    ಭದ್ರಾವತಿ, ಜೂ. ೨೨ : ಇಲ್ಲಿನ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಿರಿಯ ಎಸ್‌ಎಫ್‌ಎಸ್ ಅಧಿಕಾರಿ ಶಿವಶರಣಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
    ಈ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಎಂ ಗಾಮನಗಟ್ಟಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಶಿವಶರಣಯ್ಯ ಅವರನ್ನು ನೇಮಕಗೊಳಿಸಲಾಗಿದೆ. ಶಿವಶರಣಯ್ಯರವರು ಈ ಹಿಂದೆ ಧಾರವಾಡದ ಅರಣ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರಣ್ಯ ಇಲಾಖೆಯ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ, ಪೋಷಕರ ಸಭೆ

ಭದ್ರಾವತಿ ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಭದ್ರಾವತಿ, ಜೂ. ೨೨ : ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಶಿಕ್ಷಕರು ಹಾಗು ದಾನಿಗಳ ನೆರವಿನೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು. ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದಿಸಿದರು.
    ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್, ಶಾಲೆಯ ಮುಖ್ಯ ಶಿಕ್ಷಕ ಎಸ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ವಸತಿಗೃಹಗಳಲ್ಲಿ ಪ್ರತ್ಯಕ್ಷವಾದ ಚಿರತೆ : ೪ ಗಂಟೆಗೂ ಹೆಚ್ಚು ಸಮಯ ನಿರಂತರ ಕಾರ್ಯಾಚರಣೆ

ಚಿರತೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿಗಳು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ.
    ಭದ್ರಾವತಿ, ಜೂ. ೨೨:  ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದನ್ನು ಸುಮಾರು ೪ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ  ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ನೋಡಲು ಜಮಾಯಿಸಿರುವ ಜನರು.
    ಬೆಳಿಗ್ಗೆ ಪಾಳು ಬಿದ್ದಿದ್ದ ಮನೆಯಿಂದ ಏಕಾಏಕಿ ಹೊರಬಂದು ಕಾಣಿಸಿಕೊಂಡಿದ್ದ ಚಿರತೆ ಮಹಿಳೆಯೊಬ್ಬರ ಮೈ ಪರಚಿ ಮತ್ತೊಂದು ಮನೆಯ ಹಿಂಬದಿಯಲ್ಲಿ ಅವಿತುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಚಿರತೆ ಬೇರೆ ಕಡೆಗೆ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿದ ಅರಣ್ಯ ಸಿಬ್ಬಂದಿಗಳು ಸುತ್ತುವರೆದು ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವಿಭಾಗದ ಶಿವಮೊಗ್ಗ ವೃತ್ತದ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ್‌ರವರ ತಂಡ ಚುಚ್ಚು ಮದ್ದು ನೀಡಿದ ನಂತ ಅರಣ್ಯ ಸಿಬ್ಬಂದಿಗಳು  ಚಿರತೆಯನ್ನು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ ಮಹಿಳೆಯೊಬ್ಬರ ಮೈ ಪರಚಿರುವುದು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಟ್ನಳ್ಳಿ, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಬಿ.ಆರ್ ದಿನೇಶ್‌ಕುಮಾರ್, ನವೀನ್, ಅರಣ್ಯ ರಕ್ಷಕರಾದ ಬಾಲರಾಜ್, ಶ್ರೀಧರ್, ಅರಣ್ಯ ವೀಕ್ಷಕರಾದ ಶಶಿಲ್‌ಕುಮಾರ್, ನಾಗೇಂದ್ರಪ್ಪ ಹಾಗು ವ್ಯನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚುಮದ್ದು ನೀಡಿದ ನಂತರ ಬಲೆ ಬೀಸಿ ಸೆರೆ ಹಿಡಿದಿರುವುದು.
    ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗು ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯಾಚರಣೆಗೆ ಸಹಕರಿಸಿದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಬೋನಿಗೆ ಬಿಡಲಾಯಿತು. 
    ಇದಕ್ಕೂ ಮೊದಲು ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಯಿತು. ಚಿರತೆ ಪತ್ತೆಯಾದ ಸ್ಥಳದ ಸಮೀಪದಲ್ಲಿಯೇ ಶ್ರೀ ಸತ್ಯಸಾಯಿಬಾಬಾ ಶಾಲೆ, ವಿಐಎಸ್‌ಎಲ್ ಆಸ್ಪತ್ರೆ(ದೊಡ್ಡಾಸ್ಪತ್ರೆ) ಹಾಗು ಅಂಗಡಿ ಮುಂಗಟ್ಟುಗಳಿವೆ. ಸದ್ಯ ಚಿರತೆ ಶಾಲೆ ಆವರಣ ಪ್ರವೇಶಿಸಿಲ್ಲ. ಅಲ್ಲದೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  
    ಚಿರತೆ ಬಗ್ಗೆ ಮಾಹಿತಿ ತಿಳಿದು ನಗರದ ವಿವಿಧೆಡೆಗಳಿಂದ ಜನರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದರು. ಇದರಿಂದಾಗಿ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಜನರ ಸದ್ದು ಗದ್ದಲದಿಂದಾಗಿ ಸೆರೆ ಹಿಡಿಯುವುದು ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.

Tuesday, June 21, 2022

ಭದ್ರಾವತಿ ನ್ಯೂಟನ್ ಶ್ರೀ ಸತ್ಯ ಸಾಯಿಬಾಬಾ ಶಾಲೆ ಹತ್ತಿರ ಚಿರತೆ ಪ್ರತ್ಯಕ್ಷ

 


ಭದ್ರಾವತಿ ನ್ಯೂಟನ್ ಶ್ರೀ ಸತ್ಯ ಸಾಯಿಬಾಬಾ ಶಾಲೆ ಹತ್ತಿರ ವಿಐಎಸ್ಎಲ್  ವಸತಿಗೃಹಗಳ ಬಳಿ ಚಿರತೆ ಬುಧವಾರ ಬೆಳಗ್ಗೆ ಪ್ರತ್ಯಕ್ಷವಾಗಿದ್ದು ಜನರು ನೋಡಲು ಜಮಾಯಿಸಿರುವುದು ಕಂಡುಬಂದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಹಿಡಿಯಲು ಹರಸಹಾಸ ಪಡುತ್ತಿದ್ದು ಸುಮಾರು ಎರಡು ಗಂಟೆಗಳಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಜೂ.೨೪ರಂದು ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ : ಬಿ.ಎಸ್ ಮಹೇಶ್ ಕುಮಾರ್

ಭದ್ರಾವತಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್‌ಕುಮಾರ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜೂ. ೨೧ : ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ವತಿಯಿಂದ ಜೂ.೨೪ರಂದು ತಾಲೂಕಿನ ಶ್ರೀರಾಮನಗರದ ಶ್ರೀ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂದಿರದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಕಣ್ಣಿನ ಇತರ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಭದ್ರಾಕಾಲೋನಿ-ತಳ್ಳಿಕಟ್ಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮ ಮತ್ತು ತಾಲೂಕು ವೈದ್ಯಾಧಿಕಾರಿಗಳ ಕಛೇರಿ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿದೆ.  
    ಕ್ಲಬ್ ವತಿಯಿಂದ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡುವ ಮೂಲಕ ಆರೋಗ್ಯ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
    ಶಿಬಿರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಶಂಕರ ಕಣ್ಣಿನ ಆಸ್ಪತ್ರೆ, ಹರಕೆರೆ, ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ. ದೂರವಾಣಿ ಸಂಜೆ ೦೮೧೮೨-೨೨೨೦೯೯, ೨೨೨೧೦೦ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ಭದ್ರಾಕಾಲೋನಿ-ತಳ್ಳಿಕಟ್ಟೆ ಅಥವಾ ಬಿ.ಎಸ್ ಮಹೇಶ್‌ಕುಮಾರ್, ಮೊ: ೯೪೪೯೧೩೬೩೩೩, ಡಿ. ಶಂಕರಮೂರ್ತಿ, ಮೊ: ೯೮೮೦೦೩೦೪೨೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದರು.
    ಜೂ.೨೫ರಂದು ನೂತನ ಪದಾಧಿಕಾರಿಗಳ ಪದಗ್ರಹಣ:
    ಪ್ರಸಕ್ತ ಸಾಲಿನ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜೂ.೨೫ರಂದು ಸಂಜೆ ೭ ಗಂಟೆ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಎ.ಎನ್ ಕಾರ್ತಿಕ್, ಕಾರ್ಯದರ್ಶಿಯಾಗಿ ಎಂ. ನಾಗರಾಜ ಶೇಟ್ ಮತ್ತು ಖಜಾಂಚಿಯಾಗಿ ಜಿ.ಪಿ ದರ್ಶನ್ ಹಾಗು ಇನ್ನಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಡಿ. ಶಂಕರಮೂರ್ತಿ, ಪ್ರಮುಖರಾದ ಪಿ. ವೆಂಕಟರಮಣಶೇಟ್, ಬಿ. ದಿವಾಕರ ಶೆಟ್ಟಿ, ಎ.ಎನ್ ಕಾರ್ತಿಕ್ ಮತ್ತು ಪರಮೇಶ್ವರಪ್ಪ ಉಪಸ್ಥಿತರಿದ್ದರು.

೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

ಭದ್ರಾವತಿ ನಗರಸಭೆ ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಅವರು ನಗರಸಭಾ ಸದಸ್ಯರಾಗಿ ೧ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆ ಮನೆ ಮನೆಗೆ ಮುಟ್ಟಿಸುವ ಹಾಗು ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  
    ಭದ್ರಾವತಿ, ಜೂ. ೨೧: ನಗರಸಭೆ ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಅವರು ನಗರಸಭಾ ಸದಸ್ಯರಾಗಿ ೧ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆ ಮನೆ ಮನೆಗೆ ಮುಟ್ಟಿಸುವ ಹಾಗು ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.
    ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
    ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್, ಖೋ ಖೋ ತರಬೇತಿದಾರ ಕೆ.ಟಿ ಶ್ರೀನಿವಾಸ್ ಮತ್ತು ರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಕಿರಣ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭಾ ಸದಸ್ಯೆ ಅನುಪಮಾ, ಮಾಜಿ ಉಪಾಧ್ಯಕ್ಷ ವೆಂಕಟೇಶ್, ಪ್ರಮುಖರಾದ ನರಸಿಂಹಚಾರ್, ಚನ್ನೇಶ್, ಸುದರ್ಶನ್, ರೇವಣಕರ್, ಪರಶುರಾಮ್ ಭೋವಿ, ಕಾರನಾಗರಾಜ್, ಮಂಜುನಾಥ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಬಿ.ಎಸ್ ನಾರಾಯಣಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಕಾಂತರಾಜ್ ಸ್ವಾಗತಿಸಿ, ರಾಜು ರೇವಣಕರ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ಹಂಚಲಾಯಿತು.