ಭದ್ರಾವತಿ ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಡೆಯಿತು.
ಭದ್ರಾವತಿ, ಜೂ. ೨೩: ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಇನ್ನೂ ಸಂಘಟಿತರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ನಡೆಯಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಆಗ್ರಹಿಸಿದರು.
ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ರಮೇಶ್, ನಾಗರಾಜ್ ದೊಡ್ಡಗೊಪ್ಪೇನಹಳ್ಳಿ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಒಕ್ಕಲಿಗರು ಸುಮಾರು ೩೫ ಸಾವಿರ ಜನಸಂಖ್ಯೆ ಹೊಂದಿದ್ದರೂ ಸಹ ಇದುವರೆಗೂ ಸರಿಯಾಗಿ ಸಂಘಟಿತರಾಗಲು ಸಾಧ್ಯವಾಗಿಲ್ಲ. ರಾಜ್ಯದೆಲ್ಲೆಡೆ ಒಕ್ಕಲಿಗರು ಪ್ರಬಲರಾಗಿದ್ದು, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಂಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಮಾತ್ರ ಒಕ್ಕಲಿಗರು ಸಂಘಟಿತರಾಗದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ತಾಲೂಕು ಒಕ್ಕಲಿಗರ ಸಂಘ ಕೆಲವರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿದ್ದು, ಕುಲ ಬಾಂಧವರ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಇದುವರೆಗೂ ಒಂದು ಸುಸಜ್ಜಿತವಾದ ಸಮುದಾಯ ಭವನ ಹೊಂದಲು ಸಾಧ್ಯವಾಗಿಲ್ಲ. ಅಲ್ಲದೆ ಕಡು ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅನುದಾನ, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ತಾಲೂಕು ಒಕ್ಕಲಿಗರ ಸಂಘ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗರು ಎಂದರೆ ಸಮಾಜದ ಎಲ್ಲರೊಂದಿಗೂ ಬೆರೆತು ಸಾಗುವವರು ಎಂಬುದನ್ನು ಅರಿತುಕೊಳ್ಳಬೇಕು. ಇತರೆ ಸಮುದಾಯವನ್ನು ತಿರಸ್ಕರಿಸಿ ಮುಂದೆ ಸಾಗುವುದು ಅಸಾಧ್ಯ. ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಸರ್ಕಾರದ ಅನುದಾನ, ಸೌಲಭ್ಯಗಳನ್ನು ತಿರಸ್ಕರಿಸುವುದು ಸರಿಯಲ್ಲ. ಒಕ್ಕಲಿಗ ಸಮುದಾಯದಲ್ಲೂ ಕಡು ಹಾಗು ಮಧ್ಯಮ ವರ್ಗದವರಿದ್ದಾರೆ. ಅವರನ್ನು ಸಹ ಅರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕುಲಬಾಂಧವರು ಎಚ್ಚೆತ್ತುಕೊಂಡು ಸಂಘಟಿತರಾಗಬೇಕೆಂದರು.
ಸೋಮಶೇಖರ್ ಸಂಕ್ಲಿಪುರ, ಶಿವಣ್ಣ ಕಲ್ಲಹಳ್ಳಿ, ಸಂದೇಶ್‌ಗೌಡ, ಸುಹಾಸ್ ಗೌಡ, ಮುಳ್ಕೆರೆ ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.