ಭದ್ರಾ ಜಲಾಶಯದಲ್ಲಿ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಿನ ನೀರು ಸಂಗ್ರಹ
ಭದ್ರಾವತಿ, ಜು. ೮: ಕಳೆದ ೫-೬ ದಿನಗಳಿಂದ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಸುಮಾರು ೧೪ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಯಾವುದೇ ಜೀವ ಹಾನಿಯಾಗಿಲ್ಲ, ರಸ್ತೆಗಳು ಕಡಿತಗೊಂಡಿರುವ ಪ್ರಕರಣಗಳು ನಡೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ಎಲ್ಲಿಯೂ ಕಾಳಜಿ ಕೇಂದ್ರ ತೆರೆದಿಲ್ಲ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.
ಅಡಕೆ ತೋಟಕ್ಕೆ ಕೊಳೆರೋಗ ಭೀತಿ :
ಮಲೆನಾಡು ಭಾಗದಲ್ಲಿ ತೋಟದ ಬೆಳೆಗಳಿಗೆ ರೋಗಬಾಧೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಾಲೂಕು ಅರೆಮಲೆನಾಡು ಭಾಗವಾಗಿರುವ ಹಿನ್ನಲೆಯಲ್ಲಿ ರೋಗಬಾಧೆಗಳು ಕಡಿಮೆ. ಆದರೂ ಒಂದು ವೇಳೆ ಮಳೆ ಇದೆ ರೀತಿ ಒಂದು ವಾರ ಮುಂದುವರೆದಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ತೋಟದ ಬೆಳೆಗಳಿಗೆ ಸಂಬಂಧಿಸಿದಂತೆ ಯಾವುದೇ ನಷ್ಟದ ಮಾಹಿತಿ ಬಂದಿಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಾಂತರಾಜ್ ತಿಳಸಿದ್ದಾರೆ.
ಮೆಕ್ಕೆಜೋಳಕ್ಕೆ ಹಾನಿ :
ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಮಾತ್ರ ಇದ್ದು, ಉಳಿದಂತೆ ಭತ್ತ, ರಾಗಿ ಬೆಳೆಗಳು ಇನ್ನೂ ನಾಟಿಯಾಗಿಲ್ಲ. ಮಳೆ ಇದೆ ರೀತಿ ಮುಂದುವರೆದು ನೀರು ಹೆಚ್ಚಾದ್ದಲ್ಲಿ ಮೆಕ್ಕೆಜೋಳಕ್ಕೆ ಹಾನಿಯಾಗಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.
ಉಳಿದಂತೆ ಕೃಷಿ ಇಲಾಖೆಯಲ್ಲಿ ಈ ಬಾರಿ ಬಿತ್ತನೆ ಬೀಜ ಹಾಗು ಗೊಬ್ಬರ ಸಮಸ್ಯೆ ಇಲ್ಲ. ಈಗಾಗಲೇ ಬಿತ್ತನೆ ಬೀಜ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಇಳಿಮುಖಗೊಂಡ ಕಬ್ಬು ಬೆಳೆ :
ನಗರದಲ್ಲಿ ಎಂಪಿಎಂ ಸಕ್ಕರೆ ಕಾರ್ಖಾನೆ ಚಾಲನೆಯಲ್ಲಿದ್ದಾಗ ತಾಲೂಕಿನಲ್ಲಿ ಸುಮಾರು ೬ ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಬೆಳೆ ಬೆಳೆಯಾಗುತ್ತಿತ್ತು. ಇದೀಗ ಕಬ್ಬು ಬೆಳೆ ಕೇವಲ ೩೦೦ ಹೆಕ್ಟೇರ್ ತಲುಪಿದೆ ಎಂದು ಕೃಷಿ ಅಧಿಕಾರಿ ರಾಕೇಶ್ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಎಲ್ಲೆಡೆ ಕಬ್ಬು ಬೆಳೆ ರಾರಾಜಿಸುತ್ತಿತ್ತು. ಇದೀಗ ೩೦೦ ಹೆಕ್ಟೇರ್ ತಲುಪಿರುವುದು ವಿಷಾದನೀಯ ಸಂಗತಿಯಾಗಿದ್ದು, ಈ ನಡುವೆ ಕೆಲವು ಆಲೆಮನೆಗಳಿಗೆ ಕಬ್ಬಿನ ಕೊರತೆ ಎದುರಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ ಕಬ್ಬು ಸರಬರಾಜು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ರೈತರು ಕಬ್ಬು ಬೆಳೆ ಬದಲಾಗಿ ಅಡಕೆ ಬೆಳೆಗೆ ಮಾರುಹೋಗಿದ್ದಾರೆ. ಇದರಿಂದಾಗಿ ಕಬ್ಬು ಬೆಳೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದರು.
ಕಳೆದ ಬಾರಿ ೧೦ ಅಡಿ ಹೆಚ್ಚಿನ ನೀರು:
ಭದ್ರಾ ಜಲಾಶಯ ವ್ಯಾಪ್ತಿಯ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿದ್ದು, ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಾಗಿದೆ.
ಶುಕ್ರವಾರ ೧೬೬.೫ ಅಡಿ ಅಡಿ ತಲುಪಿದ್ದು, ೪೯.೦೭೪ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೫೫.೮ ಅಡಿ ಇದ್ದು, ೩೯.೦೧೪ ಟಿಎಂಸಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಒಳಹರಿವು ೨೯,೯೪೨ ಕ್ಯೂಸೆಕ್ಸ್ ಇದ್ದು, ಹೊರ ಹರಿವು ೧೪೩ ಕ್ಯೂಸೆಕ್ಸ್ ಆಗಿದೆ. ಈ ಬಾರಿ ೧೦ ಅಡಿ ನೀರು ಹೆಚ್ಚಾಗಿರುವುದು ರೈತರ ಮುಖದಲ್ಲಿ ಸಂತಸವನ್ನುಂಟು ಮಾಡಿದೆ.