Tuesday, August 2, 2022

ಪ್ರಸ್ತುತ ಆಂಗ್ಲ ಭಾಷೆ ಕಲಿಕೆ ಬಹುಮುಖ್ಯ : ಬಿ. ಸಿದ್ದಬಸಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಛೇರಿ ಸಹಯೋಗದೊಂದಿಗೆ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್‌ಟೌನ್ ಇಂಗ್ಲೀಷ್ ಟೀಚರ್‍ಸ್ ಪೋರಮ್) ವತಿಯಿಂದ ಆಯೋಜಿಸಲಾಗಿದ್ದ ಆಂಗ್ಲ ಭಾಷಾ ಕಾರ್ಯಾಗಾರದಲ್ಲಿ ಬಿ.ಸಿದ್ದಬಸಪ್ಪ, ಕೆ. ಬಸವರಾಜಪ್ಪ ಮತ್ತು ಎ.ಕೆ ನಾಗೇಂದ್ರಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ, ಆ. ೨: ಪ್ರಸ್ತುತ ಆಂಗ್ಲ ಭಾಷೆ ಕಲಿಕೆ ಬಹುಮುಖ್ಯವಾಗಿದ್ದು, ಭವಿಷ್ಯದಲ್ಲಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು.
    ಅವರು ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಛೇರಿ ಸಹಯೋಗದೊಂದಿಗೆ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್‌ಟೌನ್ ಇಂಗ್ಲೀಷ್ ಟೀಚರ್‍ಸ್ ಪೋರಮ್) ವತಿಯಿಂದ ಆಯೋಜಿಸಲಾಗಿದ್ದ ಆಂಗ್ಲ ಭಾಷಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಇದ್ದ ಎಲ್ಲಾ ತೊಡಕುಗಳು ಇದೀಗ ಬಗೆಹರಿದಿವೆ. ಇಂಗ್ಲೀಷ್ ಕಲಿಕಾ ಚೇತರಿಕೆಯಲ್ಲಿರುವ ಎಲ್ಲಾ ಚಟುವಟಿಕೆಗಳು ಪಠ್ಯ ಪುಸ್ತಕಕ್ಕೆ ಪೂರಕವಾಗಿವೆ. ಒಟ್ಟಾರೆ ಕಲಿಕಾ ನ್ಯೂನತೆಗಳು ಇದರಿಂದ ದೂರವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕ ಕೆ. ಬಸವರಾಜಪ್ಪ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ್ ಎಂ, ಜಯಕುಮಾರ್, ಇಮ್ತಿಯಾಜ್, ಪ್ರಕಾಶ್ ಮತ್ತು ಅಶ್ವಿನಿ ಜಾಧವ್ ಪಾಲ್ಗೊಂಡಿದ್ದರು.

ವಾಹನ ದಟ್ಟಣೆ : ವೇಗ ನಿಯಂತ್ರಕ ಅಳವಡಿಸಿ

ಸಮಾಜಸೇವಕ ಇಬ್ರಾಹಿಂಖಾನ್ ಮನವಿ

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಭದ್ರಾವತಿ, ಆ. ೨: ಇತ್ತೀಚೆಗೆ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಕಂಚಿ ಬಾಗಿಲು ಸಮೀಪ ಪೊಲೀಸ್ ವಸತಿ ಸಮುಚ್ಛಯ, ಆಲ್ ಮಹಮೂದ್ ವಿದ್ಯಾಸಂಸ್ಥೆ, ದರ್ಗಾ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಇದ್ದು, ತಾಲೂಕು ಕಛೇರಿ ರಸ್ತೆಗೆ ಸಂಪರ್ಕಗೊಂಡಿದೆ. ಈ ಭಾಗದಲ್ಲಿ ವಾಹನಗಳ ದಟ್ಟಣೆ ಹಾಗು ಪಾದಚಾರಿಗಳ ಸಂಚಾರ ಅಧಿಕವಾಗಿದ್ದು, ಇತ್ತೀಚೆಗೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡ ನಂತರ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಬಳಿ ಹಾಗು ಕಿಟ್ಟಮ್ಮ ಹಿಟ್ಟಿನ ಗಿರಣಿ ಸಮೀಪ ವೇಗ ನಿಯಂತ್ರಕ ಅಳವಡಿಸುವ ಮೂಲಕ ಸಾರ್ವಜನಿಕರ ಜೀವ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
    ಸಂಚಾರಿ ಪೊಲೀಸ್  ಠಾಣಾಧಿಕಾರಿ ಕವಿತಾ, ನಗರಸಭೆ ಪೌರಾಯುಕ್ತ ಮನುಕುಮಾರ್ ಹಾಗು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಇಬ್ರಾಹಿಂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.

ಅಮೆಚೂರ್ ನ್ಯಾಷನಲ್ ಗೇಮ್ಸ್ : ಕರ್ನಾಟಕ ತಂಡಕ್ಕೆ ಬಹುಮಾನ

ರಾಜಸ್ತಾನದ ಜೈಪುರದ ಪಿಂಕಿ ಸಿಟಿಯಲ್ಲಿ ಜರುಗಿದ ಅಮೆಚೂರ್ ನ್ಯಾಷನಲ್ ಗೇಮ್ಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ೧೫ ಕ್ರೀಡಾಪಟುಗಳ ತಂಡ ಪ್ರತಿನಿಧಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ.
    ಭದ್ರಾವತಿ, ಆ. ೨: ರಾಜಸ್ತಾನದ ಜೈಪುರದ ಪಿಂಕಿ ಸಿಟಿಯಲ್ಲಿ ಜರುಗಿದ ಅಮೆಚೂರ್ ನ್ಯಾಷನಲ್ ಗೇಮ್ಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ೧೫ ಕ್ರೀಡಾಪಟುಗಳ ತಂಡ ಪ್ರತಿನಿಧಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ.
    ವಾಲಿಬಾಲ್‌ನಲ್ಲಿ ಪ್ರಥಮ ಬಹುಮಾನ, ೧,೬೦೦ ಮತ್ತು ೧,೫೦೦ ಮೀ. ಓಟದಲ್ಲಿ ಪ್ರಥಮ, ೧೦೦ ಮೀ. ಮತ್ತು ೮೦೦ ಮೀಟರ್ ಓಟದಲ್ಲಿ ದ್ವಿತೀಯ ಹಾಗು ೪೦೦ ಮೀ. ಓಟದಲ್ಲಿ ತೃತೀಯ ಬಹುಮಾನ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಒಟ್ಟು ೧೧ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ದೊಣಬಘಟ್ಟ ನಿವಾಸಿ ಇಮ್ರಾನ್ ತರಬೇತಿದಾರರಾಗಿದ್ದು, ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಇವರ ಶ್ರಮ ಹೆಚ್ಚಿನದ್ದಾಗಿದೆ. ಎಂಎಸ್‌ಎಂಇ-ಪಿಸಿ ರಾಜ್ಯ ಘಟಕದ ಅಧ್ಯಕ್ಷ, ಉದ್ಯಮಿ ಎಚ್.ಸಿ ರಮೇಶ್ ೧೫ ಕ್ರೀಡಾಪಟುಗಳನ್ನೊಳಗೊಂಡ ತಂಡಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾಗಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ.

ಜೈನ ಗುರುಗಳ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ

ಉದ್ಯಮಿ ಪ್ರಮಿತ್ ಧಾರ್ಮಿಕ ಸೇವೆಗೆ ಸಿಆರ್‌ಟಿಸಿ ಅಭಿನಂದನೆ

ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಜೈನ ಸಮಾಜದ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್ ಮುನಿ ಮಹಾರಾಜ್ ಸೇರಿದಂತೆ ೩೦ ಗುರುಗಳು ಹಾಗು ೧೦೦ ಅನುಯಾಯಿಗಳನ್ನೊಳಗೊಂಡ ತಂಡ ಕಳೆದ ವರ್ಷ ನ.೧೫ರಿಂದ ಬೆಳಗಾವಿಯಿಂದ ರಾಜಸ್ಥಾನದ ಭಗವಾನ್ ಶ್ರೀ ಮಹಾವೀರ್ ಕ್ಷೇತ್ರದ ವರೆಗೂ ಸುಮಾರು ೮ ತಿಂಗಳ ಪಾದಯಾತ್ರೆ ನಡೆಸಿದ್ದು, ಪ್ರತಿದಿನ ಸುಮಾರು ೧೫ ರಿಂದ ೨೦ ಕಿ.ಮೀ ಒಟ್ಟು ೧೮೦೦ ಕಿ.ಮೀ ಯಾತ್ರೆ ಇದಾಗಿದೆ. ಈ ಸಂದರ್ಭದಲ್ಲಿ ಪ್ರಮಿತ್ ಅವರು ಪ್ರತಿ ದಿನ ದಾರಿಯುದ್ದಕ್ಕೂ ಗುರುಗಳ ತಂಡ ಉಳಿದುಕೊಳ್ಳಲು ಶಾಲೆ/ಛತ್ರದ ವ್ಯವಸ್ಥೆ, ಆಹಾರ ತಯಾರಿಕೆಗೆ ಇದ್ದಿಲು ಪೂರೈಕೆ, ಕುಡಿಯಲು ಬಾವಿ ನೀರಿನ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಕೈಗೊಂಡಿದ್ದಾರೆ. ಅಲ್ಲದೆ ಸುಮಾರು ೫ ವರ್ಷಗಳ ಕಾಲ ಜೈನ ಧರ್ಮದ ಪುಣ್ಯ ಕ್ಷೇತ್ರಗಳಾದ ಶ್ರವಣಬೆಳಗೊಳ, ಧರ್ಮಸ್ಥಳ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.  ಇವರ ಧಾರ್ಮಿಕ ಸೇವಾ ಮನೋಭಾವ ಇತರರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಉದ್ದೇಶದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
    ಪ್ರಮಿತ್ ಅವರು ಕೇವಲ ಧಾರ್ಮಿಕ ಸೇವಾ ಕಾರ್ಯ ಮಾತ್ರವಲ್ಲದೆ ರೈಫಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಹಳಷ್ಟು ಸೇವಾ ಕಾರ್ಯಗಳಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ.
    ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಮೂರ್ತಿ, ಕಾರ್ಯದರ್ಶಿ ಎಂ.ಎಸ್ ರವಿ, ಖಜಾಂಚಿ ಅಮಿತ್ ಕುಮಾರ್ ಜೈನ್, ಪ್ರಮುಖರಾದ ಡಿ.ಎನ್ ಅಶೋಕ್, ಸಿ.ಎನ್ ಗಿರೀಶ್, ಜಿ.ಎನ್ ಸತ್ಯಮೂರ್ತಿ, ಕೆ.ಜಿ ರಾಜ್‌ಕುಮಾರ್, ಪಿ.ಸಿ ಜೈನ್, ಮಿಥುನ್, ವೈ. ನಟರಾಜ್,  ಮಂಜುನಾಥ್, ಬಾಲಾಜಿ, ರಾಜು, ಅನ್ನಪೂರ್ಣ ಸತೀಶ್, ಲತಾ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, August 1, 2022

ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿ ಗ್ರಾಮದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಆ. ೧:  ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ೧೯೯೮-೯೯ರಲ್ಲಿ ತಹಸೀಲ್ದಾರ್‌ರವರು ಅಧಿಕೃತವಾಗಿ ಪಹಣಿಯಲ್ಲಿ ಗ್ರಾಮದ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗ ಎಂದು ನಮೂದಿಸಿದ್ದಾರೆ. ಆದರೂ ಸಹ ಕೆಲವರು ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಸಹ ಈ ಜಾಗ ನಮ್ಮದು ಎಂದು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಹಾಗು ರಾಜಕಾರಣಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಲಾಯಿತು.
    ೨೦೧೭ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲೋಕೇಶ್‌ರವರು ಮನವಿಗೆ ಸ್ಪಂದಿಸಿ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಜೊತೆಗೆ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಅಳತೆ ಮಾಡುವಂತೆ ಹಾಗು ಒತ್ತುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
     ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗ ಕಡ್ಡಾಯವಾಗಿ ಕಲ್ಪಿಸಿಕೊಡುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಬಿ.ಆರ್.ಪಿ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ಸ್ಮಶಾನ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಶಿಕುಮಾರ್ ಗೌಡ, ಈ. ಕೃಷ್ಣ, ಅಭಿಮನ್ಯು, ಕೃಷ್ಣಮೂರ್ತಿ, ಜಿ. ಸಂತೋಷ್, ಎಲ್.ಬಿ ನಂದಕುಮಾರ್, ಎಂ.ಬಿ ವಿಶ್ವನಾಥ್, ಶ್ರೀನಿವಾಸ್, ನೇತ್ರಾ, ಜಲಜಾಕ್ಷಿ, ಮೀನಾ, ಸಿದ್ದಮ್ಮ, ಚಲುವಿ, ಭಾಗ್ಯ, ಲಕ್ಷ್ಮಮ್ಮ, ಲಲಿತಾ, ಗಂಗಮ್ಮ, ಯಲ್ಲಮ್ಮ, ಎಂ.ಕೆ ಪುಷ್ಪ, ವಾಣಿ, ವರಲಕ್ಷ್ಮಿ, ಮುನಿಯಮ್ಮ, ಸುಲೋಚನ, ಶಕೀಲ, ಮಹೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಆ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಆ. ೧: ಮೆಸ್ಕಾಂ ಘಟಕ-೨ರ ವ್ಯಾಪ್ತಿಯ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಪರಿವರ್ತಕ ಮತ್ತು ಎಲ್.ಟಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ  ಆ. ೨ ರಂದು ಬೆಳಗ್ಗೆ ೯.೩೦ ರಿಂದ ಸಂಜೆ ೬.೩೦ ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನಗರಸಭೆ ಕಛೇರಿ ಸುತ್ತಮುತ್ತಲಿನ ಪ್ರದೇಶ, ಭೂತನಗುಡಿ, ಮಾಧವಚಾರ್ ವೃತ್ತ, ಗಾಂಧಿನಗರ, ಮಾಧವನಗರ, ಎನ್.ಎಂ.ಸಿ ರಸ್ತೆ, ಹಳೇ ಸಂತೆಮೈದಾನ, ಕೋಡಿಹಳ್ಳಿ, ಗೌರಾಪುರ, ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಶಿಶುವಿಹಾರ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೧ : ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
        ಶಿಶುವಿಹಾರ ಕಟ್ಟಡ ಸುಮಾರು ೪೫ ವರ್ಷಗಳಿಗೂ ಹಳೇಯದಾಗಿದ್ದು, ತುಂಬಾ ಶಿಥಿಲಗೊಂಡಿದೆ. ಮಕ್ಕಳು ಶಿಶುವಿಹಾರಕ್ಕೆ ಹೋಗದೆ ಕಲಿಕೆಯಿಂದ ವಂಚಿತರಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಥಿಲಗೊಂಡಿರುವ ಕಟ್ಟಡ ತಕ್ಷಣ ದುರಸ್ತಿಗೊಳಿಸದಿದ್ದಲ್ಲಿ ಅನಾಹುತ ಖಚಿತ. ಮಕ್ಕಳ ಭವಿಷ್ಯದ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗು ಹೊಸದಾಗಿ ಶಿಶುವಿಹಾರ ನಿರ್ಮಾಣ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಎಲ್ಲಾ ರೀತಿ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಲಾಗಿದೆ.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್ ಅವರಿಗೆ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಫ್ರಾನ್ಸಿಸ್, ಮಂಜುಳಮ್ಮ, ಪ್ರವೀಣ, ಶಿವು, ಭೂಪಾಲ್, ಮದನ್, ಪುರುಷೋತ್ತಮ್, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.