Thursday, August 11, 2022

ಮಕ್ಕಳು ಜಂತುಹುಳು ಬಾಧೆ ಬಗ್ಗೆ ಹೆಚ್ಚಿನ ಗಮನ ನೀಡಿ : ಡಾ. ಎಂ.ವಿ ಅಶೋಕ್

ಭದ್ರಾವತಿ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜು. ೧೧:  ಮಕ್ಕಳ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿವಹಿಸಲಾಗಿದ್ದು, ಜಂತುಹುಳು ಬಾಧೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುತ್ತಿದೆ. ಕಡ್ಡಾಯವಾಗಿ ಮಕ್ಕಳು ಪ್ರತಿ ೬ ತಿಂಗಳಿಗೆ ಒಂದು ಮಾತ್ರೆ ತೆಗೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಂತುಹುಳು ಬಾಧೆಯಿಂದಾಗಿ ಬಹಳಷ್ಟು ಮಕ್ಕಳು ಅಪೌಷ್ಠಿಕತೆ ಹಾಗು ರಕ್ತಹೀನತೆಯಿಂದ ಬಳಲುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವ ಸರ್ಕಾರ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದರು.
    ಜಂತುಹುಳು ಬಾಧೆ ತಡೆಗಟ್ಟಲು ಮಕ್ಕಳು ತಮ್ಮ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಗಮನ ನೀಡಬೇಕು. ಜೊತೆಗೆ ಶುದ್ಧ ಆಹಾರ ಸೇವನೆ ಮಾಡಬೇಕೆಂದರು.
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ನೆಹರು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಚ್ಯುತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ಸೇರಿದಂತೆ ಇನ್ನಿತರರು ಜಂತು ಬಾಧೆ ಹಾಗು ನಿರ್ಮೂಲನೆಗೆ ಅನುಸರಿಸಬೇಕಾದ ಕ್ರಮ ಕುರಿತು ವಿತರಿಸಿದರು.
    ಟಿಎಲ್‌ಎಚ್‌ವಿ ಪ್ರೇಮಕುಮಾರಿ, ಆಶಾ ಮೆಂಟರ್ ಬಿ.ಎಂ ವಸಂತ, ಐಸಿಡಿಎಸ್ ಶಾರದ, ದೈಹಿಕ ಶಿಕ್ಷಕಿ ಜಿ.ಕೆ ದಿವ್ಯ, ಸಹ ಶಿಕ್ಷಕರಾದ ಚಂದ್ರನಾಯ್ಕ, ಡಿ.ಎ ಅಶ್ವಥ್, ಎನ್. ಮಮತ, ಎಚ್.ಜಿ ಗೀತಾ, ಸಲ್ಮಾ, ಜಿ.ಡಿ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್ ರವೀಂದ್ರ ಸ್ವಾಗತಿಸಿದರು. ಕವಿತಾ ವಂದಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಆ. ೧೧: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಅವ್ಯವಸ್ಥೆಗಳ ಆಗರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವುದು. ಬಗರ್ ಹುಕುಂ, ನಿವೇಶನ ರಹಿತರ ಹಾಗು ಸ್ಮಶಾನ ರಹಿತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಲಾಯಿತು.
    ಇದಕ್ಕೂ ಮೊದಲು ಅಂಬೇಡ್ಕರ್ ಭವನದಿಂದ ತಾಲೂಕು ಕಛೇರಿವರೆಗೂ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು.

ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರಿಗೆ ಸನ್ಮಾನ

ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಭದ್ರಾವತಿ ಕೇಶವಪುರ ಬಡಾವಣೆ ನಿವಾಸಿ ನಾಗಪ್ಪ ಅವರನ್ನು ತಾಲೂಕು ಆಡಳಿತ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. ೧೧: ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರನ್ನು ತಾಲೂಕು ಆಡಳಿತ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನೀಯರನ್ನು, ದೇಶ ಭಕ್ತರನ್ನು ನೆನಪು ಮಾಡಿಕೊಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರದ ಕೇಶವಪುರ ಬಡಾವಣೆ ನಿವಾಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್, ಕಂದಾಯ ನಿರೀಕ್ಷಕ ಪ್ರಶಾಂತ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಹೇಮಾವತಿ ವಿಶ್ವನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, August 10, 2022

ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡಿ : ಪ್ರತಿಭಟನೆ

ಭದ್ರಾವತಿ, ಆ.11: ತಾಲೂಕಿನ ಕುವೆಂಪು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡುವಂತೆ ಆಗ್ರಹಿಸಿ ಗುರುವಾರ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ ಯುಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
      ಬಿಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು ಹಾಗೂ ಸಂಘಟನೆಗೆ ಪ್ರಮುಖ ಮಾತನಾಡಿ, ವಿಶ್ವವಿದ್ಯಾಲಯ ಆ. 8ರಂದು ಸುತ್ತೋಲೆ ಹೊರಡಿಸಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳು 1720 ರು. ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಿದೆ. ಇದೀಗ ಸಾಮಾನ್ಯ ವರ್ಗದವರ ಪರೀಕ್ಷಾ ಶುಲ್ಕವನ್ನು ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳು ಪಾವತಿಸುವಂತಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಕಟ್ಟುವ ಸಾಮರ್ಥ್ಯ ಇರುವುದಿಲ್ಲ ಹಿನ್ನೆಲೆಯಲ್ಲಿ ತಕ್ಷಣ ವಿಶ್ವವಿದ್ಯಾಲಯ ಮಟ್ಟದಲ್ಲಿ ಶುಲ್ಕ ವಿನಾಯಿತಿ  ನೀಡುವಂತೆ ಆಗ್ರಹಿಸಿದರು. 
     ಸಂಘಟನೆ ಅಧ್ಯಕ್ಷ ಮುಸ್ವೀರ್ ಬಾಷಾ, ನಗರ ಸಭಾ ಸದಸ್ಯರಾದ ಕಾಂತರಾಜು, ರಿಯಾಜ್ ಅಹ್ಮದ್, ಬಷೀರ್ ಅಹ್ಮದ್, ಅಮಿರ್ ಜಾನ್, ಜೆಬಿಟಿ ಬಾಬು, ಸಂಘಟನೆ ಉಪಾಧ್ಯಕ್ಷರಾದ ಗಂಗಾಧರ್, ಕೀರ್ತಿ, ಮುರುಗೇಶ್, ಅಭಿಲಾಷ್, ವಿನಯ್, ರಮೇಶ್ ನಾಯ್ಕ,  ಎಸ್. ಎಸ್ ಭೈರಪ್ಪ, ಬಿ ಎಡ್ ಕಾಲೇಜಿನ ವಿದ್ಯಾರ್ಥಿಗಳು, ಸಂಘಟನೆ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.




ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯ : ಎಸ್. ಕುಮಾರ್

ಆ.೧೮ರೊಳಗೆ ಅರ್ಜಿ ಸಲ್ಲಿಸಲು ಮನವಿ

ರಾಜ್ಯದಲ್ಲಿರುವ ಒಕ್ಕಲಿಗ ಸಮಾಜದ ಆರ್ಥಿಕ ಹಿಂದುಳಿದ ಕಡುಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ವಿವಿಧ ಯೋಜನೆಗಳ ಸಹಾಯಧನ ಬಿಡುಗಡೆಗೊಳಿಸಿದೆ. ಅರ್ಹ ಬಡವರು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಭದ್ರಾವತಿ ಬಿಜೆಪಿ ಮುಖಂಡ ಎಸ್. ಕುಮಾರ್ ಮನವಿ ಮಾಡುವ ಮೂಲಕ ಅರ್ಹರಿಗೆ ಅರ್ಜಿಗಳನ್ನು ವಿತರಿಸಿದರು.
    ಭದ್ರಾವತಿ, ಆ. ೧೦: ರಾಜ್ಯದಲ್ಲಿರುವ ಒಕ್ಕಲಿಗ ಸಮಾಜದ ಆರ್ಥಿಕ ಹಿಂದುಳಿದ ಕಡುಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ವಿವಿಧ ಯೋಜನೆಗಳ ಸಹಾಯಧನ ಬಿಡುಗಡೆಗೊಳಿಸಿದೆ. ಅರ್ಹ ಬಡವರು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎಸ್. ಕುಮಾರ್ ಮನವಿ ಮಾಡಿದರು.
    ಗಂಗಾ ಕಲ್ಯಾಣ ಯೋಜನೆಯಡಿ ಸಾಮೂಹಿಕ ಅಥವಾ ವೈಯಕ್ತಿಕ ಕೊಳವೆಬಾವಿ ನಿರ್ಮಿಸಿಕೊಳ್ಳಲು, ನಿರುದ್ಯೋಗಿಗಳಿಗೆ ಟೂರಿಸ್ಟ್ ಟ್ಯಾಕ್ಸಿ ಅಥವಾ ಸರಕು ಸಾಗಾಣಿಕ ವಾಹನ ಖರೀದಿಸಲು ಹಾಗು ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯ ಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
    ಒಕ್ಕಲಿಗ ಸಮಾಜದವರು ಅರ್ಜಿ ಸಲ್ಲಿಸಲು ಬೆಂಗಳೂರು ಅಥವಾ ಶಿವಮೊಗ್ಗದಲ್ಲಿರುವ ದೇವರಾಜ ಅರಸು ನಿಗಮಕ್ಕೆ ಅಳೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗು ಸಾಮಾಜಿಕ ಮನೋಭಾವನೆಯೊಂದಿಗೆ ಅರ್ಜಿಗಳನ್ನು ನಾವೇ ವಿತರಿಸುವ ಮೂಲಕ ಅವುಗಳನ್ನು ಪುನಃ ಸಂಗ್ರಹಿಸಿ ನಿಗಮಕ್ಕೆ ತಲುಪಿಸಲಾಗುವುದು. ಈ ಹಿನ್ನಲೆಯಲ್ಲಿ ಅರ್ಹರು ಅರ್ಜಿಗಳನ್ನು ಪಡೆದು ಆ.೧೮ರೊಳಗೆ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನೀಡುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಆರ್. ಕೃಷ್ಣಮೂರ್ತಿ, ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾ ನದಿಯಲ್ಲಿ ಪ್ರವಾಹ ಇಳಿಮುಖ : ಗೋಡೆ ಕುಸಿದ ಮನೆಗಳಿಗೆ ಅಧಿಕಾರಿಗಳ ಭೇಟಿ

    ಭದ್ರಾವತಿ, ಆ. ೧೦: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಬುಧವಾರ ಪ್ರವಾಹ ಬಹುತೇಕ ಇಳಿಮುಖವಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
    ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ಜಲಾಶಯದಿಂದ ಹೆಚ್ಚುವರಿ ನೀರನ್ನು ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸಿದ ಹಿನ್ನಲೆಯಲ್ಲಿ ಭದ್ರಾ ನದಿಯಲ್ಲಿ ಭಾನುವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೂ ಪ್ರವಾಹ ಉಂಟಾಗಿ ಹೊಸಸೇತುವೆ ಸೇರಿದಂತೆ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿದ್ದವು. ಬುಧವಾರ ಬೆಳಿಗ್ಗೆ ಸೇತುವೆ ಮೇಲಿನ ತ್ಯಾಜ್ಯ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
    ಈ ಬಾರಿ ಸಹ ಪ್ರವಾಹದಿಂದ ಸೇತುವೆ ಮತ್ತಷ್ಟು ಹಾಳಾಗಿದ್ದು, ಮೊದಲನೇ ಬಾರಿ ಮುಳುಗಡೆಗೊಂಡಾಗ ಸೇತುವೆ ಎರಡು ಬದಿಯ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಈ ಹಿನ್ನಲೆಯಲ್ಲಿ ಎರಡು ದಿನದ ಮಟ್ಟಿಗೆ ಸಂಚಾರ ಸ್ಥಗಿತಗೊಳಿಸಿ ತಡೆಗೋಡೆ ಕೊಚ್ಚಿ ಹೋಗಿರುವ ಸ್ಥಳಗಳಲ್ಲಿ ಮರಳಿನ ಚೀಲಗಳನ್ನು ಇಡಲಾಗಿತ್ತು. ಇದೀಗ ಮರಳಿನ ಚೀಲಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಗಾಲ ಮುಕ್ತಾಯಗೊಂಡ ನಂತರ ತಡೆಗೋಡೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಗೋಡೆ ಕುಸಿದ ಮನೆಗಳ ಪರಿಶೀಲನೆ :
ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ವಾರ್ಡಿನ ನಗರಸಭೆ ಸದಸ್ಯೆ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.  ತಕ್ಷಣ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಸಂತ್ರಸ್ಥರು ಮನವಿ ಮಾಡಿದ್ದಾರೆ.
    ಇದೆ ರೀತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
    ಇದರಿಂದಾಗಿ ಪತ್ನಿ ನಂದಿನಿ ತನ್ನ ೨ ಮಕ್ಕಳೊಂದಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಬಡ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಮೂಲಕ ಸಂಕಷ್ಟಕ್ಕೆ ಮುಂದಾಗುವಂತೆ ಸ್ಥಳೀಯ ಮುಖಂಡ ರವಿಕುಮರ್ ಒತ್ತಾಯಿಸಿದ್ದಾರೆ.


ಭದ್ರಾವತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಹುಣಸೇಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನ ದಿನ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನ ದಿನ ಆಚರಿಸಲಾಯಿತು.
    ಭದ್ರಾವತಿ, ಆ. ೧೦: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನ ದಿನ ಆಚರಿಸಲಾಯಿತು.
    ಬೂತ್‌ಮಟ್ಟದ ಕಮಿಟಿ ರಚಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ೫೦ಕ್ಕೂ ಹೆಚ್ಚು ಯುವಕರು ಯುವ ಕಾಂಗ್ರೆಸ್‌ಗೆ ಸೇರ್ಪಡೆಯಾದರು
    ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹ್ಮದ್, ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಆಮೋಸ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ತಬ್ರೇಜ್ ಖಾನ್ ಹಾಗೂ ಅಭಿಷೇಕ್, ಪ್ರಧಾನ ಕಾರ್ಯದರ್ಶಿ ವಾಸೀಮ್ ಅಕ್ರಮ್, ಯುವ ಮುಖಂಡ ಟಿ.ಬಿ ರಘು ಮುಂತಾದವರು ಉಪಸ್ಥಿತರಿದ್ದರು.