Wednesday, August 10, 2022

ಭದ್ರಾ ನದಿಯಲ್ಲಿ ಪ್ರವಾಹ ಇಳಿಮುಖ : ಗೋಡೆ ಕುಸಿದ ಮನೆಗಳಿಗೆ ಅಧಿಕಾರಿಗಳ ಭೇಟಿ

    ಭದ್ರಾವತಿ, ಆ. ೧೦: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಬುಧವಾರ ಪ್ರವಾಹ ಬಹುತೇಕ ಇಳಿಮುಖವಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
    ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ಜಲಾಶಯದಿಂದ ಹೆಚ್ಚುವರಿ ನೀರನ್ನು ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸಿದ ಹಿನ್ನಲೆಯಲ್ಲಿ ಭದ್ರಾ ನದಿಯಲ್ಲಿ ಭಾನುವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೂ ಪ್ರವಾಹ ಉಂಟಾಗಿ ಹೊಸಸೇತುವೆ ಸೇರಿದಂತೆ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿದ್ದವು. ಬುಧವಾರ ಬೆಳಿಗ್ಗೆ ಸೇತುವೆ ಮೇಲಿನ ತ್ಯಾಜ್ಯ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
    ಈ ಬಾರಿ ಸಹ ಪ್ರವಾಹದಿಂದ ಸೇತುವೆ ಮತ್ತಷ್ಟು ಹಾಳಾಗಿದ್ದು, ಮೊದಲನೇ ಬಾರಿ ಮುಳುಗಡೆಗೊಂಡಾಗ ಸೇತುವೆ ಎರಡು ಬದಿಯ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಈ ಹಿನ್ನಲೆಯಲ್ಲಿ ಎರಡು ದಿನದ ಮಟ್ಟಿಗೆ ಸಂಚಾರ ಸ್ಥಗಿತಗೊಳಿಸಿ ತಡೆಗೋಡೆ ಕೊಚ್ಚಿ ಹೋಗಿರುವ ಸ್ಥಳಗಳಲ್ಲಿ ಮರಳಿನ ಚೀಲಗಳನ್ನು ಇಡಲಾಗಿತ್ತು. ಇದೀಗ ಮರಳಿನ ಚೀಲಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಗಾಲ ಮುಕ್ತಾಯಗೊಂಡ ನಂತರ ತಡೆಗೋಡೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಗೋಡೆ ಕುಸಿದ ಮನೆಗಳ ಪರಿಶೀಲನೆ :
ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ವಾರ್ಡಿನ ನಗರಸಭೆ ಸದಸ್ಯೆ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.  ತಕ್ಷಣ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಸಂತ್ರಸ್ಥರು ಮನವಿ ಮಾಡಿದ್ದಾರೆ.
    ಇದೆ ರೀತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
    ಇದರಿಂದಾಗಿ ಪತ್ನಿ ನಂದಿನಿ ತನ್ನ ೨ ಮಕ್ಕಳೊಂದಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಬಡ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಮೂಲಕ ಸಂಕಷ್ಟಕ್ಕೆ ಮುಂದಾಗುವಂತೆ ಸ್ಥಳೀಯ ಮುಖಂಡ ರವಿಕುಮರ್ ಒತ್ತಾಯಿಸಿದ್ದಾರೆ.


ಭದ್ರಾವತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

No comments:

Post a Comment