Wednesday, August 10, 2022

ಆ.೧೪ರಂದು ೩೭೫ ಅಡಿ ತಿರಂಗ ಧ್ವಜ ಯಾತ್ರೆ

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
    ಭದ್ರಾವತಿ, ಆ. ೧೦: ದೇಶದ ೭೫ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಆ.೧೪ರ ರಾತ್ರಿ ೮.೩೦ ರಿಂದ ಮಧ್ಯ ರಾತ್ರಿ ೧೨ ಗಂಟೆ ವರೆಗೆ ೩೭೫ ಅಡಿ ತಿರಂಗ ಧ್ವಜ ಯಾತ್ರೆ  ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಈ ಬಾರಿ ವಿಶಿಷ್ಟವಾಗಿ, ವಿಭಿನ್ನವಾಗಿ ಆಚರಿಸಬೇಕೆಂಬ ಉದ್ದೇಶದೊಂದಿಗೆ ಪ್ರತಿಯೊಂದು ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಾಡಬೇಕೆಂಬ ಆಶಯದೊಂದಿಗೆ ಹರ್ ಘರ್ ತಿರಂಗಾ ಅಭಿಯಾನ ದೇಶಾದಾದ್ಯಂತ ಕೈಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆ.೧೪ರಂದು ರಾತ್ರಿ ೮.೩೦ಕ್ಕೆ ೩೭೫ ಅಡಿ ತಿರಂಗ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ.
    ನಗರದ ಬಿ.ಎಚ್ ರಸ್ತೆ, ಹುತ್ತಾ ಬಸ್ ನಿಲ್ದಾಣದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಲಿದ್ದಾರೆ. ರಾತ್ರಿ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ೭೫ ಮಂದಿ ದೇಶ ಭಕ್ತರಿಂದ ಗೀತ ನಮನ  ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ನುಡಿ ನಮನ ನಡೆಸಿಕೊಡಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಉಪಸ್ಥಿತರಿರುವರು. ರಾತ್ರಿ ೧೨ ಗಂಟೆಗೆ ರಾಷ್ಟ್ರ ಗೀತೆ ನಮನ, ಯೋಗ ನಮನ ನಂತರ ತಾಯಿ ಭಾರತಿಯ ಪಾದ ಪದ್ಮಗಳಿಗೆ ಪುಷ್ಪಾರ್ಚನೆ, ಸಿಡಿಮದ್ದು ಪ್ರದರ್ಶನ, ನಮನ-ವಾದ್ಯ, ನಮನ-ಪ್ರಸಾದ ವಿತರಣೆ ನಡೆಯಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಬಿ.ಎಸ್ ನಾರಾಯಣಪ್ಪ, ವಿ. ಕದಿರೇಶ್, ಎಂ. ಪ್ರಭಾಕರ್, ಮಂಗೋಟೆ ರುದ್ರೇಶ್, ಎಂ.ಎಸ್ ಸುರೇಶಪ್ಪ,  ಕರೀಗೌಡ, ಎಂ. ಮಂಜುನಾಥ್, ಚನ್ನೇಶ್, ಬಿ.ಎಸ್ ಶ್ರೀನಾಥ್, ಕೆ. ಮಂಜುನಾಥ್, ಮಲ್ಲೇಶ್, ಚಂದ್ರು ದೇವರನರಸೀಪುರ, ಅನುಪಮ, ಅನ್ನಪೂರ್ಣ, ಮಂಜುನಾಥ್, ಶಶಿಕಲಾ, ಅನಿತಾ, ಕವಿತಾ ರಾವ್, ರಂಗಸ್ವಾಮಿ, ಅವಿನಾಶ್, ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment