Tuesday, August 23, 2022

ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ : ಮುಂದಿನ ಅವಧಿಗೆ ೩ ಮಂದಿಯಲ್ಲಿ ಪೈಪೋಟಿ

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರಿಗೆ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.  
    ಭದ್ರಾವತಿ, ಆ. ೨೩: ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಅವರು ಒಡಂಬಡಿಕೆಯಂತೆ ೧೦ ತಿಂಗಳ ಅಧಿಕಾರ ಪೂರೈಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
    ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೊದಲ ಹಂತದ ೩೦ ತಿಂಗಳ ಮೀಸಲಾತಿಯನ್ವಯ ತಲಾ ೧೦ ತಿಂಗಳ ಆಡಳಿತ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದೆ. ಈಗಾಗಲೇ ೧೦ ತಿಂಗಳ ಅವಧಿಯನ್ನು ಗೀತಾ ಕೆ.ಜಿ ರಾಜ್‌ಕುಮಾರ್ ಪೂರೈಸಿದ್ದಾರೆ. ೨೦ ತಿಂಗಳು ಬಾಕಿ ಉಳಿದಿದ್ದು, ೨ನೇ ೧೦ ತಿಂಗಳ ಅವಧಿಗೆ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
    ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಈ ಮೂವರ ಇಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಒಬ್ಬರು ಗೌಂಡರ್ ಸಮುದಾಯಕ್ಕೆ ಸೇರಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಯಾರು ಅಧ್ಯಕ್ಷಗಿರಿ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ.  

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಗೋಕುಲಕೃಷ್ಷನ್ ಮುಂದುವರಿಕೆ


ಗೋಕುಲಕೃಷ್ಣನ್
    ಭದ್ರಾವತಿ, ಆ. ೨೩ : ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ನಿವಾಸಿ, ಯುವ ಮುಖಂಡ ಗೋಕುಲಕೃಷ್ಣನ್ ಅವರನ್ನು ಬಿಜೆಪಿ ಪಕ್ಷದ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಸಲಾಗಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಅವರ ಸೂಚನೆ ಮೇರೆಗೆ ಗೋಕುಲಕೃಷ್ಣನ್ ಅವರನ್ನು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಯಲು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಂ.ಬಿ ಹರಿಕೃಷ್ಣ ಆದೇಶಿಸಿದ್ದಾರೆ.
    ಗೋಕುಲಕೃಷ್ಣನ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರನ್ನು ಪಕ್ಷದ ತಾಲೂಕು ಪ್ರಮುಖರು ಅಭಿನಂದಿಸಿದ್ದಾರೆ.

ವಿಧಾನಸಭಾ ಕ್ಷೇತ್ರ : ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ನೇಮಕ

    ಭದ್ರಾವತಿ, ಆ. ೨೩: ಜಾತ್ಯತೀತ ಜನತಾದಳ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಪಕ್ಷದ ವರಿಷ್ಠರ ಆದೇಶದ ಮೇರೆಗೆ  ಪಕ್ಷದ ಮುಖಂಡರಾದ ಶಾರದ ಎಂ.ಜೆ ಅಪ್ಪಾಜಿ ನೇಮಕಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
    ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮಧುಕುಮಾರ್, ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ, ಗ್ರಾಮಂತರ ಘಟಕದ ಅಧ್ಯಕ್ಷರಾಗಿ ಕೆ. ಧರ್ಮಕುಮಾರ, ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ವಿಶಾಲಾಕ್ಷಿ, ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಾರ್ವತಿಬಾಯಿ, ಅಲ್ಪ ಸಂಖ್ಯಾಂತರ ನಗರ ಘಟಕದ ಅಧ್ಯಕ್ಷರಾಗಿ ಮುತುರ್ಜಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಂ.ಎ ಅಜಿತ್, ನಗರ ಘಟಕದ ಕಾರ್ಯಾಧ್ಯಕ್ಷರಾಗಿ ಬಿ.ಸಿ ಉಮೇಶ್, ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷರಾಗಿ ಮೈಲಾರಪ್ಪ, ಪರಿಶಿಷ್ಟ ಜಾತಿ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಶ್ರೀಧರನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ವಕ್ತಾರರಾಗಿ ಎಂ. ರಾಜು ಮತ್ತು ನಗರ ಘಟಕದ ಮಹಿಳಾ ಕಾರ್ಯದರ್ಶಿಯಾಗಿ ಭಾಗ್ಯಮ್ಮ ಅವರನ್ನು ನೇಮಕಗೊಳಿಸಿ ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಜವಾಬ್ದಾರಿ ನಿರ್ವಹಿಸುವಂತೆ ಶಾರದ ಎಂ.ಜೆ ಅಪ್ಪಾಜಿ ಸೂಚಿಸಿದ್ದಾರೆ.


ಕೌಶಲ್ಯಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿ ಮಾತನಾಡಿದರು.
    ಭದ್ರಾವತಿ, ಆ. ೨೩ : ವಿದ್ಯಾರ್ಥಿಗಳಿಗೆ ಕ್ರೀಡೆ ಜೊತೆಗೆ ಅವರಲ್ಲಿನ ಕೌಶಲ್ಯಗಳನ್ನು ಗುರುತಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಮಂಗಳವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
    ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಸಹ ಮುಖ್ಯವಾಗಿದೆ. ಎಲ್ಲರೂ ಇಂದು ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್‌ಗಳಾಗಬೇಕೆಂದು ಬಯಸುತ್ತಾರೆ. ಆದರೆ ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸುವ ಕೆಲಸ ಯಾರು ಸಹ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕೌಶಲ್ಯಗಳನ್ನು ಗುರುತಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದಾಗ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ವ್ಯಕ್ತಪಡಿಸಿದರು.


    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯೆ ಮಂಜುಳಾ ಸುಬ್ಬಣ್ಣ, ಶಿಕ್ಷಣ ಸಂಯೋಜಕ ರವಿಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಸಿ. ಚನ್ನಪ್ಪ, ಶಿವಲಿಂಗೇಗೌಡ, ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕೇಶವ, ದೈಹಿಕ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ, ಕನಕ ವಿದ್ಯಾಸಂಸ್ಥೆ ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಸೆಂಟ್ ಮೇರಿಸ್, ವಿಜಯ, ಎಸ್‌ಎವಿ (ಕಾರೇಹಳ್ಳಿ), ನವಚೇತನ, ಅಕ್ಕಮಹಾದೇವಿ, ಜೆಎನ್‌ಇಎಸ್, ಸೆಂಟ್ ಡೊಮಿನಿಕ್, ಜ್ಞಾನದೀಪಿಕ, ಸ್ವಾಮಿ ವಿವೇಕಾನಂದ, ವಿಶ್ವ ಬಂಧು, ರಾಘವೇಂದ್ರ ಮತ್ತು ವಿಶ್ವೇಶ್ವರಾಯ ಸೇರಿದಂತೆ ಒಟ್ಟು ೧೨ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಚರಣ್‌ಸಿಂಗ್, ಶಿವರಾಜ್, ಲೋಕೇಶ್, ರವಿ, ರಂಗನಾಥ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರುಗಳು, ಸಿಆರ್‌ಪಿಗಳು ಪಾಲ್ಗೊಂಡಿದ್ದರು.

ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜನಪರ ವೇದಿಕೆ ಆಸರೆ

ಪ್ರವೇಶ ಮುಕ್ತಾಯಗೊಂಡರೂ ವಿಶೇಷ ದಾಖಲಾತಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ

ಭದ್ರಾವತಿಯಲ್ಲಿ ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಯಿತು.
    ಭದ್ರಾವತಿ, ಆ. ೨೩: ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನಾಂದಿ ಹಾಡಿದೆ.
    ತಾಲೂಕಿನ ಹುಣಸೇಕಟ್ಟೆ ಗ್ರಾಮದ ಬಡಕುಟುಂಬದ ಕೀರ್ತನಾ ಎಂಬ ಬಾಲಕಿಯೋರ್ವಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದು, ಆದರೂ ಸಹ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾಳೆ.
    ಈಕೆಯ ತಾಯಿ ಒಬ್ಬಳೇ ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಇದರಿಂದಾಗಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈ ನಡುವೆ ಮುಂದಿನ ವಿದ್ಯಾಭ್ಯಾಸಕ್ಕೆ ಕುಟುಂಬದಿಂದಲೂ ಅಸಹಾಯಕತೆ ವ್ಯಕ್ತವಾಗಿದೆ.


    ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡರೂ ಸಹ ಈಕೆಯ ಮುಂದಿನ ಓದಿನ ಕನಸು ನನಸಾಗಿರಲಿಲ್ಲ. ಈ ನಡುವೆ ಈಕೆಯ ನೆರವಿಗೆ ಹುಣಸೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ ಅವರು ಧಾವಿಸಿದ್ದು, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಬಳಿ ಈಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿಶೇಷ ದಾಖಲಾತಿಯಡಿ ಪ್ರಥಮ ವರ್ಷದ ಪ್ರವೇಶಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದರು. ಇದಕ್ಕೆ ಇಲಾಖೆ ಉಪನಿರ್ದೇಶಕರು ಪೂರಕವಾಗಿ ಸ್ಪಂದಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂಬ ಉದ್ದೇಶದಿಂದ ವೇದಿಕೆಯ  ಕಾರ್ಯಕರ್ತರೆಲ್ಲರೂ ಸೇರಿ ನಮ್ಮ ಬಳಿ ಇರುವ ಹಣ ಸಂಗ್ರಹಿಸಿ ಪಾವತಿಸಲಾಗಿದೆ. ವೇದಿಕೆ ಸಾಮಾಜಿಕ ಕಾಳಜಿಯಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ.
- ಪ್ರಾನ್ಸಿಸ್, ಮಾಜಿ ಸದಸ್ಯರು, ನಗರಸಭೆ ಹಾಗು ವೇದಿಕೆ ಮುಖಂಡರು, ಭದ್ರಾವತಿ.

    ಈಕೆಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಗರ್ಲ್ಸ್ ಕಾಲೇಜು)ನಲ್ಲಿ ಪ್ರವೇಶ ಪಡೆಯಲು ಅವಕಾಶ ಲಭಿಸಿದರೂ ಸಹ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು  ಪಠ್ಯ ಪುಸ್ತಕಗಳಿಗಾಗಿ ಎದುರು ನೋಡುವಂತಾಯಿತು. ಈ ನಡುವೆ ಈಕೆಯ ಸಂಕಷ್ಟ ಅರಿತ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾಲೇಜಿಗೆ ತೆರಳಿ ಈಕೆಯ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು  ಪಠ್ಯ ಪುಸ್ತಕಗಳಿಗಾಗಿ ಒಟ್ಟು ೫,೭೦೦ ರು. ಪಾವತಿಸುವ ಮೂಲಕ ಮುಂದಿನ ಶಿಕ್ಷಣಕ್ಕೆ ನೆರವಾಯಿತು.

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕುಟುಂಬಸ್ಥರು ಈಕೆಯ ಶಿಕ್ಷಣವನ್ನು ಮೊಟಕುಗೊಳಿಸಲು ಮುಂದಾಗಿದ್ದರು. ಇದನ್ನು ಅರಿತು ಆಕೆ ಶಿಕ್ಷಣ ಮುಂದುವರೆಸಲು ನೆರವಿಗೆ ಧಾವಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಈಕೆಗೆ ಹೆಚ್ಚಿನ ನೆರವಿನ ಅಗತ್ಯವಿದ್ದು, ಸಂಘ-ಸಂಸ್ಥೆಗಳು, ದಾನಿಗಳನ್ನು ಕೋರಲಾಗಿತ್ತು. ಇದೀಗ ಆಕೆಯ ಕನಸು ನನಸಾಗಿರುವುದು ತುಂಬಾ ಸಂತೋಷದ ವಿಚಾರವಾಗಿದೆ.
                                                                                   - ಅನಿತಾ ಮೇರಿ, ಶಿಕ್ಷಕಿ ಹಾಗು ಸಮಾಜ ಸೇವಕಿ, ಭದ್ರಾವತಿ.

    ಈ ಸಂದರ್ಭದಲ್ಲಿ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್, ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಮುಖಂಡರಾದ ಶರವಣ, ಪ್ರಮೋದ್, ಲಾರೆನ್ಸ್, ಪುರುಷೋತ್ತಮ್, ಮದನ್‌ಕುಮಾರ್, ವಿನಯ್ ಮತ್ತು ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Monday, August 22, 2022

ಶಾರದಮ್ಮ ಚಂದ್ರಗುಂಡಯ್ಯ ನಿಧನ

ಶಾರದಮ್ಮ ಚಂದ್ರಗುಂಡಯ್ಯ
    ಭದ್ರಾವತಿ, ಆ. ೨೨: ನಗರಸಭೆ ವಾರ್ಡ್ ನಂ.೨೦ರ  ಸುರಗಿತೋಪು ನಿವಾಸಿ ಶಾರದಮ್ಮ ಚಂದ್ರಗುಂಡಯ್ಯ(೭೮) ಸೋಮವಾರ ನಿಧನ ಹೊಂದಿದರು.
  ನಾಲ್ಕು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಸಂಸ್ಕಾರ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ ೧೧ ನೆರವೇರಲಿದೆ. ಶಾರದಮ್ಮನವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
    ಶಾಸಕ ಬಿ.ಕೆ.ಸಂಗಮೇಶ್ವರ್, ಪ್ರಮುಖರಾದ ಸಿದ್ದಲಿಂಗಯ್ಯ, ಸುವರ್ಣಮ್ಮ ಹೀರೇಮಠ್, ಟಿ.ಜಿ.ಬಸವರಾಜಯ್ಯ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.

ಕುಂದುಕೊರತೆ, ಇನ್ನಿತರ ಸಭೆಗಳಿಗೆ ಮಾಹಿತಿ ನೀಡಿ

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨೨: ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಈ ವ್ಯಾಪ್ತಿಯ ಕೆಲವೇ ಕೆಲವು ಮುಖಂಡರುಗಳಿಗೆ ಮಾತ್ರ ಸಭೆಯ ಮಾಹಿತಿ ನೀಡಲಾಗುತ್ತಿದೆ. ಉಳಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡದಿರುವುದು ಖಂಡನೀಯ. ಈ ಸಂಬಂಧ ಠಾಣೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸುವ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
    ಮನವಿಯನ್ನು ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಸಂಯುಕ್ತ ಕರ್ನಾಟಕ ಜನಾತದಳ(ಜೆಡಿಯು) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಸಲ್ಲಿಸಿದರು.