ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸಹ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಮತ್ತು ೯೪ಸಿ ಅಡಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಿಂದೂ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೫: ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸಹ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಮತ್ತು ೯೪ಸಿ ಅಡಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಿಂದೂ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಬಗರ್ ಹುಕುಂ ಜಮೀನು ಅಳತೆ ಮಾಡಿ ಸ್ಕೆಚ್ ಮಾಡಿ ಸಾಗುವಳಿ ಚೀಟಿ ನೀಡಿದ್ದು, ಆದರೆ ಇದುವರೆಗೂ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ತಕ್ಷಣ ಪರಿಶೀಲಿಸಿ ಖಾತೆ ಪಹಣಿ ಮ್ಯುಟೇಷನ್ ಮಾಡಿಕೊಡುವುದು.
ತಾಲೂಕಿನಾದ್ಯಂತ ೯೪ಸಿ ಅಡಿಯಲ್ಲಿ ಮನೆಗಳಿಗೆ ಹಕ್ಕು ಪತ್ರ ಕೊಡುವುದಾಗಿ ಸರ್ಕಾರಕ್ಕೆ ಹಣ ಸಂದಾಯ ಮಾಡಿಕೊಂಡು ಇದುವರೆಗೂ ಹಕ್ಕು ಪತ್ರ ನೀಡದೆ ಬಡ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದ್ದು, ತಕ್ಷಣ ಅನ್ಯಾಯ ಸರಿಪಡಿಸುವುದು.
ತಾಲೂಕಿನ ಕೂಡ್ಲಿಗೆರೆ ಹೋಬಳಿ ದೇವರಹಳ್ಳಿ ಅಂಚೆ ಗುಡ್ಡದ ನೇರಳೆಕೆರೆ ಗ್ರಾಮದ ಸರ್ವೆ ನಂ. ೩೪ ಮತ್ತು ೩೫ರಲ್ಲಿ ೨ ಎಕರೆ ಜಮೀನು ಹಿಂದೂ ರುದ್ರಭೂಮಿಗೆ ಮಂಜೂರು ಮಾಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿ ಕೋರಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಹಿಂದೂ ರುದ್ರಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಸಮಿತಿ ತಾಲೂಕು ಸಂಯೋಜಕ ಅಣ್ಣಾದೊರೈ, ಸಂಘಟನಾ ಸಂಯೋಜಕ ಬಸವರಾಜು ಮತ್ತು ರಾಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.