Friday, September 23, 2022

ಸೆ.೨೪ರಂದು ಪೌರಕಾರ್ಮಿಕರ ದಿನಾಚರಣೆ : ಮೆರವಣಿಗೆ


    ಭದ್ರಾವತಿ, ಸೆ. ೨೩: ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಸೆ.೨೪ರಂದು ನಡೆಯಲಿದ್ದು, ಈ ಸಂಬಂಧ ಬೆಳಿಗ್ಗೆ ೯ ಗಂಟೆಗೆ ನಗರದ ರಂಗಪ್ಪ ವೃತ್ತದಿಂದ ಮೆರವಣಿಗೆ ನಡೆಯಲಿದೆ.
    ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್, ಉಪಾಧ್ಯಕ್ಷ ಚನ್ನಪ್ಪ ಹಾಗು ನಗರಸಭಾ ಸದಸ್ಯರು, ಕರ್ನಾಟಕ ರಾಜ್ಯ ಪೌರನೌಕರರ ಪೌರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿರುವ ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ : ಮುಖ್ಯಮಂತ್ರಿ ಚಂದ್ರು

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ  ಎಎಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಆನಂದ್(ಮಾರುತಿ ಮೆಡಿಕಲ್) ಅವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.
    ಭದ್ರಾವತಿ, ಸೆ. ೨೩: ರಾಜ್ಯದಲ್ಲಿರುವ ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ದೂರವಿಟ್ಟು, ಆಮ್ ಆದ್ಮಿ ಪಾರ್ಟಿ ಬೆಂಬಲಿಸುವಂತೆ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
    ಅವರು ನಗರದ ರಂಗಪ್ಪ ವೃತ್ತದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿ ಆನಂದ್(ಮಾರುತಿ ಮೆಡಿಕಲ್) ಅವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ರಾಜ್ಯದಲ್ಲಿ ಪ್ರಮುಖವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿದ್ದು, ನಾನು ಈ ೩ ಪಕ್ಷಗಳ ರಾಜಕೀಯ ಸಿದ್ದಾಂತಗಳನ್ನು ಚನ್ನಾಗಿ ಅರಿತುಕೊಂಡಿದ್ದೇನೆ. ಇವು ಸರ್ವಾಧಿಕಾರಿ ಧೋರಣೆಯೊಂದಿಗೆ ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ ನಡೆಸುತ್ತಿವೆ. ಅಲ್ಲದೆ ಜನರ ಹಿತಾಸಕ್ತಿಗಳನ್ನು ಕಡೆಗಣಿಸಿವೆ. ಸುಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತಿವೆ ಎಂದು ಆರೋಪಿಸಿದರು.
    ಆಮ್ ಆದ್ಮಿ ಪಾರ್ಟಿ ಜನರ ಪಕ್ಷವಾಗಿದೆ. ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿರುವ ದೇಶದ ಏಕೈಕ ಪಕ್ಷ ಇದಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇದಕ್ಕೆ ಉದಾಹರಣೆಯಾಗಿದೆ. ರಾಜ್ಯದ ಜನರು ಜೆಸಿಬಿ ಪಕ್ಷಗಳನ್ನು ತಿರಸ್ಕಾರ ಮಾಡಿ ಆಮ್ ಆದ್ಮಿ ಪಾರ್ಟಿ ಬೆಂಬಲಿಸುವಂತೆ ಮನವಿ ಮಾಡಿದರು.
    ಪಕ್ಷದ ರಾಜ್ಯಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ಪ್ರಸ್ತುತ ಬೆಂಗಳೂರಿನ ಸ್ಥಿತಿ ಚಿಂತಾಜನಕವಾಗಿದೆ. ಕೆರೆಗಳ ಮೇಲೆ, ರಾಜಕಾಲುವೆಗಳ ಮೇಲೆ ಅಕ್ರಮವಾಗಿ ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ ಎದುರಾಗಿರುವ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದಾರೆ. ಮತ್ತೊಂದೆಡೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಡವರು ಬದುಕುವುದು ಅಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯಕ್ಕೆ ಆಶಾಕಿರಣವಾಗಿದೆ ಎಂದರು.
    ರಾಜ್ಯದಲ್ಲಿ ಪರ್ಯಾಯ ರಾಜಕಾರಣಕ್ಕೆ ಎಎಪಿ ನಾಂದಿ ಹಾಡಲಿದೆ. ರಾಜ್ಯದಲ್ಲೆಡೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಗ್ರಾi ಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಭವಿಷ್ಯ ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಅವಕಾಶವಿದೆ ಎಂದರು.
    ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಸ್ಥಳೀಯ ಪ್ರಮುಖರಾದ ಆನಂದ್(ಮೆಡಿಕಲ್), ಎಚ್. ರವಿಕುಮಾರ್, ರೇಷ್ಮಾಬಾನು, ಎ. ಮಸ್ತಾನ್, ಡಿ.ಎಂ ಚಂದ್ರಪ್ಪ, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಪರಮೇಶ್ವರನಾಯ್ಕ್, ಭಾಗ್ಯಮ್ಮ, ಜೋಸೆಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೮ ಮತಗಳ ಅಂತರದಿಂದ ಅನುಸುಧಾ ಮೋಹನ್ ಪಳನಿ ಗೆಲುವು : ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆ

ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ. ೧೩ರ ಸದಸ್ಯೆ ಅನುಸುಧಾ ಮೋಹನ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾದರು.    
    ಭದ್ರಾವತಿ, ಸೆ.೨೩: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ. ೧೩ರ ಸದಸ್ಯೆ ಅನುಸುಧಾ ಮೋಹನ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾದರು.
    ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅನುಸುಧಾ ಮೋಹನ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೨೧ರ ವಿಜಯ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೪ರ ಅನುಪಮ ಚನ್ನೇಶ್ ಸ್ಪರ್ಧಿಸಿದ್ದರು. ೩೫ ನಗರಸಭಾ ಸದಸ್ಯರು, ೧ ವಿಧಾನಸಭಾ ಸದಸ್ಯರು ಮತ್ತು ೧ ಲೋಕಸಭಾ ಸದಸ್ಯರು ಒಟ್ಟು ೩೭ ಮತಗಳಿದ್ದು, ಈ ಪೈಕಿ ಲೋಕಸಭಾ ಸದಸ್ಯರು ಮತ ಚಲಾಯಿಸಿಲ್ಲ. ಉಳಿದ ೩೬ ಮತಗಳ ಪೈಕಿ ಅನುಸುಧಾ ಮೋಹನ್ ಪಳನಿ ೨೦, ವಿಜಯ ೧೨ ಹಾಗು ಅನುಪಮ ಚನ್ನೇಶ್ ೪ ಮತಗಳನ್ನು ಪಡೆದುಕೊಂಡರು. ಒಟ್ಟು ೮ ಮತಗಳ ಅಂತರದಿಂದ ಅನುಸುಧಾ ಮೋಹನ್ ಪಳನಿ ಆಯ್ಕೆಯಾಗಿದ್ದಾರೆ.  
    ತಮಿಳು ವನ್ನಿಯರ್ ಗೌಂಡರ್ ಸಮುದಾಯಕ್ಕೆ ಸೇರಿದ ಅನುಸುಧಾ ಮೊದಲ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿದ್ದಾರೆ. ಇವರ ಮಾವ ಕೆ. ಪಳನಿ ಅವರು ಸುಮಾರು ೪ ಬಾರಿ ಪುರಸಭಾ ಸದಸ್ಯರಾಗಿದ್ದು, ಇವರ ರಾಜಕೀಯ ಅನುಭವ ಅನುಸುಧಾ ಅವರಿಗೆ ಮಾರ್ಗದರ್ಶನವಾಗಿದೆ.
    ವನ್ನಿಯರ್‌ಗೆ ಪ್ರತಿಸ್ಪರ್ಧಿ ಮೊದಲಿಯಾರ್:
    ತಮಿಳು ಜನಾಂಗದ ಒಳಪಂಗಡಗಳಾಗಿರುವ ವನ್ನಿಯರ್ ಗೌಂಡರ್ ಮತ್ತು ಆಗಮುಡಿ ಮೊದಲಿಯಾರ್ ಸಮಾಜದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುವುದು ವಿಶೇಷವಾಗಿತ್ತು. ಅನುಸುಧಾ ವನ್ನಿಯರ್ ಗೌಂಡರ್ ಸಮುದಾಯಕ್ಕೆ ಸೇರಿದ್ದು, ಇವರ ಪ್ರತಿಸ್ಪರ್ಧಿ ವಿಜಯ ಆಗಮುಡಿ ಮೊದಲಿಯಾರ್ ಸಮುದಾಯಕ್ಕೆ ಸೇರಿದ್ದಾರೆ.
    ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೦೪ ಮತ್ತು ಪಕ್ಷೇತರ-೦೧ ಸ್ಥಾನ ಹೊಂದಿದೆ. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡೇಗೌಡರ್ ಕಾರ್ಯ ನಿರ್ವಹಿಸಿದರು. ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.


    ನಾಡಹಬ್ಬ ದಸರಾಗೆ ಹೊಸ ಅಧ್ಯಕ್ಷರು :
    ನಗರಸಭೆ ವತಿಯಿಂದ ಸೆ.೨೬ರಿಂದ ನಾಡಹಬ್ಬ ದಸರಾ ಆಚರಣೆ ನಡೆಯಲಿದ್ದು, ಉಪಾಧ್ಯಕ್ಷರಾದ ಚನ್ನಪ್ಪ ಅವರು ಸುಮಾರು ೧ ತಿಂಗಳಿನಿಂದ ಪ್ರಭಾರ ಅಧ್ಯಕ್ಷರಾಗಿದ್ದರು. ಇದೀಗ ನಾಡಹಬ್ಬ ದಸರಾ ಆಚರಣೆ ನೂತನ ಅಧ್ಯಕ್ಷೆ ಅನುಸುಧಾ ಅವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು ೧೦ ದಿನಗಳ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ.
    ನೂತನ ಅಧ್ಯಕ್ಷರಿಗೆ ಶಾಸಕ ಬಿ.ಕೆ ಸಂಗಮೇಶ್ವರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಹಾಗು ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜದ ರಾಜ್ಯಾಧ್ಯಕ್ಷ ನಂದಕುಮಾರ್, ತಾಲೂಕು ಅಧ್ಯಕ್ಷ ಮಣಿ ಎಎನ್‌ಎಸ್, ತಮಿಳು ಸಮಾಜದ ತಾಲೂಕು ಅಧ್ಯಕ್ಷ ರವಿ, ಆಗಮುಡಿ ಮೊದಲಿಯಾರ್ ಸಮಾಜದ ಅಧ್ಯಕ್ಷ ಕಣ್ಣಪ್ಪ, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಯುವ ಘಟಕದ ಅಧ್ಯಕ್ಷರಾದ ಅಫ್ತಾಬ್ ಅಹಮದ್, ವಿನೋದ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಅಭಿನಂದಿಸಿದರು.
    ಅನುಸುಧಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನಗರಸಭೆ ಮುಂಭಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ನಂತರ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.


ನಂದಕುಮಾರ್, ರಾಜ್ಯಾಧ್ಯಕ್ಷರು, ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜ.

ಕ್ಷೇತ್ರದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ವನ್ನಿಯರ್ ಗೌಂಡರ್ ಸಮಾಜವನ್ನು ಗುರುತಿಸಿ ರಾಜಕೀಯದಲ್ಲಿ ಅವರಿಗೂ ಸೂಕ್ತ ಸ್ಥಾನಮಾನ ನೀಡಿರುವುದು ಸಂತಸ ಸಂಗತಿಯಾಗಿದೆ. ಗೌಂಡರ್ ಸಮಾಜ ಎಲ್ಲಾ ಸಮುದಾಯಗಳೊಂದಿಗೂ ಸೌಹಾರ್ದತೆ ಕಂಡುಕೊಂಡಿದ್ದು, ಇಂತಹ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
 - ನಂದಕುಮಾರ್, ರಾಜ್ಯಾಧ್ಯಕ್ಷರು, ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜ.

Thursday, September 22, 2022

ಹಳೇದ್ವೇಷದ ಹಿನ್ನಲೆಯಲ್ಲಿ ಚಾಕುವಿನಿಂದ ಹಲ್ಲೆ


    ಭದ್ರಾವತಿ, ಸೆ. ೨೨: ಹಳೇದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಕಳೆದ ೩ ದಿನಗಳ ಹಿಂದೆ ನಡೆದಿದೆ.
    ಮಹೇಶ ಮತ್ತು ಮನೋಜ್ ಇಬ್ಬರು ಸಹೋದರರು ಮದ್ಯ ಸೇವನೆ ಮಾಡಿ ಹಳೇದ್ವೇಷದ ಹಿನ್ನಲೆಯಲ್ಲಿ ಕಿರಣ್ ಎಂಬಾತನ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೈ ಮತ್ತು ತೊಡೆಗೆ ಗಾಯವಾಗಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

ಹಳ್ಳಿಗಾಡಿನ ಕಲೆ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಮಾದಾಪುರ ಕಲಾವಿದರು ಯಶಸ್ವಿ : ವೀರೇಶ್ ಆಲುವಳ್ಳಿ

ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರಿಗೆ ಸನ್ಮಾನ

ಹೊಸನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶ್ರೀ ಶನಿಪರಮೇಶ್ವರ ಯುವಕ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಡಾ. ಎಂ.ಆರ್ ರೇವಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಸೆ. ೨೨ : ಹಳ್ಳಿಗಾಡಿನ ಕಲೆ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹೊಸನಗರ ತಾಲೂಕಿನ ಮಾದಾಪುರ ಕಲಾವಿದರು ಯಶಸ್ವಿಯಾಗಿದ್ದಾರೆಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಹೇಳಿದರು.
    ಅವರು ಮಾದಾಪುರ ಗ್ರಾಮದಲ್ಲಿ ಶ್ರೀ ಶನಿಪರಮೇಶ್ವರ ಯುವಕ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಡಾ. ಎಂ.ಆರ್ ರೇವಣಪ್ಪ ಅವರಿಗೆ ಸನ್ಮಾನ, ಚಲನಚಿತ್ರ ನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಳ್ಳಿಗಾಡಿನ ಕಲೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಲ್ಲಿ ಮಾದಾಪುರ ಕಲಾವಿದರ ಶ್ರಮ ಹೆಚ್ಚಿನದ್ದಾಗಿದ್ದು, ಇಲ್ಲಿನ ಕಲಾವಿದರು ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಂಜುನಾಥ ಬ್ಯಾಣದ ಮಾತನಾಡಿ, ಶಿಕ್ಷಣವೇ ಶಕ್ತಿ, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಸಾರ್ಥಕ ಬದುಕಿಗೆ ಪ್ರೇರೇಪಿಸಿ ಸಾಧನೆ ಮಾರ್ಗದಲ್ಲಿ ಸಾಗಲು ಕಾರಣಕರ್ತರಾಗಬೇಕೆಂದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಂ.ಆರ್ ರೇವಣಪ್ಪ, ಕುಗ್ರಾಮವಾಗಿರುವ ಮಾದಾಪುರ ಕಲಾವಿದರ ಕಣಜವಾಗಿದ್ದು, ನಮ್ಮ ಕುಟುಂಬದವರು, ಗ್ರಾಮಸ್ಥರು, ಸಹೋದ್ಯೋಗಿಗಳು, ಕಲಾವಿದರು, ಹಿರಿಯುರು ನೀಡಿದ ಸಹಕಾರದಿಂದಾಗಿ ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾನು ಗುರುತಿಸಿಕೊಳ್ಳಲು ಕಾರಣವಾಗಿದೆ. ನನ್ನ ಸಾಧನೆಯನ್ನು ಗುರುತಿಸಿ ಹುಟ್ಟೂರಲ್ಲಿ ಸನ್ಮಾನ ನೆರವೇರಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ ಎಂದರು.
    ಡಾ. ಎಂ.ಆರ್ ರೇವಣಪ್ಪ ಅವರ ತಾಯಿ ಭರಮಮ್ಮ, ಹಿರಿಯ ಕಲಾವಿದರಾದ ಎಂ.ಆರ್ ಲೋಕಪ್ಪ, ಎಂ.ಆರ್ ಗಿರೀಶ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮದ್ ಷರೀಫ್, ಕೃಷ್ಣೋಜಿರಾವ್, ರವಿ, ರಮ್ಯಾ, ಧರ್ಮರಾಜ್, ಈರಪ್ಪ, ಚಂದ್ರಪ್ಪ ಕೊರಟೀಕೆರೆ, ಆರ್. ಪ್ರಕಾಶ್, ಎಂ.ಎಂ ಧರ್ಮಪ್ಪ, ದೇವೇಂದ್ರ, ಇಮಾಮ್,   ಸೋಮಶೇಖರ್, ಗೋಮೇಧ, ನಾಗರಾಜು, ದೇವರಾಜು, ಮಂಜುನಾಥ್, ಮೈಲಾರಿ, ಲಕ್ಷ್ಮಣಪ್ಪ ಹಾಗೂ ಶನಿ ಪರಮೇಶ್ವರ ಯುವಕ  ಸಂಘದ ಹರೀಶ್, ಪ್ರೇಮ್ ಕುಮಾರ್, ಮಂಜು, ಚಿನ್ನು, ವಿನಿ, ವೆಂಕಟೇಶ್, ಮನು, ದೇವರಾಜ್, ಪವನ್ ಹೇಮಂತ್, ತ್ಯಾಗ ಹಾಗು ಮಾದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Wednesday, September 21, 2022

ಭದ್ರಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಇಎಸ್ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರು ಭದ್ರಾ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಸೆ. ೨೧ : ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರು ಭದ್ರಾ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಮೊಹಮ್ಮದ್ ಸೈಯದ್ ಅಲಿ ಹಾಗೂ ಭಾವನ ವೈಯಕ್ತಿಕ ಪ್ರಶಸ್ತಿ ಹಾಗು ಬಾಲಕ-ಬಾಲಕಿಯರು ವಿವಿಧ ಸ್ಪರ್ಧೆಗಳಲ್ಲಿ ತಂಡ ಪ್ರಶಸ್ತಿ ಹಾಗು ೨೦೨೨-೨೩ನೇ ಸಾಲಿನ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರಾದ ರವಿ, ರೇವತಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಅಸಂಘಟಿತ ಕಾರ್ಮಿಕರು ಸರ್ಕಾರಿ ಸೌಲಭ್ಯ ಪಡೆಯಲು ಸಂಘಟಿತರಾಗಿ : ಸುಂದರ್ ಬಾಬು

ಭದ್ರಾವತಿ ರೋಟರಿಕ್ಲಬ್ ಸಭಾಂಗಣದಲ್ಲಿ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ ಹಾಗು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾರ್ಮಿಕ ಇಲಾಖೆ ವತಿಯಿಂದ ನಗರದ ಬ್ಯೂಟಿಷಿಯನ್ ಮಾಲೀಕರು ಹಾಗು ಕೆಲಸಗಾರರಿಗೆ  ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೨೧: ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕೆಂದು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
    ಅವರು ರೋಟರಿಕ್ಲಬ್ ಸಭಾಂಗಣದಲ್ಲಿ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ ಹಾಗು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾರ್ಮಿಕ ಇಲಾಖೆ ವತಿಯಿಂದ ನಗರದ ಬ್ಯೂಟಿಷಿಯನ್ ಮಾಲೀಕರು ಹಾಗು ಕೆಲಸಗಾರರಿಗೆ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಅಸಂಘಟಿತ ಕಾರ್ಮಿಕರು ಸಂಘಟಿತರಾಗಲು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಬ್ಯೂಟಿಷಿಯನ್ ಕೆಲಸಗಾರರನ್ನು ಸಹ ಸರ್ಕಾರ ಅಸಂಘಟಿತ ಕಾರ್ಮಿಕರೆಂದು ಗುರುತಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಬಲವಾದ ಸಂಘಟನೆ ರೂಪುಗೊಳ್ಳಬೇಕೆಂದರು.
    ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ, ಕಾರ್ಯದರ್ಶಿ ಶಿವಕುಮಾರ್, ಪ್ರಮುಖರಾದ ಪದ್ಮಾವತಿ, ಕವಿತ ಸುರೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳಾದ ಕವಿತ, ಸುಮಿತ್ರ, ಶಾರದ, ಶಶಿ, ನೇತ್ರ, ಸವಿತಾ, ಆರತಿ, ವಿಜಯ್ ಸೇರಿದಂತೆ ಬ್ಯೂಟಿಷಿಯನ್ ಮಾಲೀಕರು, ಕೆಲಸಗಾರರು ಪಾಲ್ಗೊಂಡಿದ್ದರು.