Monday, October 3, 2022

ಭಕ್ತರ ಗಮನ ಸೆಳೆದ ಶ್ರೀ ಬನಶಂಕರಿ ಅಮ್ಮನವರ ಮಹಿಷಾಸುರ ಮರ್ದಿನಿ ಅಲಂಕಾರ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ಪ್ರತಿದಿನ ವಿವಿಧ ಅಲಂಕಾರ ಕೈಗೊಳ್ಳಲಾಗಿದ್ದು, ಸೋಮವಾರ ಮಹಿಷಾಸುರ ಮರ್ದಿನಿ ಅಲಂಕಾರ ಭಕ್ತರ ಗಮನ ಸೆಳೆಯಿತು.
    ಭದ್ರಾವತಿ, ಅ. ೩: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ಪ್ರತಿದಿನ ವಿವಿಧ ಅಲಂಕಾರ ಕೈಗೊಳ್ಳಲಾಗಿದ್ದು, ಸೋಮವಾರ ಮಹಿಷಾಸುರ ಮರ್ದಿನಿ ಅಲಂಕಾರ ಭಕ್ತರ ಗಮನ ಸೆಳೆಯಿತು.
    ಅಮ್ಮನವರಿಗೆ ಗಜಲಕ್ಷ್ಮಿ, ಸ್ಕಂದ ಮಾತೇ, ರಾಜರಾಜೇಶ್ವರಿ, ಧನಲಕ್ಷ್ಮೀ, ಶಾಖಾಂಬರಿ, ಸಪ್ತಮಿ ಸರಸ್ವತಿ ಮತ್ತು ಮಹಿಷಾಸುರ ಮರ್ದಿನಿ ಅಲಂಕಾರಗಳನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಂದು ಅಲಂಕಾರ ಸಹ ಭಕ್ತರ ಮನಸೂರೆಗೊಂಡಿತು. ಅಲ್ಲದೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡು ಅಮ್ಮನವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ನಾಮಕರಣ ಹಾಗು ಹೆಚ್ಚುವರಿ ನಾಮಕರಣ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಸೇವಾಕರ್ತರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು.

ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಮಕ್ಕಳ ದಸರಾ


ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಪುಟಾಣಿ ಮಗುವೊಂದು ಛತ್ರಪತಿ ಶಿವಾಜಿ ಮಹಾರಾಜರ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆಯಿತು.
    ಭದ್ರಾವತಿ, ಅ. ೩: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
    ಚಿಣ್ಣರ ಸಾಂಸ್ಕೃತಿಕ ಸಿರಿ ಹೆಸರಿನಲ್ಲಿ ಕನಕಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ, ಏಕ ಪಾತ್ರಾಭಿನಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ಜಾನಪದ ಕಲಾವಿದರಿಂದ ಗೀಗೀ ಪದ ಸಹ ನಡೆಯಿತು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಂದ ಗೀಗೀ ಪದ ನಡೆಯಿತು.

ಕಾಣೆಯಾಗಿದ್ದ ಯುವಕನ ಶವ ಭದ್ರಾ ನದಿಯಲ್ಲಿ ಪತ್ತೆ: ಹತ್ಯೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು

ಭದ್ರಾವತಿಯಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಜಮೀರ್ ಎಂಬ ಯುವಕನ ಶವ ಸೋಮವಾರ ಭದ್ರಾ ನದಿಯಲ್ಲಿ ಪತ್ತೆಯಾಗಿದ್ದು, ಇದು ಹತ್ಯೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ನಡುವೆ ಆರೋಪಿಗಳನ್ನು ತತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ರಂಗಪ್ಪ ವೃತ್ತ ಹಾಗೂ ಹೊಸಮನೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆನಡೆಸಾಯಿತು.
    ಭದ್ರಾವತಿ, ಅ. ೩: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಜಮೀರ್ ಎಂಬ ಯುವಕನ ಶವ ಸೋಮವಾರ ಭದ್ರಾ ನದಿಯಲ್ಲಿ ಪತ್ತೆಯಾಗಿದ್ದು, ಇದು ಹತ್ಯೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಟಿವಿ ಅಂಗಡಿಯೊಂದರಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದ ಜಮೀರ್ ಟಿವಿ ರಿಪೇರಿ ಮಾಡಲು ತೆರಳಿದ್ದು, ಎರಡು ದಿನಗಳ ಹಿಂದೆ ಕಾಣೆಯಾಗಿದ್ದ.  ತರೀಕರೆ ರಸ್ತೆಯ ಅಯ್ಯಪ್ಪ ದೇವಾಲಯದ ಹಿಂಭಾಗದ ಭದ್ರಾ ನದಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಹತ್ಯೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಸಮನೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀರ್ ಮೃತದೇಹವನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
    ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ:
    ಘಟನೆ ಹಿನ್ನೆಲೆಯಲ್ಲಿ ನೂರಾರು ಮಂದಿ ರಂಗಪ್ಪ ವೃತ್ತ ಹಾಗೂ ಹೊಸಮನೆ ಪೊಲೀಸ್ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದು, ಜಮೀರ್ ಸಾವಿಗೆ ನ್ಯಾಯ ಒದಗಿಸಬೇಕು. ಆರೋಪಿಗಳನ್ನು ತತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲ ಮಹಿಳಾ ಸಂಶೋಧಕಿ

ಡಾ. ಶೃತಿಹರ್ಷಾರಿಗೆ ಎಮರಿಟಸ್ ಪ್ರೊಫೆಸರ್ ಡಾ. ವಿಜಯದೇವಿ ಅಭಿನಂದನೆ



ಗಣಕ ವಿಜ್ಞಾನ(ಕಂಪ್ಯೂಟರ್ ಸೈನ್ಸ್)ದಲ್ಲಿ ಸ್ನಾತಕೋತ್ತರ ಪದವಿ ಪಡೆದ ಭದ್ರಾವತಿ ನಗರದ ಮೊದಲ ಮಹಿಳಾ ಸಂಶೋಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಶೃತಿಹರ್ಷಾ ಅವರನ್ನು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಮರಿಟಸ್ ಪ್ರೊಫೆಸರ್ ಡಾ. ವಿಜಯದೇವಿ ಅವರು ಸೋಮವಾರ ಸನ್ಮಾನಿಸಿ ಅಭಿನಂದಿಸಲಾಯಿತು.  
    ಭದ್ರಾವತಿ, ಅ. ೩ : ಗಣಕ ವಿಜ್ಞಾನ(ಕಂಪ್ಯೂಟರ್ ಸೈನ್ಸ್)ದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಗರದ ಮೊದಲ ಮಹಿಳಾ ಸಂಶೋಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಶೃತಿಹರ್ಷಾ ಅವರನ್ನು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಮರಿಟಸ್ ಪ್ರೊಫೆಸರ್ ಡಾ. ವಿಜಯದೇವಿ ಅವರು ಸೋಮವಾರ ಸನ್ಮಾನಿಸಿ ಅಭಿನಂದಿಸಲಾಯಿತು.  
    ನಗರದಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಸಂಶೋಧನೆ ಮಾಡಿರುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗಣಕ ವಿಜ್ಞಾನದಲ್ಲಿ ಸಂಶೋಧನೆ ಮಾಡಿರುವುದು ಇದೆ ಮೊದಲು. ಈ ಹಿನ್ನಲೆಯಲ್ಲಿ ನಗರಕ್ಕೆ ಕೀರ್ತಿ ತಂದಿರುವ ಡಾ. ಶೃತಿಹರ್ಷಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಗುತ್ತಿದೆ ಎಂದರು.
    ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ನ್ಯಾಯವಾದಿ ಆರ್.ಎಸ್ ಶೋಭಾ, ಪತ್ರಕರ್ತ ಅನಂತಕುಮಾರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಿಕಾಂಬ ವಿರುಪಾಕ್ಷಪ್ಪ, ರೇಖಾ ಕೆಂಪರಾಜ್ ಹಾಗು ಡಾ. ಶೃತಿಹರ್ಷಾ ದಂಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, October 2, 2022

ಸುರಕ್ಷಾ ವೃದ್ಧಾಶ್ರಮ-ಅನಾಥಶ್ರಮದಲ್ಲಿ ಮಹಾತ್ಮಗಾಂಧಿ ಜಯಂತಿ


ಸುರಕ್ಷಾ ಸೇವಾ ಟ್ರಸ್ಟ್ ವತಿಯಿಂದ ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಭಾನುವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
    ಭದ್ರಾವತಿ, ಅ. ೨ : ಸುರಕ್ಷಾ ಸೇವಾ ಟ್ರಸ್ಟ್ ವತಿಯಿಂದ ನಗರಸಭೆ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಭಾನುವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
  ಕಾರ್ಯಕ್ರಮದಲ್ಲಿ ಸುರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ರವರು ಮಾತನಾಡಿ, ಹಿರಿಯರನ್ನು ಗೌರವಿಸಿ ಮನೆಯಿಂದ ಹೊರಗೆ ಹಾಕಬೇಡಿ. ವೃದ್ಧಾಪ್ಯದಲ್ಲಿ ಹೆಚ್ಚಿನ ಆರೈಕೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಗಮನ ಹರಿಸಿ. ಸಮಾಜದಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಬಲೀಕರಣಗೊಳ್ಳಬೇಕು ಎಂದರು.
     ಸುರಕ್ಷಾ ವೃದ್ಧಾಶ್ರಮ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಪ್ರಶಾಂತ್, ಟ್ರಸ್ಟಿ ಅನಿತಾ ಆರ್. ಗಿರಿ, ಮಂಜುಳಮ್ಮ. ಪುನೀತ್. ಭಾಗ್ಯ, ಮಂಜುಳಾ ಸೇರಿದಂತೆ ವೃದ್ಧಾಶ್ರಮದ ವೃದ್ಧರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಎಪಿ ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ವಿಐಎಸ್‌ಎಲ್, ಎಂಪಿಎಂ ಅಭಿವೃದ್ಧಿ : ಮಾರುತಿ ಮೆಡಿಕಲ್ ಆನಂದ್

ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಬಿಪಿಎಲ್ ಸಂಘಟನೆಯ ಹಲವು ಮುಖಂಡರು ಸೇರ್ಪಡೆಗೊಂಡರು. ಪಕ್ಷದ ಮಾರುತಿ ಮೆಡಿಕಲ್ ಆನಂದ್, ಎಚ್,ರವಿಕುಮಾರ್, ಬಿ.ಕೆ.ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಅ. ೨: ಕೇಂದ್ರ ಹಾಗು ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಹಾಗು ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ಧಿಯಾಗಲಿವೆ ಎಂದು ಪಕ್ಷದ ವಿಧಾನಸಭಾ ಆಕಾಂಕ್ಷಿ ಅಭ್ಯರ್ಥಿ ಮಾರುತಿ ಮೆಡಿಕಲ್ ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.  
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ೩ ತಿಂಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಬೇಕಾಗಿರುವ ೨ ಸಾವಿರ ಕೋಟಿ ಬಂಡವಾಳ ತೊಡಗಿಸುವುದರೊಂದಿಗೆ ಹಾಗು ಮುಚ್ಚಿರುವ ಎಂಪಿಎಂ ಸಕ್ಕರೆ ಮತ್ತು ಕಾಗದ ಕಾರ್ಖಾನೆಗಳು ಪುನರಾರಂಭಗೊಳ್ಳುವ ವಿಶ್ವಾಸವಿದೆ ಎಂದರು.
    ಈ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಸಾಕಷ್ಟು ಭ್ರಷ್ಟಾಚಾರ ನಡೆಸಿವೆ. ಇದರಿಂದಾಗಿ ಬೇಸತ್ತಿರುವ ಜನರು ಪರಿವರ್ತನೆ ಬಯಸುತ್ತಿದ್ದಾರೆ. ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪ್ರಧಾನಿಯಾಗುವುದು ಖಚಿತವಾಗಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಯಾಗುವ ಮೂಲಕ ಆಪ್ ದ್ವಜ ಹಾರಾಡಲಿದೆ ಎಂದರು.
    ತಾಲೂಕಿನಾದ್ಯಂತ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯನ್ನು ಆಲಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ನಗರಸಭೆ ೩೫ ವಾರ್ಡ್ ವ್ಯಾಪ್ತಿಯಲ್ಲಿಯೂ ಅಭಿಯಾನ ಆರಂಭಿಸಲಾಗುವುದು. ಈಗಾಗಲೆ ೬೭ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು, ೬೦೦ ಮಂದಿ ಸದಸ್ಯತ್ವ ಮಾಡಲಾಗಿದೆ. ೧೫ ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.
    ಭದ್ರಾವತಿ ಪೀಪಲ್ಸ್ ಲಿಬರೇಷನ್(ಬಿಪಿಎಲ್) ಸಂಘಟನೆ ಪದಾಧಿಕಾರಿಗಳ ಸೇರ್ಪಡೆ:
 ಆಮ್ ಆದ್ಮಿ ಪಾರ್ಟಿ ತತ್ವ, ಸಿದ್ದಾಂತಗಳಿಂದ ಪ್ರೇರಣೆಗೊಂಡು ಭದ್ರಾವತಿ ಪೀಪಲ್ಸ್ ಲಿಬರೇಷನ್(ಬಿಪಿಎಲ್) ಸಂಘಟನೆ ಪದಾಧಿಕಾರಿಗಳಾದ ಜಗದೀಶ್, ಶ್ಯಾಮ್, ಮುರಳಿಕೃಷ್ಣ, ಲೋಕೇಶ್, ರಾಜು ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡರು.
    ಪಕ್ಷದ ಪ್ರಮುಖರಾದ ಎಚ್. ರವಿಕುಮಾರ್, ಬಿ.ಕೆ ರಮೇಶ್,  ಸಂಪತ್, ವೆಂಕಟೇಶ್, ಶೌಕತ್ ಅಲಿ, ಇಸ್ಮಾಯಿಲ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವ

ಭಕ್ತರ ಮನಸೆಳೆದ ಅಮ್ಮನವರ ಲಕ್ಷ್ಮಿ ಅಲಂಕಾರ  

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿತ್ತು. 
    ಭದ್ರಾವತಿ, ಅ. ೨: ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಮನಸೂರೆಗೊಂಡಿತು.
    ಶರನ್ನವರಾತ್ರಿ ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕಾಮಾಕ್ಷಿ, ವಿಶಾಲಾಕ್ಷಿ, ಮೀನಾಕ್ಷಿ, ಬನಶಂಕರಿ, ಲಕ್ಷ್ಮಿ, ಅನ್ನಪೂರ್ಣೇಶ್ವರಿ ಹಾಗು ಸರಸ್ವತಿ ಅಲಂಕಾರ ಕೈಗೊಳ್ಳಲಾಗಿತ್ತು.
    ಪ್ರತಿದಿನ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಸಂಜೆ ೬.೩೦ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ ನಂತರ ಭಜನೆ, ರಾತ್ರಿ ೮.೩೦ಕ್ಕೆ ಮಹಾಮಂಗಳಾರತಿ ನಂತರ ವಿತರಣೆ ನಡೆಯಿತು. ಅಲ್ಲದೆ ಗೊಂಬೆ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಗೊಂಬೆ ಪ್ರದರ್ಶನ ಭಕ್ತರ ಗಮನ ಸೆಳೆಯಿತು. ದೇವಸ್ಥಾನ ಅರ್ಚಕ ಪ್ರದೀಪ್‌ರವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಮನಸೂರೆಗೊಂಡಿತು.