ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಬಿಪಿಎಲ್ ಸಂಘಟನೆಯ ಹಲವು ಮುಖಂಡರು ಸೇರ್ಪಡೆಗೊಂಡರು. ಪಕ್ಷದ ಮಾರುತಿ ಮೆಡಿಕಲ್ ಆನಂದ್, ಎಚ್,ರವಿಕುಮಾರ್, ಬಿ.ಕೆ.ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಅ. ೨: ಕೇಂದ್ರ ಹಾಗು ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಹಾಗು ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ಧಿಯಾಗಲಿವೆ ಎಂದು ಪಕ್ಷದ ವಿಧಾನಸಭಾ ಆಕಾಂಕ್ಷಿ ಅಭ್ಯರ್ಥಿ ಮಾರುತಿ ಮೆಡಿಕಲ್ ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ೩ ತಿಂಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಬೇಕಾಗಿರುವ ೨ ಸಾವಿರ ಕೋಟಿ ಬಂಡವಾಳ ತೊಡಗಿಸುವುದರೊಂದಿಗೆ ಹಾಗು ಮುಚ್ಚಿರುವ ಎಂಪಿಎಂ ಸಕ್ಕರೆ ಮತ್ತು ಕಾಗದ ಕಾರ್ಖಾನೆಗಳು ಪುನರಾರಂಭಗೊಳ್ಳುವ ವಿಶ್ವಾಸವಿದೆ ಎಂದರು.
ಈ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಸಾಕಷ್ಟು ಭ್ರಷ್ಟಾಚಾರ ನಡೆಸಿವೆ. ಇದರಿಂದಾಗಿ ಬೇಸತ್ತಿರುವ ಜನರು ಪರಿವರ್ತನೆ ಬಯಸುತ್ತಿದ್ದಾರೆ. ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪ್ರಧಾನಿಯಾಗುವುದು ಖಚಿತವಾಗಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಯಾಗುವ ಮೂಲಕ ಆಪ್ ದ್ವಜ ಹಾರಾಡಲಿದೆ ಎಂದರು.
ತಾಲೂಕಿನಾದ್ಯಂತ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯನ್ನು ಆಲಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ನಗರಸಭೆ ೩೫ ವಾರ್ಡ್ ವ್ಯಾಪ್ತಿಯಲ್ಲಿಯೂ ಅಭಿಯಾನ ಆರಂಭಿಸಲಾಗುವುದು. ಈಗಾಗಲೆ ೬೭ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು, ೬೦೦ ಮಂದಿ ಸದಸ್ಯತ್ವ ಮಾಡಲಾಗಿದೆ. ೧೫ ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.
ಭದ್ರಾವತಿ ಪೀಪಲ್ಸ್ ಲಿಬರೇಷನ್(ಬಿಪಿಎಲ್) ಸಂಘಟನೆ ಪದಾಧಿಕಾರಿಗಳ ಸೇರ್ಪಡೆ:
ಆಮ್ ಆದ್ಮಿ ಪಾರ್ಟಿ ತತ್ವ, ಸಿದ್ದಾಂತಗಳಿಂದ ಪ್ರೇರಣೆಗೊಂಡು ಭದ್ರಾವತಿ ಪೀಪಲ್ಸ್ ಲಿಬರೇಷನ್(ಬಿಪಿಎಲ್) ಸಂಘಟನೆ ಪದಾಧಿಕಾರಿಗಳಾದ ಜಗದೀಶ್, ಶ್ಯಾಮ್, ಮುರಳಿಕೃಷ್ಣ, ಲೋಕೇಶ್, ರಾಜು ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಪ್ರಮುಖರಾದ ಎಚ್. ರವಿಕುಮಾರ್, ಬಿ.ಕೆ ರಮೇಶ್, ಸಂಪತ್, ವೆಂಕಟೇಶ್, ಶೌಕತ್ ಅಲಿ, ಇಸ್ಮಾಯಿಲ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment