Sunday, October 23, 2022

ಹಕ್ಕುಪತ್ರ ವಿತರಣೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಿ ತುರ್ತು ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಭದ್ರಾವತಿಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳ ಪರವಾಗಿ ಹೋರಾಟ ಪ್ರಾರಂಭಿಸಿ ೪೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳ ದಿನಾಚರಣೆ ಹಾಗು ಅಹಿಂದ ವರ್ಗಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರಕವಾಗಿ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಆಗ್ರಹಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಗಿದೆ.

    ಭದ್ರಾವತಿ, ಅ.  ೨೩ : ಕೊಳಚೆ ಪ್ರದೇಶದ ನಿವಾಸಿಗಳ ಪರವಾಗಿ ಹೋರಾಟ ಪ್ರಾರಂಭಿಸಿ ೪೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳ ದಿನಾಚರಣೆ ಹಾಗು ಅಹಿಂದ ವರ್ಗಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರಕವಾಗಿ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಆಗ್ರಹಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಜನವರಿ ೨೦೨೩ರ ಆರಂಭದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸುವಂತೆ ಕೋರಲಾಗಿದೆ. ನಗರಸಭೆ ವಿಐಎಸ್‌ಎಲ್ ಆಡಳಿತ ವ್ಯಾಪ್ತಿಯ ವೇಲೂರ್ ಶೆಡ್, ಜಿಂಕ್‌ಲೈನ್, ಕೂಲಿಬ್ಲಾಕ್, ಆಂಜನೇಯ ಅಗ್ರಹಾರ, ಸುರಗಿತೋಪು ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು, ಫಿಲ್ಟರ್‌ಶೆಡ್ ಕೊಳಚೆ ಪ್ರದೇಶದಲ್ಲಿ ಪರಿಚಯ ಪತ್ರ ವಿತರಣೆಯಾಗಿದೆ. ಕಾಗದನಗರ ಎಂಪಿಎಂ ಆಡಳಿತ ವ್ಯಾಪ್ತಿಯ ವಾರ್ಡ್ ನಂ.೪,೫,೬ ಮತ್ತು ೮ ಹಾಗು ಆನೆಕೊಪ್ಪ ಸೇರಿದಂತೆ ನಗರಸಭೆ ವ್ಯಾಪ್ತಿಯ ಸುಮಾರು ೩೭ ಘೋಷಿತ ಕೊಳಚೆ ಪ್ರದೇಶಗಳಲ್ಲಿ ಸುಮಾರು ೫೦ ಸಾವಿರ ಜನಸಂಖ್ಯೆ ಇದ್ದು, ಇವರುಗಳಿಗೆ ಹಕ್ಕುಪತ್ರ ವಿತರಣೆಯಾಗಿರುತ್ತದೆ.
    ಈ ನಡುವೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ವ್ಯಾಪ್ತಿಯ ಕೊಳಚೆ ಪ್ರದೇಶಗಳಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಎರಡು ಕಾರ್ಖಾನೆಗಳ ಆಡಳಿತ ಮಂಡಳಿಯವರು ತಿರಸ್ಕರಿಸಿದ್ದು, ಇದರಿಂದಾಗಿ ವಿತರಣೆಯಾಗಿರುವ ಹಲವು ಕೊಳಚೆ ಪ್ರದೇಶಗಳ ಹಕ್ಕು ಪತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಲ್ಲದೆ ಹಾಲಪ್ಪಶೆಡ್ ಸೇರಿದಂತೆ ಇನ್ನಿತರ ಕೊಳಚೆ ಪ್ರದೇಶಗಳ ಸುಮಾರು ೧೦೦೦ಕ್ಕೂ ಅಧಿಕ ಮನೆಗಳಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ತಾಲೂಕು ಆಡಳಿತ, ನಗರಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ಮಂಡಳಿ ಹಾಗು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಜೊತೆ ಸಭೆನಡೆಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗಿದೆ.
    ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಕ್ಯಾಚ್ ದ ರೈನ್ (ಮಳೆ ನೀರು ಹಿಡಿಯಿರಿ) ಯೋಜನೆಗೆ ತಾಲೂಕಿನಲ್ಲಿ ಹಿನ್ನಡೆಯಾಗಿದ್ದು, ತಕ್ಷಣ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳನ್ನೊಳಗೊಂಡ ತುರ್ತು ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ.
    ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಪ್ರಮುಖರಾದ ರಮಾ ವೆಂಕಟೇಶ್, ದೇವಿಕಾನಾಗರಾಜ್, ಮೆಹಬೂಬ್ ಪಾಷ, ಪ್ರಸನ್ನ, ಆರ್. ಮುರುಗೇಶ್ ಮತ್ತು ಇಂದ್ರಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುರುಗಳ ಮಾರ್ಗದರ್ಶನ, ದೈವ ಸಂಪ್ರದಾಯ ಪರಂಪರೆಯಿಂದ ಶಾಂತಿ, ನೆಮ್ಮದಿ : ಶ್ರೀ ಷ.ಬ್ರ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೫ನೇ ವರ್ಷದ ಪುಣ್ಯ ಸ್ಮರಣೆ ಹಾಗು ಧರ್ಮ ಸಮಾರಂಭ ನಡೆಯಿತು.
    ಭದ್ರಾವತಿ, ಅ. ೨೩ : ಮನುಷ್ಯನಿಗೆ ಗುರುಗಳ ಮಾರ್ಗದರ್ಶನ ಹಾಗು ದೈವ ಸಂಪ್ರದಾಯದ ಪರಂಪರೆ ಮನಸ್ಥಿತಿ ಆತನಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ರಟ್ಟೆಹಳ್ಳಿ ಕಬ್ಬಿಣ ಕಂತಿ ಮಠದ ಶ್ರೀ ಷ.ಬ್ರ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
      ಅವರು ಭಾನುವಾರ ಬಿಳಿಕಿ ಹಿರೇಮಠದಲ್ಲಿ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೫ನೇ ವರ್ಷದ ಪುಣ್ಯ ಸ್ಮರಣೆ ಹಾಗು ಧರ್ಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
      ಇಂದಿನ ಆಧುನಿಕ ದಿನಗಳಲ್ಲಿ ವೈಚಾರಿಕತೆಯ ಸೋಗಲಿನಲ್ಲಿ ಏನೇ ಆಲೋಚನೆಗಳನ್ನು ಮಾಡಿದರೂ ಸಹ ದೇವರ ಅಸ್ತಿತ್ವ ಅಲ್ಲಗಳೆಯಲಾಗುವುದಿಲ್ಲ. ಗುರುಗಳು ಭಗವಂತನ ಸಾಕ್ಷಾತ್ಕಾರ ಮಾಡಿಕೊಡುತ್ತಾರೆ. ಆ ಕಾರಣ ಅವರು ಅಂತಹ ಶಕ್ತಿಯನ್ನು ಹೊಂದಿರುತ್ತಾರೆ ಎಂದರು.
      ಜಗತ್ತು ಶ್ರೀಮಂತರನ್ನು ಎಂದಿಗೂ ಸ್ಮರಿಸುವುದಿಲ್ಲ. ಆದರೆ ಸರ್ವವನ್ನೂ ತ್ಯಾಗ ಮಾಡಿರುವ ಸರ್ವರ ಒಳಿತನ್ನು ಬಯಸುವ ಸಾಧು ಸಂತರು ತಮ್ಮ ಬದುಕಿನ ತ್ಯಾಗದ ಕಾರಣ ಅವರ ಶಕ್ತಿಯನ್ನು ಅರಿತು ಸದಾ ಅವರ ಸ್ಮರಣೆಯನ್ನು ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಜೀವನದಲ್ಲಿ ತಾಯಿ ತಂದೆ ಋಣ, ಗುರುವಿನ ಋಣ ತೀರಿಸಬೇಕೆಂದರು.  
      ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಮನೆಗೆ ಹಿರಿಯರು, ಸಮಾಜಕ್ಕೆ ಗುರುಗಳು ಮುಖ್ಯರಾಗುತ್ತಾರೆ. ಆ ಮೂಲಕ ಮನೆಯನ್ನು ಹಿರಿಯರು ಉದ್ದಾರ ಮಾಡಿದರೆ, ಸಮಾಜವನ್ನು ಗುರು ಮುನ್ನಡೆಸುತ್ತಾರೆ. ಆಗ ಶಾಂತಿಯುತ ಸ್ವಾಸ್ಥ ಸಮಾಜದ ನಿರ್ಮಾಣ ಆಗುತ್ತದೆ. ಕುಟುಂಬದಲ್ಲಿ ಹಿರಿಯರ ಪೂಜೆಯನ್ನು ಮಾಡಿದರೆ. ಮಠ ಮಂದಿರಗಳಲ್ಲಿ ಹಿಂದಿನ ಗುರುಗಳ ಸ್ಮರಣೆಯನ್ನು ಮಾಡುವ ಪದ್ದತಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ ಎಂದರು.
      ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ, ವಾಗೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Saturday, October 22, 2022

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ಗೆ ಕರವೇ ಅಭಿನಂದನೆ

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನೂತನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
    ಭದ್ರಾವತಿ, ಅ. ೨೨: ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನೂತನ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
    ಜಿಲ್ಲೆಯ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಲಾಯಿತು.  ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್, ಯುವ ಘಟಕದ ಜಿಲ್ಲಾಧ್ಯಕ್ಷ ಧನಂಜಯ, ಜಿಲ್ಲಾ ಸಂಚಾಲಕ ಪಡುವಳ್ಳಿ ಹರ್ಷೇಂದ್ರ ಕುಮಾರ್, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಎಂ. ಪರಮೇಶ್ವರ್. ಸಂಘಟನಾ ಕಾರ್ಯದರ್ಶಿ ಎಚ್. ರಾಮಕೃಷ್ಣ ಹಾಗೂ ಕುಮಾರ್, ಯುವ ಘಟಕದ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷ ಕೆ. ಮನು, ಗಾಜನೂರು ರಘು, ಖಾದರ್, ಸುನಿಲ್, ಚಂದ್ರಪ್ಪ, ದಿಲೀಪ್, ಗಂಗಾಧರ್ ಸೇರಿದಂತೆ ಜಿಲ್ಲಾ ಹಾಗು ತಾಲೂಕು ಘಟಕದ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆಯಿಂದ ೬ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್

ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್‌ಪಾಸ್ ನೀಡಲಾಗುತ್ತಿದ್ದು, ಭದ್ರಾವತಿ ತಾಲೂಕಿನ ೬ ಮಂದಿ ಫಲಾನುಭವಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಬಸ್‌ಪಾಸ್ ವಿತರಿಸಿದರು.
    ಭದ್ರಾವತಿ, ಅ. ೨೨: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್‌ಪಾಸ್ ನೀಡಲಾಗುತ್ತಿದ್ದು, ತಾಲೂಕಿನಲ್ಲಿ ೬ ಜನರಿಗೆ ಮೊದಲ ಬಾರಿಗೆ ಬಸ್‌ಪಾಸ್ ಲಭಿಸಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಫಲಾನುಭವಿಗಳಿಗೆ ಬಸ್‌ಪಾಸ್‌ಗಳನ್ನು ವಿತರಿಸಿದರು. ರಾಜ್ಯಾದ್ಯಂತ ಸುಮಾರು ೧ ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೇ ೧.೨೫ ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕಾರ್ಮಿಕರು ತಮ್ಮ ಗುರುತಿನ ಚೀಟಿ ಹಾಗು ಆಧಾರ್ ಕಾರ್ಡ್‌ನೊಂದಿಗೆ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಿ ಬಸ್‌ಪಾಸ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ತಾಲೂಕಿನಲ್ಲಿ ಕೇವಲ ೬ ಮಂದಿಗೆ ಮಾತ್ರ ಬಸ್‌ಪಾಸ್ ಲಭಿಸಿದೆ.
    ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕದ ವ್ಯವಸ್ಥಾಪಕಿ ಅಂಬಿಕಾ ಸುದೇಂದ್ರ, ಕಾಂಗ್ರೆಸ್ ಮುಖಂಡ ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೧೫೦ಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ

    ಭದ್ರಾವತಿ, ಅ. ೨೨ : ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಗು ನಂಜಪ್ಪ ಲೈಫ್‌ಕೇರ್ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದ್ರೋಗ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿಸಿದ ತಪಾಸಣಾ ಶಿಬಿರದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು.  
    ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ನುರಿತ ವೈದ್ಯರು, ಸಿಬ್ಬಂದಿಗಳನ್ನೊಳಗೊಂಡ ೨೩ ಜನರ ತಂಡ ತಪಾಸಣೆ ನಡೆಸಿತು. ಬೆಳಿಗ್ಗೆ ೯.೩೦ರಿಂದ ಆರಂಭಗೊಂಡ ಶಿಬಿರ ಸಂಜೆ ೪ರವರೆಗೂ ನಡೆಯಿತು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ನಾಗರಾಜ್ ಎಂ. ಶೇಟ್, ಖಜಾಂಚಿ ದರ್ಶನ್, ಪ್ರಮುಖರಾದ ಶಿವರುದ್ರಯ್ಯ, ಹೆಬ್ಬಂಡಿ ನಾಗರಾಜ್, ಎಲ್. ದೇವರಾಜ್ ಸೇರಿದಂತೆ ಕ್ಲಬ್ ಪ್ರಮುಖರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಗು ನಂಜಪ್ಪ ಲೈಫ್‌ಕೇರ್ ಸಹಕಾರದೊಂದಿಗೆ ಶನಿವಾರ ಉಚಿತ ಹೃದ್ರೋಗ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿಸಿದ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Friday, October 21, 2022

ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ

    ಭದ್ರಾವತಿ, ಅ. ೨೧: ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಈ ಬಾರಿ ಸಹ ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
    ಕಣ್ಮರೆಯಾಗುತ್ತಿರುವ ಮಲೆನಾಡಿನ ಜಾನಪದ ಸಾಂಸ್ಕೃತಿಕ ಕಲೆ ಅಂಟಿಕೆ-ಪಂಟಿಕೆಯನ್ನು ರಕ್ಷಿಸಿ ಬೆಳೆಸುವ ಉದ್ದೇಶದಿಂದ ಮನೆ-ಮನೆಗೆ ಜ್ಯೋತಿ ಹೊತ್ತೊಯ್ಯುವ ಕಾರ್ಯಕ್ರಮ ನಡೆಯಲಿದೆ.
    ಅ.೨೩ರಂದು ಸಂಜೆ ೬ ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಸುರೇಶ್ ಅಂಟಿಕೆ-ಪಂಟಿಕೆ ಕಲಾತಂಡದವರಿಂದ ನ್ಯೂಟೌನ್ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಜ್ಯೋತಿ ಆರಂಭಗೊಳ್ಳಲಿದ್ದು, ನ್ಯೂಟೌನ್, ಜನ್ನಾಪುರ, ಸಿದ್ದಾರೂಢ ನಗರ, ಹಳೇನಗರ, ಗಾಂಧಿನಗರ, ಬೊಮ್ಮನಕಟ್ಟೆ ಹಾಗು ಹಿರಿಯೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ಸುಮಾರು ೪೦ಕ್ಕೂ ಹೆಚ್ಚು ಮನೆಗಳಿಗೆ ತೆರಳಿಲಿದೆ.
    ಜ್ಯೋತಿ ಮನೆ ಬಾಗಿಲಿಗೆ ತೆರಳಿದ ಸಂದರ್ಭದಲ್ಲಿ ಧಾರ್ಮಿಕ ಭಕ್ತಿಭಾವದ ಜಾನಪದ ಗೀತೆಗಳ ಮೂಲಕ ಮನೆಯ ಕುಟುಂಬಸ್ಥರನ್ನು ಆಹ್ವಾನಿಸಲಾಗುವುದು. ನಂತರ ಕುಟುಂಬಸ್ಥರು ಜ್ಯೋತಿಯನ್ನು ಸ್ವಾಗತಿಸಿ ಜ್ಯೋತಿಗೆ ಎಣ್ಣೆ ಸುರಿದು ಧವನ-ಧಾನ್ಯ ನೀಡಿ ದೇವರನ್ನು ಬೇಡಿ ತಮ್ಮ ಮನೆಯ ಜ್ಯೋತಿಯನ್ನು ಹೊತ್ತಿಸಿ ಬೀಳ್ಕೊಡುತ್ತಾರೆ.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಪರಿಷತ್ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್ ಕೋರಿದ್ದಾರೆ. 

೧೬೦೪ನೇ ಮದ್ಯವರ್ಜನ ಶಿಬಿರ : ನವಜೀವನಕ್ಕೆ ಕಾಲಿಟ್ಟ ೫೭ ಶಿಬಿರಾರ್ಥಿಗಳು

    ಭದ್ರಾವತಿ, ಅ. ೨೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಹಳೇನಗರ ವಲಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಆರಕ್ಷಕ ಠಾಣೆ, ಪತ್ರಕರ್ತರ ಸಂಘ ಹಾಗು ನವಜೀವನ ಸಮಿತಿ ಮತ್ತು ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಸುಮಾರು ಒಂದು ವಾರ ಕಾಲ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರ ಶುಕ್ರವಾರ ಮುಕ್ತಾಯಗೊಂಡಿತು.
    ಸುಮಾರು ೫೭ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪ್ರತಿ ದಿನ ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಮಾಹಿತಿ ಮಾಗದರ್ಶನ, ಸಾಂಸ್ಕೃತಿಕ ಹಾಗು ಭಜನಾ ಕಾರ್ಯಕ್ರಮಗಳು, ಧ್ಯಾನ, ಯೋಗ, ಆರೋಗ್ಯ ತಪಾಸಣೆ ಸೇರಿಂದತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.  ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶಿಬಿರದ ಆಯೋಜಕರಿಗೆ ಹಾಗು ಶಿಬಿರ ಯಶಸ್ವಿಗೊಳ್ಳಲು ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು.
    ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಅನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಕೆ.ಎನ್ ಭೈರಪ್ಪಗೌಡ, ಅಧ್ಯಕ್ಷ ಆರ್. ಕರುಣಾಮೂರ್ತಿ, ನ್ಯಾಯವಾದಿ ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪಾಲಾಕ್ಷಪ್ಪ ಮತ್ತು ಜಯರಾಂ ಗೊಂದಿ, ಕಾವೇರಮ್ಮ ಹಾಗು ಶಿಬಿರಾಧಿಕಾರಿಗಳು, ಮೇಲ್ವಿಚಾರಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭೆ ಮಾಜಿ ಉಪಾಧ್ಯಕ್ಷೆ ಮಹಾದೇವಿ ಸಂಗಡಿಗರು ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ವೈ. ಪ್ರಕಾಶ್ ನಾಯ್ಕ ಸ್ವಾಗತಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಸುಮಾರು ಒಂದು ವಾರ ಕಾಲ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.