ಬೀದಿ ನಾಯಿಗಳ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಧನ ಸಹಾಯ
ಕಳೆದ ೨ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
ಭದ್ರಾವತಿ, ಡಿ. ೨: ಕಳೆದ ೨ ದಿನಗಳ ಹಿಂದೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
ಗ್ರಾಮದ ನಸ್ರುಲ್ಲಾ ಮತ್ತು ಶೇರ್‌ಬಾನು ದಂಪತಿ ಪುತ್ರ, ಸುಮಾರು ೪ ವರ್ಷದ ಸೈಯದ್ ಅರ್ಷದ್ ಮದನಿ ನಾಯಿಗಳ ದಾಳಿಗೆ ಬಳಿಯಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕ(ಪಿ.ಆರ್) ಉಪೇಂದ್ರ ಬಾಬು, ಸಹಾಯಕ ನಿರ್ದೇಶಕ(ಬಿಸಿ ಊಟ) ನಟರಾಜ್ ಮತ್ತು ಪಶು ವೈದ್ಯಾಧಿಕಾರಿ ಕಿರಣ್ ಅವರನ್ನೊಳಗೊಂಡ ತಂಡ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆ ನಡೆಸಿತು.
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗು ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು. ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಬಗ್ಗೆ ಹಾಗು ಬೀದಿನಾಯಿಗಳಿಂದ ದಾಳಿಗೊಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಹಾಗು ಗ್ರಾಮಾದಲ್ಲಿರುವ ಕೋಳಿ, ಕುರಿ, ಮೀನು ಮಾಂಸ ಹಾಗು ಮಾಂಸ ಆಹಾರ ಮಾರಾಟ ಅಂಗಡಿ ಮುಂಗಟ್ಟುಗಳು ಸ್ವಚ್ಛತೆಗೆ ಹೆಚ್ಚಿನ ಜಾಗೃತಿವಹಿಸಲು ತಿಳುವಳಿಕೆ ನೀಡುವಂತೆ ಸೂಚಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಲ್ ಸಾಬ್, ಉಪಾಧ್ಯಕ್ಷೆ ಹಾಲಮ್ಮ, ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಹಾಗು ಸದಸ್ಯರು ಉಪಸ್ಥಿತರಿದ್ದರು.