Saturday, December 3, 2022

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಿ : ಡಾ. ಮಹಾಬಲೇಶ್ವರ

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸೈನಿಕ ಹಾಗು ರೈತ ಪೋಷಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ, ಡಿ. ೩: ಶಿಕ್ಷಣ ಸಂಸ್ಥೆಗಳ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಸೇವಾ ಕಾರ್ಯದ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ. ಮಹಾಬಲೇಶ್ವರ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವವರು ತಮ್ಮನ್ನು ತಾವು ಸೇವಾ ಮನೋಭಾವದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಸಂಸ್ಕಾರಯುತವಾದ, ಮೌಲ್ಯಯುತವಾದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕೆಂದರು.

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ. ಮಹಾಬಲೇಶ್ವರ ಮತ್ತು ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಿ. ಪ್ರಭಾಕರ ಬೀರಯ್ಯ, ಈ ಶಿಕ್ಷಣ ಸಂಸ್ಥೆ ಹಣ ಮಾಡುವ ದುರುದ್ದೇಶ ಹೊಂದಿಲ್ಲ. ಮೌಲ್ಯಯುತ ಶಿಕ್ಷಣ ನೀಡುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್, ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸೈನಿಕ ಹಾಗು ರೈತ ಪೋಷಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ದೇವೇಂದ್ರಪ್ಪ, ಕುವೆಂಪು ವಿಶ್ವವಿದ್ಯಾನಿಲಯ ಎಂ.ಎಸ್ಸಿ ಗೋಲ್ಡ್ ಮೆಡಲಿಸ್ಟ್, ಶಿಕ್ಷಣ ಸಂಸ್ಥೆಯ ಹಳೇಯ ವಿದ್ಯಾರ್ಥಿ ಧನುಷ್ ಚವ್ಹಾಣ್, ಶಿಕ್ಷಣ ಸಂಸ್ಥೆಯ ಜಂಟಿ ಆಡಳಿತಾಧಿಕಾರಿ ಕೆ. ಸೌಮ್ಯರೂಪ, ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್, ಪ್ರಶಾಂತಿ ಸೇವಾ ಟ್ರಸ್ಟ್ ಸದಸ್ಯರಾದ ಎಚ್.ಪಿ ಶಿವಪ್ಪ, ರಾಮಕೃಷ್ಣಯ್ಯ, ಡಾ. ವೀಣಾ ಎಸ್. ಭಟ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ನಡೆದ ಮಹಿಷಾಸುರಾಮರ್ಧಿನಿ ನೃತ್ಯ ಹೆಚ್ಚು ಗಮನ ಸೆಳೆಯಿತು.
    ಶಿಕ್ಷಣ ಸಂಸ್ಥೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅವರು ಇಷ್ಟಪಡುವ ವಸ್ತುಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು. ವಿಶೇಷ ಎಂದರೆ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಿವೇಶನ ರಹಿತರಿಗೆ ಭೂಮಿ ಮೀಸಲಿಡಿ : ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ಮನವಿ


ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಜಂಬರಘಟ್ಟ ಗ್ರಾಮದ ಸರ್ವೆ ನಂ.೯೭ರ ೧೩೮ ಎಕರೆ ವಿಸ್ತೀರ್ಣದ ದನಗಳ ಮುಪ್ಪತ್ತು ಮತ್ತು ಮೂಡಲವಿಠಲಾಪುರ ಗ್ರಾಮದ ಸರ್ವೆ ನಂ.೨೫ರ ೨೬ ಎಕರೆ ೦೯ ಗುಂಟೆ ಹಾಗು ಅರಹತೊಳಲು ಗಡಿ ಗ್ರಾಮದ ಸರ್ವೆ ನಂ. ೫೨ರ ೪ ಎಕರೆ ೨೫ ಗುಂಟೆ ಗುಂಡುತೋಪಿನ ಭೂಮಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮೀಸಲಿಡುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 
ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೩ : ತಾಲೂಕಿನ ಹೊಳೆಹೊನ್ನೂರು ಹೋಬಳಿ ಜಂಬರಘಟ್ಟ ಗ್ರಾಮದ ಸರ್ವೆ ನಂ.೯೭ರ ೧೩೮ ಎಕರೆ ವಿಸ್ತೀರ್ಣದ ದನಗಳ ಮುಪ್ಪತ್ತು ಮತ್ತು ಮೂಡಲವಿಠಲಾಪುರ ಗ್ರಾಮದ ಸರ್ವೆ ನಂ.೨೫ರ ೨೬ ಎಕರೆ ೦೯ ಗುಂಟೆ ಹಾಗು ಅರಹತೊಳಲು ಗಡಿ ಗ್ರಾಮದ ಸರ್ವೆ ನಂ. ೫೨ರ ೪ ಎಕರೆ ೨೫ ಗುಂಟೆ ಗುಂಡುತೋಪಿನ ಭೂಮಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮೀಸಲಿಡುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
      ಸುಮಾರು ವರ್ಷಗಳ ಹಿಂದೆ ಈ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ಕೋಟ್ಯಾಂತರ ರು. ಲೂಟಿ ಮಾಡಿಕೊಂಡಿದ್ದು, ಅಲ್ಲದೆ ಪರಿಸರಕ್ಕೆ ಧಕ್ಕೆಯನ್ನುಂಟು ಮಾಡಲಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಭೂಮಿಯನ್ನು ಸರ್ವೆ ಮಾಡಬೇಕೆಂದು ಮನವಿ ಮಾಡಲಾಗಿದೆ.
      ಈ ಭೂಮಿಯ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ನಿವೇಶನ ರಹಿತ ಬಡವರು, ವಿಧವೆಯರು, ಅಂಗವಿಕಲರು, ಮಂಗಳಮುಖಿಯರು ಹಾಗು ಪರಿಶಿಷ್ಟ ಜಾತಿ/ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗು ಅಲೆಮಾರಿ ಸಮುದಾಯ ಜನಾಂಗದವರು, ನಿರಾಶ್ರಿತರು ಮತ್ತು ನಿರ್ಗತಿಕರು ವಾಸಿಸುತ್ತಿದ್ದಾರೆ. ಇವರಿಗೆ ನಿವೇಶನ ಹಂಚಿಕೆ ಮಾಡಲು ಭೂಮಿ ಮೀಸಲಿಡುವಂತೆ ಕೋರಲಾಗಿದೆ.
       ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಮತ್ತು ರಾಜ್ಯ ಗೌರವಾಧ್ಯಕ್ಷ ರಾಮಚಂದ್ರರಾವ್ ಪವಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Friday, December 2, 2022

ದೊಣಬಘಟ್ಟ ಗ್ರಾಮಕ್ಕೆ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ತಂಡ ಭೇಟಿ

ಬೀದಿ ನಾಯಿಗಳ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಧನ ಸಹಾಯ

ಕಳೆದ ೨ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
    ಭದ್ರಾವತಿ, ಡಿ. ೨: ಕಳೆದ ೨ ದಿನಗಳ ಹಿಂದೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
      ಗ್ರಾಮದ ನಸ್ರುಲ್ಲಾ ಮತ್ತು ಶೇರ್‌ಬಾನು ದಂಪತಿ ಪುತ್ರ, ಸುಮಾರು ೪ ವರ್ಷದ ಸೈಯದ್ ಅರ್ಷದ್ ಮದನಿ ನಾಯಿಗಳ ದಾಳಿಗೆ ಬಳಿಯಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕ(ಪಿ.ಆರ್) ಉಪೇಂದ್ರ ಬಾಬು, ಸಹಾಯಕ ನಿರ್ದೇಶಕ(ಬಿಸಿ ಊಟ) ನಟರಾಜ್ ಮತ್ತು ಪಶು ವೈದ್ಯಾಧಿಕಾರಿ ಕಿರಣ್ ಅವರನ್ನೊಳಗೊಂಡ ತಂಡ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆ ನಡೆಸಿತು.
      ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗು ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು. ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಬಗ್ಗೆ ಹಾಗು ಬೀದಿನಾಯಿಗಳಿಂದ ದಾಳಿಗೊಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಹಾಗು ಗ್ರಾಮಾದಲ್ಲಿರುವ ಕೋಳಿ, ಕುರಿ, ಮೀನು ಮಾಂಸ ಹಾಗು ಮಾಂಸ ಆಹಾರ ಮಾರಾಟ ಅಂಗಡಿ ಮುಂಗಟ್ಟುಗಳು ಸ್ವಚ್ಛತೆಗೆ ಹೆಚ್ಚಿನ ಜಾಗೃತಿವಹಿಸಲು ತಿಳುವಳಿಕೆ ನೀಡುವಂತೆ ಸೂಚಿಸಲಾಯಿತು.
      ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಲ್ ಸಾಬ್, ಉಪಾಧ್ಯಕ್ಷೆ ಹಾಲಮ್ಮ, ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಹಾಗು ಸದಸ್ಯರು ಉಪಸ್ಥಿತರಿದ್ದರು.

ಮತದಾರರಪಟ್ಟಿ ಪರಿಷ್ಕರಣೆ : ಡಿ.೩ ಮತ್ತು ೪ ಎರಡು ದಿನ ಮನೆ ಮನೆ ಸಮೀಕ್ಷೆ

ಭದ್ರಾವತಿ ವಿಧಾನಸಭಾ ಕ್ಷೇತ್ರ ಮತದಾರರಪಟ್ಟಿ ಪರಿಷ್ಕರಣೆ ಸಂಬಂಧ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಸಭೆ ನಡೆಯಿತು. 
    ಭದ್ರಾವತಿ, ಡಿ. ೨ : ಮತದಾರರ ನೋಂದಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿಯವರ ನಿರ್ದೇಶನದ ಮೇರೆಗೆ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ.೩ ಮತ್ತು ೪ ಎರಡು ದಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆ ಸಮೀಕ್ಷೆ ಕೈಗೊಳ್ಳಲು ತಹಸೀಲ್ದಾರ್ ಆರ್. ಪ್ರದೀಪ್ ಸೂಚಿಸಿದರು.
    ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್‌ರವರು, ಡಿ.೨ರಂದು ಮತದಾರರ ನೋಂದಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆ ಸಮೀಕ್ಷೆ ನಡೆಸಬೇಕೆಂದರು. ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿ ನಿಗದಿಪಡಿಸಿದಂತೆ ಮತದಾರರಪಟ್ಟಿ ಪರಿಷ್ಕರಣೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.
    ಪರಿಷ್ಕರಣೆ ಕಾರ್ಯದಲ್ಲಿ ನಿರೀಕ್ಷೆಯಂತೆ ಹೆಚ್ಚಿನ ಸಾಧನೆ ಕಂಡು ಬಂದಿಲ್ಲ. ಎಲ್ಲಾ ಮತಗಟ್ಟೆಗಳಲ್ಲೂ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗಬಾರದು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಪರಿಷ್ಕರಣೆ ಕಾರ್ಯ ವಿಳಂಭವಾಗಿ ಸಾಗುತ್ತಿರುವುದು ನಿರಾಸಕ್ತಿಯನ್ನು ತೋರಿಸುತ್ತಿದೆ. ಕಳಪೆ ಸಾಧನೆ ಕಂಡು ಬಂದಿರುವ ಮತಗಟ್ಟೆಗಳಿಗೆ ಹೆಚ್ಚಿನ ಗಮನ ಹರಿಸಬೇಕು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪರಿಷ್ಕರಣೆ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಲು ಉಪವಿಭಾಗಾಧಿಕಾರಿಗಳು ಆಗಮಿಸುತ್ತಿದ್ದಾರೆ ಎಂದರು.


    ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ಸಭೆಯಲ್ಲಿ ಮತಗಟ್ಟೆ ಅಧಿಕಾರಿಗಳು ಚರ್ಚಿಸುವ ಮೂಲಕ ಬಗೆಹರಿಸಿಕೊಂಡರು.     ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿ ಸುರೇಶ್‌ನಾಯ್ಕ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮತಗಟ್ಟೆ ಅಧಿಕಾರಿಗಳು, ತಾಲೂಕು ಕಛೇರಿ ಹಾಗು ನಗರಸಭೆ ಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.    

ಅಸಂಘಟಿತ ಕಾರ್ಮಿಕರಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸುಂದರ್ ಬಾಬು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್) ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಸಂಘಟಿತ ಕಾರ್ಮಿಕರ ಮಾಹಿತಿ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನೃತ್ಯ ಕಲಾವಿದ ಅಪೇಕ್ಷ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೧ : ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಜಾರಿಗೊಳಿಸಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
    ಅವರು ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್) ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಸಂಘಟಿತ ಕಾರ್ಮಿಕರ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸಂಘಟಿತ ಕಾರ್ಮಿಕರ ಕುಟುಂಬದ ಆರೋಗ್ಯ ಭದ್ರತೆ, ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನೆರವಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ಹೊಂದುವ ಮೂಲಕ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ಯೂನಿಯನ್ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನೃತ್ಯ ಕಲಾವಿದ ಅಪೇಕ್ಷ ಮಂಜುನಾಥ್ ಮಾತನಾಡಿ, ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪವಂತಾಗಬೇಕು. ಮೊದಲು ತಮ್ಮ ವೈಯಕ್ತಿಕ ಹಾಗು ಕುಟುಂಬದ ಹಿತರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಸಂಘಟನೆಯಲ್ಲಿ ಎಲ್ಲರೂ ಕ್ರಿಯಾಶೀಲವಾಗಿ ಮುನ್ನಡೆಯಬೇಕು. ಸಮಾಜಕ್ಕೆ ಸಾಧ್ಯವಾದಷ್ಟು ಸೇವೆಯನ್ನು ನೀಡುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಹಣ, ಅಧಿಕಾರ, ಪದವಿ ಯಾವುದೇ ಶಾಶ್ವತವಲ್ಲ. ನಾವುಗಳು ಮಾಡುವ ಒಳ್ಳೆಯ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ ಎಂದರು.
    ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್‌ನ ಅನಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಪಿಎಲ್ ಸಂಘದ ಅಧ್ಯಕ್ಷ ಬಿ. ಜಗದೀಶ್, ಪ್ರಜಾರಾಜ್ಯ ದಲಿತ ಸಂಘ(ಪಿಡಿಎಸ್) ರಾಜ್ಯಾಧ್ಯಕ್ಷ ಬಿ. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ್ ಸ್ವಾಗತಿಸಿ, ಛಾಯಾಗ್ರಾಹಕ ಮಂಜುನಾಥ್ ವಂದಿಸಿದರು.
    ಬೆಳಿಗ್ಗೆ ಧ್ವಜಾರೋಹಣ ನೇರವೇರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಬಿಪಿಎಲ್ ಸಂಘದ ಉಪಾಧ್ಯಕ್ಷರಾದ ಸಂಪತ್, ಜಿ. ಗೋವಿಂದ, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಖಜಾಂಚಿ ಮುರುಳಿ ಕೃಷ್ಣ, ಕಾರ್ಯಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್, ಸಹಕಾರ್ಯದರ್ಶಿಗಳಾದ ರಾಜು, ಅಜಂತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Thursday, December 1, 2022

ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು ಇಂದಿನ ಅವಶ್ಯಕತೆ : ಬಸವರಾಜ ಬೊಮ್ಮಾಯಿ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೂಮಿ ಪೂಜೆ ನೆರವೇರಿಸಿದರು. 
    ಭದ್ರಾವತಿ, ಡಿ. ೧:  ಸಾಮಾನ್ಯ ಕುಟಂಬದ ಮಗು ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು ೨೧ನೇ ಶತಮಾನದ ಅವಶ್ಯಕತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ಅವರು ಗುರುವಾರ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ದೇಶ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ. ಶಿಕ್ಷಣವನ್ನು ಇನ್ನಷ್ಟು ಸರಳಗೊಳಿಸಬೇಕು. ವಿದ್ಯೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೆಲವು ನಿರ್ಬಂಧಗಳ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ನಾವುಗಳು ಚಿಂತನೆ ಮಾಡಬೇಕು. ಇದೇ ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣದ ಸರಳೀಕರಣ ಮಾಡಿದ್ದಾರೆ. ಸರಳವಾಗಿ, ಸಹಜವಾಗಿ ಮತ್ತು ಸ್ಪಷ್ಟವಾಗಿ ಕಲಿಯಲು ಹಾಗೂ ಕಲಿಕೆಯಲ್ಲಿ ಹತ್ತು ಹಲವಾರು ಆಯ್ಕೆಗಳನ್ನು ನೀಡುವ ಅವಕಾಶವಿದೆ. ಬಹುವಿಧ ಕೋರ್ಸ್‌ಗಳನ್ನು ಒಂದೇ ಸಂದರ್ಭದಲ್ಲಿ ಪಡೆದುಕೊಳ್ಳಲು ಅವಕಾಶವಿರುವ ನೀತಿಯನ್ನು ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಲಯದಲ್ಲಿಯೂ ಪ್ರಾರಂಭ ಮಾಡುತ್ತಿದ್ದೇವೆ ಎಂದರು.
    ವಿಶ್ವಮಾನವರು :
    ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ೧.೨೫ ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅನ್ನ, ವಿದ್ಯೆ, ಸಂಸ್ಕೃತಿಯ ದಾನ ನೀಡಿ, ತಂದೆತಾಯಿಯಂತೆ ಸಲಹುತ್ತಿದ್ದಾರೆ.  ದೈಹಿಕ ಶಿಕ್ಷಣ ನೀಡಿ ವಿಶ್ವಮಾನವರನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈ ಸಂಸ್ಥಾನಕ್ಕೆ ಕೋಟಿ ನಮನಗಳು ಎಂದರು.  ಯಾವುದೇ ಬೇಧಭಾವವಿಲ್ಲದೆ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.  ಇಲ್ಲಿಗೆ ಬಂದು ಇಂದು ನಾನು ಬಹಳ ಪುನೀತನಾಗಿದ್ದೇನೆ.  ಪ್ರಸ್ತುತ ಆದಿಚುಂಚನಗಿರಿ ಸಂಸ್ಥೆ ತುಂಬಾ ದೊಡ್ಡಾಗಿ ಬೆಳೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕನ್ನಡನಾಡನ್ನು ಮರೆಯಬೇಡಿ :
    ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ೫೦೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ, ಉತ್ಕೃಷ್ಟ ಶಿಕ್ಷಣ ನೀಡಿ, ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹಾನ್ ಕಾರ್ಯ ಅವರಿಂದಾಗಿದೆ. ಅದನ್ನು  ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಗುಣಾತ್ಮಕತೆ ಹಾಗೂ ಆಧ್ಯಾತ್ಮವನ್ನು ತುಂಬಿ, ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠ  ಮಠ,  ಶಿಕ್ಷಣ ಸಂಸ್ಥಾನವನ್ನು ಬೆಳೆಸುತ್ತಿರುವ ಡಾ. ಶ್ರೀ ನಿರ್ಮಾಲಾನಂದನಾಥಸ್ವಾಮಿಗಳು ಮೇಧಾವಿಗಳು, ಖದ್ದು ಆಧ್ಯಾತ್ಮಿಕ ಚಿಂತಕರು. ಆಧ್ಯಾತ್ಮ, ತತ್ವಜ್ಞಾನ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದಾರೆ.  ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮ ಅವರು.  ಅವರ ಆಶೀರ್ವಾದದೊಂದಿದೆ ಮಕ್ಕಳ ಬದುಕು ಹಸನುಗೊಳುತ್ತದೆ. ಎಷ್ಟೇ ಎತ್ತರಕ್ಕೆ ಹೋದರೂ ಕನ್ನಡನಾಡನ್ನು, ಆದಿಚುಂಚನಗಿರಿ ಮಠವನ್ನು ಹಾಗೂ ಜನ್ಮ ಕೊಟ್ಟ ತಂದೆತಾಯಿಯರನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರಿ ನಿಯಂತ್ರಕ ವೆಂಕಟಾಚಲ ಶೆಟ್ಟರು ನಿಧನ

ವೆಂಕಟಾಚಲ ಶೆಟ್ಟರು
    ಭದ್ರಾವತಿ, ಡಿ. ೧: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು ೧೫ಕ್ಕೂ ಹೆಚ್ಚು ವರ್ಷ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ವೆಂಕಟಾಚಲ ಶೆಟ್ಟರು(೬೪) ನಿಧನ ಹೊಂದಿದ್ದಾರೆ.
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದರು. ಶಿವಮೊಗ್ಗದಲ್ಲಿ ವಾಸವಿದ್ದ ಶೆಟ್ಟರ್‌ರವರು ಬುಧವಾರ ರಾತ್ರಿ ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅವರ ಹುಟ್ಟೂರಿನಲ್ಲಿ ಗುರುವಾರ ನಡೆಯಿತು.
    sಶೆಟ್ಟರ್‌ರವರು ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನಿರ್ವಾಹಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ನಂತರ ಮುಂಬಡ್ತಿ ಹೊಂದಿ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕ ವ್ಯವಸ್ಥಾಪಕರು ಹಾಗು ಸಿಬ್ಬಂದಿ ವರ್ಗದವರು ಮತ್ತು ಮುಖ್ಯಬಸ್‌ನಿಲ್ದಾಣದ ಮಳಿಗೆಗಳ ವರ್ತಕರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.