Tuesday, December 6, 2022

ಮತದಾನ ಕುರಿತು ಜಾಗೃತಿ ಜಾಥಾ

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಮಂಗಳವಾರ ಭದ್ರಾವತಿ ನಗರದಲ್ಲಿ ಜಾಥಾ ನಡೆಸಲಾಯಿತು.
    ಭದ್ರಾವತಿ, ಡಿ. ೬ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಮಂಗಳವಾರ ನಗರದಲ್ಲಿ ಜಾಥಾ ನಡೆಸಲಾಯಿತು.
    ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತ ದಿಂದ ಮಾಧವಚಾರ್ ವೃತ್ತದವರೆಗೆ ಆಯೋಜಿಸಲಾಗಿದ್ದ ಜಾಥಾದಲ್ಲಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳ ವಿದ್ಯಾರ್ಥಿಗಳು, ತಾಲೂಕು ಕಛೇರಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಕಾಲೇಜುಗಳ ಅಧ್ಯಾಪಕರು ಹಾಗು ನಗರಸಭೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
    ೧೮ ವರ್ಷ ಪೂರೈಸಿರುವ ಪ್ರತಿಯೊಬ್ಬರು ಸಹ ಮತದಾನ ಹಕ್ಕು ಹೊಂದುವುದು, ಕಡ್ಡಾಯವಾಗಿ ಮತ ಚಲಾಯಿಸುವುದು ಸೇರಿದಂತೆ ಚುನಾವಣಾ ಸಂಬಂಧ ಅರಿವು ಮೂಡಿಸುವ ಜಾಗೃತಿ ಫಲಕಗಳನ್ನು ಹಿಡಿದು ಜಾಥಾ ನಡೆಸಲಾಯಿತು.
    ಚುನಾವಣಾ ಸಾಕ್ಷರತಾ ಸಂಘ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ರಂಗಪ್ಪ ವೃತ್ತದಲ್ಲಿ ಚುನಾವಣಾ ಮಾದರಿಗಳೊಂದಿಗೆ, ವಿಶಿಷ್ಟ ಆಟದೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಗಮನ ಸೆಳೆದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಕವಿತಾ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.      


ಚುನಾವಣಾ ಸಾಕ್ಷರತಾ ಸಂಘ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಚುನಾವಣಾ ಮಾದರಿಗಳೊಂದಿಗೆ, ವಿಶಿಷ್ಟ ಆಟದೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಗಮನ ಸೆಳೆದರು.

ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ದುಡಿಯುವ ವರ್ಗದ ಕಡೆಗಣನೆ


೯ನೇ ತಾಲೂಕು ಮಟ್ಟದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಅಮ್ಜದ್ ವಿಷಾದ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ  ಸಮಿತಿ(ಎಐಟಿಯುಸಿ) ತಾಲೂಕು ಘಟಕದ ವತಿಯಿಂದ ಮಂಗಳವಾರ ಭದ್ರಾವತಿ ಹಳೇನಗರದ  ವೀರಶೈವ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ೯ನೇ ತಾಲೂಕು ಮಟ್ಟದ ಸಮಾವೇಶವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೬: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ  ಸಮಿತಿ(ಎಐಟಿಯುಸಿ) ತಾಲೂಕು ಘಟಕದ ವತಿಯಿಂದ ಮಂಗಳವಾರ ಹಳೇನಗರದ  ವೀರಶೈವ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ೯ನೇ ತಾಲೂಕು ಮಟ್ಟದ ಸಮಾವೇಶವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ನಂತರ ಅವರು ಕಾಮ್ರೇಡ್ ಎಚ್.ಕೆ ರಾಮಚಂದ್ರಪ್ಪ ಮತ್ತು ಎನ್ ಶಿವಣ್ಣನವರ ವೇದಿಕೆಯಲ್ಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
   ಫೆಡರೇಷನ್ ರಾಜ್ಯಾಧ್ಯಕ್ಷ ಕಾಮ್ರೇಡ್ ಅಮ್ಜದ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಆದರೂ ಸಹ ಅವರ ಬಹಳಷ್ಟು ಬೇಡಿಕೆಗಳನ್ನು ಈಡೇರಿಸುವಲ್ಲಿ  ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮೀನಾಮೇಷ ಮಾಡುತ್ತಿವೆ.  ಹೋರಾಟದಿಂದ ಮಾತ್ರ ನಮ್ಮ  ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ರೂಪರೇಷೆ ಸಿದ್ದಪಡಿಸಲು ಮತ್ತು ಕಾರ್ಯಕರ್ತರು ಹಾಗೂ ಸಹಾಯಕಿಯರು ತಮ್ಮ ಭಾವನೆಗಳನ್ನುಅಭಿವ್ಯಕ್ತಗೊಳಿಸಲು ಸಮ್ಮೇಳನ ಸಹಕಾರಿಯಾಗಿದೆ ಎಂದರು.
    ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಜಯಮ್ಮ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ. ಸುರೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಫೆಡರೇಷನ್ ತಾಲೂಕು ಅಧ್ಯಕ್ಷೆ ಸುಶೀಲಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ವೇದಾವತಿ ಸ್ವಾಗತಿಸಿದರು. ಫೆಡರೇಷನ್ ತಾಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯಾಗಿ ಪದೋನ್ನತಿಗೊಂಡ ಮೇಲ್ವಿಚಾರಕರು ಹಾಗು ನಿವೃತ್ತಿ ಹೊಂದುವವರೆಗೂ ಸಂಘಟನೆಯಲ್ಲಿ ತೊಡಗಿಸಿಕೊಂಡು ನಾಯಕತ್ವದೊಂದಿಗೆ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸಿ ಗೌರವಿಸಲಾಯಿತು.  

Monday, December 5, 2022

ವಿಜೃಂಭಣೆಯಿಂದ ಜರುಗಿದ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹುತ್ತಾಕಾಲೋನಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೫ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾಕಾಲೋನಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ರಥೋತ್ಸವ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ ಮತ್ತು ರಥಶುದ್ದಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.  ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನದ ಮುಂಭಾಗ ಆರಂಭಗೊಂಡ ರಥೋತ್ಸವ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೂ ಸಾಗಿತು. ಉತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜೈಕಾರಗಳನ್ನು ಹಾಕಿದರು.  ಸಂಜೆ ರಥೋತ್ಸವ ಅಷ್ಟಾವದಾನಸೇವೆ, ಮಹಾಪೂಜೆ. ಮಹಾಮಂಗಳಾರತಿ ನೆರವೇರಿತು.
.    ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ.ದಾಸೇಗೌಡರವರು ಹಲವಾರು ವರ್ಷಗಳಿಂದ ಅನ್ನಸಂತರ್ಪಣೆ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಸಹ ಸೇವಾ ಕಾರ್ಯ ಮುಂದುವರೆಸುವ ಮೂಲಕ ಗಮನ ಸೆಳೆದರು.  ವಿಶ್ವೇಶ್ವರಾಯ ಆಟೋ ನಿಲ್ದಾಣದ ಚಾಲಕರು ಮಜ್ಜಿಗೆ ವಿತರಣೆ ಹಾಗು ವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿವತಿಯಿಂದ ಪಾನಕ, ಕೋಸಂಬರಿ ವಿತರಣೆ ನಡೆಯಿತು.
    ಶಾಸಕ ಬಿ.ಕೆ.ಸಂಗಮೇಶ್ವರ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಮುಖಂಡರು, ಹಾಗು ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನ ಜಾಗ ಸಮಸ್ಯೆ ಬಗೆಹರಿಸಿಕೊಳ್ಳಲು ಹೋರಾಟ ಅಗತ್ಯ : ಕೆ.ಎಸ್ ಈಶ್ವರಪ್ಪ


ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ(ಮಠ) ಆಶ್ರಮದ ಎಂ.ಸಿ ಹಳ್ಳಿಯ ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಸೋಮವಾರ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿ(ದವತ್ತಿರು ಸ್ವಾಮೀಜಿ)ಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ ಹಾಗು ಕಾರ್ತಿಕ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೫: ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ(ಮಠ) ಆಶ್ರಮದ ಎಂ.ಸಿ ಹಳ್ಳಿಯ ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರ ತಕ್ಷಣ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರು ಒಗ್ಗಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
    ಅವರು ಸೋಮವಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿ(ದವತ್ತಿರು ಸ್ವಾಮೀಜಿ)ಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ ಹಾಗು ಕಾರ್ತಿಕ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ಶ್ರೀ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಸಿದ್ದರ್ ಮಹಾ ಸ್ವಾಮೀಜಿಯರು ಶ್ರೀ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಶ್ರೀ ಕ್ಷೇತ್ರದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ದೃಢಸಂಕಲ್ಪ ಕೈಗೊಳ್ಳಬೇಕಾಗಿದೆ. ಈ ಮೂಲಕ ಭವಿಷ್ಯದಲ್ಲಿ ಶ್ರೀ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ತಮಿಳು ಸಮಾಜ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಸಮಾಜದ ಏಳಿಗೆಗೆ ಬದ್ಧವಾಗಿದ್ದೇನೆ. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದರು. ಸೌಹಾರ್ದತೆ, ಸಮನ್ವಯತೆ ಕಾಯ್ದುಕೊಂಡು ಎರಡು ರಾಜ್ಯಗಳ ನಡುವಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಶ್ರೀ ಕ್ಷೇತ್ರದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಸಹ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಸ್ವಾಮಿವಿವೇಕಾನಂದ, ಮಹಾತ್ಮಗಾಂಧಿ, ಬಿ.ಆರ್ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನ್ ಆದರ್ಶ ವ್ಯಕ್ತಿಗಳು, ಸಾಧು-ಸಂತರು ಜನಿಸಿರುವ ದೇಶ ನಮ್ಮದಾಗಿದೆ. ಇಂತಹ ಪುಣ್ಯ ನೆಲದಲ್ಲಿ ನಮ್ಮ ನಡೆ-ನುಡಿ, ಚಿಂತನೆಗಳು ಬದಲಾಗಿವೆ. ಸಮಾಜಕ್ಕೆ ಅನನ್ಯ ಸೇವೆ ನೀಡಿರುವವರನ್ನು ಸ್ಮರಿಸಿ ಅವರಿಗೆ ಗೌರವ ನೀಡುವ ಕೃತಜ್ಞತಾ ಭಾವನೆ ಸಹ ಇಲ್ಲವಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
    ಚಿತ್ರದುರ್ಗ ಬಂಜಾರ ಮಠದ ಪೀಠಾಧ್ಯಕ್ಷರಾದ ಶ್ರೀ ಸೇವಾಲಾಲ್ ಸರ್ದಾರ್‌ಜೀ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಕ್ಷೇತ್ರದ ಸಿದ್ದರ್ ಮಹಾ ಸ್ವಾಮೀಜಿಯವರು ತಮ್ಮದೇ ಆದ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು. ಜಾತ್ಯಾತೀತ ಮನೋಭಾವನೆಯೊಂದಿಗೆ ಕ್ಷೇತ್ರವನ್ನು ಕಟ್ಟಿಬೆಳೆಸಿವಲ್ಲಿ ಯಶಸ್ವಿಯಾಗಿದ್ದರು. ಅವರು ಇಂದಿಗೂ ನಮ್ಮೆಲ್ಲರ ಮುಂದೆ ಜೀವಂತವಾಗಿ ಉಳಿದುಕೊಂಡಿದ್ದಾರೆಂಬ ಭಾವನೆ ವ್ಯಕ್ತವಾಗುತ್ತಿದೆ. ಅವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕಾಗಿದೆ ಎಂದರು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ,  ಬಾಗಲಕೋಟೆ ಸುಕ್ಷೇತ್ರ ಕುಳ್ಳೂರು ಶ್ರೀ ಗುರು ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಶ್ರೀ ಬಸವಾನಂದ ಭಾರತಿ ಸ್ವಾಮೀಜಿ, ಜಮ್ಮು ಹಾಕನೋರ್ ಶ್ರೀರಾಮ್ ಮಂದಿರ ಪೌಲಿವಾಲ ಆಶ್ರಮಂ ಶ್ರೀ ಅಣ್ಣಮಲೈಮೌನ ಸ್ವಾಮೀಜಿ ಮತ್ತು ಹರಿದ್ವಾರ್ ಕನ್ಕಾಲ್, ಭೈರಾಗಿ ಕ್ಯಾಂಪ್, ಅಭಿದ್ ಗಂಗಾ ಮೈಯ್ಯ ಅಮಂ ಶ್ರೀ ಕೃಷ್ಣನಂದ ಭಾರತಿ ಸ್ವಾಮೀಜಿ, ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಸುಂದರ್ ಬಾಬು, ಜಿ. ಧರ್ಮಪ್ರಸಾದ್, ಕೆ. ಮಂಜುನಾಥ್, ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ ಮತ್ತು ಭದ್ರಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಶ್ಯಾಮರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್ ಅಧ್ಯಕ್ಷತೆ ವಹಿಸಿದ್ದರು.  ಸ್ವಾಗತ ಸಮಿತಿ ಅಧ್ಯಕ್ಷರಾದ ಹಾ. ರಾಮಪ್ಪ, ಗೌರವಾಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಲ್ ಸಂಜೀವ್‌ಕುಮಾರ್, ಜೆ. ಮಂಜುನಾಥ್, ಕಾರ್ಯದರ್ಶಿಗಳಾದ ಆರ್. ವೆಂಕಟೇಶ್, ವಿ. ರವಿ, ಜಿ. ಸಿದ್ದಾರ್ಥ, ಕೆ. ಚಂದ್ರಶೇಖರ್, ಖಜಾಂಚಿ ಜಿ.ಟಿ ಮೂರ್ತಿ, ಕೆ. ಕುಮಾರನ್, ಸಲಹೆಗಾರರಾದ ಕಣ್ಣಪ್ಪ, ವಿ. ಕದಿರೇಶ್, ವಿ. ಸುಬ್ರಮಣಿ, ಸದಸ್ಯರಾದ ವೈ.ಎಸ್ ರಾಮಮೂರ್ತಿ, ಎಂ.ಎಲ್ ನಾರಾಯಣಸ್ವಾಮಿ, ಮೂರ್ತಿ, ಕೆ. ರಾಜಗೋಪಾಲ್, ಎಂ. ವೇಲು, ಎಸ್.ಎಸ್ ಬೀರಾದಾರ್, ಕೆ. ಶ್ರೀನಿವಾಸ್, ನಲ್ಲುಸ್ವಾಮಿ, ಕಾಳಯಣ್ಣ, ಧನಂಜಯ, ಪಂಚಾಕ್ಷರಿ, ಷಣ್ಮುಗಂ, ಜಗದೀಶ್ ಆಚಾರ್, ಡಾ. ವಿಕ್ರಮ್‌ಘೋಷ್ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. ಎಚ್. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.

Sunday, December 4, 2022

ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿದರು. 
    ಭದ್ರಾವತಿ, ಡಿ. ೪: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭಕ್ಕೆ ಶನಿವಾರ ಸಂಜೆ ಆಗಮಿಸಿದ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ ಕೋರಲಾಯಿತು.    
    ಶ್ರೀ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ ಆಗಮಿಸಿದ ಪ.ಪೂ ದತ್ತಾವಧೂತ ಮಹಾರಾಜರು ಹಾಗು ಆಶ್ರಮ ವಾಸಿಗಳನ್ನು ಮಂಗಳವಾದ್ಯ, ನಾದಸ್ವರ ಹಾಗು ಪುಷ್ಪವೃಷ್ಟಿಯೊಂದಿಗೆ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಆರತಿ ಮಂತ್ರಪುಷ್ಪ, ಪ್ರಸಾದ ವಿನಿಯೋಗ ಜರುಗಿತು.
    ಭಾನುವಾರ ಬೆಳಿಗ್ಗೆ  ಕಾಕಡಾರತಿ ಹಾಗು ಪಂಚಪದಿ ಭಜನೆ, ಪ್ರಾತಃಕಾಲ ಪೂಜೆ, ಸಾಮೂಹಿಕ ಜಪ ಮತ್ತು ಶ್ರೀ ಹನುಮಾನ್ ಚಾಲೀಸ ಪಾಠ ಹಾಗು ಮಧ್ಯಾಹ್ನ ಆಶೀರ್ವಚನ ಹಾಗು ಮಾಹಾನೈವೇದ್ಯ, ಮಹಾಮಂಗಳಾರತಿ ಹಾಗು ಮಹಾಪ್ರಸಾದ ವಿನಿಯೋಗ ಜರುಗಿತು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪ.ಪೂ ದತ್ತಾವಧೂತ ಮಹಾರಾಜರ ದರ್ಶನ ಪಡೆದರು.

ರೋಟರಿ ಸಮುದಾಯದಿಂದ ಯಶಸ್ವಿಯಾಗಿ ಜರುಗಿದ ‘ತುಂಗಾಭದ್ರಾ ಕ್ರೀಡೋಲ್ಲಾಸ’

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೪ : ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ರೋಟರಿ ಜೋನ್-೧೦ರ ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ನಾರ್ತ್, ಶಿವಮೊಗ್ಗ ಮಿಡ್-ಟೌನ್, ಶಿವಮೊಗ್ಗ ರಿವರ್‌ಸೈಡ್, ಶಿವಮೊಗ್ಗ ಜ್ಯೂಬ್ಲಿ, ಕದಂಬ(ಶಿಕಾರಿಪುರ) ಮತ್ತು ಶಿವಮೊಗ್ಗ ಮಲೆನಾಡು ಹಾಗೂ ಜೋನ್-೧೧ರ ಶಿವಮೊಗ್ಗ ಈಸ್ಟ್, ಶಿವಮೊಗ್ಗ ಸೆಂಟ್ರಲ್, ತೀರ್ಥಹಳ್ಳಿ, ಸಾಗರ, ಕೋಣಂದೂರು, ರಿಪ್ಪನ್‌ಪೇಟೆ ಮತ್ತು ಸೊರಬ ಒಟ್ಟು ೧೬ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.


    ಭದ್ರಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪ್ರಮುಖರಾದ ಡಾ. ಗುಡದಪ್ಪ ಕಸಬಿ, ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕ್ರಿಕೆಟ್ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಿ.ಎಲ್ ಚಾಂದ್ವಾನಿಯವರು ರೋಟರಿ ಸಮುದಾಯ ಒಂದೆಡೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯ ಬೆಳವಣಿಯಾಗಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಶುಭ ಹಾರೈಸಿದರು.

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಗೀತಾ ಜಯಂತಿ

ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೪ : ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಬಿ.ಕೆ ಮಾಲಕ್ಕ ನೇತೃತ್ವದಲ್ಲಿ ಬೆಳಿಗ್ಗೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಜಯಂತಿ ಮಹತ್ವ ವಿವರಿಸಲಾಯಿತು. ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಗೀತಾ ಜಯಂತಿ ಪುಸ್ತಕ ವಿತರಿಸಲಾಯಿತು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕೇಂದ್ರ ಮೀಸಲು ಪೊಲೀಸ್ ಪಡೆ, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ೯೭ ಬೆಟಾಲಿಯನ್ ಡೆಪ್ಯೂಟಿ ಕಮಾಂಡೆಂಟ್‌ಗಳಾದ ಬಿ.ಸಿ ರಾಯ್, ನಯನ್ ನಂದಿ ಮತ್ತು ಸಂತೋಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾಕರ್ತರು, ಗೃಹ ರಕ್ಷಕದಳ ಘಟಕಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು, ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು. ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಜಿ.ಎಂ ನಟರಾಜ್ ವಂದಿಸಿದರು.


ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.