Friday, February 10, 2023

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ


 ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಫೆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಿ.ಎನ್ ರಸ್ತೆ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ

೨೩ನೇ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಆನವಟ್ಟಿ ಗ್ರಾಮದ ಯುವ ಜನತೆಯಿಂದ ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨೩ನೇ ದಿನ ಪೂರೈಸಿತು. ಸಂಜೆ ನ್ಯೂಟೌನ್, ನ್ಯೂಕಾಲೋನಿ, ಆಂಜನೇಯ ಅಗ್ರಹಾರ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು.
    ಭದ್ರಾವತಿ, ಫೆ. ೧೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨೩ನೇ ದಿನ ಪೂರೈಸಿತು. ಸಂಜೆ ನ್ಯೂಟೌನ್, ನ್ಯೂಕಾಲೋನಿ, ಆಂಜನೇಯ ಅಗ್ರಹಾರ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು.
    ಗುತ್ತಿಗೆ ಕಾರ್ಮಿಕರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈ ನಡುವೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಇದೀಗ ಹೋರಾಟಕ್ಕೆ ಕ್ಷೇತ್ರದ ಸಮಸ್ತ ಜನರ ಬೆಂಬಲ ಪಡೆದುಕೊಳ್ಳಲು ಮುಂದಾಗಿವೆ. ಈ ಹಿನ್ನಲೆಯಲ್ಲಿ ಕಳೆದ ೨ ದಿನಗಳಿಂದ ಒಂದೊಂದು ವ್ಯಾಪ್ತಿಯಲ್ಲಿ ಜಾಥಾ ನಡೆಸುವ ಮೂಲಕ ಕರಪತ್ರಗಳನ್ನು ವಿತರಿಸಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ.
    ಸಂಜೆ ಹೋರಾಟ ಸ್ಥಳದಿಂದ ಆರಂಭಗೊಂಡ ಜಾಥಾ ವಿಐಎಸ್‌ಎಲ್ ಕ್ರೀಡಾಂಗಣ ರಸ್ತೆಯಲ್ಲಿ ಸಾಗಿ ಎಸ್‌ಎವಿ ವೃತ್ತ, ಬೆಣ್ಣೆ ಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ ಮುಖ್ಯರಸ್ತೆಯಲ್ಲಿ ಸಾಗಿ ಉಂಬ್ಳೆಬೈಲು ರಸ್ತೆ ವಿದ್ಯಾಮಂದಿರ ಮೂಲಕ ಜಯಶ್ರೀ ವೃತ್ತ ಕೊನೆಯಲ್ಲಿ ಹೋರಾಟ ಸ್ಥಳ ತಲುಪಿತು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ವಿಐಎಸ್‌ಎಲ್ ಉಳಿಸಲು ಪ್ರಧಾನ ಮಂತ್ರಿಗೆ ಮನವಿ :
    ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಯುವ ಜನತೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ಸಂಬಂಧ ಪ್ರಧಾನ ಮಂತ್ರಿಗೆ ಶುಕ್ರವಾರ ಉಪ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.
ದೇಶದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ ವಿಐಎಸ್‌ಎಲ್ ಕಾರ್ಖಾನೆ ದೇಶದ ಅಭಿವೃದ್ಧಿಯಲ್ಲಿ ಗಣನೀಯವಾದ ಕೊಡುಗೆ ನೀಡಿದ್ದು, ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗದ ಆಸರೆಯಾಗಿದೆ. ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೋರಲಾಗಿದೆ.


ಕುವೆಂಪು ವಿ.ವಿ ಆಡಳಿತ ವಿಭಾಗದ ಕುಲಸಚಿವರಾಗಿ ಪ್ರೊ. ಸಿ. ಗೀತಾ ಅಧಿಕಾರ ಸ್ವೀಕಾರ


ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಆಡಳಿತ(ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡ ಪ್ರೊ. ಸಿ. ಗೀತಾರವರನ್ನು ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ಅಭಿನಂದಿಸಿದೆ.
    ಭದ್ರಾವತಿ, ಫೆ. ೧೦ : ಕುವೆಂಪು ವಿಶ್ವ ವಿದ್ಯಾಲಯದ ಹಿರಿಯ ಡೀನ್ ಮತ್ತು ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಗೀತಾ  ಕುಲಸಚಿವ ಆಡಳಿತ (ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡಿದ್ದಾರೆ.
    ಈ ಹಿಂದೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿ ಜಿ. ಅನುರಾಧರವರನ್ನು ಸರ್ಕಾರ ಕುಲಸಚಿವ ಆಡಳಿತ ಹುದ್ದೆಗೆ ನೇಮಕಗೊಳಿಸಿತ್ತು. ಈ ನಡುವೆ ಜಿ. ಅನುರಾಧರವರು ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳೊಂದಿಗೆ ಅವರನ್ನು ವರ್ಗಾಹಿಸುವಂತೆ ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಹಣಕಾಸು ಅಧಿಕಾರಿಯನ್ನು ಸಹ ವರ್ಗಾವಣೆಗೊಳಿಸುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಸರ್ಕಾರ ಇಬ್ಬರನ್ನು  ವರ್ಗಾವಣೆಗೊಳಿಸಿದೆ.
    ಜಿ. ಅನುರಾಧ ಅವರಿಂದ ತೆರವಾಗಿರುವ ಹುದ್ದೆಗೆ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ, ಶಿಕ್ಷಣ ನಿಕಾಯ ಡೀನರು ಪ್ರೊ. ಸಿ. ಗೀತಾರವರನ್ನು ನೇಮಕ(ಪ್ರಭಾರ)ಗೊಳಿಸಿ ಹಾಗು ಎಸ್. ರಾಮಕೃಷ್ಣ ಅವರಿಂದ ತೆರವಾಗಿರುವ ಹಣಕಾಸು ಅಧಿಕಾರಿ ಹುದ್ದೆಗೆ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ವೈ.ಎಲ್ ರಾಮಚಂದ್ರ ಅವರನ್ನು ನೇಮಕ(ತಾತ್ಕಾಲಿಕ)ಗೊಳಿಸಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
    ಕುಲಸಚಿವ ಆಡಳಿತ(ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡ ಪ್ರೊ. ಸಿ. ಗೀತಾರವರನ್ನು ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ಅಭಿನಂದಿಸಿದೆ.

ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ವಿಮರ್ಶ ಸಿ.ಎಂ ಕವಾಡ್ ತೃತೀಯ ಸ್ಥಾನ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾ ಸಂಸ್ಥೆ ೩ನೇ ತರಗತಿ ವಿದ್ಯಾರ್ಥಿನಿ ವಿಮರ್ಶ ಸಿ.ಎಂ ಕವಾಡ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ತೃತೀಯ ಸ್ಥಾನಪಡೆದು ಕೊಂಡಿದ್ದಾಳೆ.
    ಭದ್ರಾವತಿ, ಫೆ. ೧೦ :  ಕರಾಟೆ ಇಂಡಿಯಾ ಆರ್ಗನೈಸೇಷನ್ ಹಾಗೂ ಏಷಿಯನ್ ಕರಾಟೆ ಫೆಡರೇಷನ್/ ವರ್ಡ್ ಕರಾಟೆ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾ ಸಂಸ್ಥೆ ೩ನೇ ತರಗತಿ ವಿದ್ಯಾರ್ಥಿನಿ ವಿಮರ್ಶ ಸಿ.ಎಂ ಕವಾಡ್ ಭಾಗವಹಿಸಿ ತೃತೀಯ ಸ್ಥಾನಪಡೆದು ಕೊಂಡಿದ್ದಾಳೆ.
    ಮೈಸೂರಿನ ಸೇಂಟ್ ಫಿಲೋಮಿನಾಸ್ ಕಾಲೇಜ್ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೩ನೇ ಸ್ಥಾನ ಪಡೆದುಕೊಂಡು  ರಾಜ್ಯಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿ ಇದೆ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಸಿ.ಡಿ ಮಂಜುನಾಥ್‌ರವರ ಪುತ್ರಿಯಾಗಿದ್ದು, ಈ ವಿದ್ಯಾರ್ಥಿಯನ್ನು  ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ. 

ಅಕ್ರಮ ಮದ್ಯ ಮಾರಾಟ : ದಾಳಿ


    ಭದ್ರಾವತಿ, ಫೆ. ೧೦: ನಗರದ ಹೊಸ ಸಿದ್ದಾಪುರದ-ನಂಜಾಪುರ ರಸ್ತೆಯಲ್ಲಿರುವ ಹೋಟೆಲ್ ಮೇಲೆ ನ್ಯೂಟೌನ್ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಈ ವ್ಯಾಪ್ತಿಯಲ್ಲಿ ಬೀಟ್ ಗಸ್ತಿನಲ್ಲಿದ್ದ  ಸಿ.ಎಚ್.ಸಿ ಗಂಗಾಧರ್‌ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿರವರ ಮಾರ್ಗದರ್ಶನದಲ್ಲಿ ಪೊಲೀಸರು ಶಿವಕುಮಾರ್ ಎಂಬುವರ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಒಟ್ಟು ಸುಮಾರು ರು.೭೦೨ ರು. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋ ಮಾಂಸ ಸಾಗಾಟ ಆರೋಪ : ಓರ್ವನ ಮೇಲೆ ಹಲ್ಲೆ

    ಭದ್ರಾವತಿ, ಫೆ. ೧೦: ನಗರದ ಕಂಚಿಬಾಗಿಲು ವೃತ್ತದಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
    ಅನ್ವರ್ ಕಾಲೋನಿ ಖಲಂದರ್ ನಗರದ ನಿವಾಸಿ ರಹಮಾನ್ ಎಂಬಾತ ಗೋ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ನಡುವೆ ರಹಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿರುವ ರಹಮಾನ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಬೇಕಿದೆ ಎನ್ನಲಾಗಿದೆ.

ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ಅಮೋಸ್

 


   ಭದ್ರಾವತಿ, ಫೆ. ೧೦: ಕ್ರೈಸ್ತ ಸಮಾಜದ ಯುವ ಮುಖಂಡ, ಅಂಜನೇಯ ಅಗ್ರಹಾರ ನಿವಾಸಿ ಅಮೋಸ್‌ರನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ನೇಮಕಗೊಳಿಸಲಾಗಿದೆ. 

   ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನೇಮಕ ಆದೇಶ ಹೊರಡಿಸಿದ್ದು, ಜೆಡಿಎಸ್ ಪಕ್ಷದ ಸರ್ಕಾರದ ಸಾಧನೆಗಳು ಹಾಗು ಪಕ್ಷದ ಕಾರ್ಯಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. 
ಅಮೋಸ್‌ರವರು ಈ ಹಿಂದೆ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಸಹ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು.  ಇವರನ್ನು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಕ್ರೈಸ್ತ ಸಮಾಜದ ಪ್ರಮುಖರು, ಸ್ನೇಹಿತರು ಅಭಿನಂದಿಸಿದ್ದಾರೆ.