ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಆಡಳಿತ(ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡ ಪ್ರೊ. ಸಿ. ಗೀತಾರವರನ್ನು ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ಅಭಿನಂದಿಸಿದೆ.
ಭದ್ರಾವತಿ, ಫೆ. ೧೦ : ಕುವೆಂಪು ವಿಶ್ವ ವಿದ್ಯಾಲಯದ ಹಿರಿಯ ಡೀನ್ ಮತ್ತು ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಗೀತಾ ಕುಲಸಚಿವ ಆಡಳಿತ (ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿ ಜಿ. ಅನುರಾಧರವರನ್ನು ಸರ್ಕಾರ ಕುಲಸಚಿವ ಆಡಳಿತ ಹುದ್ದೆಗೆ ನೇಮಕಗೊಳಿಸಿತ್ತು. ಈ ನಡುವೆ ಜಿ. ಅನುರಾಧರವರು ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳೊಂದಿಗೆ ಅವರನ್ನು ವರ್ಗಾಹಿಸುವಂತೆ ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಹಣಕಾಸು ಅಧಿಕಾರಿಯನ್ನು ಸಹ ವರ್ಗಾವಣೆಗೊಳಿಸುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಸರ್ಕಾರ ಇಬ್ಬರನ್ನು ವರ್ಗಾವಣೆಗೊಳಿಸಿದೆ.
ಜಿ. ಅನುರಾಧ ಅವರಿಂದ ತೆರವಾಗಿರುವ ಹುದ್ದೆಗೆ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ, ಶಿಕ್ಷಣ ನಿಕಾಯ ಡೀನರು ಪ್ರೊ. ಸಿ. ಗೀತಾರವರನ್ನು ನೇಮಕ(ಪ್ರಭಾರ)ಗೊಳಿಸಿ ಹಾಗು ಎಸ್. ರಾಮಕೃಷ್ಣ ಅವರಿಂದ ತೆರವಾಗಿರುವ ಹಣಕಾಸು ಅಧಿಕಾರಿ ಹುದ್ದೆಗೆ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ವೈ.ಎಲ್ ರಾಮಚಂದ್ರ ಅವರನ್ನು ನೇಮಕ(ತಾತ್ಕಾಲಿಕ)ಗೊಳಿಸಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಕುಲಸಚಿವ ಆಡಳಿತ(ಪ್ರಭಾರ) ಹುದ್ದೆ ಅಧಿಕಾರ ವಹಿಸಿಕೊಂಡ ಪ್ರೊ. ಸಿ. ಗೀತಾರವರನ್ನು ಕುವೆಂಪು ವಿಶ್ವವಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ಮತ್ತು ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ಅಭಿನಂದಿಸಿದೆ.
No comments:
Post a Comment