ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಫೆ. ೨೪ರಂದು ಭದ್ರಾವತಿ ಸಂಪೂರ್ಣ ಬಂದ್ ಮಾಡುವ ಕರೆ ನೀಡಲಾಗುತ್ತಿದ್ದು, ನಮ್ಮ ಹೋರಾಟಕ್ಕೆ ಸಮಸ್ತ ನಾಗರೀಕರು ಬೆಂಬಲ ಸೂಚಿಸುವ ಮೂಲಕ ಬಂದ್ ಯಶಸ್ವಿಗೆ ಸಹಕರಿಸುವಂತೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ.
ಭದ್ರಾವತಿ, ಫೆ. ೨೦: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಫೆ. ೨೪ರಂದು ಭದ್ರಾವತಿ ಸಂಪೂರ್ಣ ಬಂದ್ ಮಾಡುವ ಕರೆ ನೀಡಲಾಗುತ್ತಿದ್ದು, ನಮ್ಮ ಹೋರಾಟಕ್ಕೆ ಸಮಸ್ತ ನಾಗರೀಕರು ಬೆಂಬಲ ಸೂಚಿಸುವ ಮೂಲಕ ಬಂದ್ ಯಶಸ್ವಿಗೆ ಸಹಕರಿಸುವಂತೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ.
ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಪ್ರಮುಖರು, ನಾಡಿನ ಪ್ರತಿಷ್ಠಿತ, ತಾಲೂಕಿನ ಜೀವನಾಡಿಯಾದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂದಿನ ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಾಯರ ದೂರದೃಷ್ಠಿಯ ಪ್ರತೀಕವಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ಮಲತಾಯಿ ದೋರಣೆಯಿಂದ ನಷ್ಟದ ಹಾದಿ ಹಿಡಿದು, ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.
ಜ.೧೬ ರಂದು ನಡೆದ ಭಾರತೀಯ ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿಯ ಸಭೆಯ ತೀರ್ಮಾನದಂತೆ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮುಚ್ಚಲು ಕಾರ್ಖಾನೆ ಆಡಳಿತ ವರ್ಗಕ್ಕೆ ಆದೇಶ ನೀಡಲಾಗಿರುತ್ತದೆ. ಈ ನಿರ್ಧಾರ ಖಂಡಿಸಿ ಜ.೧೯ ರಿಂದ ಗುತ್ತಿಗೆ ಕಾರ್ಮಿಕರ ಸಂಘದ ನೇತ್ರತ್ವದಲ್ಲಿ ಕಾರ್ಖಾನೆ ಉಳಿಸಲು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ವಿವಿಧ ಮಠಾಧೀಶರು, ಎಲ್ಲಾ ರಾಜಕೀಯ ಮುಖಂಡರುಗಳು, ಸಂಘ-ಸಂಸ್ಥೆಗಳು ಸಂಪೂರ್ಣ ಬೆಂಬಲವನ್ನು ಸೂಚಿಸಿರುತ್ತಾರೆ. ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ಇಷ್ಟೆಲ್ಲಾ ಹೋರಾಟಗಳು ನಡೆಯುತ್ತಿದ್ದರೂ, ಉಕ್ಕು ಪ್ರಾಧಿಕಾರದ ಆಡಳಿತ ವರ್ಗ ಮತ್ತು ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿದಂತೆ ಕಾಣುತ್ತಿಲ್ಲ, ಈ ಹಿನ್ನಲೆಯಲ್ಲಿ ಫೆ.೨೪ ರಂದು ಭದ್ರಾವತಿ ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದರು.
ಕಾರ್ಖಾನೆ ಉಳಿದರೆ ಮಾತ್ರ ಭದ್ರಾವತಿ ಉಳಿದಂತೆ, ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಣೆಯಿಂದ ವರ್ತಕರು, ವ್ಯಾಪಾರಸ್ಥರು ತಮ್ಮ ವ್ಯವಹಾರ, ವಹಿವಾಟುಗಳನ್ನು ಸ್ಥಗಿತಗೊಳಿಸುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದರು. ಅಲ್ಲದೆ ಸಮಸ್ತ ನಾಗರೀಕರು ಸಹ ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಎಚ್.ಜಿ ಸುರೇಶ್, ಉಪಾಧ್ಯಕ್ಷರಾದ ಆರ್. ಮಂಜುನಾಥ್, ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಕಾರ್ಯದರ್ಶಿಗಳಾದ ಗುಣಶೇಖರ್, ವಿನಯ್ ಕುಮಾರ್, ಆರ್. ಅರುಣ್‌ಕುಮಾರ್, ಬಿ.ಟಿ ವಾಸುದೇವ್, ಎಸ್.ಕೆ ಮಂಜುನಾಥ್, ಎಐಟಿಯುಸಿ ಉಪಾಧ್ಯಕ್ಷ ಸಂಜಯ್, ಸತೀಶ್, ಶಿವನಾಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.