೩೩ನೇ ದಿನದ ಹೋರಾಟಕ್ಕೆ ಪೇಜಾವರ ಶ್ರೀ, ಬಿಳಿಕಿ ಶ್ರೀ ಬೆಂಬಲ
ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೩೩ನೇ ದಿನದ ಹೋರಾಟಕ್ಕೆ ಸೋಮವಾರ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಸದಸ್ಯರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬೆಂಬಲ ಸೂಚಿಸಿದರು.
ಭದ್ರಾವತಿ, ಫೆ. ೨೦: ಬಡವರ್ಗದ ಕಾರ್ಮಿಕರ ಹಿತಕಾಪಾಡುವ ಹಿನ್ನೆಲೆಯಿಂದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚದಂತೆ ಕೇಂದ್ರ ಸರ್ಕಾರಕ್ಕೆ ಪುನಃ ಮನವಿ ಮಾಡುವುದಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಸದಸ್ಯರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೩೩ನೇ ದಿನದ ಹೋರಾಟಕ್ಕೆ ಸೋಮವಾರ ಸ್ವಾಮೀಜಿಯವರು ಬೆಂಬಲ ಸೂಚಿಸಿ ಮಾತನಾಡಿದರು.
ಉಕ್ಕಿನ ನಗರದ ಜನರು ಶಾಶ್ವತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನಿಮ್ಮಲ್ಲರ ಪ್ರಯತ್ನ, ಸಂಕಲ್ಪ ಹಾಗು ಭಗವಂತನ ಅನುಗ್ರಹ ದೊರೆಯಬೇಕು. ಭಾನುವಾರ ಕಾರ್ಮಿಕರ ನಿಯೋಗ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಉಡುಪಿಗೆ ಆಗಮಿಸಿದ್ದ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಇಲ್ಲಿನ ಬಡ ಕಾರ್ಮಿಕರ ಬದುಕು ಮೂರಾಬಟ್ಟೆಯಾಗದಂತೆ ಅವರಿಗೆ ಉತ್ತಮ ಬದುಕು ಕಲ್ಪಿಸಿಕೊಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳು ನಾಡಿನ ಓರ್ವ ಸಂತರಾಗಿದ್ದಾರೆ. ಶ್ರೀಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಕಾರ್ಖಾನೆ ಉಳಿವಿಗಾಗಿ ಸುಮಾರು ೧೦ ವರ್ಷಗಳ ಹಿಂದೆ ಬೃಹತ್ ಹೋರಾಟ ರೂಪಿಸಲಾಗಿತ್ತು. ಈ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯತನವಹಿಸಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಈ ಕಾರ್ಖಾನೆಯಿಂದ ಕೇವಲ ಕಾರ್ಮಿಕರ ಬದುಕು ಮಾತ್ರವಲ್ಲ. ಇಡೀ ಭದ್ರಾವತಿ ನಗರದ ಜನತೆಯ ಬದುಕು ಅವಲಂಬಿತವಾಗಿದೆ. ಕಾರ್ಖಾನೆ ಉಳಿವಿಗಾಗಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ದವಿದ್ದೇನೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಮಠಾಧೀಶರ ಪರಿಷತ್‌ನಲ್ಲಿರುವ ಎಲ್ಲಾ ಮಠಾಧೀಶರನ್ನು ಸಹ ಹೋರಾಟಕ್ಕೆ ಕರೆತರುವ ಮೂಲಕ ಮತ್ತಷ್ಟು ಬಲ ತುಂಬುವ ಪ್ರಯತ್ನ ಕೈಗೊಳ್ಳುವುದಾಗಿ ತಿಳಿಸಿದರು.
ಗುತ್ತಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ, ನಿವೃತ್ತ ಹಾಗು ಗುತ್ತಿಗೆ ಕಾರ್ಮಿಕರು, ಮಹಿಳೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀಗಳು ಕಾರ್ಖಾನೆ ಮುಂಭಾಗದಲ್ಲಿರುವ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
No comments:
Post a Comment