ಜಯ ಕರ್ನಾಟಕ ಸಂಘಟನೆವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ
ಭದ್ರಾವತಿ ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೨೦ : ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬಿ.ಹೆಚ್ ರಸ್ತೆ ಖಾತೆ ನಂ. ೧೬೭-೧೮೦, ಪಿ.ಐ.ಡಿ: ೨-೨-೧-೨೮೬ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡ ಪರವಾನಿಗೆ ಪ್ರಕಾರ ನಿರ್ಮಾಣಗೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕೆರೆ-ಕಟ್ಟೆ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ (ಬಫರ್ ಝೋನ್) ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಸರ್ಕಾರದ ಸುತ್ತೋಲೆ ದಿನಾಂಕ : ೧೧-೦೮-೨೦೨೧
ಹೊರಡಿಸಿದ್ದು, ಇದರ ಪ್ರಕಾರ ಕೆರೆ-ಕಟ್ಟೆ ಜಲಕಾಯಗಳ ಅಂಚಿನಿಂದ ೩೦ ಮೀಟರ್‌ವರೆಗಿನ ವಲಯದಲ್ಲಿ (ಬಫರ್ ಝೋನ್) ನಿರ್ಮಾಣವಾಗಿರುವ ಅಕ್ರಮ ಕಟ್ಟಡ/ಸಂರಚನೆಗಳನ್ನು ಸಹ ಕಟ್ಟುನಿಟ್ಟಾಗಿ ತೆರವು ಗೊಳಿಸುವಂತೆ ನಿರ್ದೇಶಿಸಿದೆ. ಆದರೆ ಪ್ರಸ್ತುತ ಕಟ್ಟಡ ನಿರ್ಮಾಣದಾರರು ದಿನಾಂಕ : ೨೦-೧೨-೨೦೨೧ರಂದು ಪರವಾನಿಗೆ ಪಡೆದಿರುತ್ತಾರೆ. ಅದರ ಪ್ರಕಾರ ಇವರು ೧೫ ಮೀಟರ್‌ಗಳು ಮಾತ್ರ ಬಫರ್ ಝೋನ್ ಬಿಟ್ಟಿರುತ್ತಾರೆ. ಅಲ್ಲದೆ ದಿನಾಂಕ: ೨೪-೦೧-೨೦೨೦ರ ಕಟ್ಟಡ ಪರವಾನಿಗೆಯ ಪ್ರಕಾರ ಇದು ಪಾರ್ಕಿಂಗ್ ಸ್ಥಳವಾಗಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ದೂರಿದರು.
ಈ ಹಿಂದೆ ವಿಶಾಲ್ ಮಾರ್ಟ್ ಕಟ್ಟಡವನ್ನು ಸಹ ಯಾವುದೇ ಸೆಟ್‌ಬ್ಯಾಕ್ ಜಾಗ ಹಾಗು ಪಾರ್ಕಿಂಗ್ ಜಾಗ ಬಿಡದೆ ಹಾಗೂ ಪರವಾನಿಗೆ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡು ನಿರ್ಮಿಸಿದ್ದು, ಅಲ್ಲದೆ ನದಿ ಜಾಗ ಒತ್ತುವರಿ ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು.
ಈ ಹಿಂದೆ ಸಂಘಟನೆ ವತಿಯಿಂದ ದೂರು ನೀಡಿದ ಹಿನ್ನಲೆಯಲ್ಲಿ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಟ್ಟಡ ನಿರ್ಮಾಣದ ಸರ್ವೆಯನ್ನು ಪೂರ್ಣಗೊಳಿಸಿ ನಮಗೆ ಹಿಂಬರಹದಲ್ಲಿ ಸೆಟ್‌ಬ್ಯಾಕ್ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುತ್ತದೆ ಮತ್ತು ನದಿ ಜಾಗ ಒತ್ತುವರಿಯಾಗಿದೆ ಎಂದು ಹಿಂಬರಹ ನೀಡಿರುತ್ತಾರೆ.
ಈ ಹಿನ್ನಲೆಯಲ್ಲಿ ವಿಶಾಲ್ ಮಾರ್ಟ್ ಕಟ್ಟಡ ಮತ್ತು ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ತಕ್ಷಣ ಸ್ಥಗಿತಗೊಳಿಸುವ ಜೊತೆಗೆ ಆಕ್ರಮ ಕಟ್ಟಡ ತೆರವುಗೊಳಿಸಬೇಕು. ಅಲ್ಲದೆ ಈ ಆಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮನಾತುಗೊಳಿಸಬೇಕೆಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದ, ಗೌರವಾಧ್ಯಕ್ಷ ಶರವಣ, ತಾಲೂಕು ಅಧ್ಯಕ್ಷ ಆರ್. ಅರುಣ, ತಾಲೂಕು ಕಾರ್ಯಾಧ್ಯಕ್ಷ ಚೇತನ್‌ಕುಮಾರ್, ಪ್ರಧಾನ ಕಾರ್ಯಧರ್ಶಿ ಸಿ. ಜೀವನ್‌ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಡಿ.ಟಿ ಶಶಿಕುಮಾರ್, ಆಟೋ ಶಂಕರ್, ವರಲಕ್ಷ್ಮೀ, ಬಿ.ಆರ್ ಜಯ, ಚಂದ್ರಶೇಖರ್, ಯೋಗೇಶ್, ತ್ಯಾಗರಾಜ್, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment