Friday, March 10, 2023

ಮಾ.11ರಂದು ನವೀಕೃತ ಪತ್ರಿಕಾಭವನ ಉದ್ಘಾಟನೆ



ಮಾ.೧೧ರಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ,

    ಭದ್ರಾವತಿ, ಮಾ. ೧೧ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಮಾ.೧೧ರ ಶನಿವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಬೆಳಿಗ್ಗೆ ೧೧ ಗಂಟೆಗೆ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ತಾಲೂಕು ಕಛೇರಿ ರಸ್ತೆ ಕಂಚಿಬಾಗಿಲು ವೃತ್ತದ ಸಮೀಪ ನಿರ್ಮಾಣಗೊಳ್ಳಲಿರುವ ಗುರು ಭವನ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಭವನ ಮತ್ತು ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆ ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿರುವರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಬಿ ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಎಸ್.ಎಲ್ ಭೋಜೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭಾ ಸದಸ್ಯ ಆರ್. ಶ್ರೇಯಸ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ನಗರಸಭೆ ಉಪಾಧ್ಯಕ್ಷರಾಗಿ ಸರ್ವಮಂಗಳ ಭೈರಪ್ಪ

ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ವಾರ್ಡ್ ನಂ. ೨೬ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ, ಮಾ. ೧೦: ನಗರಸಭೆ ಉಪಾಧ್ಯಕ್ಷರಾಗಿ ವಾರ್ಡ್ ನಂ. ೨೬ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಸರ್ವಮಂಗಳರವರು ೧೮ ಹಾಗು ಇವರ ಪ್ರತಿಸ್ಪರ್ಧಿ ವಾರ್ಡ್ ನಂ.೨೫ರ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಉದಯಕುಮಾರ್ ೧೧ ಮತಗಳನ್ನು ಪಡೆದುಕೊಂಡರು. ಒಟ್ಟು ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನದ ಅಧಿಕಾರ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಮೊದಲ ಒಪ್ಪಂದ ಅವಧಿಗೆ ಚನ್ನಪ್ಪ ಅಧಿಕಾರ ಪೂರೈಸಿದ್ದಾರೆ. ಇದೀಗ ೨ನೇ ಒಪ್ಪಂದದ ಅವಧಿಗೆ ಸರ್ವಮಂಗಳ ಆಯ್ಕೆಯಾಗಿದ್ದಾರೆ.
    ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೩ ಸದಸ್ಯರು ಹಾಗು ಓರ್ವ ಪಕ್ಷೇತರ ಸದಸ್ಯ ತಟಸ್ಥರಾಗಿ ಉಳಿದುಕೊಂಡಿದ್ದು, ಓರ್ವ ಜೆಡಿಎಸ್ ಸದಸ್ಯ ಚುನಾವಣೆಯಲ್ಲಿ ಪಾಲ್ಗೊಂಡಿಲ್ಲ. ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು. ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.

Thursday, March 9, 2023

ಮಾ.೧೧ರಂದು ನವೀಕೃತ ಪತ್ರಿಕಾಭವನ ಉದ್ಘಾಟನೆ

    ಭದ್ರಾವತಿ, ಮಾ. ೧೦ : ಹಳೇನಗರದ ಪತ್ರಿಕಾಭವನ ಟ್ರಸ್ಟ್ ವತಿಯಿಂದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ  ನವೀಕೃತ ಪತ್ರಿಕಾಭವನ ಉದ್ಘಾಟನಾ ಸಮಾರಂಭ ಮಾ. ೧೧ರ ಶನಿವಾರ, ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಕೆ.ಸಂಗಮೇಶ್ವರ್, ಜೆಡಿಎಸ್ ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ, ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೆ.ಎನ್ ಶ್ರೀಹರ್ಷ ಪಾಲ್ಗೊಳ್ಳಲಿದ್ದಾರೆ.
    ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.

ವಿಜೃಂಭಣೆಯಿಂದ ಜರುಗಿದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮಾ. ೯: ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು.
    ರಥೋತ್ಸವದ ಅಂಗವಾಗಿ ಹೋಮ-ಹವನ, ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜೈಕಾರ ಹಾಕಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಸೇರ್ಪಡಿಸಲಾಗಿತ್ತು. ವಿವಿಧ ಸಂಘ-ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ನಡೆಯಿತು.  
    ಪ್ರತಿವರ್ಷದಂತೆ ಈ ಬಾರಿ ಸಹ ರಥೋತ್ಸವದಲ್ಲಿ ಸುಣ್ಣದಹಳ್ಳಿ, ಮಾರುತಿನಗರ, ಎರೇಹಳ್ಳಿ, ಮೊಸರಹಳ್ಳಿ, ಬಾರಂದೂರು, ತಾಷ್ಕೆಂಟ್ ನಗರ, ಮಾವಿನಕೆರೆ, ಕೆ.ಎಚ್ ನಗರ, ಅಂತರಗಂಗೆ, ಆನೆಕೊಪ್ಪ, ಉಜ್ಜನಿಪುರ, ಕಾಗದನಗರ, ಕೋಡಿಹಳ್ಳಿ, ನೆಹರು ನಗರ, ಎಂ.ಎಂ ಕಾಂಪೌಂಡ್, ಗಾಂಧಿನಗರ, ಹೊಸಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ನಾಗಮ್ಮ ನಿಧನ

ನಾಗಮ್ಮ ದಿವಂಗತ ಚೆನ್ನಬಸವಯ್ಯ
    ಭದ್ರಾವತಿ, ಮಾ. ೯:  ಹಳೇನಗರದ ಹೊಸ ಸೇತುವೆ ರಸ್ತೆಯ ಸಿದ್ದಾರೂಢ ನಗರದ ನಿವಾಸಿ, ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗಯ್ಯ(೮೯)ರವರ ತಾಯಿ ನಾಗಮ್ಮ ದಿವಂಗತ ಚೆನ್ನಬಸವಯ್ಯ(೮೯) ಗುರುವಾರ ಬೆಳಿಗ್ಗೆ ನಿಧನ ಹೊಂದಿದರು.
    ನಾಗಮ್ಮರವರಿಗೆ ಸಿದ್ದಲಿಂಗಯ್ಯ ಸೇರಿ ಮೂರು ಗಂಡು, ಒಂದು ಹೆಣ್ಣು ಒಟ್ಟು ನಾಲ್ವರು ಮಕ್ಕಳು ಅಪಾರ ಬಂಧು ಬಳಗವಿದೆ. ಗುರುವಾರ ಸಂಜೆ ಹನುಮಂತನಗರದ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿತು.
    ಮೃತರ ನಿಧನವಾರ್ತೆ ತಿಳಿಯುತ್ತಿದ್ದಂತೆ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ಕುಂಟುಂಬಕ್ಕೆ ಸಾಂತ್ವಾನ ಹೇಳಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಸುರೇಶಯ್ಯ, ಶಾಸಕರ ಸಹೋದರ ಬಿ.ಕೆ.ಜಗನ್ನಾಥ್, ತಾ.ಪಂ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ, ಪಡಿತರ ಸಂಘದ ಪದಾಧಿಕಾರಿಗಳು, ಸೇರಿದಂತೆ ಅನೇಕ ಮುಖಂಡರು ಸಂತಾಪ ಸೂಚಿಸಿದರು.

ವಿಐಎಸ್‌ಎಲ್ ಕಾರ್ಖಾನೆಯಿಂದ ‘ಭದ್ರಾವತಿ’ ಅಸ್ತಿತ್ವ : ಬಿ.ಎಂ ಸಂತೋಷ್

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕುರುಬರ ಸಂಘ ಬೆಂಬಲ  

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿದರು.
    ಭದ್ರಾವತಿ, ಮಾ. ೯: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದಾಗಿ ಭದ್ರಾವತಿ ಪ್ರಪಂಚದ ಭೂಪುಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಭವ್ಯ ಪರಂಪರೆ ಹೊಂದಿರುವ ಕಾರ್ಖಾನೆ ಉಳಿಯಬೇಕೆಂಬುದು ಕ್ಷೇತ್ರದ ಪ್ರತಿಯೊಬ್ಬರ ಆಶಯವಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹೇಳಿದರು.
    ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಮಾತನಾಡಿದರು.
    ವಿಐಎಸ್‌ಎಲ್ ಕಾರ್ಖಾನೆ ಪರಂಪರೆ, ವೈಭವ ನಾವೆಲ್ಲರೂ ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವ ಜೊತೆಗೆ ನಮ್ಮ ಬದುಕಿನಲ್ಲೂ ನೋಡಿದ್ದೇವೆ. ಇಂತಹ ಅದ್ಭುತವಾದ ಕಾರ್ಖಾನೆ ಇಲ್ಲದ ಭದ್ರಾವತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಾರ್ಖಾನೆಯಿಂದ ಭದ್ರಾವತಿ ಉಳಿದುಕೊಂಡಿದೆ. ನಮ್ಮೆಲ್ಲರ ಹೋರಾಟ ಕಾರ್ಖಾನೆ ಉಳಿಯುವುದಾಗಿ ಭವಿಷ್ಯದಲ್ಲಿ ಹೋರಾಟ ಅಥವಾ ಇನ್ಯಾವುದೋ ರೀತಿಯ ಪ್ರಯತ್ನದಿಂದ ಕಾರ್ಖಾನೆ ಉಳಿಯುವ ವಿಶ್ವಾಸವಿದೆ ಎಂದರು.
    ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫೦ ದಿನಗಳಿಂದ ನಿರಂತರವಾಗಿ ವಿವಿಧ ರೀತಿಯ ಹೋರಾಟ ನಡೆಸುವ ಜೊತೆಗೆ ಪ್ರಧಾನಿ, ಕೇಂದ್ರ ಸಚಿವರು ಹಾಗು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯುವ ನಿಟ್ಟಿನಲ್ಲೂ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇಂದಿಗೂ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕ್ಷೇತ್ರದಲ್ಲಿರುವ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಮಸ್ತ ನಾಗರೀಕರು ನಿಮ್ಮ ಜೊತೆಗಿದ್ದು, ನಿಮ್ಮ ಎಲ್ಲಾ ಹೋರಾಟಕ್ಕೂ ಕುರುಬರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
    ಈಗಾಗಲೇ ಸಮಾಜದ ಮುಖಂಡರು, ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್‌ರವರು ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಇವರು ಬೆಂಬಲ ಸೂಚಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಕಾರ್ಖಾನೆ ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶ್ರೀ ಕ್ಷೇತ್ರ ಕಾಗಿನೆಲೆ ಪೀಠದ ಸಮಾಜದ ಗುರುಗಳೊಂದಿಗೂ ಸಹ ಈಗಾಗಲೇ ಈ ಸಂಬಂಧ ಚರ್ಚಿಸಲಾಗಿದ್ದು, ಗುರುಗಳು ಸಹ ಇಲ್ಲಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆಂದು ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಹಾಗು ಕುರುಬರ ಸಂಘದ ನಿರ್ದೇಶಕರು, ಸಮಾಜದ ಮುಖಂಡರು, ಕುರುಬ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.