ಮುಚ್ಚುವ ಆದೇಶ ಹಿಂಪಡೆದು ಬಂಡವಾಳ ತೊಡಗಿಸಿ, ಇಲ್ಲವಾದಲ್ಲಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ
![](https://blogger.googleusercontent.com/img/a/AVvXsEj0Dc5U8FuogqagjIJdqBUk2gF6oqyCF2TAAsSYrNLR7tPLTSQxVh05jZH5z-ziOl_tP37to7hFp8EZawCWNhcgjx-XUemnSsECapXrO7SU3mN1kqlF2I63bz4BA9Idf15X8PlXBq3rJIDHYzymOCTlnznkdxCR5nI9FWX1jQGb68SiBRIpOx1yS-yVUg=w400-h225-rw)
ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಗುತ್ತಿಗೆ ಕಾರ್ಮಿಕರು ತಮ್ಮ ತಮ್ಮ ರಕ್ತದಲ್ಲಿ ಪ್ರಧಾನಿಗೆ ಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಒತ್ತಾಯಿಸಿರುವ ಅಂಚೆ ಕಾರ್ಡ್‌ಗಳನ್ನು ಪ್ರದರ್ಶಿಸಿದರು.
ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲು ಕ್ಷಣಗಣನೆ ಎದುರಾಗುತ್ತಿದ್ದು, ಈ ನಡುವೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೬೭ ದಿನಗಳನ್ನು ಪೂರೈಸಿದೆ. ಈ ನಡುವೆ ಹೋರಾಟದ ರೂಪುರೇಷೆಗಳು ಸಹ ಬದಲಾಗುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
೬೭ ದಿನ ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಂಡಿದ್ದಾರೆ.
ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿದ್ದಾರೆ.
ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕಾರ್ಖಾನೆ ಉಳಿವಿಗಾಗಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ
ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಮಾತನಾಡಿದರು.
ಪ್ರತಿಷ್ಠಿತ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಸ್ತುತ ಮುಚ್ಚುವ ಸ್ಥಿತಿ ಎದುರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆ ಕಾರ್ಮಿಕರ ಹೋರಾಟ ಕೇಂದ್ರ ಸರ್ಕಾರದ ಗಮನ ಸೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೇಂದ್ರ ಸರ್ಕಾರ ತಕ್ಷಣ ತನ್ನ ನಿಲುವು ಬದಲಿಸಿಕೊಂಡು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಮಠಾಧೀಶರು ಜೋಳಿಗೆ ಹಿಡಿದು ಕಾರ್ಖಾನೆ ಉಳಿಸಿಕೊಳ್ಳಲು ಮುಂದಾಗುವುದು ಸಿದ್ದ ಎಂದರು.
ರಕ್ತದಲ್ಲಿ ಕಾರ್ಮಿಕರ ಹೋರಾಟದ ಕೂಗು :
ಸಾವಿರಾರು ಗುತ್ತಿಗೆ ಕಾರ್ಮಿಕರು ಭಾನುವಾರ ಅಂಚೆ ಕಾರ್ಡ್‌ನಲ್ಲಿ ತಮ್ಮ ತಮ್ಮ ರಕ್ತದ ಮೂಲಕ ಆಂಗ್ಲ ಭಾಷೆಯಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಹೆಬ್ಬೆಟ್ಟು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಆಗ್ರಹಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು ಹೋರಾಟಕ್ಕೆ ಇದೀಗ ತಮ್ಮ ರಕ್ತ ಚೆಲ್ಲುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಸ್ವರೂಪ ಪಡೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.