Saturday, April 8, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸಮಾಜ ಸೇವಕಿ ಸುಮಿತ್ರ ಬಾಯಿ

ಸುಮಿತ್ರ ಬಾಯಿ
    ಭದ್ರಾವತಿ, ಏ. ೮ : ರಾಜ್ಯ ವಿಧಾನಸಭಾ ಚುನಾವಣೆಗೆ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸುಮಿತ್ರ ಬಾಯಿಯವರಿಗೆ ಅವಕಾಶ ಲಭಿಸಿದೆ.
    ಉಜ್ಜನಿಪುರ ಶಂಕ್ರಪ್ಪ ಕಟ್ಟೆ ಕೆರೆ ಸಮೀಪ ತೋಟದ ಮನೆ ನಿವಾಸಿ ಸುಮಿತ್ರ ಬಾಯಿ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು, ಇವರು ಹಲವಾರು ವರ್ಷಗಳಿಂದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
    ಇವರ ಪತಿ ನಾಗರಾಜ್‌ರಾವ್ ಸಿಂಧೆ ಎಂಪಿಎಂ ನಿವೃತ್ತ ಕಾರ್ಮಿಕರಾಗಿದ್ದು, ಪ್ರಸ್ತುತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ.
    ಈ ಬಾರಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ೩-೪ ಆಕಾಂಕ್ಷಿಗಳು ಪೈಪೋಟಿಗೆ ಮುಂದಾಗಿದ್ದರು. ಪಕ್ಷದ ರಾಜ್ಯ ಚುನಾವಣಾ ಸಮಿತಿ ಸುಮಿತ್ರ ಬಾಯಿಯವರನ್ನು ಆಯ್ಕೆ ಮಾಡಿದೆ.
    ಪಕ್ಷದ ವತಿಯಿಂದ ಈಗಾಗಲೇ ಕಳೆದ ಸುಮಾರು ೬ ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು,  ಅಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸಹ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಈ ಹಿಂದೆ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ.  

ನೆಟ್ಟಕಲ್ಲಹಟ್ಟಿ ಮರಕಡಿತಲೆ ಪ್ರಕರಣ : ಕಂದಾಯ ಅಭಿಪ್ರಾಯ ಕೋರಿಕೆ

    ಭದ್ರಾವತಿ, ಏ. ೮ : ತಾಲೂಕಿನ ಕೂಡ್ಲಿಗೆರೆ ಹೋಬಳಿ ನೆಟ್ಟಕಲ್ಲಹಟ್ಟಿ ಗ್ರಾಮದ ಸರ್ವೆ ನಂ.೮/೨ರ ಜಮೀನಿನಲ್ಲಿ ಬೆಳೆದಿರುವ ಹಾಗು ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಕಂದಾಯ ಅಭಿಪ್ರಾಯ ಕೋರಿದ್ದಾರೆ.
 ಗ್ರಾಮದ ಸರ್ವೆ ನಂ.೮/೨ರ ಜಮೀನು ಈ ಹಿಂದೆ ನಾಗರಾಜ ಬಿನ್ ಬೆಟ್ಟೇಗೌಡ ಎಂಬುವರ ಮಾಲೀಕತ್ವದಲ್ಲಿದ್ದು, ನಂತರ ಪಿ. ರೂಪಾ ಕೋಂ ತಿರುಪತಿರೆಡ್ಡಿ ಎಂಬುವರ ಹೆಸರಿಗೆ ಖಾತೆ ಬದಲಾವಣೆಯಾಗಿರುತ್ತದೆ. ಈ ಜಮೀನಿನಲ್ಲಿ ಬೆಳೆದಿರುವ ಹಾಗು ಜಮೀನಿಗೆ ಹೊಂದಿಕೊಂಡಂತೆ ಇರುವ ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳನ್ನು ಕಡಿತಲೆ ಮಾಡಲಾಗಿತ್ತು. ಅರಣ್ಯ ಇಲಾಖೆ ಮರಗಳ ಕಡಿತಲೆಗೆ ಸಹಕರಿಸಿದೆ ಎಂದು ಇತ್ತೀಚೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದುಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಮತ್ತೊಮ್ಮೆ ಕಂದಾಯ ಅಭಿಪ್ರಾಯ ಕೋರಿ ಪತ್ರ ಬರೆದಿದ್ದಾರೆ.

ಏ.೯ರಂದು ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ

ಕೆ.ಸಿ ವೀರಭದ್ರಪ್ಪ
    ಭದ್ರಾವತಿ, ಏ. ೮: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಏ.೯ರ ಭಾನುವಾರ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಕ್ರೀಡಾಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ ೯.೪೫ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಕಾರ್ಯನಿರ್ವಹಿಸಲಿದ್ದಾರೆ.
    ವಿಶೇಷ ಮನೋರಂಜನೆ, ಸಮಾಜಮುಖಿ ಕಾರ್ಯಕ್ರಮ ಸಹ ನಡೆಯಲಿದ್ದು, ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
    ಲಯನ್ಸ್ ಪುರುಷರಿಗೆ ೧೦೦ ಮೀ. ಮತ್ತು ೨೦೦ ಮೀ. ಓಟ, ಗುಂಡು ಎಸೆತ ಹಾಗು ಹಿರಿಯ ಪುರುಷರಿಗೆ ೧೦೦ ಮೀ. ನಡಿಗೆ, ಸಂಗೀತ ಕುರ್ಚಿ, ಗುರಿ ಎಸೆತ,  ಲಿಯೋಗಳಿಗೆ  ೧೦೦ ಮೀ. ಓಟ, ಷಟಲ್ ರಿಲೇ, ಗುರಿ ಎಸೆತ ಮತ್ತು ಕ್ಲಬ್‌ಗಳಿಗೆ ಥ್ರೋ ಬಾಲ್(ಮಹಿಳೆಯರಿಗೆ), ವಾಲಿಬಾಲ್(ಪುರುಷರಿಗೆ), ಹಗ್ಗಜಗ್ಗಾಟ(ಮಹಿಳೆಯ ಹಾಗು ಪುರುಷರಿಗೆ), ಪೆನಾಲ್ಟಿ ಶೂಟ್ ಔಟ್(ಪುರುಷರಿಗೆ) ಹಾಗು ೩೦ ಯಾರ್ಡ್ ಕ್ರಿಕೆಟ್ ಆಯೋಜಿಸಲಾಗಿದೆ.
    ಲಯನ್ಸ್ ಮಹಿಳೆಯರಿಗೆ ೧೦೦ ಮೀ. ಓಟ, ೨೦೦ ಮೀಟರ್ ಓಟ ಮತ್ತು ಗುಂಡು ಎಸೆತ ಹಾಗು ಹಿರಿಯ ಮಹಿಳೆಯರಿಗೆ ೧೦೦ ಮೀ. ಓಟ, ಸಂಗೀತ ಕುರ್ಚಿ ಹಾಗು ಗುರಿ ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಲಯನ್ಸ್ ಕೆ.ಸಿ ವೀರಭದ್ರಪ್ಪ :
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ‍್ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ‍್ನರ್ ಆಗಿ ಸೇವೆ ಸಲ್ಲಿಸಿದ್ದರು. ನ.೨೫, ೨೦೨೧ರಂದು ನಿಧನ ಹೊಂದಿದರು.

Friday, April 7, 2023

ವಿಐಎಸ್‌ಎಲ್ ನಿವೃತ್ತ ಕಾರ್ಮಿಕ, ಕ್ರೀಡಾಪಟು ರಾಮಣ್ಣ ಶೆಟ್ಟಿ ನಿಧನ

ರಾಮಣ್ಣ ಶೆಟ್ಟಿ 
    ಭದ್ರಾವತಿ, ಏ. ೭ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರಾಮಣ್ಣ ಶೆಟ್ಟಿ(೭೨) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ರಾಮಣ್ಣ ಶೆಟ್ಟಿ ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಇವರು ಕ್ರೀಡಾಪಟುಗಳಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರು, ಕ್ರೀಡಾಪಟುಗಳು, ತಾಲೂಕು ಬಿಜೆಪಿ ಮಂಡಲ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಗಾಂಜಾ ಮಾರಾಟ : ೩ ಜನರ ಬಂಧನ

೭ ಸಾವಿರ ರು. ಮೌಲ್ಯದ ೧೯೫ ಗ್ರಾಂ. ಗಾಂಜಾ ವಶ

ಭದ್ರಾವತಿ ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಹಿಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಹಳೇನಗರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ಭದ್ರಾವತಿ, ಏ. ೭ : ನಗರದ ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಹಿಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಹಳೇನಗರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ೩ ಜನ ಅಪರಿಚಿತರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, ೩ ಜನರನ್ನು ಬಂಧಿಸಿ ಸುಮಾರು ೭ ಸಾವಿರ ರು. ಮೌಲ್ಯದ ೧೯೫ ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ರು.೬೯೦ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆ.೧೯ರಿಂದ ೨ ದಿನ ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ

 ಭಕ್ತರಿಗೆ ಉಚಿತವಾಗಿ ಟಿಪ್ಪಣಿ ಪುಸ್ತಕ ವಿತರಣೆ

    ಭದ್ರಾವತಿ, ಏ. ೭ : ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಅನುಗ್ರಹದಿಂದ ಶ್ರೀದತ್ತಾವಧೂತ ಗುರುಗಳ ಮಾರ್ಗದರ್ಶನದಲ್ಲಿ ನಗರದಲ್ಲಿ ಆ.೧೯ ಮತ್ತು ೨೦ರಂದು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ ಆಯೋಜಿಸಲಾಗಿದೆ.
    ಇದರ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಭಕ್ತರು ಪ್ರತಿನಿತ್ಯ ಶ್ರೀರಾಮನಾಮ ಜಪ ಕೈಗೊಳ್ಳುವಂತೆ ಹಾಗು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
    ಪ್ರತಿನಿತ್ಯ ಜಪಸಂಖ್ಯೆ ಬರೆದುಕೂಳ್ಳಲು ಟಿಪ್ಪಣಿ ಪುಸ್ತಕವನ್ನು ಮುದ್ರಿಸಲಾಗಿದ್ದು, ಇದನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: ೮೬೬೦೬೦೦೮೨೭, ೯೬೩೨೬೨೩೩೦೩ ಅಥವಾ ೯೯೮೦೩೨೩೭೩೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ನಾಮ ಸಾಧಕ ಸಮಿತಿ ತಿಳಿಸಿದೆ.

Thursday, April 6, 2023

ಸುಣ್ಣದಹಳ್ಳಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪವಮಾನ ಹೋಮ, ರಥೋತ್ಸವ

ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು.
    ಭದ್ರಾವತಿ, ಏ. ೬ : ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು
.  ಬೆಳಗ್ಗೆ ೬ ಗಂಟೆಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ,  ೧೨ ಗಂಟೆಗೆ ರಥೋತ್ಸವ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ಆಚರಣೆಗಳು ಸಂಕರ್ಷಣ ಧರ್ಮಸಂಸ್ಥೆ ನೇತೃತ್ವದಲ್ಲಿ ಜರುಗಿದವು  
    ವೇದಬ್ರಹ್ಮ ಶ್ರೀ ಗೋಪಾಲ ಆಚಾರ್, ಸಂಕರ್ಷಣ ಧರ್ಮಸಂಸ್ಥೆ ಅಧ್ಯಕ್ಷ ಯು.ಜಿ ಸುಬ್ರಹ್ಮಣ್ಯ, ರಾಘವೇಂದ್ರ, ವಾಸುದೇವಮೂರ್ತಿ, ಮಧುಸೂಧನ್, ಅನಂತರಾಮನ್, ರಮಾಕಾಂತ್, ವೆಂಕಟೇಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.