Sunday, April 9, 2023

ಡಾ. ವಿಜಯದೇವಿ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆ

ಡಾ. ವಿಜಯದೇವಿ
    ಭದ್ರಾವತಿ, ಏ. ೯ : ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಯವರು 'ಅಕ್ಕಮಹಾದೇವಿ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
    ಬೆಂಗಳೂರಿನ ಜೋಳನಾಯಕನಹಳ್ಳಿಯ ಸುಮಂಗಲಿ ಸೇವಾ ಆಶ್ರಮ ಮೊದಲ ಬಾರಿಗೆ ಪ್ರಸಕ್ತ ಸಾಲಿನಿಂದ ಸಮಾಜ ಸೇವೆ, ಸಾಹಿತ್ಯ ಹಾಗು ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿದೆ.
    ಡಾ. ವಿಜಯದೇವಿಯವರಿಗೆ ಸಾಹಿತ್ಯ ಹಾಗು ಸಮಾಜ ಸೇವೆಯನ್ನು ಗುರುತಿಸಿ ಅಕ್ಕಮಹಾದೇವಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಏ.೨೩ರಂದು ಆಯೋಜಿಸಲಾಗಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಲು ಸೂಪರ್ ಸಂಡೆ ತರಕಾರಿ ಮಾರ್ಕೇಟ್

ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ  ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
    ಭದ್ರಾವತಿ, ಏ. ೯ : ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ  ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
    ಶಾಲಾ ಆವರಣದಲ್ಲಿ ರೂಪಿಸಲಾಗಿದ್ದ ಮಾರ್ಕೇಟ್‌ನಲ್ಲಿ ಮಕ್ಕಳು ಬಗೆ ಬಗೆಯ ಸೊಪ್ಪು, ತರಕಾರಿ ಮಾರಾಟದಲ್ಲಿ ತೊಡಗಿದರು. ಎಲೆಕ್ಟ್ರಾನಿಕ್  ಯಂತ್ರ, ತಕ್ಕಡಿ ಬಳಸಿ ತೂಕ ಅಳತೆ ಮಾಡಲಾಯಿತು. ಇದಕ್ಕೂ ಮೊದಲು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ. ನಾಗರಾಜ್ ಮಾರ್ಕೇಟ್ ಉದ್ಘಾಟಿಸಿದರು.
    ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಹಾಗು ಶಿಕ್ಷಕ ಮತ್ತು ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಮುಖಂಡ ಅಯೂಬ್ ಖಾನ್, ದೇಹದಾರ್ಢ್ಯಪಟು ಶೌಕತ್ ಆಲಿ ಕಾಂಗ್ರೆಸ್ ಸೇರ್ಪಡೆ


ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಯೂಬ್ ಖಾನ್ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೯ : ನಗರದ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಯೂಬ್ ಖಾನ್ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ಅಯೂಬ್ ಖಾನ್‌ರವರು ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಪ್ರಸ್ತುತ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ.  ಶಾಸಕ ಬಿ.ಕೆ ಸಂಗಮೇಶ್ವರ್ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲಗೊಳ್ಳುವ ಮೂಲಕ ಕ್ಷೇತ್ರ ಸರ್ವತೋಮುಖವಾಗಿ ಮತ್ತಷ್ಟು ಅಭಿವೃದ್ಧಿಗೊಳ್ಳುವ ವಿಶ್ವಾಸವಿದೆ ಎಂದರು.  


ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ದೇಹದಾರ್ಢ್ಯ ಪಟು ಶೌಕತ್ ಆಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ದೇಹದಾರ್ಢ್ಯ ಪಟು ಶೌಕತ್ ಆಲಿ ಸಹ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಾಬಳ್ಳಿ ರಾಜಶೇಖರ್, ಅಬ್ದುಲ್ ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ : ಕ್ರೀಡಾಪಟು ಮುನಿರ್ ಬಾಷಾಗೆ ಸನ್ಮಾನ

ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಏ. ೯: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
    ನ್ಯೂಟೌನ್ ಶಿವಭದ್ರ ಟ್ರಸ್ಟ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ, ವೈದ್ಯ ಡಾ. ಟಿ. ನರೇಂದ್ರ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಶ್ರೀಮತಿ ಕೆ.ಸಿ ವೀರಭದ್ರಪ್ಪ, ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಖೋ ಖೋ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಮುನಿರ್‌ಬಾಷಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೊಡ್ಡೇರಿ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಸೌಲಭ್ಯ ವಿತರಿಸಲಾಯಿತು.


ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಮುನಿರ್‌ಬಾಷಾರನ್ನು ಸನ್ಮಾನಿಸಿ ಗೌರವಿಸಲಾಯಿತು.

Saturday, April 8, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸಮಾಜ ಸೇವಕಿ ಸುಮಿತ್ರ ಬಾಯಿ

ಸುಮಿತ್ರ ಬಾಯಿ
    ಭದ್ರಾವತಿ, ಏ. ೮ : ರಾಜ್ಯ ವಿಧಾನಸಭಾ ಚುನಾವಣೆಗೆ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸುಮಿತ್ರ ಬಾಯಿಯವರಿಗೆ ಅವಕಾಶ ಲಭಿಸಿದೆ.
    ಉಜ್ಜನಿಪುರ ಶಂಕ್ರಪ್ಪ ಕಟ್ಟೆ ಕೆರೆ ಸಮೀಪ ತೋಟದ ಮನೆ ನಿವಾಸಿ ಸುಮಿತ್ರ ಬಾಯಿ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು, ಇವರು ಹಲವಾರು ವರ್ಷಗಳಿಂದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
    ಇವರ ಪತಿ ನಾಗರಾಜ್‌ರಾವ್ ಸಿಂಧೆ ಎಂಪಿಎಂ ನಿವೃತ್ತ ಕಾರ್ಮಿಕರಾಗಿದ್ದು, ಪ್ರಸ್ತುತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ.
    ಈ ಬಾರಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ೩-೪ ಆಕಾಂಕ್ಷಿಗಳು ಪೈಪೋಟಿಗೆ ಮುಂದಾಗಿದ್ದರು. ಪಕ್ಷದ ರಾಜ್ಯ ಚುನಾವಣಾ ಸಮಿತಿ ಸುಮಿತ್ರ ಬಾಯಿಯವರನ್ನು ಆಯ್ಕೆ ಮಾಡಿದೆ.
    ಪಕ್ಷದ ವತಿಯಿಂದ ಈಗಾಗಲೇ ಕಳೆದ ಸುಮಾರು ೬ ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು,  ಅಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸಹ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಈ ಹಿಂದೆ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ.  

ನೆಟ್ಟಕಲ್ಲಹಟ್ಟಿ ಮರಕಡಿತಲೆ ಪ್ರಕರಣ : ಕಂದಾಯ ಅಭಿಪ್ರಾಯ ಕೋರಿಕೆ

    ಭದ್ರಾವತಿ, ಏ. ೮ : ತಾಲೂಕಿನ ಕೂಡ್ಲಿಗೆರೆ ಹೋಬಳಿ ನೆಟ್ಟಕಲ್ಲಹಟ್ಟಿ ಗ್ರಾಮದ ಸರ್ವೆ ನಂ.೮/೨ರ ಜಮೀನಿನಲ್ಲಿ ಬೆಳೆದಿರುವ ಹಾಗು ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಕಂದಾಯ ಅಭಿಪ್ರಾಯ ಕೋರಿದ್ದಾರೆ.
 ಗ್ರಾಮದ ಸರ್ವೆ ನಂ.೮/೨ರ ಜಮೀನು ಈ ಹಿಂದೆ ನಾಗರಾಜ ಬಿನ್ ಬೆಟ್ಟೇಗೌಡ ಎಂಬುವರ ಮಾಲೀಕತ್ವದಲ್ಲಿದ್ದು, ನಂತರ ಪಿ. ರೂಪಾ ಕೋಂ ತಿರುಪತಿರೆಡ್ಡಿ ಎಂಬುವರ ಹೆಸರಿಗೆ ಖಾತೆ ಬದಲಾವಣೆಯಾಗಿರುತ್ತದೆ. ಈ ಜಮೀನಿನಲ್ಲಿ ಬೆಳೆದಿರುವ ಹಾಗು ಜಮೀನಿಗೆ ಹೊಂದಿಕೊಂಡಂತೆ ಇರುವ ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳನ್ನು ಕಡಿತಲೆ ಮಾಡಲಾಗಿತ್ತು. ಅರಣ್ಯ ಇಲಾಖೆ ಮರಗಳ ಕಡಿತಲೆಗೆ ಸಹಕರಿಸಿದೆ ಎಂದು ಇತ್ತೀಚೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದುಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಮತ್ತೊಮ್ಮೆ ಕಂದಾಯ ಅಭಿಪ್ರಾಯ ಕೋರಿ ಪತ್ರ ಬರೆದಿದ್ದಾರೆ.

ಏ.೯ರಂದು ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ

ಕೆ.ಸಿ ವೀರಭದ್ರಪ್ಪ
    ಭದ್ರಾವತಿ, ಏ. ೮: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಏ.೯ರ ಭಾನುವಾರ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಕ್ರೀಡಾಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ ೯.೪೫ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಕಾರ್ಯನಿರ್ವಹಿಸಲಿದ್ದಾರೆ.
    ವಿಶೇಷ ಮನೋರಂಜನೆ, ಸಮಾಜಮುಖಿ ಕಾರ್ಯಕ್ರಮ ಸಹ ನಡೆಯಲಿದ್ದು, ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
    ಲಯನ್ಸ್ ಪುರುಷರಿಗೆ ೧೦೦ ಮೀ. ಮತ್ತು ೨೦೦ ಮೀ. ಓಟ, ಗುಂಡು ಎಸೆತ ಹಾಗು ಹಿರಿಯ ಪುರುಷರಿಗೆ ೧೦೦ ಮೀ. ನಡಿಗೆ, ಸಂಗೀತ ಕುರ್ಚಿ, ಗುರಿ ಎಸೆತ,  ಲಿಯೋಗಳಿಗೆ  ೧೦೦ ಮೀ. ಓಟ, ಷಟಲ್ ರಿಲೇ, ಗುರಿ ಎಸೆತ ಮತ್ತು ಕ್ಲಬ್‌ಗಳಿಗೆ ಥ್ರೋ ಬಾಲ್(ಮಹಿಳೆಯರಿಗೆ), ವಾಲಿಬಾಲ್(ಪುರುಷರಿಗೆ), ಹಗ್ಗಜಗ್ಗಾಟ(ಮಹಿಳೆಯ ಹಾಗು ಪುರುಷರಿಗೆ), ಪೆನಾಲ್ಟಿ ಶೂಟ್ ಔಟ್(ಪುರುಷರಿಗೆ) ಹಾಗು ೩೦ ಯಾರ್ಡ್ ಕ್ರಿಕೆಟ್ ಆಯೋಜಿಸಲಾಗಿದೆ.
    ಲಯನ್ಸ್ ಮಹಿಳೆಯರಿಗೆ ೧೦೦ ಮೀ. ಓಟ, ೨೦೦ ಮೀಟರ್ ಓಟ ಮತ್ತು ಗುಂಡು ಎಸೆತ ಹಾಗು ಹಿರಿಯ ಮಹಿಳೆಯರಿಗೆ ೧೦೦ ಮೀ. ಓಟ, ಸಂಗೀತ ಕುರ್ಚಿ ಹಾಗು ಗುರಿ ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಲಯನ್ಸ್ ಕೆ.ಸಿ ವೀರಭದ್ರಪ್ಪ :
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ‍್ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ‍್ನರ್ ಆಗಿ ಸೇವೆ ಸಲ್ಲಿಸಿದ್ದರು. ನ.೨೫, ೨೦೨೧ರಂದು ನಿಧನ ಹೊಂದಿದರು.