Tuesday, April 11, 2023

ಕೊನೆಗೂ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ : ಮಂಗೋಟೆ ರುದ್ರೇಶ್ ಬಿಜೆಪಿ ಅಭ್ಯರ್ಥಿ

ಮಂಗೋಟೆ ರುದ್ರೇಶ್
    ಭದ್ರಾವತಿ, ಏ. ೧೧ : ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯರಿಗೆ ಅದರಲ್ಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಮನವಿಗೆ ಬಿಜೆಪಿ ಪಕ್ಷ ಪೂರಕವಾಗಿ ಸ್ಪಂದಿಸಿದ್ದು, ಯುವ ಮುಖಂಡ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
    ವಿದ್ಯಾರ್ಥಿ ಪರಿಷತ್ ಮೂಲಕ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರವೇಶಿಸುವ ಮೂಲಕ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಎಲ್ಲರನ್ನು ಬೆರಗುಗೊಳಿಸಿದೆ.
    ರುದ್ರೇಶ್ ಮೂಲತಃ ವಕೀಲರಾಗಿದ್ದು, ಇವರ ತಂದೆ ಮಂಗೋಟೆ ಮುರುಗೆಪ್ಪ ಸಹ ಪ್ರಸಿದ್ದ ವಕೀಲರಾಗಿದ್ದರು. ಅಲ್ಲದೆ ತಾಲೂಕು ವಕೀಲರ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ಸಮಾಜವಾದಿ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
    ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ ಸಹ ಈ ಬಾರಿ ಮಂಗೋಟೆ ರುದ್ರೇಶ್‌ಗೆ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.
    ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ  ಪವಿತ್ರ ರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಉದ್ಯಮಿ ಎಚ್.ಸಿ ರಮೇಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪೈಪೋಟಿಗೆ ಮುಂದಾಗಿದ್ದರು.
    ಮಂಗೋಟೆ ರುದ್ರೇಶ್ ಸುಮಾರು ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದರು. ಅಲ್ಲದೆ ವಿಇಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು.

ಏ.೧೬ರಂದು ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ : ಡಿ. ಮಂಜುನಾಥ್

ಭದ್ರಾವತಿ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ.೧೬ರ ಭಾನುವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
    ಭದ್ರಾವತಿ, ಏ. ೧೧: ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ.೧೬ರ ಭಾನುವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನಾಧ್ಯಕ್ಷರಾಗಿ ತಾಲೂಕಿನ ಬಿಆರ್‌ಪಿ ನಿವಾಸಿ ಹಿರಿಯ ಸಾಹಿತಿ ಹೊಸಹಳ್ಳಿ ದಾಳೇಗೌಡರನ್ನು ಆಯ್ಕೆ ಮಾಡಲಾಗಿದೆ.  ಸಮ್ಮೇಳನ ಯಶಸ್ವಿಗೆ ಸ್ವಾಗತ ಸಮಿತಿ, ಹಣಕಾಸು ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ನೋಂದಣಿ ಸಮಿತಿ, ಪ್ರಚಾರ ಸಮಿತಿ, ಆಹಾರ ಸಮಿತಿ ಮತ್ತು ಸತ್ಕಾರ ಸಮಿತಿಗಳನ್ನು ರಚನೆ ಮಾಡಲಾಗಿದೆ.
    ಅಂದು ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ೯.೩೦ಕ್ಕೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ನಾಡದೇವಿ ಭುವನೇಶ್ವರಿ ಹಾಗು ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಗರಸಭೆ ಪೌರಾಯುಕ್ತ ಮನುಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
    ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಿಟ್ಟೂರು ಹಿರಿಯ ಸಾಹಿತಿ ಡಾ. ಶಾಂತರಾಮ್‌ಪ್ರಭು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಲಿದ್ದು, ಸಮ್ಮೇಳನಾಧ್ಯಕ್ಷ ಹೊಸಹಳ್ಳಿ ದಾಳೇಗೌಡ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎ.ಪಿ ಕುಮಾರ್ ಉಪಸ್ಥಿತರಿರುವರು.
    ಕುವೆಂಪು ವಿಶ್ವವಿದ್ಯಾನಿಲಯ ಉಪಕುಲಪತಿ ಬಿ.ಪಿ ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ಆರ್ ದಯಾನಂದ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ, ಉದ್ಯಮಿ ಎ. ಮಾಧು, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮತ್ತು ಪರಿಷತ್ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಎಚ್.ಬಿ ಸಿದ್ದೋಜಿರಾವ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೇವರಹಳ್ಳಿ ಕಾ.ನಾ ರಂಗನಾಥ್‌ರವರ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದರು.
    ಭದ್ರಾವತಿಯ-ಬದುಕಿನ ತಲ್ಲಣಗಳು ವಿಚಾರ ಕುರಿತ ಗೋಷ್ಠಿ-೧, ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತ ಗೋಷ್ಠಿ-೨ ಮತ್ತು ಕವಿಗೋಷ್ಠಿ ಗೋಷ್ಠಿ-೩ ನಡೆಯಲಿದೆ. ಸಂಜೆ ೫.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಹಿರಿಯ ಕವಿ ಎಚ್. ದುಂಡಿರಾಜ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಲಿದ್ದು, ಸಮಾಜ ಸೇವಕ ಸಿ. ಮಹೇಶ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಕೋಗಲೂರು ತಿಪ್ಪೇಸ್ವಾಮಿ, ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ರಮೇಶ್, ಶಿವಕುಮಾರ್, ಕೆ.ಎಸ್ ರೇವಪ್ಪ ಮತ್ತು ಸಿ. ಜಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಹೊಸಹಳ್ಳಿ ದಾಳೇಗೌಡ, ಪ್ರಮುಖರಾದ ಕೋಡ್ಲು ಯಜ್ಞಯ್ಯ, ಎಚ್. ತಿಮ್ಮಪ್ಪ, ಎಂ.ಈ ಜಗದೀಶ್, ಎಂ.ಎಸ್ ಸುಧಾಮಣಿ, ಬಿ. ಕಮಲಾಕರ್, ಡಿ. ನಾಗೋಜಿರಾವ್, ಕೆ.ಎಸ್ ರೇವಪ್ಪ, ಬಿ.ಎಚ್ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅಕ್ರಮ ಮರಳು ಸಾಗಾಣಿಕೆ : ಪ್ರಕರಣ ದಾಖಲು

    ಭದ್ರಾವತಿ, ಏ. ೧೧: ಮನೆಯೊಂದರ ಹಿತ್ತಲಿನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿರುವ ಸಂಬಂಧ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ತಾಲೂಕಿನ ಸುಲ್ತಾನ್‌ಮಟ್ಟಿ ಗ್ರಾಮದ ಚಂದ್ರು ಎಂಬುವರ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮರಳನ್ನು ಟಿಪ್ಪರ್ ಲಾರಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಏ.೧೪ರಂದು ಬೃಹತ್ ರಕ್ತದಾನ ಶಿಬಿರ


    ಭದ್ರಾವತಿ, ಏ. ೧೧: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ೧೩೨ ನೇ ಜನ್ಮದಿನ ಅಂಗವಾಗಿ ಏ. ೧೪ರಂದು ಬೆಳಿಗ್ಗೆ ೯.೩೦ ರಿಂದ ಮದ್ಯಾಹ್ನ ೧ ಗಂಟೆವರೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.        
    ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರ, ನಗರದ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ, ಭಾರತೀಯ ವೈದ್ಯಕೀಯ ಸಂಘ, ಜಯ ಕರ್ನಾಟಕ ಸಂಘಟನೆ, ರೋಟರಿ ಕ್ಲಬ್ ಹಾಗೂ ಮಾಜಿ ಸೈನಿಕರ ಸಂಘದ  ಸಹಯೋಗದೊಂದಿಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Monday, April 10, 2023

ಹೊಸಮನೆ ಪೊಲೀಸರ ಕಾರ್ಯಾಚರಣೆ : ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ

    ಭದ್ರಾವತಿ, ಏ. ೧೦: ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಏ.೮ರಂದು ಬೆಳಿಗ್ಗೆ ೧೦.೩೦ ಸಮಯದಲ್ಲಿ ತಾಲೂಕಿನ ಕಾಚಗೊಂಡನಹಳ್ಳಿ ವಿಜಯನಗರ ಗ್ರಾಮದ ಸ್ಮಶಾನ ರಸ್ತೆಯಲ್ಲಿ  ಪ್ರಭು ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.
    ಏ.೮ರಂದು ರಾತ್ರಿ ೭.೪೫ರ ಸಮಯದಲ್ಲಿ ನಗರದ ಸಿ.ಎನ್ ರಸ್ತೆ, ಆರ್‌ಎಂಸಿ ಎದುರುಗಡೆ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗದಲ್ಲಿ ಮಂಜುನಾಥ್ ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ : ದಾಳಿ


ಭದ್ರಾವತಿ, ಏ. ೧೦: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿರವರ ನೇತೃತ್ವದ ತಂಡ ಏ.೮ರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದು, ಮದ್ಯ ತುಂಬಿದ ೨೧ ಪೌಚ್‌ಗಳನ್ನು, ೧ ಖಾಲಿ ಪೌಚ್ ಮತ್ತು ೩ ಮದ್ಯಪಾನ ಮಾಡಲು ಬಳಸಿದ ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು


    ಭದ್ರಾವತಿ, ಏ. ೧೦: ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ.
    ಹುತ್ತಾಕಾಲೋನಿಯ ಸ್ನೇಹಿತನ ಮನೆ ಮುಂದೆ ಮಾ.೧೨ರಂದು ರಾತ್ರಿ ಯಮಹಾ ಎಫ್.ಝಡ್ ದ್ವಿಚಕ್ರ ವಾಹನ ನಿಲ್ಲಿಸಲಾಗಿದ್ದು, ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಕಾಗದನಗರದ ನಿವಾಸಿ ರೋಹನ್(೨೩) ಎಂಬುವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.