Wednesday, May 17, 2023

ಮೇ.೨೧ರಂದು ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

    ಭದ್ರಾವತಿ, ಮೇ. ೧೭ : ವಿಶ್ವ ಹಿಂದು ಪರಿಷತ್, ವಿಶ್ವಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಮೇ.೨೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ರವರೆಗೆ ಸಿದ್ದಾರೂಢನಗರದ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
    ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪಿ. ವೆಂಕಟರಮಣಶೇಟ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್, ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್ ಸುನೀಲ್, ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ. ರಾಮಪ್ಪ, ಜಿಲ್ಲಾ ಕಾರ್ಯದರ್ಶಿ ನಾರಾಯಣ ಜಿ. ವರ್ಣೀಕರ್, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ವೈದ್ಯ ಡಾ. ಟಿ. ನರೇಂದ್ರ ಭಟ್, ವಿಶ್ವಭಾರತಿ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಎಚ್ ತೀರ್ಥಯ್ಯ, ವೇದಾವತಿ ಶಿವಮೂರ್ತಿ, ಡಿ. ನಂಜುಂಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.  
    ತಾಲೂಕಿನ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಭದ್ರಾವತಿಯಲ್ಲಿ ಜೂಜಾಟ, ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ

ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ಶಾರದ ಅಪ್ಪಾಜಿ
    ಭದ್ರಾವತಿ, ಮೇ. ೧೭ : ಕ್ಷೇತ್ರದಲ್ಲಿ ಇತ್ತೀಚೆಗೆ ಓ.ಸಿ, ಮಟ್ಕಾ, ಇಸ್ಪೀಟ್ ಸೇರಿದಂತೆ ಜೂಜಾಟ, ಅಕ್ರಮ ದಂಧೆಗಳು ಮಿತಿಮೀರಿವೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅವನತಿಯಿಂದಾಗಿ ಬಡಕುಟುಂಬಗಳು ಬೀದಿ ಪಾಲಾಗಿವೆ. ನಿರುದ್ಯೋಗಿ ಯುವಕರಿಗೆ ಅಕ್ರಮ ದಂಧೆಗಳು ಕಸುಬಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಅನೇಕ ಬಡಾವಣೆಗಳಲ್ಲಿ, ಮೊಹಲ್ಲಾಗಳಲ್ಲಿ ಗಾಂಜಾ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ನಾಗರೀಕರ ನೆಮ್ಮದಿ ಬದುಕಿಗೆ ಭಂಗ ಉಂಟು ಮಾಡುವ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
    ಗಾಂಜಾದಂತಹ ಮಾದಕ ವಸ್ತುಗಳು ರಾಜಾರೋಷವಾಗಿ ಯುವಕರ, ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ದೊರೆಯುತ್ತಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ. ದುಶ್ಚಟಗಳಿಗೆ ಯುವ ಜನಾಂಗ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಿ ಡೆಂಗ್ಯೂ ರೋಗ ನಿಯಂತ್ರಿಸಿ : ಡಾ. ಎಂ.ವಿ ಅಶೋಕ್

ಭದ್ರಾವತಿ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್  ಸಹಯೋಗದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಕಾಲೇಜಿನಲ್ಲಿ  ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧೭ : ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸುವ ಮೂಲಕ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಮುಂದಾಗಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
ಅವರು ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್  ಸಹಯೋಗದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸೊಳ್ಳೆಗಳ ನಿಯಂತ್ರಣದಿಂದ ಡೆಂಗ್ಯೂ ರೋಗ ಹರಡದಂತೆ ತಡೆಯಬಹುದು. ಈ ಹಿನ್ನಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೀರಿನ ಸಂಗ್ರಹಣೆಗಳನ್ನು ವಾರಕ್ಕೆರಡು ಬಾರಿ ತೊಳೆದು ಮುಚ್ಚಿಡಬೇಕು. ಘನತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
    ಡಾ. ಅಚ್ಯುತ್ ಮಾತನಾಡಿ, ಡೆಂಗ್ಯೂ ಜ್ವರಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಹೆಚ್ಚು ದ್ರವ ಆಹಾರ ಸೇವನೆ ಮಾಡಬೇಕು. ಸೊಳ್ಳೆಪರದೆ ಬಳಸಿ ಆರೈಕೆಗೆ ಗಮನ ನೀಡಬೇಕೆಂದರು.
    ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಗಣೇಶ್, ನಿರ್ದೇಶಕರಾದ ಜೋಬಿಲ್, ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, May 15, 2023

ಕುವೆಂಪು ವಿಶ್ವವಿದ್ಯಾಲಯದಲ್ಲಿ ಏಕಾಂಗಿ ಹೋರಾಟ : ಕುಲಪತಿಗಳಿಂದ ಸ್ಪಂದನೆ

ಮೇ.೧೯ರ ಸಿಂಡಿಕೇಟ್‌ಸಭೆಯಲ್ಲಿ ಕ್ರಮ ಕೈಗೊಳ್ಳುವ ಭರವಸೆ

ಭದ್ರಾವತಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ನಿರ್ಣಯಗಳ ಮತ್ತು ಕುಲಪತಿಗಳ ಆದೇಶಗಳ ಅನುಷ್ಠಾನಕ್ಕೆ ಆಗ್ರಹಿಸಿ ಕುವೆಂಪು ವಿಶ್ವನಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ವತಿಯಿಂದ ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೋಮವಾರ ಏಕಾಂಗಿಯಾಗಿ ಸತ್ಯಾಗ್ರಹ ನಡೆಸಿದರು. 
    ಭದ್ರಾವತಿ, ಮೇ. ೧೫ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ನಿರ್ಣಯಗಳ ಮತ್ತು ಕುಲಪತಿಗಳ ಆದೇಶಗಳ ಅನುಷ್ಠಾನಕ್ಕೆ ಆಗ್ರಹಿಸಿ ಕುವೆಂಪು ವಿಶ್ವನಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ವತಿಯಿಂದ ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೋಮವಾರ ಏಕಾಂಗಿಯಾಗಿ ಸತ್ಯಾಗ್ರಹ ನಡೆಸಿದರು.
    ಎಂ.ಎಂ ಸ್ವಾಮಿ ಸತ್ಯಾಗ್ರಹ ಆರಂಭಿಸಿದ ಹಿನ್ನಲೆಯಲ್ಲಿ ತಕ್ಷಣ ಸ್ಪಂದಿಸಿದ ವಿಶ್ವವಿದ್ಯಾಲಯದ ಕುಲಪತಿಗಳು ಸಿಂಡಿಕೇಟ್ ಸದಸ್ಯರ ಮತ್ತು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮೇ.೧೯ರಂದು ನಡೆಯಲಿರುವ ಸಿಂಡಿಕೇಟ್ ಸಭೆಯಲ್ಲಿ ಸಿಂಡಿಕೇಟ್ ನಿರ್ಣಯ ಮತ್ತು ಕುಲಪತಿಗಳ ಆದೇಶದ ಮೇರೆಗೆ ಉಳಿದ ವಿಲೀನೀಕರಣ ನೌಕರರಿಗೂ ಸೇವಾ-ಸೌಲಭ್ಯಗಳ ವಿಸ್ತರಣೆ ಮಂಜೂರಾತಿ ಆದೇಶ ನೀಡುವ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ವಾಸ್ತವಾಂಶಗಳನ್ನು ಮತ್ತು ಸತ್ಯಾಂಶಗಳನ್ನು ಪ್ರಸ್ತುತ ಪಡಿಸಲು ಅವಕಾಶ ನೀಡುವುದಾಗಿ ಹಾಗು ಸೇವಾ-ಸೌಲಭ್ಯಗಳ ವಿಸ್ತರಣೆ ಮಂಜೂರಾತಿ ಆದೇಶ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಎಂ.ಎಂ ಸ್ವಾಮಿ ಸತ್ಯಾಗ್ರಹ ಹೋರಾಟ ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಮೇ.೧೬ರಿಂದ ದಿಂಡಿ ಮಹೋತ್ಸವ

    ಭದ್ರಾವತಿ, ಮೇ. ೧೫ : ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಭೂತನಗುಡಿ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೮೭ನೇ ವರ್ಷದ ದಿಂಡಿ ಮಹೋತ್ಸವ ಮೇ.೧೬ ರಿಂದ ೧೮ರವರೆಗೆ ನಡೆಯಲಿದೆ.
    ಮೇ.೧೬ರ ಮಂಗಳವಾರ ಸಂಜೆ ೫ ಗಂಟೆಯಿಂದ ಶ್ರೀ ಸಂತಸಾಮ್ರಾಟ ಜ್ಞಾನದೇವರ ವಿರಚಿತ ಶ್ರೀ ಜ್ಞಾನೇಶ್ವರಿ ಗ್ರಂಥದ ಪೋಥೀ ಸ್ಥಾಪನೆ, ಬದರಿನಾಥ್ ಉತ್ತರ್‌ಕರ್‌ರವರಿಂದ ಭಜನೆ, ಕೀರ್ತನೆ ನಡೆಯಲಿದೆ. ೧೭ರಂದು ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಆನಂತರ ಸಂಜೆ ೫ ಗಂಟೆಯಿಂದ ಸಾಮೂಹಿಕ ನಾಮಜಪ, ೫.೩೦ ರಿಂದ ಸಾಗರದ ಮಹೇಂದ್ರನಾಥ ರಂಗದೋಳ್‌ರವರಿಂದ ಶ್ರೀ ಜ್ಞಾನೇಶ್ವರಿ ಪ್ರವಚನ, ೭ ಗಂಟೆಯಿಂದ ಡಿ.ಆರ್ ಬಸಪ್ಪಮಾಸ್ತರ್‌ರವರಿಂದ ಪಂಢರಿ ಸಂಪ್ರದಾಯದ(ಕನ್ನಡ) ಕೀರ್ತನೆ, ರಾತ್ರಿ ೧೦.೩೦ರಿಂದ ಅಖಂಡ ಜಾಗರಣೆ ನಡೆಯಲಿದೆ. ಹಿಂದೂಸ್ತಾನಿ ಗ್ರಾಯಕರು, ದೂರದರ್ಶನ ಕಲಾವಿದರಾದ ಗೋಕರ್ಣ ವಿದ್ವಾನ್ ರಾಘವೇಂದ್ರ ಭಟ್, ಶಿವಮೊಗ್ಗ ವಿದ್ವಾನ್ ನಿಶಾದ್ ಹರ್ಲಾಪುರ್ ಹಾಗು ಅರುಣ್ ಅಂಬೇಕರ್ ಮತ್ತು ಸಿದ್ದೇಶ್ ಬಡಿಗೇರ್ ತಂಡದಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ.
    ಮೇ.೧೮ರ ಗುರುವಾರ ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಪಾಂಡುರಂಗ ಶ್ರೀ ರಖುಮಾಯಿಮಾತೆಯರ ರಾಜಬೀದಿ ಉತ್ಸವ, ಆನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಮಹಾಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಿಂಡಿ ಮಹೋತ್ಸವ ಯಶಸ್ವಿಗೊಳಿಸುವಂತೆ ಭಾವಸಾರ ಕ್ಷಿತ್ರಿಯ ಸಮಾಜ ಕೋರಿದೆ.

ಶ್ರೀಮತಿ ಲಕ್ಷ್ಮಮ್ಮನವರ ೩ನೇ ವರ್ಷದ ಪುಣ್ಯಸ್ಮರಣೆ


 

ಕ್ಷೇತ್ರದ ಇತಿಹಾಸದಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು : ಪಕ್ಷಕ್ಕೆ ನೆಲೆ ಇದೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿದರು.
    ಭದ್ರಾವತಿ, ಮೇ. ೧೫: ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ಈ ಚುನಾವಣೆ ಮೂಲಕ ತೋರಿಸಿಕೊಡಲಾಗಿದೆ. ಅತಿ ಹೆಚ್ಚು ಮತಗಳನ್ನು ನೀಡಿರುವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿತ್ತೇವೆ. ಕ್ಷೇತ್ರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ೨೦ ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದು, ಇದರಿಂದಾಗಿ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ತೋರಿಸಿ ಕೊಡಲಾಗಿದೆ. ಇದು ನನಗೆ ತೃಪ್ತಿ ತಂದಿದೆ ಎಂದರು.
    ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲೂ ನನಗೆ ಮತ ಚಲಾವಣೆಯಾಗಿದ್ದು, ಇದರಿಂದಾಗಿ ಕ್ಷೇತ್ರದಲ್ಲೆಡೆ ಪಕ್ಷ ಸಂಘಟನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತಿದೆ. ಎಲ್ಲಾ ಧರ್ಮ, ಜಾತಿ, ಜನಾಂಗದವರು ನನಗೆ ಮತ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇನೆ  ಎಂದರು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ವಿ. ಕದಿರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.