Tuesday, June 6, 2023

ಎರಡು ಪ್ರಕರಣಗಳಲ್ಲಿ ೩ ಆರೋಪಿಗಳ ಸೆರೆ : ಲಕ್ಷಾಂತರ ರು. ಮೌಲ್ಯದ ಬೆಳ್ಳಿ, ಚಿನ್ನಾಭರಣ ವಶ

    ಭದ್ರಾವತಿ, ಜೂ. ೬ : ನ್ಯೂಟೌನ್ ಠಾಣೆ ಪೊಲೀಸರು ೩ ಜನ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರು. ಮೌಲ್ಯದ ಬೆಳ್ಳಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
    ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಆರೋಪಿಗಳಾದ ಹೊಸದುರ್ಗ ತಾಲೂಕಿನ ಗಂಜಿಗೆರೆ ಗ್ರಾಮದ ಲೋಕೇಶ್(೫೦) ಮತ್ತು ರಂಗನಾಥ್(೪೫) ಮತ್ತು ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ ಗ್ರಾಮದ ವಿಜಯ್(೩೩) ಬಂಧಿಸಲಾಗಿದೆ. ಒಟ್ಟು ೩೯ ಗ್ರಾಂ. ತೂಕದ ಆಭರಣಗಳನ್ನು ಮತ್ತು ೧೭ ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಹಾಗು ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಶರಣಪ್ಪ ನೇತೃತ್ವದಲ್ಲಿ ಎಎಸ್‌ಐಗಳಾದ ಎಚ್. ವೆಂಕಟೇಶ್, ಟಿ.ಪಿ ಮಂಜಪ್ಪ, ಎಎಸ್‌ಐ ಠಾಣಾ ಸಿಬ್ಬಂದಿಗಳಾದ ರಂಗನಾಥ್, ತೀರ್ಥಲಿಂಗಪ್ಪ, ಪ್ರವೀಣಕುಮಾರ್, ನಗರ ವೃತ್ತ ಕಛೇರಿ ಸಿಬ್ಬಂದಿಗಳಾದ ಸುನೀಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ

ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯತಿ ಅಮೃತ ಸರೋವರ ಕಾಮಗಾರಿ ಬಳಸೋಕೆರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
    ಭದ್ರಾವತಿ, ಜೂ. ೬ : ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯತಿ ಅಮೃತ ಸರೋವರ ಕಾಮಗಾರಿ ಬಳಸೋಕೆರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಮತ್ತು ಇ-ಶ್ರಮ್ ನೋಂದಾವಣಿ ಅಭಿಯಾನ ಹಾಗು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಸಸಿಗಳನ್ನು ನೆಡುವ ಜೊತೆಗೆ ಉದ್ಯೋಗ ಖಾತ್ರಿ ಚೀಟಿಗಳನ್ನು ಪ್ರದರ್ಶಿಸಿ ಕೂಲಿ ಕಾರ್ಮಿಕರು ಸಂಭ್ರಮಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಯೋಜನಾ ನಿರ್ದೇಶಕಿ ನಂದಿನಿ, ಉಪೇಂದ್ರ ಬಾಬು, ಚೇತನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಪ್ರಾರಂಭ ಕುರಿತು ಚರ್ಚಿಸಲು ಸಭೆ ನಿಗದಿಗೆ ಮುಖ್ಯಮಂತ್ರಿಗೆ ಮನವಿ

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೬: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರದ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.  
    ಖಾಸಗಿ ಉದ್ಯಮಿಗಳು ಕಾರ್ಖಾನೆಯನ್ನು ಮುನ್ನಡೆಸಲು ಇಚ್ಚಿಸಿರುವುದರಿಂದ ಹಾಗೂ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದರಿಂದ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.  

Monday, June 5, 2023

ಸ್ವಚ್ಛತೆ ಕಾಪಾಡಲು ಆರ್‌ಆರ್‌ಆರ್ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಪರಿಸರ ದಿನಾಚರಣೆ, ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಲ್ಲಿ ಪೌರಾಯುಕ್ತ ಮನುಕುಮಾರ್

ಭದ್ರಾವತಿ ನಗರಸಭೆ ವತಿಯಿಂದ ಸೋಮವಾರ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
    ಭದ್ರಾವತಿ, ಜೂ. ೫ : ನಗರದಲ್ಲಿ ಸ್ವಚ್ಛತೆ ಕಾಪಾಡಲು ಮರುಬಳಕೆ ಮಾಡಿಕೊಳ್ಳಬಹುದಾದ ತ್ಯಾಜ್ಯ ವಸ್ತುಗಳನ್ನು ನಗರಸಭೆ ವತಿಯಿಂದ ಸಂಗ್ರಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಗರದ ೫ ಭಾಗಗಳಲ್ಲಿ ಆರ್‌ಆರ್‌ಆರ್ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮರುಬಳಕೆ ಮಾಡಿಕೊಳ್ಳಬಹುದಾದ ಬಟ್ಟೆ, ದಿನಪತ್ರಿಕೆ, ಪುಸ್ತಕ, ಆಟಿಕೆ ಸಾಮಗ್ರಿಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳು ಸೇರಿದಂತೆ ೬ ಬಗೆಯ ತ್ಯಾಜ್ಯಗಳನ್ನು ನಗರಸಭೆ ವತಿಯಿಂದ ಸಂಗ್ರಹಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಹೆಚ್ಚು ಹೆಚ್ಚು ಮರುಬಳಕೆ ಮಾಡಿಕೊಳ್ಳಬಹುದಾದ ತ್ಯಾಜ್ಯ ನೀಡಿದ್ದಲ್ಲಿ ಅಂತಹವರಿಗೆ ಪ್ರೋತ್ಸಾಹಕವಾಗಿ ನಗರಸಭೆ ವತಿಯಿಂದ ತಯಾರಿಸಲಾಗುತ್ತಿರುವ ೧ ಕೆ.ಜಿ ಗೊಬ್ಬರ ಉಚಿತವಾಗಿ ನೀಡಲಾಗುವುದು ಎಂದರು.
    ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದಕ್ಕೂ ಮೊದಲು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಸಹಿ ಅಭಿಯಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸುವಂತೆ ಕರೆ ನೀಡಲಾಯಿತು.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಸದಸ್ಯರಾದ ಲತಾ ಚಂದ್ರಶೇಖರ್, ಚನ್ನಪ್ಪ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ವತಿಯಿಂದ ಸೋಮವಾರ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. 

Sunday, June 4, 2023

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದರ್ಶನ ಪಡೆದ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಭದ್ರಾವತಿ ಕ್ಷೇತ್ರ ಪಾಲಕ, ಪುರಾಣ ಪ್ರಸಿದ್ದ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭಾನುವಾರ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ದರ್ಶನ ಪಡೆದರು.
    ಭದ್ರಾವತಿ, ಜೂ. ೪ : ಕ್ಷೇತ್ರ ಪಾಲಕ, ಪುರಾಣ ಪ್ರಸಿದ್ದ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭಾನುವಾರ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ದರ್ಶನ ಪಡೆದರು.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಬೆಳಿಗ್ಗೆ ದೇವರ ದರ್ಶನ ಪಡೆದು ನಂತರ ನಗರದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
    ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥಶರ್ಮ, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರು, ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಜೂ.೫ ರಿಂದ ಎನ್‌ಎಸ್‌ಎಸ್ ಶಿಬಿರ

    ಭದ್ರಾವತಿ, ಜೂ. ೪ : ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ರ ವಾರ್ಷಿಕ ವಿಶೇಷ ಶಿಬಿರ ಜೂ.೫ರಿಂದ ೧೧ರವರೆಗೆ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
    ಜೂ.೫ರ ಸಂಜೆ ೬ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಜೋಳೆ, ಕುವೆಂಪು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ಲತಾ, ಸದಸ್ಯರಾದ ಸೂರ್ಯನಾಯ್ಕ, ಶಿವಕುಮಾರ್, ಎಸ್. ಉತ್ತರೇಶ, ಭಾಗ್ಯಮ್ಮ, ತಿಪ್ಪಮ್ಮ, ಬಿ. ಸುರೇಶ್, ದೀಪ, ಲಕ್ಷ್ಮೀಬಾಯಿ, ಬಿ. ರಾಜು, ಕಾವೇರಿಬಾಯಿ, ಕೆ. ರಘುಪ್ರಸಾದ್, ಯಶೋಧಬಾಯಿ, ಪಿಡಿಓ ರಾಜಪ್ಪ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕ ಕೆ.ಎನ್ ಮಂಜುನಾಥ್, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶೈಲಜಾ ಸಿದ್ದಪ್ಪ ಹೊಸಳ್ಳೆರ, ಉಷಾದೇವಿ, ವ್ಯಾಸನಾಯ್ಕ, ಡಾ. ಟಿ.ಜಿ ಉಮಾ, ಬಿ. ಗುರುಪ್ರಸಾದ್, ಆರ್. ವೆಂಕಟೇಶ್, ಡಾ. ಆರ್. ಸೀಮಾ, ಪತ್ರಕರ್ತರಾದ ಬಸವರಾಜ್ ಮತ್ತು ಅನಂತಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ನಗರಸಭೆಯಿಂದ ಜೂ.೫ರಂದು ಪರಿಸರ ದಿನಾಚರಣೆ

    ಭದ್ರಾವತಿ, ಜೂ. ೪: ನಗರಸಭೆ ವತಿಯಿಂದ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.೫ರಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಬೆಳಿಗ್ಗೆ ೭.೩೦ಕ್ಕೆ ಸ್ವಚ್ಛತಾ ಕಾರ್ಯಕ್ಕೆ ಹಾಗು ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಬೆಳಿಗ್ಗೆ ೯ ಗಂಟೆಗೆ ವಿಶ್ವ ಪರಿಸರ ದಿನಾಚರಣೆಗೆ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.