Friday, June 9, 2023

ಬಿಜೆಪಿ ತಾಲೂಕು ಮಂಡಲ ಕಾರ್ಯದರ್ಶಿ ಕವಿತಾ ಸುರೇಶ್ ನಿಧನ

ಕವಿತಾ ಸುರೇಶ್ 
    ಭದ್ರಾವತಿ, ಜೂ. ೧೦: ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್(೪೦) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತಿ ಛಾಯಾಗ್ರಾಹಕ ಸುರೇಶ್ ಹಾಗು ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ನಗರದ ಬಿ.ಎಚ್ ರಸ್ತೆ ಪದ್ಮನಿಲಯ ಹೋಟೆಲ್ ಬಳಿ ವಾಸವಾಗಿದ್ದರು. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸ್ನೇಹ ಮಿಲನ ಮಹಿಳಾ ಸಂಘಟನೆ ಅಧ್ಯಕ್ಷರಾಗಿದ್ದರು. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
    ಇವರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಬಿಜೆಪಿ ಮಂಡಲ, ತಾಲೂಕು ಛಾಯಾಗ್ರಾಹಕರ ಸಂಘ, ಮಹಿಳಾ ಸಂಘಟನೆಗಳು ಹಾಗು ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಜೂ.೧೦ರಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

    ಭದ್ರಾವತಿ, ಜೂ. ೯ :  ಸಮಾಜ ಸೇವಕ, ದಾನಿ ಎ. ಧರ್ಮೇಂದ್ರ ಅವರು ಪ್ರತಿ ವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಜೂ. ೧೦ರಂದು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸುತ್ತಿದ್ದಾರೆ.  
    ೩ ಶಾಲೆಗಳ ವಿದ್ಯಾರ್ಥಿಗಳಿಗೆ ಒಟ್ಟು ೧೦ ಸಾವಿರ ಉಚಿತ ನೋಟ್ ಪುಸ್ತಕಗಳ ವಿತರಣೆ ನಡೆಯಲಿದೆ. ಬೆಳಿಗ್ಗೆ ೯ ಗಂಟೆಯಿಂದ ೧೦ ಗಂಟೆವರೆಗೆ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ೧೦.೩೦ ರಿಂದ ೧೧.೩೦ರವರೆಗೆ ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆಯಲ್ಲಿ ಹಾಗು ೧೨.೩೦ ರಿಂದ ೧ ಗಂಟೆವರೆಗೆ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯಲ್ಲಿ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ.


    ಕಳೆದ ಬಾರಿ ಸುಮಾರು ೮ ಸಾವಿರ ನೋಟ್ ಪುಸ್ತಕಗಳನ್ನು ವಿತರಿಸಲಾಗಿತ್ತು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿತ್ತು.

ಕಾಲುದಾರಿ, ಸೈಕಲ್ ಟ್ರಾಕ್ ನಿರ್ಮಿಸುವ ಬದಲು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುತ್ತಿರುವುದು.
    ಭದ್ರಾವತಿ, ಜೂ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುವ ಬದಲು ದ್ವಿಚಕ್ರ ಮತ್ತು ಲಘು ವಾಹನ(ಕಾರು)ಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನೆ ಮಾಲೀಕರ ಸಂಘ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
    ರಸ್ತೆಯ ಎರಡು ಕಡೆ ಚರಂಡಿಗಳ ಸ್ಲಾಬ್ ಎತ್ತರ ಮಾಡಿ ಟ್ರಾಕ್ ನಿರ್ಮಿಸುತ್ತಿರುವುದಾಗಿ ತಿಳಿದುಬಂದಿದ್ದು, ಇದು ಸರಿಯಾದುದಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯಲ್ಲಿ ಒಂದು ಬದಿಯಲ್ಲಿ ೩-೪ ಶಾಲೆಗಳಿವೆ ಇವು ತೆರೆದಿರುತ್ತವೆ. ಇನ್ನೊಂದು ಬದಿಯಲ್ಲಿ ಕನಕಮಂಟಪದ ಎರಡು ದ್ವಾರಗಳು, ಚಿತ್ರಮಂದಿರ, ಲಾರಿ ಕಛೇರಿ ಇದ್ದು, ಇವುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ಸೈಕಲ್ ಟ್ರಾಕ್ ನಿರ್ಮಾಣ ಮಾಡಿದ್ದಲ್ಲಿ ಅದು ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ಕೈಗೊಂಡ ಕಾಮಗಾರಿಯ ಹಣ ವ್ಯಯವಾಗಲಿದೆ ಎಂದು ಮನವರಿಕೆ ಮಾಡಲಾಗಿದೆ.
    ರಸ್ತೆಯ ಎರಡೂ ಬದಿ ಇರುವ ಚರಂಡಿಯ ಮೇಲ್ಗಡೆ ಅದೇ ಮಟ್ಟದಲ್ಲಿ ಸ್ಲಾಬ್ ಹಾಕಿಸಿ ದ್ವಿಚಕ್ರ ಮತ್ತು ಲಘುವಾಹನ(ಕಾರು)ನಿಲ್ಲಿಸುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೋರಲಾಗಿದೆ.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಕಾರ್ಯದರ್ಶಿ ಎನ್. ರಘುನಾಥರಾವ್ ಹಾಗು ಪದಾಧಿಕಾರಿಗು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜೂ.೧೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಜೂ. ೯: ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜೂ.೧೦ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೩ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ೬೬ ಕೆ.ವಿ ಬಸ್ ಹಾಗು ೧೧ ಕೆ.ವಿ ಮಾರ್ಗದ ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದನೇರಲಕೆರೆ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಕೆರೆ, ಅರಬಿಳಚಿ, ತಿಮ್ಲಾಪುರ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಜೂ.೧೨ರಂದು ನಗರಸಭೆ ಸಾಮಾನ್ಯ ಸಭೆ

    ಭದ್ರಾವತಿ, ಜೂ. ೯: ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಂಡು ನೂತನ ಸರ್ಕಾರ ರಚನೆಯಾದ ನಂತರ ಇದೀಗ ನಗರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದು, ಜೂ.೧೨ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ವಹಿಸಲಿದ್ದಾರೆ.
    ಈ ಹಿಂದೆ ಮಾ.೧೮ರಂದು ಸಾಮಾನ್ಯ ಸಭೆ ನಡೆದಿದ್ದು, ಇದೀಗ ಸುಮಾರು ೨ ತಿಂಗಳ ನಂತರ ನಡೆಯುತ್ತಿದೆ. ಈಗಾಗಲೇ ಹಲವಾರು ಸಮಸ್ಯೆಗಳು ನಗರಸಭೆ ವ್ಯಾಪ್ತಿಯಲ್ಲಿ ಉಲ್ಬಣಗೊಂಡಿದ್ದು,  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯಸಭೆ ಸಾರ್ಥಕಗೊಳ್ಳಬೇಕು. ಸದಸ್ಯರು ತಪ್ಪದೇ ಸಭೆಗೆ ಹಾಜರಾಗುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

Thursday, June 8, 2023

ನಾಗೇಶ್ ಶೆಟ್ರು ನಿಧನ

ನಾಗೇಶ್ ಶೆಟ್ರು
ಭದ್ರಾವತಿ, ಜೂ. ೯ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ನಾಗೇಶ್ ಶೆಟ್ರು (೫೫) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 
ನಾಗೇಶ್ ಶೆಟ್ರು ಕಾರ್ಖಾನೆಗೆ ಕೆಲಸಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದ್ದು, ತಕ್ಷಣ ಇವರನ್ನು ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಗುತ್ತಿಗೆ ಕಾರ್ಮಿಕರು ನಾಗೇಶ್ ಶೆಟ್ರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
ಈ ನಡುವೆ ಆಸ್ಪತ್ರೆಯಲ್ಲಿ ವೈದ್ಯರು ಇದ್ದರೂ ಸಹ ೨೪ ಗಂಟೆಗಳ ಸೇವೆಯಲ್ಲಿ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ರೋಗಿ ದಾಖಲಾದ ನಂತರ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸುತ್ತಿದೆ ಎಂದು ಗುತ್ತಿಗೆ ಕಾರ್ಮಿಕರು ಆರೋಪಿಸಿದ್ದಾರೆ. 
ನಾಗೇಶ್ ಶೆಟ್ರು ಕುಟುಂಬಕ್ಕೆ ೫೦ ಸಾವಿರ ರು. ನಗದು ಹಾಗು ಕೆಲಸ ನೀಡುವುದಾಗಿ ಗುತ್ತಿಗೆದಾರ ಭರವಸೆ ನೀಡಿದ್ದಾರೆಂದು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. 
ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ನಗರಸಭಾ ಸದಸ್ಯ ಬಿ.ಕೆ ಮೋಹನ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲು ಮನವಿ

ಮುಖ್ಯಮಂತ್ರಿ ಭೇಟಿ ಮಾಡಿದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ ಮನವಿ ಮಾಡಿದೆ.
    ಭದ್ರಾವತಿ, ಜೂ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ ಮನವಿ ಮಾಡಿದೆ.
    ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ ಚರ್ಚೆ ನಡೆಸಿದ್ದು, ಕಾರ್ಖಾನೆ ಅಭಿವೃದ್ಧಿಪಡಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಸಲ್ಲಿಸಲಾಯಿತು.
    ರಾಜ್ಯ ಸರ್ಕಾರ ೨೦೧೭ರಲ್ಲಿ ಮಂಜೂರು ಮಾಡಿರುವ ಕಬ್ಬಿಣದ ಅದಿರು ಗಣಿಯ ಅಭಿವೃದ್ಧಿ ಕಾರ್ಯಗಳು ಜರುಗುತ್ತಿದ್ದು, ೨೦೨೫ಕ್ಕೆ ಅದಿರು ಉತ್ಪಾದಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನ ತೆಗೆದುಕೊಂಡಿದೆ.  ಈ ಹಿಂದೆ ಕಬ್ಬಿಣದ ಅದಿರು ಗಣಿ ಮಂಜೂರು ಮಾಡಿದ್ದಲ್ಲಿ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿತ್ತು. ಈ ಹಿನ್ನಲೆಯಲ್ಲಿ  ಕಾರ್ಖಾನೆಗೆ ಉಕ್ಕು ಪ್ರಾಧಿಕಾರ ಸೂಕ್ತ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವಂತೆ ನಿಯೋಗ ಕೋರಿತು.
    ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು. ಅಲ್ಲದೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ರವರಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.
    ನಿಯೋಗದಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.