Friday, June 23, 2023

ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜೂ. ೨೩ : ಶೃಂಗೇರಿ ಜೆಸಿಬಿಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.೨೧ರವರೆಗೆ ಜರುಗಿದ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಕಾಲೇಜಿನ ೩೦ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಸಾಫ್ಟ್‌ಬಾಲ್‌ನಲ್ಲಿ ದ್ವಿತೀಯ ಹಾಗು ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್ ಶಿವರುದ್ರಪ್ಪ ಹಾಗು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು, ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.  

ಜೂ.೨೭ರಂದು ನಾಡಪ್ರಭು ಕೆಂಪೇಗೌಡ ಜಯಂತಿ

    ಭದ್ರಾವತಿ, ಜೂ. ೨೩ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂ.೨೭ರಂದು ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೯.೩೦ಕ್ಕೆ ಬಿ.ಎಚ್ ರಸ್ತೆ ಹುತ್ತಾ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
    ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದು, ಸಂಘದ ಅಧ್ಯಕ್ಷ ಎ.ಟಿ ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಒಕ್ಕಲಿಗ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಭಂಡಾರಹಳ್ಳಿ ಕೋರಿದ್ದಾರೆ.  

ಚಿಕ್ಕಮ್ಮ ನಿಧನ

ಚಿಕ್ಕಮ್ಮ
    ಭದ್ರಾವತಿ, ಜೂ. ೨೩ : ತಾಲೂಕಿನ ಕಲ್ಲಳ್ಳಿ ನಿವಾಸಿ ದಿವಂಗತ ಮುದ್ದೆಗೌಡರ ಪತ್ನಿ ಚಿಕ್ಕಮ್ಮ(೯೦) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
    ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ ಸೇರಿದಂತೆ ೪ ಗಂಡು, ೧ ಹೆಣ್ಣು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ಇವರ ತೋಟದಲ್ಲಿ ನೆರವೇರಿತು.
    ಸಂತಾಪ : ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಮಣಿ ಎಎನ್‌ಎಸ್, ಒಕ್ಕಲಿಗ ಸಂಘದ ಅಧ್ಯಕ್ಷ ಎ.ಟಿ ರವಿ, ಖಜಾಂಚಿ ಆರ್. ನಾಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯತಿ, ನಗರಸಭಾ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಜನಸಂಘ ಸಂಸ್ಥಾಪಕ ಡಾ. ಶಾಮ್‌ಪ್ರಸಾದ್ ಮುಖರ್ಜಿ ಬಲಿದಾನ ದಿನ

ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಭದ್ರಾವತಿ, ಜೂ. ೨೩ : ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಪಕ್ಷದ ಕಾರ್ಯಾಲಯದಲ್ಲಿ ಬೆಳಿಗ್ಗೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಪುಷ್ಪ ನಮನ, ನುಡಿ ನಮನ ಸಲ್ಲಿಸಲಾಯಿತು.
    ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರ ಬಿಡುಗಡೆ ಮಾಡಿ ಎಲ್ಲಾ ಬೂತ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಮಹಾಶಕ್ತಿ ಕೇಂದ್ರಗಳಿಗೆ ಕರೆ ನೀಡಲಾಯಿತು.
    ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್. ಪ್ರಮುಖರಾದ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್. ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ. . ರಾಮಲಿಂಗಯ್ಯ. ಟಿ.ವಿ ವೆಂಕಟೇಶ್, ಮಹಾಶಕ್ತಿ ಕೇಂದ್ರ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Thursday, June 22, 2023

ಜೂ.೨೫ರಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ-ಅಭಿನಂದನೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜೂ. ೨೨ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಬಸವಾಭಿಮಾನಿಗಳ ಸಹಯೋಗದೊಂದಿಗೆ ಜೂ. ೨೫ರಂದು ಸಂಜೆ ೬ ಗಂಟೆಗೆ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಸಭಾಭವನದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗು ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ ಡಾ. ಶ್ರೀ ಬಸವ ಮರುಳಸಿದ್ದ ಸಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಲಿದ್ದಾರೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದು, ತಹಸೀಲ್ದಾರ್ ಟಿ.ಜಿ ಸುರೇಶ್ ಆಚಾರ್ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಶಿವಕುಮಾರ್ ಉಪಸ್ಥಿತರಿರುವರು. ಮಾನವತೆಯ ಮಹಾಯಾನಿ ಬಸವಣ್ಣ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಎಸ್. ಮರಿಗುದ್ದಿ ಉಪನ್ಯಾಸ ನೀಡಲಿದ್ದು, ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾ ಡಾ. ಬಿ.ಜಿ ಧನಂಜಯ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಡಾ. ಬಿ.ಜಿ ಧನಂಜಯ, ಎಚ್.ಎನ್ ಮಹಾರುದ್ರ, ಬಾರಂದರೂ ಪ್ರಕಾಶ್, ನಂದಿನಿ, ಮಲ್ಲಿಕಾರ್ಜುನ್, ಎಂ. ವಿರುಪಾಕ್ಷಪ್ಪ, ಅರಳಿಹಳ್ಳಿ ಅಣ್ಣಪ್ಪ, ಮಲ್ಲಿಕಾಂಬ ವಿರುಪಾಕ್ಷಪ್ಪ, ರಾಜಶೇಖರ್, ಸದಾಶಿವಪ್ಪ, ಚಿಗಟೇರಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ೩೯ ಗ್ರಾಮ ಪಂಚಾಯಿತಿಗೆ ೨ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

    ಭದ್ರಾವತಿ, ಜೂ. ೨೨ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಾಲೂಕಿನ ೩೯ ಗ್ರಾಮ ಪಂಚಾಯಿತಿಗಳ ೩೦ ತಿಂಗಳ ೨ನೇ ಅವಧಿಗೆ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಲಾಗಿದೆ.
    ನಗರದ ಚನ್ನಗಿರಿ ರಸ್ತೆಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಮೀಸಲಾತಿ ನಿಗದಿ ಸಭೆಯಲ್ಲಿ ತಾಲೂಕಿನ ೩೯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ಆಯೋಗ ರೂಪಿಸಿರುವ ತಂತ್ರಾಂಶ ಹಾಗು ಲಾಟರಿ ಪ್ರಕ್ರಿಯೆ ಬಳಸಿ ಮೀಸಲಾತಿ ನಿಗದಿಪಡಿಸಲಾಗಿದೆ.
    ೧. ಸೈದರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨. ನಿಂಬೆಗೊಂದಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೩. ಆನವೇರಿ ಅಧ್ಯಕ್ಷ-ಸಾಮಾನ್ಯ. ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೪. ಗುಡುಮಘಟ್ಟ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ೫. ಮಂಗೋಟೆ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೬. ಸಿದ್ಲಿಪುರ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೭. ಸನ್ಯಾಸಿಕೊಡಮಗ್ಗೆ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೮. ಅಗರದಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೯. ಯಡೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೦. ಅರಹತೊಳಲು ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೧. ಹನುಮಂತಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೧೨. ಕಲ್ಲಿಹಾಳ್ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೩. ದಾಸರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ ೧೪. ಮಾರಶೆಟ್ಟಿಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೧೫. ಅರಕೆರೆ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ -ಹಿಂದುಳಿದ ವರ್ಗ(ಎ) ೧೬. ಅರಬಿಳಚಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೭. ನಾಗತಿಬೆಳಗಲು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ ೧೮. ಕೂಡ್ಲಿಗೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೧೯. ಅತ್ತಿಗುಂದ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೨೦. ಕೊಮಾರನಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ ೨೧. ತಡಸ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) ಮಹಿಳೆ ೨೨. ದೊಣಬಘಟ್ಟ ಅಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨೩. ಬಿಳಿಕಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೨೪. ಕಾಗೆಕೊಡಮಗ್ಗಿ ಅಧ್ಯಕ್ಷ-ಹಿಂದುಳಿದ ವರ್ಗ(ಬಿ), ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨೫. ಅರಳಿಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಪಂಗಡ(ಮಹಿಳೆ) ೨೬. ವೀರಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೨೭. ಕಲ್ಲಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ೨೮. ಅಂತರಗಂಗೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೨೯. ದೊಡ್ಡೇರಿ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೩೦. ಯರೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ೩೧. ಮಾವಿನಕೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೩೨. ಬಾರಂದೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) ೩೩. ಕಂಬದಾಳ್ ಹೊಸೂರು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) ೩೪. ಕಾರೆಹಳ್ಳಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೩೫. ಅರಳಿಕೊಪ್ಪ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೩೬. ಸಿಂಗನಮನೆ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೩೭. ಹಿರಿಯೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೩೮. ಮೈದೊಳಲು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮತ್ತು ೩೯. ತಾವರಘಟ್ಟ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ಮೀಸಲಾಗಿ ನಿಗದಿಪಡಿಸಲಾಗಿದೆ.
    ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಸ್ ಬಿರಾದಾರ್ ನಡೆಸಿಕೊಟ್ಟರು. ಆರಂಭದಲ್ಲಿ ಮೀಸಲಾತಿ ನಿಗದಿ ಸಂಬಂಧ ಚುನಾವಣಾ ಆಯೋಗ ನಿಗದಿಪಡಿಸಿರುವ ತಂತ್ರಾಂಶ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದರು. ೩೯ ಗ್ರಾಮ ಪಂಚಾಯಿತಿಗಳ ಪೈಕಿ ತಂತ್ರಾಂಶಕ್ಕೆ ಒಳಪಡದ ೨ ಗ್ರಾಮ ಪಂಚಾಯಿತಿಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು.  
    ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 21, 2023

ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದ ಆಚರಣೆಗೆ ಸಹಕಾರ ನೀಡಿ

ಶಾಂತಿಸಭೆಯಲ್ಲಿ ಮುಸ್ಲಿಂ ಮುಖಂಡರ ಮನವಿ

ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
    ಭದ್ರಾವತಿ, ಜೂ. ೨೧ : ತಾಲೂಕಿನಾದ್ಯಂತ ಈ ಬಾರಿ ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದಿಂದ ಆಚರಿಸಲು ಹೆಚ್ಚಿನ ಸಹಕಾರ ನೀಡಬೇಕೆಂದು ಬುಧವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಮುಸ್ಲಿಂ ಸಮುದಾಯದ ಮುಖಂಡರು, ಜೂ.೨೮ರಿಂದ ೩ ದಿನಗಳ ಕಾಲ ಹಬ್ಬದ ಆಚರಣೆ ನಡೆಯಲಿದೆ. ಮೊದಲ ದಿನ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯ ಈದ್ಗಾ ಮೈದಾನ ಸೇರಿದಂತೆ ೪ ಖಬರ್‌ಸ್ತಾನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ೩ ದಿನಗಳ ಕಾಲ ಹಬ್ಬದ ಸಂಭ್ರಮದಲ್ಲಿ ತೊಡಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಧರ್ಮದವರು ಸಹ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
    ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪೊಲೀಸ್ ಇಲಾಖೆ ಹೆಚ್ಚಿನ ಸಹಕಾರ ನೀಡಬೇಕು. ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತಹ ವಾತಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದರು.
    ಸಭೆಯಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಫೀರ್‌ಷರೀಫ್, ಮಸ್ತಾನ್, ದಿಲ್‌ದಾರ್, ಖಾದರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಟಿಪ್ಪುಸುಲ್ತಾನ್, ಸೈಯದ್ ರಿಯಾಜ್, ವಿ. ಕದಿರೇಶ್, ಪ್ರಜಾಪ್ರತಿನಿಧಿ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಸೇರಿದಂತೆ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.