Saturday, July 15, 2023

ನಿವೃತ್ತ ದೈಹಿಕ ಶಿಕ್ಷಕ ಶಿವಲಿಂಗೇಗೌಡರಿಗೆ ಸನ್ಮಾನ

ಭದ್ರಾವತಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಕ  ಶಿವಲಿಂಗೇಗೌಡರ ಸಾಧನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಜು. ೧೫: ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಕ  ಶಿವಲಿಂಗೇಗೌಡರ ಸಾಧನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ದೈಹಿಕ ಶಿಕ್ಷಕರಾಗಿ ಶಿವಲಿಂಗೇಗೌಡರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದು,  ಅಲ್ಲದೆ ವೃತ್ತಿ ಬದುಕಿನ ಜೊತೆಗೆ ಸೇವಾ ಮನೋಭಾವನೆಯೊಂದಿಗೆ  ಗುರುತಿಸಿಕೊಂಡಿದ್ದಾರೆ.  ಪ್ರಸ್ತುತ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ.  ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅಲ್ಲದೆ ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.
    ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದ  ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ತ್ರೈಮಾಸಿಕ ಸಭೆಯಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿದ್ಯಾಸಂಸ್ಥೆ  ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಮಂಜುನಾಥ್ ಪವಾರ್, ಸಹಕಾರ್ಯದರ್ಶಿ ಬೋಸುರಾಜ್ ರಾವ್, ಮುಖ್ಯೋಪಾಧ್ಯಾಯ ಸುರೇಶ್ ನಾಯ್ಕ, ಕ್ಷೇತ್ರ ಸಂಪನ್ಮೂಲ ಶಿಕ್ಷಕರಾದ ಯುವರಾಜ್ ಮತ್ತು ದಿವ್ಯ, ದೈಹಿಕ ಶಿಕ್ಷಣಾಧಿಕಾರಿ ಪ್ರಭು, ದೈಹಿಕ ಶಿಕ್ಷಣ ಶಿಕ್ಷಕ ರಾಜ ನಾಯ್ಕ, ರವಿ, ಗಿರೀಶ್  ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ

ಭದ್ರಾವತಿ ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಮತ್ತು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೧೫ : ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಆಯ್ಕೆಯಾಗಿದ್ದಾರೆ.
    ಒಟ್ಟು ೧೩ ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ ೧ ಸ್ಥಾನ ಖಾಲಿ ಉಳಿದಿದ್ದು, ೧೨ ನಿರ್ದೇಶಕರಿದ್ದಾರೆ. ಶನಿವಾರ ನಡೆದ  ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಹಾಗು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕಯಾದರು.
    ರಾಮನಗರ ನಿವಾಸಿಯಾಗಿರುವ ನಿರಂಜನ ಅವರು ಸಂಘದಲ್ಲಿ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದರು. ಇದೀಗ ೩ನೇ ಅವಧಿಯಲ್ಲಿ ಅಧ್ಯಕ್ಷರಾಗಿದ್ದು, ಇದೆ ರೀತಿ ಕೃಷ್ಣೇಗೌಡ ಸಹ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದು, ಇದೀಗ ೩ನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.
    ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಪೋಪಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.  ನೂತನ ಅಧ್ಯಕ್ಷ ನಿರಂಜನ್‌ ಹಾಗು ಉಪಾಧ್ಯಕ್ಷ ಕೃಷ್ಣೇಗೌಡರಿಗೆ ಗ್ರಾಮಸ್ಥರು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಸಂಘಕ್ಕೆ ಸುಮಾರು ೫೦ ವರ್ಷಗಳ ಇತಿಹಾಸವಿದ್ದು, ತಾಲೂಕಿನ ಪ್ರಮುಖ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಗಮನ ಸೆಳೆದ ಜನಪದ, ಸಾಂಸ್ಕೃತಿಕ ಹಬ್ಬ

ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಂ ನಾಸಿರ್‌ಖಾನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ,  ಜು. ೧೫ : ನಗರದ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿತ್ತು.
    ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು  ಸಾಂಪ್ರಾದಾಯಿಕ ಮತ್ತು ಜನಪದ ಉಡುಗೆ ತೊಡುಗೆಗಳೊಂದಿಗೆ ಕಂಗೊಳಿಸಿದರು.
    ವಿದ್ಯಾರ್ಥಿಗಳು ತಾವೇ ತಯಾರಿಸಿದ ರುಚಿಶುಚಿಯಾದ ಮನೆ ಅಡುಗೆ ಪದಾರ್ಥಗಳನ್ನು ಮಳಿಗೆಗಳನ್ನು ನಿರ್ಮಿಸಿ ಮಾರಾಟದಲ್ಲಿ ತೊಡಗಿರುವುದು ಹಾಗು ತಾವೇ ರೂಪಿಸಿದ  ಜನಪದ ನೃತ್ಯಗಳು ಮತ್ತು ಹಾಡುಗಳನ್ನು ಹಾಡಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ವಿಶೇಷವಾಗಿ ಕಂಡು ಬಂದಿತು.
    ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.‌ ರವಿ ಸೇರಿದಂತೆ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ಹಲವು ವರ್ಷಗಳ ನಂತರ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಆಚರಿಸುವ ಮೂಲಕ ಕಾಲೇಜು ಎಲ್ಲರ ಗಮನ ಸೆಳೆದಿರುವುದು ವಿಶೇಷವಾಗಿದೆ.


ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಜನಪದ ಮತ್ತು ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ರುಚಿಶುಚಿಯಾದ ಮನೆ ಅಡುಗೆ ಪದಾರ್ಥಗಳನ್ನು ಮಳಿಗೆಗಳನ್ನು ನಿರ್ಮಿಸಿ ಮಾರಾಟದಲ್ಲಿ ತೊಡಗಿರುವುದು ಕಂಡು ಬಂದಿತು.

Friday, July 14, 2023

ಎ.ಸಿ ಸದಾನಂದ ನಿಧನ

ಎ.ಸಿ ಸದಾನಂದ
    ಭದ್ರಾವತಿ:  ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿ ಎ.ಸಿ ಸದಾನಂದ(೫೫) ಶುಕ್ರವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರರು ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಗ್ರಾಮದಲ್ಲಿರುವ ಇವರ ತೋಟದಲ್ಲಿ ನೆರವೇರಲಿದೆ. ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಸಾಧು ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆ.ಜಿ ರವಿಕುಮಾರ್‌

ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್‌ ಬಸವರಾಜಪ್ಪ ಭದ್ರಾವತಿ ತಾಲೂಕಿನ ಸಾಧು ವೀರಶೈವ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್‌ಗೆ ವಿತರಿಸಿದರು.
    ಭದ್ರಾವತಿ, ಜು. ೧೪ : ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರಾಗಿ ಕಡದಕಟ್ಟೆ ಕೆ.ಜಿ ರವಿಕುಮಾರ್‌ ಆಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಸಿ.ಎಸ್‌ ಭರಣೇಶ್‌, ಸಹ ಕಾರ್ಯದರ್ಶಿಯಾಗಿ ಬಿ.ಎಸ್‌ ಪರಮೇಶ್ವರಪ್ಪ, ಖಜಾಂಚಿಯಾಗಿ ನವೀನ್‌, ಸದಸ್ಯರಾಗಿ ಎಚ್.ಇ ಮಲ್ಲಿಕಾರ್ಜುನ್‌, ವಸಂತಕುಮಾರ್‌, ನಾಗರಾಜ, ಮಮತ ನರೇಂದ್ರ, ಕೆ.ಜಿ ಮಹೇಶ್ವರಪ್ಪ, ಡಿ.ಬಿ ದಿನೇಶ್‌, ಆಶಾರಾಣಿ ನಟರಾಜ್‌, ಸಿ.ವಿ ಮಹದೇವಪ್ಪ, ಎ.ಎಸ್‌ ರವಿಕುಮಾರ್‌, ತೇಜಸ್ವಿನಿ ರವಿಕುಮಾರ್‌, ಕೆ.ಎಚ್‌ ರಾಜ್‌ಕುಮಾರ್‌, ಸತೀಶ್‌ಗೌಡ, ಮಂಜುಳ ರಂಗಪ್ಪ, ಎಚ್. ರುದ್ರಪ್ಪ, ಶಿವಕುಮಾರ್‌ ಗಂಗಮ್ಮ ಮಲ್ಲೇಶಪ್ಪ ಅವರನ್ನು ಆಯ್ಕೆ ಮಾಡಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ.
    ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್‌ ಬಸವರಾಜಪ್ಪ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್‌ಗೆ ವಿತರಿಸಿದರು.


ನಗರಸಭೆಯಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ

ಭದ್ರಾವತಿ  ನಗರಸಭೆ ವ್ಯಾಪ್ತಿಯಲ್ಲಿ ಪುನಃ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಶುಕ್ರವಾರ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜು. ೧೪ : ನಗರಸಭೆ ವ್ಯಾಪ್ತಿಯಲ್ಲಿ ಪುನಃ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಶುಕ್ರವಾರ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಚಾಲನೆ ನೀಡಲಾಯಿತು.
    ೩೫ ವಾರ್ಡ್‌ಗಳನ್ನು  ಹೊಂದಿರುವ ನಗರಸಭೆಯ ಬಹುತೇಕ ವಾರ್ಡ್‌ಗಳಲ್ಲಿ  ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸಲು ನಗರಸಭೆ ಸಾಕಷ್ಟು ಶ್ರಮಿಸುತ್ತಿದೆ. ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮೊರೆ ಹೋಗಿದ್ದು, ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ ನಡೆಸಲಾಗುತ್ತಿದೆ. ಆದರೂ ಸಹ ಬೀದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
    ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೫ ಸಾವಿರ ಬೀದಿಗಳಿದ್ದು, ಈ ಪೈಕಿ ಕಳೆದ ವರ್ಷ ಸುಮಾರು ೧ ಸಾವಿರ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲಾಗಿತ್ತು. ಈ ಬಾರಿ ಸುಮಾರು ೧,೫೦೦ ಬೀದಿನಾಯಿಗಳಿಗೆ  ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಗುರಿ ಹೊಂದಲಾಗಿದೆ.
    ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಗುತ್ತಿಗೆ ನೀಡಲಾಗಿದ್ದು, ಓರ್ವ ವೈದ್ಯರು ಪ್ರತಿ ದಿನ ಸುಮಾರು ೨೦ ರಿಂದ ೨೫ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳುತ್ತಿದ್ದಾರೆ. ಸುಮಾರು ೩ ತಿಂಗಳವರೆಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯಲಿದೆ.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪರಿಸರ ಅಭಿಯಂತರ ಪ್ರಭಾಕರ್‌, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, July 13, 2023

ಆ.೧೨, ೧೩ ರಂದು ಮೈಸೂರಿನಲ್ಲಿ ರಾಜ್ಯ ವಕೀಲರ ಸಮ್ಮೇಳನ

ಕರ್ನಾಟಕ ರಾಜ್ಯ ವಕೀಲರ ಪರಿಷತ್ ರಾಜ್ಯಾಧ್ಯಕ್ಷ ಎಚ್.ಎಲ್‌ ವಿಶಾಲ್‌ ರಘು ಗುರುವಾರ ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
    ಭದ್ರಾವತಿ, ಜು. ೧೩: ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಆ. 12 ಮತ್ತು 13 ಎರಡು ದಿನಗಳ 10 ನೇ ರಾಜ್ಯ ವಕೀಲರ ಸಮ್ಮೇಳ ಆಯೋಜಿಸಲಾಗಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ಎಚ್.ಎಲ್. ವಿಶಾಲ್ ರಘು ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಸುಮಾರು 14 ವರ್ಷಗಳ ನಂತರ ಸಾಂಸ್ಕೃತಿಕ ನಗರ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಸಮ್ಮೇಳನ ನಡೆಸಲಾಗುತ್ತಿದೆ.  ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 10 ರಿಂದ 12
ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
    ಸಮ್ಮೇಳನದ ಪ್ರತಿನಿಧಿ ಶುಲ್ಕ ರು. 1000 ನಿಗದಿಪಡಿಸಲಾಗಿದೆ. ಭಾಗವಹಿಸಿದವರಿಗೆ ನೆನೆಪಿನ ಕಾಣಿಕೆ ನೀಡಲಾಗುವುದು. ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದು,  ಭಾಗವಹಿಸುವವರು ಜು. 25 ರೊಳಗೆ ನೊಂದಾಯಿಸಿಕೊಳ್ಳಬೇಕು. ನಂತರ ಬರುವವರು ಅಧ್ಯಕ್ಷರು, ಕಾರ್ಯದರ್ಶಿಗಳ ಗುರುತು ಪತ್ರದೊಂದಿಗೆ ಭಾಗವಹಿಸಬಹುದಾಗಿದೆ. ಸಮ್ಮೇಳನದಲ್ಲಿ ವಕೀಲರು ಎದುರಿಸುತ್ತಿರುವ ಸಂಕಷ್ಟ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
    ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಬೋಪಣ್ಣ, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,  ಹಾಗು ಕಾನೂನು ಸಚಿವರು  ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ
ದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಭಾಗವಹಿಸಿ ಮಹಿಳೆಯರ ಹಕ್ಕುಗಳು ಮತ್ತು ಸವಾಲುಗಳ ಬಗ್ಗೆ ಮಾತನಾಡಲಿದ್ದಾರೆ ಎಂದರು.
    ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಎಲ್. ಶ್ರೀನಿವಾಸ್ ಬಾಬು, ಜಿಲ್ಲಾಧ್ಯಕ್ಷ ಬಿ.ಜಿ ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಕಾರ್ಯದರ್ಶಿ ವಿ. ಉದಯ ಕುಮಾರ್,  ಕಾರ್ಯಕಾರಿ ಸಮಿತಿ ಸದಸ್ಯರಾದ  ಮಗೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.